ಸಾರಾಂಶ
ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಆರೋಪಿತನಿಗೆ ಶಿಕ್ಷೆ ನೀಡಿ ಸಮಾಜದ ಸುಧಾರಣೆಗಿಂತ ಸಾರ್ವಜನಿಕರಲ್ಲಿ ಕಾನೂನಿನ ಅರಿವು ಮೂಡಿಸುವುದರಿಂದ ಅಪರಾಧ ಪ್ರಕರಣಗಳನ್ನು ನಿಯಂತ್ರಿಸಲು ಸಾಧ್ಯವಾಗಲಿದೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಮಂಜುನಾಥ ನಾಯಕ್ ಹೇಳಿದರು.ಇಲ್ಲಿನ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಸೋಮವಾರ ನ್ಯಾಯಾಂಗ ಇಲಾಖೆ, ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಪೊಲೀಸ್ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಪದವಿ ಪೂರ್ವ ಶಿಕ್ಷಣ ಇಲಾಖೆ, ಶಾಲಾ ಶಿಕ್ಷಣ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಜಿಲ್ಲಾ ಮಹಿಳಾ ಸಬಲೀಕರಣ ಘಟಕ ಹಾಗೂ ಸ್ವಯಂ ಸೇವಾ ಸಂಸ್ಥೆಗಳ ಸಹಯೋಗದಲ್ಲಿ ಪೋಕ್ಸೋ ಕಾಯ್ದೆ-2012, ಬಾಲ್ಯವಿವಾಹ ನಿಷೇಧ ಕಾಯ್ದೆ ಹಾಗೂ ಪರಿಶಿಷ್ಟ ಜಾತಿ ಮತ್ತು ಪಂಗಡಗಳ (ದೌರ್ಜನ್ಯ ತಡೆಗಟ್ಟುವಿಕೆ) ಕಾಯ್ದೆ-1989 ಗಳ ಅನುಷ್ಠಾನದ ಕುರಿತು ಜಿಲ್ಲೆಯ ಎಲ್ಲಾ ಪ್ರೌಢ ಮತ್ತು ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರು ಹಾಗೂ ಪ್ರಾಚಾರ್ಯರಿಗಾಗಿ ಏರ್ಪಡಿಸಿದ್ದ ಒಂದು ದಿನದ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಅನೇಕ ಪ್ರಕರಣಗಳಲ್ಲಿ ಮಕ್ಕಳು ಆರೋಪಿಗಳಾಗಿರುವಂತೆ ಪೋಷಕರು ನೊಂದವರಾಗಿರುತ್ತಾರೆ. ಕೈಮೀರಿ ಘಟಿಸಿರುವ ಅನೇಕ ಪ್ರಕರಣಗಳಲ್ಲಿ, ಕಾಯ್ದೆಯ ವ್ಯಾಪ್ತಿಯಲ್ಲಿ ಕೈಗೊಳ್ಳಬೇಕಾದ ಕ್ರಮಗಳು ಕೆಲವೊಮ್ಮೆ ಎಂತಹವರನ್ನೂ ಆತಂಕಕ್ಕೀಡು ಮಾಡುತ್ತವೆ. ಈವರೆಗೆ ಅನುಷ್ಠಾನಗೊಂಡ ಕಾಯ್ದೆಗಳು ಸದ್ಭಳಕೆ ಯಾಗುವಂತೆ ಹಾಗೂ ಅವುಗಳು ಯಾವುದೇ ಅನುಕೂಲಕ್ಕಾಗಿ ದುರುಪಯೋಗವಾಗದಂತೆಯೂ ತಡೆಯುವ ಅವಶ್ಯಕತೆ ಇದೆ ಎಂದರು.ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಕೆ.ಮಿಥುನ್‍ಕುಮಾರ್ ಮಾತನಾಡಿ, ಈ ನೆಲದ ಸಂಸ್ಕೃತಿ ಮತ್ತು ಕಾನೂನುಗಳ ಸಂಘರ್ಷಗಳಿಂದಾಗಿ, ಸಾಮಾಜಿಕ ಪಿಡುಗು ಮತ್ತು ಮೌಢ್ಯಗಳ ಪಾಲನೆಯಿಂದಾಗಿ ಹಲವು ಪ್ರಕರಣಗಳು ದಾಖಲಾಗುತ್ತಿವೆ. ಕಾನೂನಿನ ಕಠಿಣ ಅನುಷ್ಠಾನದಿಂದಾಗಿ ಮೌಢ್ಯಗಳ ಉಚ್ಚಾಟನೆ ಅನಿವಾರ್ಯವೂ ಅಗತ್ಯವೂ ಆಗಲಿದೆ. ಸಮಾಜ ಸುಧಾರಣೆಯೇ ಕಾನೂನಿನ ಅಂತಿಮ ಉದ್ದೇಶವಾಗಿದೆ ಎಂದರು.
