ಸಾರಾಂಶ
ಕನ್ನಡಪ್ರಭ ವಾರ್ತೆ ಮೈಸೂರು
ಜೆಎಸ್ಎಸ್ಉನ್ನತ ಶಿಕ್ಷಣ ಮತ್ತು ಸಂಶೋಧನಾ ಅಕಾಡೆಮಿಯ ಪೋಷಣಾ ಮತ್ತು ಆಹಾರಶಾಸ್ತ್ರ ವಿಭಾಗ ಮತ್ತು ಜೀವಶಾಸ್ತ್ರ ವಿಭಾಗದ ಸಹಯೋಗದಲ್ಲಿ ಸೃಜನ ಅಂತರ ಕಾಲೇಜು ವಿಜ್ಞಾನ ಕಾರ್ಯನಿರ್ವಹಣಾ ಮಾದರಿ ನಿರ್ಮಾಣ ಸ್ಪರ್ಧೆ ಮತ್ತು ಪ್ರದರ್ಶನ ಆಯೋಜಿಸಿತ್ತು.ಸುತ್ತೂರು ಡಾ. ಶಿವರಾತ್ರಿ ರಾಜೇಂದ್ರ ಸ್ವಾಮೀಜಿಯ 110ನೇ ಜಯಂತಿ ಅಂಗವಾಗಿ ವಿಜ್ಞಾನ ಮತ್ತು ನವೀನತೆಯಲ್ಲಿ ಜಾಗತಿಕ ನಾಯಕತ್ವಕ್ಕಾಗಿ ಭಾರತೀಯ ಯುವ ಶಕ್ತಿಯನ್ನು ಸಬಲಗೊಳಿಸುವುದು- ವಿಕಸಿತ ಭಾರತದತ್ತ ಎಂಬ ವಿಷಯವನ್ನಾಧರಿಸಿದ್ದು, ಈ ಕಾರ್ಯಕ್ರಮದ ಉದ್ದೇಶ. ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಸೃಜನಶೀಲತೆ, ಸಮಸ್ಯೆ ಪರಿಹಾರ ಸಾಮರ್ಥ್ಯ ಮತ್ತು ನವೀನತೆಯನ್ನು ಉತ್ತೇಜಿಸಿತು.
ಮೈಸೂರು ವಿವಿ ಪ್ರಾಣಿಶಾಸ್ತ್ರ ವಿಭಾಗದ ವಿಶ್ರಾಂತ ಪ್ರಾಧ್ಯಾಪಕ ಎಸ್.ಎನ್. ಹೆಗ್ಡೆ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಕಾರ್ಯಕ್ರಮ ಉದ್ಘಾಟಿಸಿದರು.ವಿವಿಧ ಕಾಲೇಜುಗಳ ಪದವಿ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳು ವೈಜ್ಞಾನಿಕ ಮಾದರಿ ಪ್ರದರ್ಶಿಸಿದರು. ಆರೋಗ್ಯ ಪರಿಸರ ಮತ್ತು ತಂತ್ರಜ್ಞಾನ ಕ್ಷೇತ್ರಗಳಲ್ಲಿ ಆಧುನಿಕ ಸವಾಲುಗಳಿಗೆ ಸೃಜನಾತ್ಮಕ ಪರಿಹಾರ ಬಿಂಬಿಸಲಾಗಿತ್ತು. ಬಹುಮಾನ ವಿತರಣಾ ಸಮಾರಂಭದಲ್ಲಿ ಸ್ಪರ್ಧೆ ಮತ್ತು ಪ್ರದರ್ಶನದಲ್ಲಿ ಭಾಗವಹಿಸಿದವರ ಅತ್ಯುತ್ತಮ ಪ್ರಯತ್ನ ಮತ್ತು ಸೃಜನಶೀಲತೆಯನ್ನು ಗುರುತಿಸಲಾಯಿತು.
ಬೆಂಗಳೂರಿನ ಆರ್.ವಿ. ಎಂಜಿನಿಯರಿಂಗ್ ಕಾಲೇಜು ಪ್ರಥಮ ಬಹುಮಾನವಾಗಿ 10 ಸಾವಿರ ನಗದು, ಸರ್.ಎಂ. ವಿವಿ ತಾಂತ್ರಿಕ ಸಂಸ್ಥೆ ದ್ವಿತೀಯ ಬಹುಮಾನಕ್ಕೆ 5 ಸಾವಿರ ಮತ್ತು ಜೆಎಸ್ಎಸ್ ಎಎಚ್ಇಆರ್ ನ ಪೌಷ್ಠಿಕತೆ ಮತ್ತು ಆಹಾರಶಾಸ್ತ್ರ ವಿಭಾಗ ತೃತೀಯ ಬಹುಮಾನಪಡೆದು 2,500 ನಗದು ಬಹುಮಾನ ಪಡೆದರು.ಸಂಸ್ಥೆಯ ಉಪ ಡೀನ್ಡಾ.ವಿ. ಬಾಲಮುರಳಿಧರ, ತಳಿಶಾಸ್ತ್ರದ ಅತಿಥಿ ಪ್ರಾಧ್ಯಾಪಕ ಪ್ರೊ.ಜಿ. ಸುಬ್ರಹ್ಮಣ್ಯ, ಕಂಪ್ಯೂಟರ್ ಅಪ್ಲಿಕೇಷನ್ ವಿಭಾಗದ ಡಾ.ವಿ.ಎನ್. ಮಂಜುನಾಥ ಆರಾಧ್ಯ ಅವರನ್ನು ಒಳಗೊಂಡ ತಂತ್ರಜ್ಞರ ಸಮಿತಿಯು ವಿಜೇತರನ್ನು ಆಯ್ಕೆ ಮಾಡಿತು.
ಜೀವಶಾಸ್ತ್ರಗಳ ಶಾಲೆಯ ಮುಖ್ಯಸ್ಥ ಡಾ.ಕೆ.ಎ. ರವೀಶ, ಸಂಸ್ಥೆಯ ಕುಲಸಚಿವ ಡಾ.ಬಿ. ಮಂಜುನಾಥ ಮೊದಲಾದವರು ಇದ್ದರು.