ಗದಗ: ಜಿಲ್ಲೆಯ ದೊಡ್ಡ ಜಾತ್ರೆ ಎನ್ನುವ ಹೆಗ್ಗಳಿಕೆ ಹೊಂದಿರುವ ಮತ್ತು ಜಾತ್ರೆಯ ಪ್ರಮುಖ ಆಕರ್ಷಣೆಯಾಗಿದ್ದ ಡ್ಯಾನ್ಸಿಂಗ್ ಫ್ಲೋರ್ ಮನರಂಜನಾ ಯಂತ್ರವು ಚಾಲನೆಯಲ್ಲಿ ಇದ್ದಾಗಲೇ ತಾಂತ್ರಿಕ ದೋಷದಿಂದ ಮುರಿದು ಬಿದ್ದು 21 ಜನರು ಗಾಯಗೊಂಡ ಘಟನೆ ಭಾನುವಾರ ರಾತ್ರಿ ಜರುಗಿದ್ದು, ಘಟನೆ ಸಂಬಂಧಿಸಿದಂತೆ ಜಾತ್ರಾ ಕಮಿಟಿ ಅಧ್ಯಕ್ಷರು ಸೇರಿದಂತೆ 7 ಜನರ ಮೇಲೆ ಸೋಮವಾರ ಶಹರ ಠಾಣೆಯಲ್ಲಿ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗಿದೆ.ಭಾನುವಾರ ರಾತ್ರಿ ಈ ಘಟನೆ ನಡೆದಿದ್ದು, ಯಂತ್ರವು ವೇಗವಾಗಿ ತಿರುಗುತ್ತಿದ್ದಾಗ ಅದರ ಕಬ್ಬಿಣದ ಸಲಾಕೆಗಳು ಹಾಗೂ ಪಾರ್ಶ್ವದ ಭಾಗಗಳು ಇದ್ದಕ್ಕಿದ್ದಂತೆ ಮುರಿದಿವೆ. ಪರಿಣಾಮವಾಗಿ ಯಂತ್ರದಲ್ಲಿದ್ದವರು ಒಬ್ಬರ ಮೇಲೊಬ್ಬರು ಬಿದ್ದಿದ್ದು, ತೀವ್ರ ಸ್ವರೂಪದ ಪೆಟ್ಟು ಬಿದ್ದು ಗಾಯಗೊಂಡಿದ್ದಾರೆ. ಗಾಯಾಳುಗಳಲ್ಲಿ 6 ವರ್ಷದ ಮಗು ಸೇರಿ ಮಹಿಳೆಯರು ಮತ್ತು ವಯಸ್ಕರು ಇದ್ದಾರೆ. ದೂರು ದಾಖಲು: ಘಟನೆಗೆ ಸಂಬಂಧಿಸಿದಂತೆ ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಜಾತ್ರಾ ಸಮಿತಿ ಅಧ್ಯಕ್ಷರು, ಮ್ಯಾನೇಜರ್ ಹಾಗೂ ಡ್ಯಾನ್ಸಿಂಗ್ ಫ್ಲೋರ್ ಮಾಲೀಕರು ಸೇರಿದಂತೆ ಏಳು ಜನ ಹಾಗೂ ಇತರರ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಲಾಗಿದೆ.
ಪರಶುರಾಮ ಸಮಗಾರ, ವಿಶ್ವನಾಥ ದೊಡ್ಡಮನಿ, ನೂರಅಹ್ಮದ ಧಾರವಾಡ, ನಾರಾಯಣ ದೊಡ್ಡಮನಿ, ಮಲ್ಲು ಬಾದನ, ವಿನಾಯಕ ಮಾನ್ವಿ (ಜಾತ್ರಾ ಕಮಿಟಿ ಅಧ್ಯಕ್ಷ), ಎಂ.ಎಸ್. ಅಂಗಡಿ (ತೋಂಟದಾರ್ಯ ಮಠದ ಮ್ಯಾನೇಜರ್) ಹಾಗೂ ಇತರರ ವಿರುದ್ಧ ಪ್ರಕರಣ ದಾಖಲಾಗಿದೆ.ಗಾಯಗೊಂಡವರನ್ನು ತಕ್ಷಣವೇ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದ್ದು ಚಿಕಿತ್ಸೆ ಮುಂದುವರಿದಿದೆ. ಘಟನೆಯಲ್ಲಿ ಜಹೀರ ಅಹ್ಮದ್ ಖಾಜಿ (42), ಕಲಂದರ ಖಾಜಿ (15), ಶಿಫಾ ಖಾಜಿ (16), ಸಮೀನಾ ಗಂಗಾವತಿ (18), ಸನಾ ಖಾಜಿ (15), ಸಗುಪ್ತಾ ಖಾಜಿ (14), ಜ್ಯೋತಿ ಗಬ್ಬೂರ (18), ನಾಜಿಯಾ ತೋಟಿಗಾರ (20), ಕಿರಣ ಹುಲ್ಲೂರ (25), ದೀಪಕ ಹುಬ್ಬಳ್ಳಿ (29), ರಾಜೇಸಾಬ ಅಣ್ಣಿಗೇರಿ (23), ಸುಮನ್ ನವಲಗುಂದ (28), ವಿಶಾಲ ನವಲಗುಂದ (6), ಸಲ್ಮಾ ಹಂದೂರ (17), ಖುಷಿ ದಲಬಂಜನ (14), ಕಿರಣ ಕಬಾಡಿ (21), ಮಾಹೀನ್ ಕಂದಗಲ್ (10), ರುಬಿನಾ ಕಂದಗಲ್ (36), ಮುಸ್ತಾಕ ಹಳೆಮನಿ (25), ಪ್ರದೀಪಕುಮಾರ ಕಮ್ಮಾರ (25), ಸತೀಶ ಗಬ್ಬೂರ (22) ಗಾಯಗೊಂಡಿದ್ದು, ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.ಅಂಗಡಿಗಳ ತೆರವು
ಘಟನಾ ಸ್ಥಳದಲ್ಲಿದ್ದ ಅಂಗಡಿಗಳನ್ನು ಸೋಮವಾರ ಪೊಲೀಸ್ ಇಲಾಖೆ ಅಧಿಕಾರಿಗಳು ಹಾಗೂ ಇನ್ನುಳಿದ ಸಿಬ್ಬಂದಿ ತೆರವು ಕಾರ್ಯಾಚರಣೆ ನಡೆಸಿದರು. ಈ ಸಂದರ್ಭದಲ್ಲಿ ಭಾನುವಾರ ರಾತ್ರಿ ಘಟನೆ ನೆನೆದು ಜನರು ಬೇಸರ ವ್ಯಕ್ತಪಡಿಸಿದರು.