ರಾಮನಗರ: ಬಿಡದಿ ಟೌನ್ ಶಿಪ್ ಯೋಜನೆ ವ್ಯಾಪ್ತಿಯ ಭೂಮಿಗೆ ನಕಲಿ ದಾಖಲೆ ಸೃಷ್ಟಿಸಿ, ಅಧಿಕಾರಿಗಳ ಡಿಜಿಟಲ್ ಸಹಿ ನಕಲು ಮಾಡಿ ಪರಿಹಾರಕ್ಕೆ ಅರ್ಜಿ ಸಲ್ಲಿಸಿ ವಂಚಿಸಲು ಮುಂದಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ದಾಖಲಾಗಿದ್ದ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಬಿಡದಿ ಠಾಣೆ ಪೊಲೀಸರು ನಾಲ್ವರನ್ನು ಬಂಧಿಸಿದ್ದಾರೆ
ರಾಮನಗರ: ಬಿಡದಿ ಟೌನ್ ಶಿಪ್ ಯೋಜನೆ ವ್ಯಾಪ್ತಿಯ ಭೂಮಿಗೆ ನಕಲಿ ದಾಖಲೆ ಸೃಷ್ಟಿಸಿ, ಅಧಿಕಾರಿಗಳ ಡಿಜಿಟಲ್ ಸಹಿ ನಕಲು ಮಾಡಿ ಪರಿಹಾರಕ್ಕೆ ಅರ್ಜಿ ಸಲ್ಲಿಸಿ ವಂಚಿಸಲು ಮುಂದಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ದಾಖಲಾಗಿದ್ದ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಬಿಡದಿ ಠಾಣೆ ಪೊಲೀಸರು ನಾಲ್ವರನ್ನು ಬಂಧಿಸಿದ್ದಾರೆ.
ಮೊದಲ ಪ್ರಕರಣದಲ್ಲಿ ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆಯ ಡೆಂಕಣಿಕೊಟ್ಟೈ ತಾಲೂಕಿನ ಥಳ್ಳಿ ಪಟ್ಟಣದ ರವಿಕುಮಾರ್, ಲಕ್ಷ್ಮಿನಾರಾಯಣ ಹಾಗೂ 2ನೇ ಪ್ರಕರಣದಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ದಾಬಸ್‌ಪೇಟೆಯ ಮೋಹನ್, ಸುರೇಶ್ ಬಂಧಿತರು.ಟೌನ್ ಶಿಪ್ ಯೋಜನಾ ಪ್ರದೇಶದ ವ್ಯಾಪ್ತಿಯ ಅರಳಾಳುಸಂದ್ರದ ಬೇರೆ ಬೇರೆ ಸರ್ವೆ ನಂಬರ್‌ಗಳ ಜಮೀನಿಗೆ ಆರೋಪಿಗಳು ನಕಲಿ ದಾಖಲೆಗಳನ್ನು ಸೃಷ್ಟಿಸಿದ್ದರು. ಮೊದಲ ಪ್ರಕರಣದಲ್ಲಿ ಆರೋಪಿಗಳಾದ ರವಿಕುಮಾರ್, ಲಕ್ಷ್ಮಿನಾರಾಯಣ ಅವರು ಶಂಕರರೆಡ್ಡಿ, ಕೃಷ್ಣರೆಡ್ಡಿ ಹೆಸರಿನಲ್ಲಿ ದಾಖಲೆ ಸೃಷ್ಟಿಸಿದ್ದರು. 2ನೇ ಪ್ರಕರಣದ ಆರೋಪಿಗಳಾದ ಮೋಹನ್, ಸುರೇಶ್ ಇಬ್ಬರೂ ಎಚ್.ವೆಂಕಟೇಶ್ ಹಾಗೂ ಎಚ್.ರಾಜಶೇಖರ್ ಹೆಸರಿನಲ್ಲಿ ದಾಖಲೆ ಸೃಷ್ಟಿಸಿ ಪರಿಹಾರಕ್ಕೆ ಅರ್ಜಿ ಸಲ್ಲಿಸಿದ್ದರು.
