ಕನ್ನಡಪ್ರಭ ವಾರ್ತೆ ರಾಮನಗರ

ವಿಶ್ವದಲ್ಲಿ ಭಗವಂತ ಅತೀತವಾದ ಶಕ್ತಿ. ಆ ಶಕ್ತಿಗೆ ನಾವೆಲ್ಲರೂ ಅಧೀನರಾಗಿರುವ ಭಾವನೆ - ನಂಬಿಕೆ ಇದೆ. ಅದೇ ನಂಬಿಕೆ, ಭಾವನೆಗಳನ್ನು ಆಧರಿಸಿ ಧರ್ಮಗಳು ಮತ್ತು ಧರ್ಮಗ್ರಂಥಗಳು ಸೃಜನೆಯಾಗಿವೆ ಎಂದು ಶೃಂಗೇರಿ ಶಾರದಾ ಪೀಠಾಧ್ಯಕ್ಷರಾದ ಜಗದ್ಗುರು ಶೀ ವಿಧುಶೇಖರ ಸ್ವಾಮೀಜಿ ಹೇಳಿದರು.

ನಗರದ ಮುಖ್ಯರಸ್ತೆಯಲ್ಲಿರುವ ಶ್ರೀ ಬಲಮುರಿ ಗಣಪತಿ ದೇವಾಲಯದ ಬ್ರಹ್ಮ ಕುಂಬಾಭಿಷೇಕ ನೆರವೇರಿಸಿ ನಂತರ ಏರ್ಪಡಿಸಿದ್ದ ಸಾರ್ವಜನಿಕ ಸಭೆಯಲ್ಲಿ ಆಶೀರ್ವಚನ ನೀಡಿದ ಶ್ರೀಗಳು, ಅವರವರ ನಂಬಿಕೆಗಳು, ಭಾವನೆಗಳಿಗೆ ತಕ್ಕಂತೆ ಸಂಪ್ರದಾಯಗಳು ರೂಪುಗೊಂಡಿವೆ. ಇರುವನೊಬ್ಬನೇ ಭಗವಂತ. ಅವರವರ ಭಾವನೆಗಳು, ಕಲ್ಪನೆಗಳಂತೆ ಭಗವಂತನಿಗೆ ಇಷ್ಟ ರೂಪವನ್ನು ಕೊಟ್ಟು ಆರಾಧಿಸಬಹುದು ಎಂದರು.

ವ್ಯವಸಾಯದಲ್ಲಿ ಯಾವ ಬೆಳೆಯನ್ನು ಅಪೇಕ್ಷಿಸುತ್ತೇವೆಯೋ ಅದೇ ಬೀಜವನ್ನೇ ಬಿತ್ತುತ್ತೇವೆ. ಅದರ ಬೆಳವಣಿಗೆಗೆ ನೀರುಣಿಸುತ್ತೇವೆ. ಇಲ್ಲಿ ಬಿತ್ತಿದ ಬೀಜದ ಬೆಳೆ ಬೆಳೆಯುತ್ತದೆ. ಭಗವಂತನ ಅನುಗ್ರಹವೂ ನೀರಿನಂತೆ. ಜೀವನದಲ್ಲಿ ಭಗವಂತನ ಅನುಗ್ರಹ ನಮ್ಮ ನಡವಳಿಕೆಗಳನ್ನು ಆಧರಿಸಿವೆ ಎಂದು ತಿಳಿಸಿದರು.

ಬೀಜದಿಂದ ಹೇಗೆ ಫಲವನ್ನು ಅಪೇಕ್ಷಿಸುತ್ತೇವೆಯೋ, ಹಾಗೆ ಭಗವಂತನ ಅನುಗ್ರಹವೂ ಇರುತ್ತದೆ. ಯಾವುದೋ ಬೀಜವನ್ನು ಬಿತ್ತಿ, ಅದರಿಂದ ಮಾವಿನ ಫಸಲನ್ನು ಬಯಸುವುದು ಸಾಧ್ಯವಿಲ್ಲ ಎಂದು ಶ್ರೀಗಳು ಮನುಷ್ಯನ ನಡವಳಿಕೆಗಳು ಹೇಗಿರಬೇಕೆಂದು ಸೂಚ್ಯವಾಗಿ ಹೇಳಿದರು.


