ಸಾರಾಂಶ
ಕನ್ನಡಪ್ರಭ ವಾರ್ತೆ ಬೆಳ್ತಂಗಡಿ
ಪ್ರತಿ ವರ್ಷ ಬೇಸಿಗೆಯಲ್ಲಿ ಸಾವಿರಾರು ಹೆಕ್ಟರ್ ಅರಣ್ಯ ಪ್ರದೇಶ ಕಾಡ್ಗಿಚ್ಚಿಗೆ ಬಲಿಯಾಗುತ್ತಿರುವುದು ವಿಷಾದನೀಯ. ಇದೀಗ ಬೇಸಿಗೆ ದಿನಗಳು ಆರಂಭವಾಗುತ್ತಿದ್ದು ಅರಣ್ಯ ಇಲಾಖೆ ಕಾಡ್ಗಿಚ್ಚು ಉಂಟಾಗದಂತೆ ತ್ವರಿತ ಮುನ್ನೆಚ್ಚರಿಕೆ ಕೈಗೊಳ್ಳಬೇಕಾದ ಅಗತ್ಯವಿದೆ.ಕಳೆದ ವರ್ಷ ಭಾರಿ ಬೇಸಿಗೆಯ ಜತೆ ಜಿಲ್ಲೆಯಲ್ಲಿ ಹೆಚ್ಚಿನ ಕಾಡ್ಗಿಚ್ಚು ಉಂಟಾಗಿ ಹಲವಾರು ಹೆಕ್ಟೇರ್ ಅರಣ್ಯ ಪ್ರದೇಶ ಸುಟ್ಟು ಕರಕಲಾಗಿತ್ತು. ಇದು ಅರಣ್ಯ ನಷ್ಟ, ಉಷ್ಣತೆ ಏರಿಕೆ ಹಾಗೂ ಇನ್ನಿತರ ಏರುಪೇರಿಗೆ ಕಾರಣವಾಗಿತ್ತು. ಇದರ ಹತೋಟಿ ಅರಣ್ಯ ಇಲಾಖೆ ಹಾಗೂ ಪರಿಸರ ಪ್ರೇಮಿಗಳಿಗೆ ಸವಾಲಾಗಿತ್ತು. ಉರಿ ಬಿಸಿಲಿನ ಜತೆ ಅಹರ್ನಿಶಿಯಾಗಿ ಕಾಡ್ಗಿಚ್ಚು ಹತೋಟಿಗೆ ಶ್ರಮವಹಿಸಿದ ಮಂದಿ ಸ್ಮರಣೀಯ ಏರು ಎಂದರೆ ತಪ್ಪಾಗಲಾರದು.
ಒಂದೆಡೆ ಬೆಂಕಿ ಆರುತ್ತಿದ್ದಂತೆ ಇನ್ನೊಂದೆಡೆ ಹಬ್ಬುವ ಬೆಂಕಿ ಸವಾಲೊಡ್ಡುತ್ತಿತ್ತು. ಹೆಚ್ಚಿನ ಬೆಂಕಿ ಪ್ರಕರಣಗಳು ಅರಣ್ಯದ ಮಧ್ಯಭಾಗಗಳಲ್ಲಿ ಉಂಟಾಗುತ್ತಿದ್ದ ಕಾರಣ ಇಲ್ಲಿಗೆ ಅಗತ್ಯ ವಾಹನಗಳು ಸಂಚರಿಸಲು ಅಸಾಧ್ಯವಾಗಿದ್ದು ಕಾಲ್ನಡಿಗೆ ಮೂಲಕವೇ ಹಲವಾರು ಕಿ.ಮೀ. ಕ್ರಮಿಸಿ ಜತೆಗೆ ನೀರು ಆಹಾರವನ್ನು ಹೊತ್ತು ಅಗತ್ಯ ಸಲಕರಣೆಗಳು ಇಲ್ಲದೆ ಬೆಂಕಿ ನಂದಿಸಲು ಪಟ್ಟ ಹರಸಾಹಸವನ್ನು ಮರೆಯುವಂತಿಲ್ಲ.ಬೆಂಕಿಯ ಕೆನ್ನಾಲಿಗೆ ಪಸರಿಸುತ್ತಿದ್ದಂತೆ ಅದನ್ನು ಹತೋಟಿಗೆ ತರುವ ಹೋರಾಟದ ಮಧ್ಯೆ ಸಿಬ್ಬಂದಿಗಳು ಸಾಕಷ್ಟು ಆರೋಗ್ಯ ಸಮಸ್ಯೆಗಳಿಗೂ ತುತ್ತಾಗಿದ್ದರು. ಹಲವು ಸ್ಥಳೀಯ ಪರಿಸರ ಪ್ರೇಮಿಗಳು ಜತೆಯಾಗಿ ಅರಣ್ಯ ಇಲಾಖೆಯ ಕೆಲಸವನ್ನು ಕೊಂಚ ಹಗುರಗೊಳಿಸಲು ಯತ್ನಿಸಿದ್ದರು. ಹೀಗಿದ್ದು ಸಂಪೂರ್ಣ ಬೆಂಕಿ ಹತೋಟಿಗೆ ಬರಲು ಮಳೆಗಾಲ ಆರಂಭದ ತನಕವು ಕಾಯಬೇಕಾಯಿತು.
