ಸಾರಾಂಶ
ಬೀದರ್ : ಇಲ್ಲಿಯ ಜಿಲ್ಲಾ ಪೊಲೀಸ್ ಕವಾಯತು ಮೈದಾನದಲ್ಲಿ ಭಾನುವಾರ ನಡೆದ ಬೀದರ್ ಪ್ರಿಂಟ್ ಆ್ಯಂಡ್ ಟಿವಿ ಮಿಡಿಯಾ ಟ್ರೋಫಿ-2025 ಕ್ರಿಕೆಟ್ ಟೂರ್ನಿಯಲ್ಲಿ ಕಲಬುರಗಿ ಪತ್ರಕರ್ತರ ಕ್ರಿಕೆಟ್ ತಂಡ ಟ್ರೋಫಿ ಗೆದ್ದುಕೊಂಡಿತು.ಮೂರು ಪಂದ್ಯಗಳ ಸರಣಿಯಲ್ಲಿ ಎರಡು ಪಂದಗಳನ್ನು ಜಯಿಸಿ ಟ್ರೋಫಿ ಮುಡಿಗೇರಿಸಿಕೊಂಡಿತು.ಮೊದಲ ಪಂದ್ಯ ಕಲಬುರಗಿ ಪತ್ರಕರ್ತರ ತಂಡ ಹಾಗೂ ಎರಡನೇ ಪಂದ್ಯ ಬೀದರ್ ಪತ್ರಕರ್ತರ ಕ್ರಿಕೆಟ್ ತಂಡ ಜಯಿಸಿದ್ದರಿಂದ ಮೂರನೇ ಪಂದ್ಯ ತೀವ್ರ ಕುತೂಹಲ ಕೆರಳಿತು. ರೋಚಕತೆಯಿಂದ ಕೂಡಿದ 6 ಓವರ್‌ಗಳ ನಿರ್ಣಾಯಕ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಬೀದರ್ ಪತ್ರಕರ್ತರ ತಂಡ ನಿಗದಿತ ಓವರ್‌ಗಳಲ್ಲಿ 8 ವಿಕೇಟ್ ಕಳೆದುಕೊಂಡು 33 ರನ್ ಗಳಿಸಿತು. ಕಲಬುರಗಿ ಪತ್ರಕರ್ತರ ತಂಡ 4.1 ಓವರ್‌ಗಳಲ್ಲಿ ಎರಡು ವಿಕೇಟ್ ನಷ್ಟಕ್ಕೆ 38 ರನ್ ಗಳಿಸಿ ಗೆಲುವಿನ ನಗೆ ಬೀರಿತು.ವಿಜೇತ ಹಾಗೂ ರನ್ನರ್ ಅಪ್ ತಂಡಗಳಿಗೆ ಡಿ.ಆರ್. ಡಿವೈಎಸ್‌ಪಿ ಸುನೀಲ್ ಕೂಡ್ಲಿ ಹಾಗೂ ಬೀದರ್ ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಬಾಬುವಾಲಿ ಟ್ರೋಫಿ ಪ್ರದಾನ ಮಾಡಿದರು. ಸಂಜು ರಾಠೋಡ್ ಉತ್ತಮ ಆಲ್‌ರೌಂಡರ್, ಸಂಜು ಅಡಸಾರೆ ಉತ್ತಮ ಬ್ಯಾಟ್ಸ್ಮನ್ ಹಾಗೂ ಸಂಜು ರಾಠೋಡ್ ಉತ್ತಮ ಬೌಲರ್ ಪ್ರಶಸ್ತಿಗೆ ಭಾಜನರಾದರು. ಬೀದರ್ ಪತ್ರಕರ್ತರ ತಂಡಕ್ಕೆ ಹಿರಿಯ ಪತ್ರಕರ್ತ ಅಪ್ಪರಾವ್ ಸೌದಿ ಮಾರ್ಗದರ್ಶಕರಾಗಿದ್ದರು. ಬಸವರಾಜ, ಅಮಜದ್ ಅಂಪೈರ್ ಹಾಗೂ ವಿನಾಯಕ್ ಕುಲಕರ್ಣಿ ಸ್ಕೋರರ್ ಆಗಿ ಕಾರ್ಯ ನಿರ್ವಹಿಸಿದರು.ಬೆಳಿಗ್ಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರದೀಪ್ ಗುಂಟಿ ಟೂರ್ನಿಗೆ ಚಾಲನೆ ನೀಡಿದರು. ಬೀದರ್ ಪತ್ರಕರ್ತರಿಂದ ಟೂರ್ನಿ ಸಂಘಟಿಸಲಾಗಿತ್ತು.