ಸಾರಾಂಶ
ಧಾರವಾಡ:
ಕಳೆದ ಎರಡ್ಮೂರು ದಿನಗಳಿಂದ ಇದ್ದ ಜಿಟಿಜಿಟಿ ಮಳೆಯು ಗುರುವಾರ ರಾತ್ರಿಯಿಂದ ನಿರಂತರವಾಗಿ ಸುರಿಯುತ್ತಿದ್ದು ಧಾರವಾಡದಲ್ಲಿ ಮಲೆನಾಡು ವಾತಾರವಣ ಸೃಷ್ಟಿಯಾಗಿದೆ.ಮೋಡದಲ್ಲಿ ಸೂರ್ಯ ಮುಸುಕಿದ್ದು, ಆಕಾಶದಲ್ಲಿ ಬರೀ ಕಪ್ಪು ಮೋಡುಗಳು ಓಡಾಡುತ್ತಿವೆ. ಆಗಾಗ ಜೋರು, ತುಂತುರು ಮಳೆಯಾಗುತ್ತಿದೆ. ಈ ಮೊದಲು ಮಳೆಯಾದ ತಕ್ಷಣ ಮತ್ತೆ ಬಿಸಿಲಿನ ವಾತಾರವಣ ಮುಂದುವರಿಯುತ್ತಿತ್ತು. ಆದರೆ, ಎರಡು ದಿನಗಳಿಂದ ಬರೀ ಮಳೆಯದ್ದೆ ಆಟ ನಡೆದಿದ್ದು, ಜನರು ಮಳೆಯಿಂದ ತತ್ತರಿಸಿ ಹೋಗಿದ್ದಾರೆ. ರೇನ್ ಕೋಟ್, ಛತ್ರಿ ಹಾಗೂ ಮಳೆಯಿಂದ ರಕ್ಷಣೆಗೆ ಬೇಕಾದ ವಸ್ತುಗಳನ್ನು ಜನರು ಬಳಸುತ್ತಿದ್ದಾರೆ. ಬೈಕ್ ಸವಾರರಿಗೆ ಮಳೆ ತೀವ್ರ ಕಿರಿಕಿರಿ ಉಂಟುಮಾಡುತ್ತಿದೆ.
ಬರೀ ನಗರ ಮಾತ್ರವಲ್ಲದೇ ಗ್ರಾಮೀಣ ಪ್ರದೇಶ, ಅಳ್ನಾವರ, ಕಲಘಟಗಿ ಭಾಗದಲ್ಲಿ ಉತ್ತಮ ಮಳೆಯಾಗಿದ್ದು, ಬೆಳೆಗಳು ರೈತರ ನಿರೀಕ್ಷೆಗೆ ತಕ್ಕಂತೆ ಇವೆ.ಧಾರವಾಡ ಜಿಲ್ಲೆಯಲ್ಲಿ ಮುಂಗಾರು ಹಂಗಾಮಿಗೆ 224 ಮಿಮೀ ವಾಡಿಕೆ ಮಳೆ ಪೈಕಿ ಆಗಿದ್ದು 232 ಮೀಮೀ ಆಗಿದೆ. ಕಲಘಟಗಿ ಹಾಗೂ ಅಳ್ನಾವರ ತಾಲೂಕುಗಳಲ್ಲಿ ಹೆಚ್ಚಿನ ಮಳೆಯಾಗಿದ್ದು ಉಳಿದೆಡೆ ಸಾಧಾರಣ ಪ್ರಮಾಣದಲ್ಲಾಗಿದೆ. ಏಪ್ರಿಲ್‌ನಿಂದ ಇಲ್ಲಿಯ ವರೆಗೆ ಮಳೆಗೆ ಒಂದು ಪ್ರಾಣ ಹಾನಿಯಾಗಿದ್ದು ಆರು ಜಾನುವಾರ ತೀರಿವೆ. ಕಲಘಟಗಿ, ಕುಂದಗೋಳ ತಲಾ ಒಂದು ಹಾಗೂ ನವಲಗುಂದ ತಾಲೂಕುಗಳಲ್ಲಿ ಎರಡು ಮನೆಗಳಿಗೆ ತೀವ್ರ ಹಾನಿಯಾಗಿದೆ. ಜಿಲ್ಲೆಯಲ್ಲಿ 93 ಭಾಗಶಃ ಮನೆಗಳಿಗೆ ಹಾನಿಯಾಗಿದೆ. ನಿಯಮಾವಳಿ ಪ್ರಕಾರ ಸಂತ್ರಸ್ತರಿಗೆ ಪರಿಹಾರ ಒದಗಿಸಲಾಗಿದೆ. ಹೆಚ್ಚಿನ ಮಳೆಯಾಗಿ ಪ್ರವಾಹ ಸಂದರ್ಭ ಅಥವಾ ಇನ್ನಾವುದೇ ಮಳೆಹಾನಿ ತಡೆಯಲು ಜಿಲ್ಲಾಡಳಿತವು ಸಿದ್ಧವಾಗಿದೆ ಎಂದು ಜಿಲ್ಲಾಧಿಕಾರಿ ದಿವ್ಯಪ್ರಭು ಪತ್ರಿಕೆಗೆ ಪ್ರತಿಕ್ರಿಯೆ ನೀಡಿದರು.