ಈಗಲೇ ಕ್ರಮ ಅಗತ್ಯ: ಬಿಸಿಲು ಆರಂಭವಾಗುತ್ತಿದ್ದಂತೆ ಬೆಂಕಿ ಪ್ರಕರಣಗಳು ಉಂಟಾಗುತ್ತವೆ. ಈ ಬಗ್ಗೆ ಅರಣ್ಯ ಇಲಾಖೆ ತಕ್ಷಣ ಮುಂಜಾಗ್ರತೆ ಕ್ರಮಗಳನ್ನು ವಹಿಸಲು ಮುಂದಾಗುವ ಅನಿವಾರ್ಯತೆ ಇದೆ. ಈ ಹಿಂದೆ ಅರಣ್ಯ ಇಲಾಖೆ ವತಿಯಿಂದ ಅಡ್ವಾನ್ಸ್ ಫೈರಿಂಗ್ ನಡೆಸಲಾಗುತ್ತಿತ್ತು. ಅರಣ್ಯ ಪ್ರದೇಶದಲ್ಲಿ ಬೆಳೆಯುವ ಹಸಿ ಹುಲ್ಲಿಗೆ ಬೆಂಕಿ ನೀಡಿ ಅದನ್ನು ನಾಶಗೊಳಿಸಿದರೆ ಕಾಡ್ಗಿಚ್ಚಿನ ವೇಳೆ ಬೆಂಕಿ ಹೆಚ್ಚು ಪಸರಿಸುವುದಿಲ್ಲ ಹಾಗೂ ಅದನ್ನು ಹತೋಟಿಗೆ ತರುವುದು ಸುಲಭ. ಆದರೆ ಅದನ್ನು ಈಗ ಮಾಡಲಾಗುತ್ತಿಲ್ಲ. ಇದರಿಂದ ಒಣ ಹುಲ್ಲಿಗೆ ಸೋಕುವ ಬೆಂಕಿ ಬಹಳ ವೇಗವಾಗಿ ಹರಡಿ ಅರಣ್ಯ ನಾಶಕ್ಕೆ ಕಾರಣವಾಗುತ್ತಿದೆ. ಇತ್ತೀಚಿನ ವರ್ಷಗಳಲ್ಲಿ ಬೆಂಕಿ ರೇಖೆಯನ್ನುನಿಗದಿತ ಸ್ಥಳಗಳಲ್ಲಿ ನಿರ್ಮಿಸಲಾಗುತ್ತಿದೆ ಆದರೆ ಇದು ಹೆಚ್ಚು ಪರಿಣಾಮಕಾರಿಯಾಗಿರುವುದಿಲ್ಲ. ಅರಣ್ಯ ಇಲಾಖೆ ಕಾಡ್ಗಿಚ್ಚು ಉಂಟಾಗದಂತೆ ಆಧುನಿಕ ಕ್ರಮಗಳನ್ನು ಕೈಗೊಳ್ಳಬೇಕು.ವನ್ಯಜೀವಿ ವಿಭಾಗ ಅಧಿಕ: ಹೆಚ್ಚಿನ ಅರಣ್ಯ ಪ್ರದೇಶ ವನ್ಯಜೀವಿ ವಿಭಾಗದ ವ್ಯಾಪ್ತಿಗೆ ಒಳಪಡುತ್ತದೆ ಇಲ್ಲಿ ಅಳಿವಿನಂಚಿನಲ್ಲಿರುವ ಸಸ್ಯ ಪ್ರಭೇದಗಳು, ಔಷಧಿಯ ಗಿಡಗಳು, ಬೆಲೆಬಾಳುವ ಮರಗಳ ಜತೆಗೆ ಸಾಕಷ್ಟು ವನ್ಯಜೀವಿಗಳು ವಾಸಿಸುತ್ತವೆ. ಇಂತಹ ಪ್ರದೇಶದಲ್ಲಿ ಬೆಂಕಿ ಉಂಟಾದರೆ ಇವುಗಳ ವಿನಾಶ ಖಚಿತ. ವನ್ಯಜೀವಿಗಳು ನಾಶವಾಗುವ ಜತೆ ತಮ್ಮ ನೆಲೆಯನ್ನು ಕಳೆದುಕೊಳ್ಳುತ್ತವೆ ಬೆಂಕಿ ಉಂಟಾದರೆ ಇವುಗಳಿಗೆ ಅಗತ್ಯ ಆಹಾರವು ಸಿಗುವುದಿಲ್ಲ ಈಗಾಗಲೇ ಸಾಕಷ್ಟು ವನ್ಯಜೀವಿಗಳು ನಾಡಿನಲ್ಲಿ ಸಂಚರಿಸುತ್ತಿದ್ದು, ಕಾಡ್ಗಿಚ್ಚು ಉಂಟಾದರೆ ಇವುಗಳ ಉಪಟಳ ಮಿತಿಮೀರಲಿದೆ.