ಗುಜರಾತ್ (ಸೂರತ್) ನವಸಾರಿಯ ಮಟ್ವಾಡ್ ಕ್ರಿಕೆಟ್ ಮೈದಾನದಲ್ಲಿ ನಡೆದ ಸರ್ದಾರ್ ವಲ್ಲಭಭಾಯಿ ಪಟೇಲ್ ಕ್ರಿಕೆಟ್ ಚಾಂಪಿಯನ್‌ಶಿಪ್ (ಬಾಯ್ಸ್) ಫೈನಲ್ ಪಂದ್ಯದಲ್ಲಿ ಕರ್ನಾಟಕ ತಂಡ ಅದ್ಭುತ ಆಟ ಪ್ರದರ್ಶಿಸಿ ಲಕ್ನೋ ತಂಡವನ್ನು 87 ರನ್‌ಗಳ ಅಂತರದಲ್ಲಿ ಮಣಿಸಿ ಚಾಂಪಿಯನ್ ಪಟ್ಟ ಅಲಂಕರಿಸಿತು.
ಕನ್ನಡಪ್ರಭ ವಾರ್ತೆ ವಿಜಯಪುರ
ಗುಜರಾತ್ (ಸೂರತ್) ನವಸಾರಿಯ ಮಟ್ವಾಡ್ ಕ್ರಿಕೆಟ್ ಮೈದಾನದಲ್ಲಿ ನಡೆದ ಸರ್ದಾರ್ ವಲ್ಲಭಭಾಯಿ ಪಟೇಲ್ ಕ್ರಿಕೆಟ್ ಚಾಂಪಿಯನ್‌ಶಿಪ್ (ಬಾಯ್ಸ್) ಫೈನಲ್ ಪಂದ್ಯದಲ್ಲಿ ಕರ್ನಾಟಕ ತಂಡ ಅದ್ಭುತ ಆಟ ಪ್ರದರ್ಶಿಸಿ ಲಕ್ನೋ ತಂಡವನ್ನು 87 ರನ್‌ಗಳ ಅಂತರದಲ್ಲಿ ಮಣಿಸಿ ಚಾಂಪಿಯನ್ ಪಟ್ಟ ಅಲಂಕರಿಸಿತು.ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡ ಕರ್ನಾಟಕ ತಂಡ 20 ಓವರ್‌ಗಳಲ್ಲಿ 8 ವಿಕೆಟ್ ಕಳೆದುಕೊಂಡು 190 ರನ್‌ಗಳ ಭರ್ಜರಿ ಮೊತ್ತ ಕಲೆಹಾಕಿತು. ಆರಂಭದಲ್ಲಿ ಕೆಲವು ವಿಕೆಟ್‌ಗಳು ಬೇಗನೆ ಕುಸಿದರೂ ಅರ್ಪಿತ್ ಆರ್. ನಾಗನಾದ್ ಅವರ ಜವಾಬ್ದಾರಿಯುತ ಹಾಗೂ ಆಕ್ರಮಣಕಾರಿ ಬ್ಯಾಟಿಂಗ್ ಪಂದ್ಯಕ್ಕೆ ತಿರುವು ನೀಡಿತು. ಅವರು 54 ಬಾಲ್‌ಗಳಲ್ಲಿ 72 ರನ್ (10 ಫೋರ್, 1 ಸಿಕ್ಸ್) ಗಳಿಸಿ ತಂಡದ ಬಲವಾದ ಅಡಿಪಾಯ ಹಾಕಿದರು.