ಈ ದಾಖಲೆಗಳನ್ನು ಪರಿಶೀಲಿಸುವಾಗ ಮೇಲ್ನೋಟಕ್ಕೆ ನಕಲಿ ಎಂದು ಕಂಡು ಬಂದಿದ್ದವು. ಈ ಕುರಿತು ರಾಮನಗರ ತಹಸೀಲ್ದಾರ್ ಮತ್ತು ಅಪರ ಜಿಲ್ಲಾಧಿಕಾರಿ ಅವರಿಂದ ದಾಖಲೆಗಳ ಕುರಿತು ಸ್ಪಷ್ಟೀಕರಣ ಕೋರಿದಾಗ, ಅವು ನಕಲಿ ಎಂಬುದು ಗೊತ್ತಾಗಿತ್ತು. ಬಳಿಕ ಜಿಬಿಡಿಎ ವಿಶೇಷ ಭೂ ಸ್ವಾಧೀನಾಧಿಕಾರಿ ಕಿಶನ್ ಕಲಾಲ್ ನಾಲ್ವರ ವಿರುದ್ಧ ಬಿಡದಿ ಠಾಣೆಗೆ ದೂರು ಸಲ್ಲಿಸಿದ್ದರು.ನಕಲಿ ದಾಖಲೆ ಸೃಷ್ಟಿಯನ್ನೇ ದಂಧೆ ಮಾಡಿಕೊಂಡಿರುವ ಆರೋಪಿಗಳ ವಿರುದ್ದ ದಾಬಸ್‌ಪೇಟೆ, ನೆಲಮಂಗಲ ಸೇರಿದಂತೆ ಕೆಲ ಠಾಣೆಗಳಲ್ಲಿ ವಂಚನೆ ಪ್ರಕರಣಗಳು ದಾಖಲಾಗಿವೆ. ಇದೊಂದು ಜಾಲದಂತೆ ಕಂಡುಬಂದಿದ್ದು, ಪ್ರಕರಣವನ್ನು ಎಲ್ಲಾ ಆಯಾಮದಿಂದಲೂ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ಪ್ರತಿಕ್ರಿಯಿಸಿದ್ದಾರೆ.
ಬಾಕ್ಸ್.................ರೈತರ ಹೆಸರಲ್ಲಿ 5 ಕೋಟಿ ವಂಚನೆಗೆ ಯತ್ನ
ರಾಮನಗರ: ಬಿಡದಿ ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಟೌನ್‌ಶಿಪ್ ಯೋಜನೆಗಾಗಿ ಭೂಮಿ ನೀಡಿದ ರೈತರಿಗೆ ಭೂ ಪರಿಹಾರ ವಿತರಣೆ ಪ್ರಕ್ರಿಯೆ ಆರಂಭವಾಗುತ್ತಿದ್ದಂತೆಯೇ, ಅದನ್ನೇ ಬಂಡವಾಳ ಮಾಡಿಕೊಂಡು ವಂಚಿಸಲು ಯತ್ನಿಸಿದ ದೊಡ್ಡ ಜಾಲವೊಂದು ಬೆಳಕಿಗೆ ಬಂದಿದೆ.ನಕಲಿ ದಾಖಲೆಗಳನ್ನು ಸೃಷ್ಟಿಸಿ ಬರೋಬ್ಬರಿ 5 ಕೋಟಿ ರು. ಪರಿಹಾರ ಹಣ ದೋಚಲು ಯತ್ನಿಸಿದ ನಾಲ್ವರ ವಿರುದ್ಧ ಬಿಡದಿ ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕ ದೂರುಗಳು ದಾಖಲಾಗಿತ್ತು.
ಆರೋಪಿಗಳಾದ ವೆಂಕಟೇಶ್, ರಾಜಶೇಖರ್, ಶಂಕರ್ ರೆಡ್ಡಿ ಹಾಗೂ ಕೃಷ್ಣ ರೆಡ್ಡಿ ನಕಲಿ ವಂಶವೃಕ್ಷ, ನಕಲಿ ಒಪ್ಪಿಗೆ ಪತ್ರ ಹಾಗೂ ದೃಢೀಕರಣ ಪತ್ರಗಳನ್ನು ಸೃಷ್ಟಿಸಿ ಪರಿಹಾರಕ್ಕೆ ಅರ್ಜಿ ಸಲ್ಲಿಸಿದ್ದರು. ಜಿಬಿಡಿಎ ವಿಶೇಷ ಭೂಸ್ವಾಧೀನ ಅಧಿಕಾರಿ ಕಿಶನ್ ಅವರು ಬಂದಿದ್ದ ಅರ್ಜಿಗಳನ್ನು ವಿಲೇವಾರಿ ಮಾಡುವ ಸಮಯದಲ್ಲಿ ಸೂಕ್ತ ದಾಖಲೆಗಳ ಪರಿಶೀಲನೆ ನಡೆಸಿದಾಗ ಈ ವಂಚನೆ ಬಯಲಾಗಿದೆ. ನಕಲಿ ದೃಢಪಟ್ಟ ಹಿನ್ನೆಲೆಯಲ್ಲಿ ಬಿಡದಿ ಠಾಣೆಗೆ ನೀಡಿದ್ದ ದೂರಿನ ಆಧಾರದ ಮೇಲೆ ಪೊಲೀಸರು ನಾಲ್ವರ ವಿರುದ್ಧ ಎರಡು ಪ್ರತ್ಯೇಕ ಎಫ್‌ಐಆರ್ ದಾಖಲಿಸಿಕೊಂಡಿದ್ದರು.