ಅಳಿವಿನಂಚಿನಲ್ಲಿರುವ ಅನೇಕ ಪ್ರಾಣಿ, ಸರೀಸೃಪಗಳ ವಾಸಸ್ಥಾನವಾಗಿರುವ ವನ್ಯಜೀವಿ ವಿಭಾಗ ನಮ್ಮ ಬಹುದೊಡ್ಡ ಸಂಪತ್ತು. ಬೆಂಕಿಯಿಂದ ಇದನ್ನು ರಕ್ಷಿಸುವ ಬಗ್ಗೆ ಮುಂಜಾಗ್ರತೆ ಅತಿ ಅಗತ್ಯ.ಆಗಬೇಕಾದ ಅಗತ್ಯ ಕ್ರಮಗಳು: ಬೆಂಕಿ ಹತೋಟಿಗೆ ಅತ್ಯಾಧುನಿಕ ಸಲಕರಣೆಗಳನ್ನು ಒದಗಿಸಬೇಕು. ಕಾಡ್ಗಿಚ್ಚಿನ ಮುನ್ನೆಚ್ಚರಿಕೆ, ಹತೋಟಿಗಾಗಿ ತಾತ್ಕಾಲಿಕ ಸಿಬ್ಬಂದಿ ನೇಮಕವಾಗಬೇಕು. ಸಿಬ್ಬಂದಿ ಕೊರತೆಯಿಂದ ಬಳಲುತ್ತಿರುವ ಇಲಾಖೆಗೆ ಸಿಬ್ಬಂದಿ ಬಲ ಒದಗಿಸಬೇಕು, ಹಿರಿಯ ಅಧಿಕಾರಿಗಳು ಅರಣ್ಯ ಪ್ರದೇಶಗಳನ್ನು ಸಂದರ್ಶಿಸಿ ಅಲ್ಲಿನ ಪರಿಸರ ಅಧ್ಯಯನ ಮಾಡಬೇಕು. ಇಲಾಖೆಗೆ ಅಗತ್ಯ ವಾಹನಗಳನ್ನು ಒದಗಿಸಬೇಕು. ಶಿಕಾರಿ, ರಸ್ತೆಬದಿ ಅಡುಗೆ ಮಾಡುವುದು ಇತ್ಯಾದಿಗಳಿಗೆ ಕಠಿಣ ನಿರ್ಬಂಧ ಹೇರಬೇಕು. ಸಾರ್ವಜನಿಕರು, ಪ್ರವಾಸಿಗರು ಬೆಂಕಿಯ ಬಗ್ಗೆ ಹೆಚ್ಚಿನ ಮುನ್ನೆಚ್ಚರಿಕೆ ವಹಿಸಬೇಕು. ಅಗ್ನಿಶಾಮಕ ದಳ, ಇಲಾಖೆಯ ಸಿಬ್ಬಂದಿ ಹಾಗೂ ಸ್ಥಳೀಯರನ್ನು ಸೇರಿಸಿಕೊಂಡು ಕಾಡ್ಗಿಚ್ಚು ಕುರಿತು ಮಾಹಿತಿ ಕಾರ್ಯಾಗಾರವನ್ನು ಶೀಘ್ರವೇ ನಡೆಸಲಾಗುವುದು. ಕಾಡ್ಗಿಚ್ಚು ಉಂಟಾಗದಂತೆ ಅಗತ್ಯ ಕ್ರಮಗಳನ್ನು ಇಲಾಖೆ ವತಿಯಿಂದ ಕೈಗೊಳ್ಳಲಾಗುವುದು. ಅಲ್ಲದೆ ಸುಧಾರಿತ ವ್ಯವಸ್ಥೆಗಳ ಮೂಲಕ ಬೆಂಕಿ ಉಂಟಾದ ಪ್ರದೇಶವನ್ನು ತಕ್ಷಣ ಪತ್ತೆ ಹಚ್ಚುವ ಬಗ್ಗೆ ಸ್ಯಾಟಲೈಟ್ ಮೂಲಕ ವ್ಯವಸ್ಥೆ ಮಾಡಲಾಗಿದೆ ಎನ್ನುತ್ತಾರೆ ಕುದುರೆಮುಖ ವನ್ಯಜೀವಿ ವಿಭಾಗ, ಕಾರ್ಕಳದ ಉಪ ಅರಣ್ಯ ಸಂರಕ್ಷಣಾಧಿಕಾರಿ ಗಣಪತಿ,