ಸಾರಾಂಶ
ಜಿಲ್ಲಾ ಕೇಂದ್ರದಲ್ಲಿ ಸೂಕ್ತ ಜಾಗಕ್ಕೆ 2 ದಶಕಗಳಿಂದ ಹುಡುಕಾಟ, ಹಣ ಇದೆ, ಆದ್ರೆ ಜಾಗ ಸಿಕ್ತಾ ಇಲ್ಲ
ಆರ್.ತಾರಾನಾಥ್ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು
ಕ್ರಿಕೆಟ್‌ಗೆ ಪ್ರತ್ಯೇಕ ಕ್ರೀಡಾಂಗಣ ನಿರ್ಮಾಣ ಕಾಫಿಯ ನಾಡಿನಲ್ಲಿ ಗಗನ ಕುಸುಮವಾಗಿದೆ.ಚಿಕ್ಕಮಗಳೂರು ಜಿಲ್ಲಾ ಕೇಂದ್ರದಲ್ಲಿ ಕ್ರಿಕೆಟ್ ಕ್ರೀಡಾಂಗಣ ನಿರ್ಮಾಣಕ್ಕಾಗಿ ಜಾಗ ಹುಡುಕುವ ಕೆಲಸವನ್ನು ಕಳೆದ ಎರಡು ದಶಕಗಳಿಂದ ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಷನ್ (ಕೆಎಸ್‌ಸಿಎ) ಮೆಗಾ ಸಿರಿಯಲ್ ರೀತಿಯಲ್ಲಿ ನಿರಂತರವಾಗಿ ಮಾಡುತ್ತಿದೆ. ಆದರೆ, ಈವರೆಗೆ ಅದು ಸಫಲವಾಗಿಲ್ಲ. ಒಂದಲ್ಲಾ ಒಂದು ಕಾರಣಕ್ಕಾಗಿ ಜಾಗ ಕೈ ತಪ್ಪುತ್ತಿದೆ.
ಆದರೂ ಕೂಡ ಕೆಎಸ್‌ಸಿಎ ತನ್ನ ಪ್ರಯತ್ನವನ್ನು ಮುಂದುವರಿಸಿದೆ. ಇತ್ತೀಚೆಗೆ ಚಿಕ್ಕಮಗಳೂರಿಗೆ ಆಗಮಿಸಿದ್ದ ಕೆಎಸ್‌ಸಿಎ ತಂಡ ಜಿಲ್ಲಾಧಿಕಾರಿ ಗಳನ್ನು ಬೇಟಿ ಮಾಡಿತ್ತು. ಕಂದಾಯ ಅಧಿಕಾರಿಗಳೊಂದಿಗೆ ನಗರ ಸಮೀಪದಲ್ಲಿರುವ ಕರ್ತಿಕೆರೆ ಗ್ರಾಮಕ್ಕೆ ತೆರಳಿ ಇಲ್ಲಿನ ಸರ್ವೆ ನಂಬರ್ 237 ರಲ್ಲಿರುವ 15 ಎಕರೆ ಗೋಮಾಳ ಪ್ರದೇಶವನ್ನು ವೀಕ್ಷಿಸಿತು. ಈ ಸಂದರ್ಭದಲ್ಲಿ ಗ್ರಾಮಸ್ಥರು ಆಕ್ಷೇಪ ಮಾಡಿದರು, ಗ್ರಾಮಕ್ಕೆ ಮುಂದಿನ ದಿನ ಗಳಲ್ಲಿ ಬೇಕಾಗುತ್ತದೆ. ಹಾಗಾಗಿ ಇಲ್ಲಿ ಕ್ರೀಡಾಂಗಣ ಮಾಡಲು ಬಿಡುವುದಿಲ್ಲ ಎಂದು ಹೇಳಿದರು. ಅದ್ದರಿಂದ ಈ ತಂಡ ಕಡೂರಿಗೆ ತೆರಳಿ ಕೆಲವು ಸ್ಥಳವನ್ನು ಪರಿಶೀಲನೆ ನಡೆಸಿತು.ನೆರೆ ಜಿಲ್ಲೆಗಳ ಸ್ಥಿತಿಗತಿ:ಕ್ರಿಕೆಟ್ ದಿನೇ ದಿನೇ ಹೆಚ್ಚು ಜನಪ್ರಿಯವಾಗುತ್ತಿದೆ. ಕ್ರಿಕೆಟ್ ತರಬೇತಿ ಪಡೆಯಲು ಹೆಚ್ಚು ಮಂದಿ ಮುಂದೆ ಬರುತ್ತಿದ್ದಾರೆ. ಚಿಕ್ಕಮಗಳೂರು, ಶಿವಮೊಗ್ಗ ಹಾಗೂ ಹಾಸನ ಜಿಲ್ಲೆಗಳು ಒಳಗೊಂಡ ಫಸ್ಟ್ ಡಿವಿಜನ್‌ನಲ್ಲಿ ಚಿಕ್ಕಮಗಳೂರು ತಂಡ ಪ್ರತಿ ವರ್ಷ ಚಾಂಪಿಯನ್ ಶಿಪ್ ಪಡೆದು ಕೊಳ್ಳುತ್ತಿದೆ. ಒಳ್ಳೆಯ ತರಬೇತಿ ಪಡೆಯಲು ಕ್ರೀಡಾಂಗಣ ಇಲ್ಲದಿದ್ದರೂ ಜಿಲ್ಲೆಯ ಕ್ರೀಡಾಪಟುಗಳು ಮುಂಚೂಣಿಯಲ್ಲಿದ್ದಾರೆ.