ಅಂತಿಮ ಹಂತದಲ್ಲಿ ತಂಡದ ನಾಯಕ ವಿಕಾಸ್ ಪಾಟೀಲ್ ಅಬ್ಬರದ ಆಟ ಪ್ರದರ್ಶಿಸಿ ಪ್ರೇಕ್ಷಕರನ್ನು ಮಂತ್ರಮುಗ್ಧಗೊಳಿಸಿದರು. ಅವರು ಕೇವಲ 19 ಬಾಲ್‌ಗಳಲ್ಲಿ 48 ರನ್‌ಗಳನ್ನು (7 ಫೋರ್, 2 ಸಿಕ್ಸ್) ಸಿಡಿಸಿ ತಂಡದ ಮೊತ್ತವನ್ನು 190ಕ್ಕೆ ತಲುಪಿಸಿದರು. ಅವರ ಸ್ಟ್ರೈಕ್ ರೇಟ್ 252.63 ಆಗಿದ್ದು ಪಂದ್ಯದಲ್ಲಿನ ಅತ್ಯಂತ ಆಕರ್ಷಕ ಇನಿಂಗ್ಸ್‌ಗಳಲ್ಲಿ ಒಂದಾಗಿತ್ತು.190 ರನ್‌ಗಳ ಗುರಿ ಬೆನ್ನಟ್ಟಿದ ಲಕ್ನೋ ತಂಡಕ್ಕೆ ಕರ್ನಾಟಕದ ಬೌಲರ್‌ಗಳು ಆರಂಭದಿಂದಲೇ ಶಾಕ್ ನೀಡಿದರು. ಸಚಿನ್ ಯಾದವ್ (4 ಓವರ್-3 ವಿಕೆಟ್) ಅವರ ನಿಖರ ಬೌಲಿಂಗ್ ಎದುರು ಲಕ್ನೋ ಬ್ಯಾಟ್ಸ್‌ಮನ್‌ಗಳು ತತ್ತರಿಸಿದರು. ಜಗದೀಶ್ ಕಂಬಾಗಿ (3.5 ಓವರ್-2 ವಿಕೆಟ್) ಮತ್ತು ನಮನ ಎಲ್. ಪವಾರ್ (2 ಓವರ್-2 ವಿಕೆಟ್) ಅವರ ಶಿಸ್ತುಬದ್ಧ ದಾಳಿಯಿಂದ ಲಕ್ನೋ ತಂಡ ಕೇವಲ 103 ರನ್‌ಗಳಿಗೆ ಆಲ್‌ಔಟ್ ಆಯಿತು.
ಈ ಗೆಲುವಿನೊಂದಿಗೆ ಕರ್ನಾಟಕ ತಂಡ ಸರ್ದಾರ್ ವಲ್ಲಭಭಾಯಿ ಪಟೇಲ್ ಕ್ರಿಕೆಟ್ ಚಾಂಪಿಯನ್‌ಷಿಪ್ 2025ರ ಚಾಂಪಿಯನ್ ಆಗಿ ಹೊರಹೊಮ್ಮಿತು. ತಂಡದ ನಾಯಕ ವಿಕಾಸ್ ಪಾಟೀಲ್ ಅವರ ನಾಯಕತ್ವ, ಆಟಗಾರರ ಏಕತೆಯ ಪ್ರಯತ್ನ ಮತ್ತು ಶಿಸ್ತುಬದ್ಧ ಆಟವೇ ಈ ಐತಿಹಾಸಿಕ ಗೆಲುವಿನ ಮೂಲ ಕಾರಣವಾಯಿತು.ಪಂದ್ಯದ ಅಂತ್ಯದಲ್ಲಿ ಈ ಭರ್ಜರಿ ಗೆಲುವಿಗೆ ಕರ್ನಾಟಕ ಕ್ರಿಕೆಟ್ ಸಂಸ್ಥೆಯ ಅಧ್ಯಕ್ಷ ಜಾಫರ್ ಅಂಗಡಿ ಹಾಗೂ ಗೌರವಾಧ್ಯಕ್ಷ ಡಾ.ಅಶೋಕ್ ಕುಮಾರ್ ಜಾಧವ್ ಅವರು ಚಾಂದ್ ಮುಕಾದಮ, ಹಜರತಬಿಲಾಲ ಹೆಬ್ಬಾಳ, ಸಲೀಮ್ ಬೆಪಾರಿ, ಶ್ರೀಕಾಂತ್ ಕಾಖಂಡಕಿ ಹಾಗೂ ಪದಾಧಿಕಾರಿಗಳು ಕರ್ನಾಟಕ ತಂಡಕ್ಕೆ ಹಾರ್ದಿಕ ಅಭಿನಂದನೆಗಳನ್ನು ತಿಳಿಸಿದರು.
ಕ್ರೀಡಾಭಿಮಾನಿಗಳು ಮತ್ತು ಅಧಿಕಾರಿಗಳು ಕರ್ನಾಟಕ ತಂಡದ ಸಾಧನೆಯನ್ನು ಹರ್ಷದಿಂದ ಶ್ಲಾಘಿಸಿದರು. ಈ ಜಯ ಕರ್ನಾಟಕ ಕ್ರಿಕೆಟ್‌ನ ಭವಿಷ್ಯಕ್ಕೆ ಹೊಸ ಭರವಸೆಯ ಸಂಕೇತವಾಗಿದೆ.