ಜಿಲ್ಲೆಯಲ್ಲಿ ಅತ್ಯಂತ ಹೆಚ್ಚಿನ ಪೋಕ್ಸೋ ಪ್ರಕರಣಗಳು ದಾಖಲಾಗುತ್ತಿರುವುದು, ಮಹಿಳೆಯರು ಶೋಷಣೆಗೆ ಒಳಗಾಗುತ್ತಿರುವುದು ಅತ್ಯಂತ ನೋವಿನ ಸಂಗತಿ. ಜವಾಬ್ದಾರಿಯುತ ಅಧಿಕಾರಿಗಳು ಇರುವ ಕಾನೂನುಗಳ ವ್ಯವಸ್ಥಿತ ಅನುಷ್ಠಾನದಿಂದ ಪ್ರಕರಣಗಳ ದಾಖಲಾತಿಯಲ್ಲಿ ನಿಯಂತ್ರಣ ಸಾಧ್ಯವಾಗಲಿದೆ. ಬಾಲ್ಯ ವಿವಾಹ ಇಂದಿಗೂ ಚಾಲ್ತಿಯಲ್ಲಿರುವುದು ಸಾಮಾಜಿಕ ದುರಂತ ಎಂದು ಬೇಸರ ವ್ಯಕ್ತಪಡಿಸಿದರು.ಜಿಪಂ ಸಿಇಒ ಎನ್.ಹೇಮಂತ್ ಮಾತನಾಡಿ, ಕಾಯ್ದೆಯ ಬಗ್ಗೆ ಅರಿವು ಹೊಂದಿರುವ ಶಿಕ್ಷಕರು ಕಾನೂನುಗಳ ಕುರಿತು ಸಾರ್ವಜನಿಕರಿಗೆ ನೀಡುವ ಮಾಹಿತಿ ಎಚ್ಚರಿಕೆಯ ಘಂಟೆಯಾಗಬೇಕು. ಆ ನಿಟ್ಟನಲ್ಲಿ ಶಿಕ್ಷಕರು ವಿದ್ಯಾರ್ಥಿಗಳಿಗಷ್ಟೇ ಅಲ್ಲದೇ ಸಮುದಾಯಕ್ಕೆ ಉತ್ತಮ ಮಾರ್ಗದರ್ಶಕರಾಗಬೇಕು ಎಂದರು.