ನೆರೆಯ ಶಿವಮೊಗ್ಗದಲ್ಲಿ ಕ್ರಿಕೆಟ್‌ಗೆ ಪ್ರತ್ಯೇಕವಾಗಿ 6 ಹಾಗೂ ಹಾಸನದಲ್ಲಿ 2 ಕ್ರಿಡಾಂಗಣಗಳು ಇವೆ. ಹಾಸನದ ಡೈರಿ ಸರ್ಕಲ್ ಬಳಿ ಕೆಎಸ್‌ಸಿಎ ಹೊಸದಾಗಿ ಕ್ರಿಕೆಟ್ ಸ್ಟೇಡಿಯಂ ನಿರ್ಮಾಣ ಮಾಡುತ್ತಿದೆ. ಆದರೆ, ನಮ್ಮ ಜಿಲ್ಲೆಯಲ್ಲಿ ಒಂದಾದರೂ ಕ್ರೀಡಾಂಗಣ ನಿರ್ಮಾಣ ಮಾಡಲು ಜಾಗ ಸಿಗುತ್ತಿಲ್ಲ.ಬೇಕಾಗಿರೋದು 8 ಎಕರೆ:ಕ್ರಿಕೆಟ್ ಸ್ಟೇಡಿಯಂ ನಿರ್ಮಾಣ ಮಾಡಲು ಕನಿಷ್ಠ 12 ಎಕರೆಯಾದ್ರೂ ಜಾಗ ಬೇಕು. ಆದರೆ, 8 ಎಕರೆ ಇದ್ರೆ ಸಾಕು. ಚಿಕ್ಕಮಗಳೂರು ಸುತ್ತಮುತ್ತ ಇಷ್ಟು ಸರ್ಕಾರಿ ಜಾಗ ಇಲ್ಲವೇ ಎಂಬುದು ಯಕ್ಷ ಪ್ರಶ್ನೆಯಾಗಿದೆ.
ಕ್ರೀಡಾಂಗಣ ನಿರ್ಮಾಣಕ್ಕಾಗಿ ಕೆಎಸ್‌ಸಿಎ ಪ್ರಯತ್ನ ಮಾಡುತ್ತಲೇ ಇದೆ. ಇಲ್ಲಿನ ಕೆಎಂ ರಸ್ತೆಯಲ್ಲಿರುವ ತಾಜ್ ಹೋಟೆಲ್ ಬಳಿ ಜಾಗ ನೋಡ ಲಾಗಿತ್ತು. ಆದರೆ, ಅದು ಸಮತಟ್ಟು ಮಾಡಲು ಆಗುವುದಿಲ್ಲ ಎಂಬ ಕಾರಣಕ್ಕೆ ಕೈಬಿಡಲಾಯಿತು. ಕೈಗಾರಿಕಾ ವಸಾಹತು ಪ್ರದೇಶ, ವೃದ್ಧಾಶ್ರಮ ಬಳಿ ಜಾಗವನ್ನು ನೋಡಲಾಗಿತ್ತು. ಇಲ್ಲಿನ ಕಲ್ಯಾಣ ನಗರದಲ್ಲಿರುವ ಪುಟ್ ಬಾಲ್ ಸ್ಟೇಡಿಯಂ ಜಾಗವನ್ನು ಸಹ ಕೇಳಲಾಗಿತ್ತು. ಅದು ಕೂಡ ಸಿಗಲಿಲ್ಲ. ಸ್ಟೇಡಿಯಂ ನಿರ್ಮಾಣ ಮಾಡಲು ಕ್ರಿಕೆಟ್ ಅಸೋಸಿಯೇಷನ್‌ನಲ್ಲಿ ಹಣ ಇದೆ. ಆದರೆ, ಜಾಗ ಸಿಕ್ತಾ ಇಲ್ಲ. ಹಾಗಾಗಿ ಕ್ರಿಕೆಟ್ ಕ್ರೀಡಾಂಗಣ ನಿರ್ಮಾಣ ಗಗನ ಕುಸುಮವಾಗಿದೆ. ಜಿಲ್ಲಾಡಳಿತ ಹಾಗೂ ಜನಪ್ರತಿನಿಧಿಗಳು ಮನಸ್ಸು ಮಾಡಿದರೆ, ಜಿಲ್ಲಾ ಕೇಂದ್ರದಲ್ಲೊಂದು ಕ್ರಿಕೆಟ್ ಸ್ಟೇಡಿಯಂ ನಿರ್ಮಾಣ ಮಾಡುವ ಕನಸು ನನಸು ಮಾಡಬಹುದು.