ಸಾರಾಂಶ
ಕನ್ನಡಪ್ರಭ ವಾರ್ತೆ ಅರಸೀಕೆರೆ
ತಲೆತಲಾಂತರದಿಂದ ಉಳುಮೆ ಮಾಡಿಕೊಂಡು ಬರುತ್ತಿರುವ ಅನ್ನದಾತನ ಭೂಮಿಯ ಪಹಣಿಯಲ್ಲಿ ವಕ್ಫ್ ಹೆಸರು ಸೇರಿಕೊಳ್ಳುತ್ತಿರುವುದು ದುರಂತದ ಸಂಗತಿ. ಈ ಬಗ್ಗೆ ಸರ್ಕಾರ ಎಚ್ಚೆತ್ತು ರೈತರಿಗೆ ನ್ಯಾಯ ಒದಗಿಸುವ ಅಗತ್ಯವಿದೆ ಎಂದು ರಂಭಾಪುರಿ ಜಗದ್ಗುರು ಡಾ. ಶ್ರೀ ಪ್ರಸನ್ನರೇಣುಕ ವೀರ ಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯ ಸ್ವಾಮಿಗಳು ಅಭಿಪ್ರಾಯಪಟ್ಟರು.ನಗರದಲ್ಲಿನ ಶ್ರೀ ಪ್ರಸನ್ನ ಗಣಪತಿ ಆಸ್ಥಾನ ಮಂಟಪದಲ್ಲಿ ಶ್ರೀ ಅವರ ದರ್ಶನ ಪಡೆದು ಆಶೀರ್ವಚನ ನೀಡಿದ ಅವರು, ರೈತರ ಭೂಮಿ ಅಷ್ಟೇ ಅಲ್ಲ ಮಠಮಾನ್ಯಗಳು ದೇವಾಲಯಗಳು ಆಸ್ತಿ ಎಂದು ಪಹಣಿಯಲ್ಲಿ ವಕ್ಫ್ ಹೆಸರು ಕಂಡುಬರುತ್ತಿರುವುದು ನಿಜಕ್ಕೂ ಆತಂಕದ ಸಂಗತಿ. ಉಪ ಚುನಾವಣೆಯ ಹಿನ್ನೆಲೆಯಲ್ಲಿ ಬೇರೊಂದು ಸಮುದಾಯದ ಮತಗಳಿಕೆಗಾಗಿ ವಕ್ಫ್ ಆಸ್ತಿ ಪ್ರಕರಣ ಸೃಷ್ಟಿಸಿದ್ದಾರೆ ಎಂದು ಆರೋಪಿಸಿದರು. ಸರ್ಕಾರ ತಕ್ಷಣವೇ ಎಚ್ಚೆತ್ತು ಸರಿಪಡಿಸದಿದ್ದಲ್ಲಿ ಅಶಾಂತ ವಾತಾವರಣ ಸೃಷ್ಟಿಯಾಗುವುದರಲ್ಲಿ ಸಂದೇಹವಿಲ್ಲ ಎಂದು ಎಚ್ಚರಿಸಿದರು. ಸನಾತನ ಹಿಂದೂ ಧರ್ಮವನ್ನು ಯಾರು ನಾಶ ಪಡಿಸಲು ಸಾಧ್ಯವಿಲ್ಲ, ನಾಶಪಡಿಸುತ್ತೇವೆ ಎಂದು ಹೇಳಿದವರು ನಾಶವಾಗುತ್ತಾರೆ, ಹಿಂದೂ ಧರ್ಮ ಎಂದಿಗೂ ನಾಶವಾಗುವುದಿಲ್ಲ, ಇಂತಹ ಪ್ರಯತ್ನಗಳನ್ನು ಮಾಡಿ ತಾವು ನಾಶವಾಗಿದ್ದರೆ ಹೊರತು ಹಿಂದೂ ಧರ್ಮ ಈಗಲೂ ಉಳಿದಿದೆ. ಸ್ವಾತಂತ್ರ್ಯ ಪೂರ್ವದಲ್ಲಿ ಬಾಲಗಂಗಾಧತಿಲಕ್ ಅವರು ಸಂಘಟನೆ ಶಕ್ತಿಗಾಗಿ ಗಣೇಶೋತ್ಸವ ಪ್ರಾರಂಭಿಸಿದರು. ಅದು ಇಂದಿಗೂ ಆ ಚಿಂತನೆಯಲ್ಲಿ ಯಶಸ್ವಿಯಾಗುತ್ತಾ ಬಂದಿದೆ. ಸಾಮಾಜಿಕ ಮತ್ತು ಆರ್ಥಿಕ ಹಾಗೂ ನೆಮ್ಮದಿಗೆ ಧರ್ಮ ಆಚರಣೆ ಬಹಳ ಅಗತ್ಯವಿದೆ. ಹಿಂದೂ ಧರ್ಮದ ಒಗ್ಗಟ್ಟನ್ನು ಚಿತ್ರ ಗೊಳಿಸಲು ವೈಚಾರಿಕಗಳ ಯತ್ನಿಸುತ್ತಿವೆ, ಧರ್ಮದಿಂದಲೇ ಶಾಂತಿ, ನೆಮ್ಮದಿ ಸಾಧ್ಯ, ಹಿಂದೂ ಧರ್ಮವು ಆನೆ ಇದ್ದಂತೆ ಕೋಲಿನಿಂದ ಬೆದರಿಸಲು ಬಂದರೆ ಆ ವ್ಯಕ್ತಿಯು ಅಪಹಾಸ್ಯಕ್ಕೆ ಈಡಾಗುತ್ತಾನೆ ಎಂದು ಮಾರ್ಮಿಕವಾಗಿ ನುಡಿದರು.