ಮಕ್ಕಳಿಗೆ ಹೇಳುವ ಶಿಸ್ತು ಶಿಕ್ಷಕ ಮತ್ತು ಮಕ್ಕಳ ನಡುವಿನ ಸಂಬಂಧಕ್ಕೆ ಗೋಡೆಯಂತಾಗಬಾರದು. ಇಬ್ಬರ ನಡುವಿನ ಸಂವಹನ ಸರಳವಾಗಿರಬೇಕು. ಅಂಕಿ-ಅಂಶಗಳು ವಿದ್ಯಾರ್ಥಿಗಳ ಅಳತೆಯ ಮಾನದಂಡವಾಗಬಾರದು. ಅಧಿಕಾರಿಗಳ ಉತ್ತಮ ಬಾಂಧವ್ಯ ಆರೋಗ್ಯಕರ ಸಮಾಜಕ್ಕೆ ಸಹಕಾರಿಯಾಗಲಿದೆ ಎಂದು ಹೇಳಿದರು.ಕಾರ್ಯಾಗಾರದಲ್ಲಿ ಪೋಕ್ಸೋ ಕಾಯ್ದೆ, ಬಾಲ್ಯವಿವಾಹ ನಿಷೇಧ ಕಾಯ್ದೆ ಮತ್ತು ಪರಿಶಿಷ್ಟ ಜಾತಿ, ಪಂಗಡಗಳ ಕಾಯ್ದೆಯ ಕುರಿತು ಆಹ್ವಾನಿತ ವಿಷಯ ತಜ್ಞರಿಂದ ಉಪನ್ಯಾಸ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಇದೇ ಸಂದರ್ಭದಲ್ಲಿ ಪೋಕ್ಸೊ ಮತ್ತು ಬಾಲ್ಯವಿವಾಹ ನಿಷೇಧ ಕಾನೂನುಗಳ ಕುರಿತು ಮಾಹಿತಿ ಪತ್ರಗಳನ್ನು ಆಹ್ವಾನಿತ ಗಣ್ಯರು ಬಿಡುಗಡೆಗೊಳಿಸಿದರು.
ಕಾರ್ಯಾಗಾರದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ನ್ಯಾ.ಎಂ.ಎಸ್.ಸಂತೋಷ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಈ ಸಂದರ್ಭದಲ್ಲಿ ಜಿಲ್ಲಾ ವಕೀಲರ ಸಂಘದ ಜಿಲ್ಲಾಧ್ಯಕ್ಷ ಜಿ.ಆರ್.ರಾಘವೇಂದ್ರಸ್ವಾಮಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕ ಬಿ.ಎಚ್. ಕೃಷ್ಣಪ್ಪ, ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಮಲ್ಲೇಶಪ್ಪ, ಪದವಿಪೂರ್ವ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಚಂದ್ರಪ್ಪ ಎಸ್.ಗುಂಡಪಲ್ಲಿ, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಸಿ.ಆರ್.ಪರಮೇಶ್ವರಪ್ಪ, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಆರ್.ಮಂಜುನಾಥ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.ವಿದ್ಯಾರ್ಥಿಗಳಲ್ಲಿ ಕಾಯ್ದೆಗಳ ಅರಿವು ಅಗತ್ಯಹದಿಹರೆಯದಲ್ಲಿನ ಆಕರ್ಷಣೆ ಪೊಕ್ಸೋ ಪ್ರಕರಣಗಳಿಗೆ ಕಾರಣವೆಂದು ಭಾವಿಸುವುದಾದರೂ, ಇನ್ನೂ ಕೆಲವು ಸಂದರ್ಭಗಳಲ್ಲಿ ನಮ್ಮ ಸುತ್ತಮುತ್ತಲ ಪರಿಸರ, ಕೌಟುಂಬಿಕ ವಾತಾವರಣವೂ ಸಹ ಪೊಕ್ಸೋ ಪ್ರಕರಣಕ್ಕೆ ಕಾರಣವಾಗಿರಬಹುದು. ಈ ಕಾಯ್ದೆಗಳ ತರಬೇತಿ ಪಡೆದ ಶಿಕ್ಷಕರು ತಮ್ಮ ಕಾರ್ಯಕ್ಷೇತ್ರದ ವ್ಯಾಪ್ತಿ ಗೊಳಪಡುವ ಸಾರ್ವಜನಿಕರೊಂದಿಗೆ ಈ ಕಾಯ್ದೆಗಳ ಕುರಿತು ಮಾಹಿತಿ ನೀಡಬೇಕು. ವಿಶೇಷವಾಗಿ ವಿದ್ಯಾರ್ಥಿ ವಲಯದಲ್ಲಿ ಈ ಕಾಯ್ದೆಗಳ ಅರಿವು ಮೂಡಿಸುವ ಅಗತ್ಯವಿದೆ ಎಂದು ಮಂಜುನಾಥ ನಾಯಕ್ ತಿಳಿಸಿದರು.