ಸಾರಾಂಶ
ಸಾಹಿತ್ಯ, ಸಂಗೀತ, ಸೃಜನಶೀಲ ಕಲೆಗಳು ಮನುಷ್ಯರಿಗೆ ಆಕ್ಸಿಜನ್ ಇದ್ದಂತೆ. ಸಾಹಿತ್ಯ ,ಸಂಗೀತದ ಸ್ಪರ್ಶ ಇಲ್ಲದಿದ್ದರೆ ನಾವು ಕೀಲುಗೊಂಬೆಗಳಾಗುತ್ತೇವೆ.
ಕನ್ನಡಪ್ರಭ ವಾರ್ತೆ ಕೊಪ್ಪಳ
ಸಾಹಿತ್ಯ, ಸಂಗೀತ, ಸೃಜನಶೀಲ ಕಲೆಗಳು ಮನುಷ್ಯರಿಗೆ ಆಕ್ಸಿಜನ್ ಇದ್ದಂತೆ. ಸಾಹಿತ್ಯ ,ಸಂಗೀತದ ಸ್ಪರ್ಶ ಇಲ್ಲದಿದ್ದರೆ ನಾವು ಕೀಲುಗೊಂಬೆಗಳಾಗುತ್ತೇವೆ ಎಂದು ಸಾಹಿತಿ ಕುಂ. ವೀರಭದ್ರಪ್ಪ ಹೇಳಿದರು.ನಗರದ ಪ್ರಧಾನ ಅಂಚೆ ಕಚೇರಿಯಲ್ಲಿ ಅಂಚೆ ಕರೋಕೆ ಬಳಗದ ಕಾರ್ಯಕ್ರಮದಲ್ಲಿ ಅಂಚೆ ಇಲಾಖೆ ಮುದ್ರಿಸಿದ ಕುಂ.ವೀ ಅವರ ಭಾವಚಿತ್ರದ ಮೈ ಸ್ಟಾಂಪ್ ಬಿಡುಗಡೆಗೊಳಿಸಿ ಮಾತನಾಡಿದರು.
ಕೊಪ್ಪಳ ಅಂಚೆ ನೌಕರರು ತಮ್ಮ ಕರ್ತವ್ಯದ ನಂತರವೂ ನಿತ್ಯ ಕರೋಕೆ ಬಳಗದ ಹೆಸರಲ್ಲಿ ಸಾಹಿತ್ಯ ಸಂಗೀತ ಗಾಯನದ ತೊಡಗಿಸಿಕೊಂಡಿರುವುದು ಶ್ಲಾಘನೀಯ. ಜಗತ್ತಿನಲ್ಲಿ ಅತಿ ಹೆಚ್ಚು ಜನಪ್ರಿಯ, ಪ್ರಾಮಾಣಿಕ ಪಾರದರ್ಶಕವಾದದ್ದು ಅಂಚೆ ಇಲಾಖೆ. ಜಗತ್ತಿನ ಯಾವ ದೇಶದ ಅಂಚೆಯಲ್ಲಿ ಇರದ ವಿಶಿಷ್ಠವಾದದ್ದು ನಮ್ಮ ಪೋಸ್ಟ್ ಕಾರ್ಡ್. ಪತ್ರವೊಂದೇ ಸಂದೇಶವಾಹಕ ಇದ್ದಾಗ ನಿತ್ಯ ಮೂರು ಪೋಸ್ಟ್ ಕಾರ್ಡ್ ಬರೆಯುತ್ತಿದ್ದೆ. ಅಂಚೆ ಇಲಾಖೆ ನನ್ನ ಭಾವಚಿತ್ರದ ಮೈ ಸ್ಟಾಂಪ್ ಬಿಡುಗಡೆಗೊಳಿಸಿ ನನಗೆ ನೀಡಿದ್ದು, ನನಗೆ ಅವಿಸ್ಮರಣೀಯ ಆಗಿದೆ. ಇದು ಯಾವ ನೊಬಲ್ ಪ್ರಶಸ್ತಿಗಿಂತ ಕಡಿಮೆ ಅಲ್ಲ ಎಂದು ಕುಂವೀ ಹೇಳಿದರು.ಸಾವಿತ್ರಿ ಮುಜುಮದಾರ ಮಾತನಾಡಿ, ಕರ್ತವ್ಯದ ಒತ್ತಡದ ನಂತರ ಅಂಚೆ ನೌಕರರು ಸಾಹಿತ್ಯ ಪರಿಸರ ಗಾಯನದಲ್ಲಿ ತೊಡಗಿಸಿಕೊಂಡು ಸಾಂಸ್ಕೃತಿಕ ಪರಂಪರೆ ಹುಟ್ಟು ಹಾಕಿದ್ದಾರೆ. ಗೋಪಾಲ ಕೃಷ್ಣ ಅಡಿಗರು, ದೊಡ್ಡರಂಗೇಗೌಡರು, ಜಯಂತ್ ಕಾಯ್ಕಿಣಿ, ರಂಜಾನ್ ದರ್ಗಾ, ಸತ್ಯಾನಂದ ಪಾತ್ರೋಟರು ಸೇರಿದಂತೆ ಸಾಹಿತ್ಯ ಲೋಕದ ದಿಗ್ಗಜರು ಕೊಪ್ಪಳ ಅಂಚೆ ಕಚೇರಿ ಕಾರ್ಯಕ್ರಮಕ್ಕೆ ಆಗಮಿಸಿರುವುದು ಸ್ಮರಣೀಯ ಎಂದರು.
ಈ ಸಂದರ್ಭದಲ್ಲಿ ಪ್ರಭಾರಿ ಪೋಸ್ಟ್ ಮಾಸ್ಟರ್ ಸರ್ವೋತ್ತಮ ಉಪಾಧ್ಯಾಯ ಅಧ್ಯಕ್ಷತೆ ವಹಿಸಿದ್ದರು. ಸಾಹಿತಿ ಅನ್ನಪೂರ್ಣ ಮನ್ನಾಪೂರ ಪ್ರಾರ್ಥಿಸಿದರು. ಉಪ ಅಂಚೆ ಪಾಲಕ ಜಿ.ಎನ್. ಹಳ್ಳಿ ಸ್ವಾಗತಿಸಿದರು. ರವಿ ಕಾಂತನವರ ಪ್ರಾಸ್ತಾವಿಕ ನುಡಿದರು. ಹನುಮಗೌಡ ವಂದಿಸಿದರು. ಸಕ್ರಪ್ಪ ಹೂಗಾರ, ಮಹಮ್ಮದ ರಫಿ, ದಾವಲ್ ಸಾಬ ಕುಂ.ವೀ ಅವರ ಕತೆ ಆಧಾರಿತ ಮನಮೆಚ್ಚಿದ ಹುಡುಗಿ ಚಲನಚಿತ್ರದ ಗೀತ ಗಾಯನ ಪ್ರಸ್ತುತಪಡಿಸಿದರು.