ಕ್ರಿಯೇಟಿವ್ ನುಡಿಹಬ್ಬ, ವಾರ್ಷಿಕೋತ್ಸವ ಸಂಭ್ರಮ

| Published : Jan 08 2025, 12:16 AM IST

ಕ್ರಿಯೇಟಿವ್ ನುಡಿಹಬ್ಬ, ವಾರ್ಷಿಕೋತ್ಸವ ಸಂಭ್ರಮ
Share this Article
  • FB
  • TW
  • Linkdin
  • Email

ಸಾರಾಂಶ

ಕ್ರಿಯೇಟಿವ್ ಪದವಿ ಪೂರ್ವ ಕಾಲೇಜಿನಲ್ಲಿ ಕ್ರಿಯೇಟಿವ್ ನುಡಿಹಬ್ಬ ಮತ್ತು ವಾರ್ಷಿಕೋತ್ಸವ ಸಮಾರಂಭ ‘ಕ್ರಿಯೇಟಿವ್ ಆವಿರ್ಭವ’ ಇತ್ತೀಚೆಗೆ ನಡೆಯಿತು. ಖ್ಯಾತ ಸಾಹಿತಿ ಬಿ.ಆರ್. ಲಕ್ಷ್ಮಣ ರಾವ್ ಹಾಗೂ ಡಾ. ನಾ.ಸೋಮೇಶ್ವರ ಅವರು ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದರು.

ಸಂವಾದ ಕಾರ್ಯಕ್ರಮ, ಪುಸ್ತಕ ಬಿಡುಗಡೆ, ಸಾಧಕ ವಿದ್ಯಾರ್ಥಿಗಳಿಗೆ ಪುರಸ್ಕಾರ

ಕನ್ನಡಪ್ರಭ ವಾರ್ತೆ ಕಾರ್ಕಳಇಲ್ಲಿನ ಕ್ರಿಯೇಟಿವ್ ಪದವಿ ಪೂರ್ವ ಕಾಲೇಜಿನಲ್ಲಿ ಕ್ರಿಯೇಟಿವ್ ನುಡಿಹಬ್ಬ ಮತ್ತು ವಾರ್ಷಿಕೋತ್ಸವ ಸಮಾರಂಭ ‘ಕ್ರಿಯೇಟಿವ್ ಆವಿರ್ಭವ’ ಇತ್ತೀಚೆಗೆ ನಡೆಯಿತು. ಖ್ಯಾತ ಸಾಹಿತಿ ಬಿ.ಆರ್. ಲಕ್ಷ್ಮಣ ರಾವ್ ಹಾಗೂ ಡಾ. ನಾ.ಸೋಮೇಶ್ವರ ಅವರು ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದರು.ವಿದ್ಯಾರ್ಥಿಗಳ ಸಮ್ಮುಖದಲ್ಲಿ ಎರಡು ಹಂತಗಳಲ್ಲಿ ಸಂವಾದ ಕಾರ್ಯಕ್ರಮ ನಡೆಯಿತು. ಅವಿನಾಶ್‌ ಕಾಮತ್‌ ನಿರೂಪಿಸಿದರು.

‘ಕವಿತೆ ಹುಟ್ಟುವ ಸಮಯ’ ಸಂವಾದ ಕಾರ್ಯಕ್ರಮವನ್ನು ಬಿ.ಆರ್. ಲಕ್ಷ್ಮಣ ರಾವ್‌ ನಡೆಸಿ, ಹಾಡುಗಳ ನಿರಂತರತೆಗೆ ಕಾರಣ ಮುಂದಿನ ಪೀಳಿಗೆಯಾಗಿರುವ ವಿದ್ಯಾರ್ಥಿಗಳು ಎಂದರು.