ಮಾನವರಾದ ನಾಮಗೆ ಕೆಟ್ಟದ್ದು, ಒಳ್ಳೆಯದರ ಬಗ್ಗೆ ಅರಿವಿರಬೇಕು. ವೇದಗಳು, ಶಾಸ್ತ್ರಗಳು, ಪುರಾಣಗಳು ಸಹ ಇವನ್ನೇ ಹೇಳುತ್ತವೆ. ಇದನ್ನು ಅರಿಯುವ ಬುದ್ದಿ ಶಕ್ತಿಯನ್ನು ನಮಗೆಲ್ಲ ಭಗವಂತ ಕರುಣಿಸಿದ್ದಾನೆ. ಇಹ ಲೋಕದಲ್ಲಿ ಕಾನೂನು, ನಿಯಮಗಳು ಜಾರಿಯಲ್ಲಿವೆ. ಅವುಗಳ ಬಗ್ಗೆ ಅರಿವು ಮೂಡಿಸಿಕೊಂಡಿದ್ದರೆ ಯಾವ ಸಮಸ್ಯೆಗಳು ಉದ್ಬವಿಸುವುದಿಲ್ಲ. ತಪ್ಪು ಮಾಡಿದರೆ ನ್ಯಾಯಾಧೀಶರು ಸಹ ತಮ್ಮ ಇಚ್ಚಾನುಸಾರ ಶಿಕ್ಷೆ ನೀಡುವುದಿಲ್ಲ. ತಪ್ಪನ್ನು ಆಧರಿಸಿಯೇ ಶಿಕ್ಷೆ ವಿಧಿಸುತ್ತಾರೆ. ಇದೇ ರೀತಿ ಭಗವಂತನ ಕೃಪೆಯೂ ನಮ್ಮ ನಡವಳಿಕೆಗಳನ್ನು ಆಧರಿಸಿವೆ ಎಂದರು.

ನಮ್ಮ ನಡವಳಿಕೆಗಳಿಂದ ಇನ್ನೊಬ್ಬರಿಗೆ ಸಮಸ್ಯೆ ಉಂಟು ಮಾಡಿದರೆ ಅದು ಅಧರ್ಮ. ಇದರಿಂದ ನಮಗೂ ಒಳ್ಳೆಯದಲ್ಲ. ಶಾಸ್ತ್ರಗಳು ಸಹ ಇದನ್ನೇ ಹೇಳುತ್ತವೆ. ಮಾರ್ಗದರ್ಶಕ ಸ್ಥಾನದಲ್ಲಿರುವವರ ಮಾತುಗಳನ್ನು ಪಾಲಿಸಿದರೆ ಜೀವನ ಸಾರ್ಥಕವಾಗುತ್ತದೆ. ಧರ್ಮಗಳು ಪ್ರತಿಯೊಬ್ಬರಿಗೂ ಸನ್ಮಾರ್ಗಗಳನ್ನೇ ಭೋಧಿಸುತ್ತವೆ ಎಂದರು.

ರಾಮಾಯಣ ವನ ವಾಸಕ್ಕೆ ತೆರಳುವಂತೆ ಸೂಚಿಸುವುದಿಲ್ಲ, ಮಹಾಭಾರತ ಜೂಜನ್ನು ಆಡುವಂತೆ ತಿಳಿಸುವುದಿಲ್ಲ. ಬದಲಿಗೆ ಈ ಪುರಾಣಗಳು ಯಾವ ಸಂದೇಶವನ್ನು ಸಾರುತ್ತಿವೆ ಎಂಬುದನ್ನಷ್ಟೇ ಅರಿಯಬೇಕು. ಧರ್ಮರಾಜನಂತೆ ಧಾರ್ಮಿಕ ಮಾರ್ಗದಲ್ಲಿ ನಡೆಯಬೇಕು. ಹೀಗೆ ನಡೆಯುವಾಗ ಕೌರವರಂತೆ ಸಮಸ್ಯೆ ಕೊಡುವವರು ಇರುತ್ತಾರೆ. ಆದರೆ, ಧರ್ಮ ಬಿಡಬಾರದು. ಇದು ಪುರಾಣಗಳ ಸಂದೇಶ ಎಂದು ಶ್ರೀಗಳು ಹೇಳಿದರು.

ಶ್ರೀ ಬಲಮುರಿ ಗಣಪತಿ ದೇವಾಲಯದ ಬ್ರಹ್ಮ ಕುಂಭಾಭಿಷೇಕದ ಅಂಗವಾಗಿ ಶನಿವಾರ ಸಂಜೆಯಿಂದಲೇ ಧಾರ್ಮಿಕ ಕೈಂಕರ್ಯಗಳು ನಡೆದವು. ಶೃಂಗೇರಿ ಶ್ರೀಗಳು ಶನಿವಾರ ಸಂಜೆ ಚಂದ್ರಮೌಳೇಶ್ವರ ಪೂಜೆಯನ್ನು ನೆರವೇರಿಸಿದರು. ಭಾನುವಾರ ಬೆಳಗ್ಗೆ ಕುಂಭಾಭಿಷೇಕ ಕಾರ್ಯಕ್ರಮವನ್ನು ನೆರವೇರಿಸಿದರು. ಕುಂಭಾಭಿಷೇಕ ಕಾರ್ಯಕ್ರಮದ ಅಂಗವಾಗಿ ಸಾರ್ವಜನಿಕರಿಗೆ ಅನ್ನಪ್ರಸಾದ ವಿತರಣೆಯಾಯಿತು. ದೇವಾಲಯವನ್ನು ಬಗೆಬಗೆಯ ಹೂವುಗಳಿಂದ ಸಿಂಗರಿಸಲಾಗಿತ್ತು.