--- ಬಾಕ್ಸ್ ---ಕ್ರಿಕೆಟ್ ಸ್ಟೇಡಿಯಂ ನಿರ್ಮಾಣ ಮಾಡುವ ಸಂಬಂಧ ಕೆಎಸ್‌ಸಿಎ ತಂಡ ಇತ್ತೀಚೆಗೆ ಚಿಕ್ಕಮಗಳೂರಿಗೆ ಭೇಟಿ ನೀಡಿತ್ತು. ಕರ್ತೀಕೆರೆ ಗ್ರಾಮಕ್ಕೆ ತೆರಳಿ ಸ್ಥಳ ಪರಿಶೀಲನೆ ನಡೆಸಿತು. ಆದರೆ, ಗ್ರಾಮಸ್ಥರು ಆಶ್ರಯ ಮನೆಗಳ ನಿರ್ಮಾಣಕ್ಕೆ ಜಾಗ ಬೇಕೆಂದು ಹೇಳಿದ್ದಾರೆ. ಹಾಗಾಗಿ ಗ್ರಾಮಸ್ಥ ರೊಂದಿಗೆ ಚರ್ಚಿಸಿ ಸೂಕ್ತ ತೀರ್ಮಾನ ತೆಗೆದುಕೊಳ್ಳಲಾಗುವುದು. ಜಿಲ್ಲಾ ಕೇಂದ್ರದಲ್ಲಿ ಕ್ರಿಕೆಟ್ ಸ್ಟೇಡಿಯಂ ನಿರ್ಮಾಣ ಆಗಬೇಕೆಂದು ನಮ್ಮ ಉದ್ದೇಶವಾಗಿದೆ. - ಎಚ್.ಡಿ.ತಮ್ಮಯ್ಯಶಾಸಕರು, ಚಿಕ್ಕಮಗಳೂರು 26 ಕೆಸಿಕೆಎಂ 2
----ಕ್ರಿಕೆಟ್ ತರಬೇತಿಯಲ್ಲಿ ಚಿಕ್ಕಮಗಳೂರು ಜಿಲ್ಲೆ ಮುಂಚೂಣಿಯಲ್ಲಿದೆ. ಪ್ರತ್ಯೇಕ ಸ್ಟೇಡಿಯಂ ಸಿಕ್ಕರೆ ಇನ್ನಷ್ಟು ಉತ್ತಮ ರೀತಿಯಲ್ಲಿ ತರಬೇತಿ ನೀಡಲು ಸಾಧ್ಯವಾಗುತ್ತದೆ. ಇಲ್ಲಿ ಕ್ರೀಡಾಂಗಣ ನಿರ್ಮಾಣ ಮಾಡಿದರೆ ಬೇರೆ ಕ್ರೀಡಾಕೂಟಗಳನ್ನು ನಡೆಸಬಹುದು, ಇತರೆ ಕಾರ್ಯಕ್ರಮಗಳಿಗೂ ಬಳಕೆ ಮಾಡಬಹುದು. ಕ್ರೀಡಾಂಗಣದ ಸುತ್ತ ವಾಕಿಂಗ್ ಪಾತ್‌ಗಳನ್ನು ನಿರ್ಮಾಣ ಮಾಡಲಾಗುವುದು. ಹಾಗಾಗಿ ಎಲ್ಲದಕ್ಕೂ ಅನುಕೂಲ ವಾಗಲಿದೆ.- ಶಶಿಕುಮಾರ್ಕ್ರಿಕೆಟ್ ಕೋ ಆಡಿನೇಟರ್
ಚಿಕ್ಕಮಗಳೂರು ವಲಯ--26 ಕೆಸಿಕೆಎಂ 3ಚಿಕ್ಕಮಗಳೂರಿನ ಜಿಲ್ಲಾ ಆಟದ ಮೈದಾನದಲ್ಲಿ ಕ್ರಿಕೆಟ್ ಆಟ ಆಡುತ್ತಿರುವ ಯುವಕರು.