ಮಜಾ ಟಾಕೀಸ್‌ ಖ್ಯಾತಿಯ ಮೋಹನ್ ಕಾರ್ಕಳ ಮತ್ತು ತಂಡದಿಂದ ಆರ್.ಲಕ್ಷ್ಮಣರಾವ್ ವಿರಚಿತ ಕವಿತೆಗಳ ಗಾಯನ ಕಾರ್ಯಕ್ರಮ ನಡೆಯಿತು.ವೈದ್ಯ, ಕ್ವಿಜ್ ಮಾಸ್ಟರ್, ಲೇಖಕ ಹಾಗೂ ಅಂಕಣಕಾರ ಡಾ. ನಾ.ಸೋಮೇಶ್ವರ ಸಂವಾದ ಕಾರ್ಯಕ್ರಮದಲ್ಲಿ ‘ಪುಸ್ತಕ ಪ್ರೀತಿಯಿಂದ ಬದುಕು ಸಂಪ್ರೀತ’ ಎಂಬ ವಿಚಾರದ ಕುರಿತು ಮಾತನಾಡಿ, ಮೆದುಳು, ಮನಸ್ಸು ಹಾಗೂ ಆತ್ಮಕ್ಕೆ ಸೂಕ್ತ ವ್ಯಾಯಾಮ ನೀಡುವುದು ಪುಸ್ತಕ ಮಾತ್ರ. ಆದ್ದರಿಂದ ಪಠ್ಯವಾಗಲಿ, ಸಾಹಿತ್ಯವಾಗಲಿ ಪ್ರೀತಿಯಿಟ್ಟು ಓದಿದರೆ ಮಾತ್ರ ಗುರಿ ಮುಟ್ಟಲು ಸುಲಭಸಾಧ್ಯ ಎಂದರು.‘ವನಿತಾ ಸುಗ್ಗಿ’ ಶೀರ್ಷಿಕೆಯಡಿಯಲ್ಲಿ ಕ್ರಿಯೇಟಿವ್ ಪುಸ್ತಕ ಮನೆ ವತಿಯಿಂದ ೫ ಜನ ಲೇಖಕಿಯರ ಪುಸ್ತಕ ಬಿಡುಗಡೆ ಮಾಡಲಾಯಿತು. ಕ್ರಿಯೇಟಿವ್ ಪುಸ್ತಕ ಮನೆ ಕಾರ್ಕಳ ಹಾಗೂ ಮೂಡುಬಿದಿರೆ ಶಾಖೆಯಲ್ಲಿ ‘ಪರಸ್ಪರ’ ಕಾರ್ಯಕ್ರಮದಲ್ಲಿ ಓದುಗ-ಲೇಖಕ ಜೊತೆಯಾಗುವ, ಪುಸ್ತಕಗಳಿಗೆ ಸಹಿ ಪಡೆಯುವ, ಸೆಲ್ಫಿ ತೆಗೆದುಕೊಳ್ಳುವ ವಿಶೇಷ ಅವಕಾಶವನ್ನು ಕಲ್ಪಿಸಲಾಗಿತ್ತು.ಕಾರ್ಯಕ್ರಮದಲ್ಲಿ ೨೦೨೩-೨೪ನೇ ಶೈಕ್ಷಣಿಕ ಸಾಲಿನ ಸಾಧಕ ವಿದ್ಯಾರ್ಥಿಗಳಿಗೆ ಪುರಸ್ಕಾರ ನಡೆಯಿತು. ಕಾರ್ಯಕ್ರಮವನ್ನು ಕಾರ್ಕಳ ಶಾಸಕ ವಿ.ಸುನಿಲ್ ಕುಮಾರ್‌ ಉದ್ಘಾಟಿಸಿ, ಕ್ರಿಯೇಟಿವ್ ವಿದ್ಯಾರ್ಥಿಗಳ ಸಾಧನೆಯಿಂದ ಕಾರ್ಕಳ ತಾಲೂಕು ರಾಜ್ಯ, ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಳ್ಳುತ್ತಿರುವುದು ಹೆಮ್ಮೆಯ ವಿಚಾರ ಎಂದರು.

ಉಡುಪಿ ಜಿಲ್ಲಾ ಶಾಲಾ ಶಿಕ್ಷಣ ಮತ್ತು ಪದವಿಪೂರ್ವ ವಿಭಾಗದ ಉಪನಿರ್ದೇಶಕ ಮಾರುತಿ, ಕ್ರಿಯೇಟಿವ್‌ ಕಾಲೇಜಿನ ವಿದ್ಯಾರ್ಥಿಗಳು ಪಠ್ಯ, ಪಠ್ಯೇತರ ವಿಭಾಗಗಳಲ್ಲಿ ಮುಂಚೂಣಿಯಲ್ಲಿದ್ದು, ಹೆಸರಿಗೆ ತಕ್ಕಂತೆ ವಿದ್ಯಾರ್ಥಿಗಳನ್ನು ಸೃಜನಾತ್ಮಕವಾಗಿ ಮಾರ್ಪಡಿಸುತ್ತಿರುವ ಸಂಸ್ಥೆ ಇನ್ನಷ್ಟು ಏಳಿಗೆಯನ್ನು ಕಾಣಲಿ ಎಂದು ಶುಭಹಾರೈಸಿದರು.

೨೦೨೩-೨೪ನೇ ಶೈಕ್ಷಣಿಕ ಸಾಲಿನ ಸಾಧಕ ವಿದ್ಯಾರ್ಥಿಗಳಿಗೆ ಸನ್ಮಾನ ಹಾಗೂ ಪ್ರಶಸ್ತಿ ಪ್ರದಾನಿಸಲಾಯಿತು. ಸಹ ಸಂಸ್ಥಾಪಕ ಡಾ. ಬಿ.ಗಣನಾಥ ಶೆಟ್ಟಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಸಂಸ್ಥೆಯ ಸಂಸ್ಥಾಪಕ ವರ್ಗದವರು, ಎಲ್ಲ ಬೋಧಕ -ಬೋಧಕೇತರ ಸಿಬ್ಬಂದಿ, ವಿದ್ಯಾರ್ಥಿಗಳು, ಪೋಷಕರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಜೀವಶಾಸ್ತ್ರ ಉಪನ್ಯಾಸಕ ಲೋಹಿತ್‌ ಎಸ್.ಕೆ. ಕಾರ್ಯಕ್ರಮ ನಿರೂಪಿಸಿ ವಂದಿಸಿದರು.