ಈ ಹಿಂದೆ ತಾಲೂಕಿನ ಕೆಲ್ಲಂಗೆರೆ ಗ್ರಾಮದಲ್ಲಿ ಶ್ರೀ ರೇಣುಕಾಚಾರ್ಯ ಜಯಂತಿಯನ್ನು ಏರ್ಪಡಿಸಲಾಗಿತ್ತು. ಬಹಳ ಆಸಕ್ತಿಯಿಂದ ಎಲ್ಲ ಸಜ್ಜುಗೊಳಿಸಿದ್ದರು ನಿರೀಕ್ಷಿಯಷ್ಟು ಭಕ್ತರು ಆಗಮಿಸಿರಲಿಲ್ಲ. ಇದೇ ಡಿಸೆಂಬರ್ 2ರಂದು ಅರಸೀಕೆರೆಯಲ್ಲಿ ಇಷ್ಟಲಿಂಗ ಪೂಜೆಗೆ ದಿನಾಂಕ ನಿಗದಿ ಮಾಡಲಾಗಿದೆ. ಎಲ್ಲರೂ ಒಗ್ಗಟ್ಟಿನಿಂದ ಹೆಚ್ಚು ಯಶಸ್ವಿಯಾಗಿ ಇದನ್ನು ನಿರ್ವಹಿಸಬೇಕೆಂದು ಅವರು ಹೇಳಿದರು.ಶ್ರೀ ರೇಣುಕಾಚಾರ್ಯ ಜಯಂತಿಯನ್ನು ಅರಸೀಕೆರೆಯಲ್ಲಿ ಆಚರಿಸಲು ಚಿಂತಿಸಿದ್ದು ಮಾಜಿ ಶಾಸಕರಾದ ಜಿ ಎಸ್ ಪರಮೇಶ್ವರಪ್ಪ ಕೆ ಪಿ ಪ್ರಭು ಕುಮಾರ್, ಕೆ ಪಿ ಚಂದ್ರಶೇಖರ್ ಅವರುಗಳನ್ನು ಒಳಗೊಂಡಂತೆ ಎಲ್ಲರೂ ಯಶಸ್ವಿಯಾಗಿ ನಿರ್ವಹಿಸಿ ಕೊಡಬೇಕೆಂದು ಅವರು ಹೇಳಿದರು. ದೊಡ್ಡಗುಣಿ ಮಠದ ಶ್ರೀಗಳು ಅರಸೀಕೆರೆ ಗಣಪತಿ ಜಗತ್ ಪ್ರಖ್ಯಾತಿಯಾಗಿದೆ, ಕೃಪೆ ಎಲ್ಲರಿಗೂ ದೊರಕಲಿ ಡಿಸೆಂಬರ್ ಎರಡರಂದು ಹಮ್ಮಿಕೊಂಡಿರುವ ಇಷ್ಟಲಿಂಗ ಪೂಜೆಗೆ ಸಮಾಜ ಬಾಂಧವರು ಒಗ್ಗಟ್ಟಾಗಿ ಎಲ್ಲರೂ ಪಾಲ್ಗೊಂಡು ಯಶಸ್ವಿಗೊಳಿಸಿ ಕೊಡಬೇಕೆಂದು ಮನವಿ ಮಾಡಿ, ರಂಭಾಪುರಿ ಶ್ರೀಗಳು ಧರ್ಮ ಪ್ರಚಾರಕ್ಕಾಗಿ ರಾಜ್ಯ ದೇಶದಲ್ಲೆಡೆ ಪ್ರವಾಸ ಮಾಡುತ್ತಿದ್ದಾರೆ ಧರ್ಮದ ಉಳಿವಿಗಾಗಿ ಅವರು ಕಂಕಣ ತೊಟ್ಟಿದ್ದಾರೆ ಎಂದರು. ಡಿ ಎಂ ಕುರ್ಕೆ ಬೂದಿಹಾಳ್ ವಿರಕ್ತಮಠದ ಶಶಿಶೇಖರ ಸಿದ್ದ ಬಸವ ಸ್ವಾಮೀಜಿ ಸ್ವಾಮೀಜಿ ಮಾತನಾಡಿ, ವಿಶ್ವಬಂಧುತ್ವವನ್ನು ಸಾರುವುದೇ ಎಲ್ಲ ಧರ್ಮಗಳ ಗುರಿ. ವೀರಶೈವ ಧರ್ಮ ಸಕಲರ ಹಿತವನ್ನು ಕಾಪಾಡಿದೆ ಎಂದು ತಿಳಿಸಿದರು.ಕಾರ್ಯಕ್ರಮದಲ್ಲಿ ಮಾಜಿ ಶಾಸಕರಾದ ಕೆಪಿ ಪ್ರಭು ಕುಮಾರ್, ಜಿಎಸ್ ಪರಮೇಶ್ವರಪ್ಪ, ಪುರಸಭಾ ಮಾಜಿ ಸದಸ್ಯ ಮುರುಗೇಂದ್ರಪ್ಪ ವೀರಶೈವ ಸಮಾಜದ ಪ್ರಮುಖರು, ವೀರಶೈವ ಮಹಿಳಾ ಸಂಘದ ಅಧ್ಯಕ್ಷರು ಪದಾಧಿಕಾರಿಗಳು ಪಾಲ್ಗೊಂಡಿದ್ದರು.