ವೃತ್ತಿಪರ, ವೈಯಕ್ತಿಕ ದ್ವೇಷದಿಂದ ಕ್ರಿಮಿನಲ್ ಮೊಕದ್ದಮೆ ದಾಖಲಿಸುವುದು ಕಾನೂನು ಪ್ರಕ್ರಿಯೆಯ ಸ್ಪಷ್ಟ ದುರುಪಯೋಗ ಎಂದು ಅಭಿಪ್ರಾಯ ವ್ಯಕ್ತಪಡಿಸಿರುವ ಹೈಕೋರ್ಟ್, ವಂಚನೆ ಹಾಗೂ ಸಹಿ ನಕಲು ಮಾಡಿ ಲೈಸನ್ಸ್ ನವೀಕರಣ ಮಾಡಿಕೊಂಡ ಆರೋಪ ಸಂಬಂಧ ದೇಶದ ಖ್ಯಾತ ಮಹಿಳಾ ಪೈಲಟ್ ಆಡ್ರಿ ದೀಪಿಕಾ ಮಾಬೆನ್ ವಿರುದ್ಧ ದಾಖಲಾಗಿರುವ ಪ್ರಕರಣವನ್ನು ರದ್ದುಪಡಿಸಿದೆ.
ಕನ್ನಡಪ್ರಭ ವಾರ್ತೆ ಬೆಂಗಳೂರು
ವೃತ್ತಿಪರ, ವೈಯಕ್ತಿಕ ದ್ವೇಷದಿಂದ ಕ್ರಿಮಿನಲ್ ಮೊಕದ್ದಮೆ ದಾಖಲಿಸುವುದು ಕಾನೂನು ಪ್ರಕ್ರಿಯೆಯ ಸ್ಪಷ್ಟ ದುರುಪಯೋಗ ಎಂದು ಅಭಿಪ್ರಾಯ ವ್ಯಕ್ತಪಡಿಸಿರುವ ಹೈಕೋರ್ಟ್, ವಂಚನೆ ಹಾಗೂ ಸಹಿ ನಕಲು ಮಾಡಿ ಲೈಸನ್ಸ್ ನವೀಕರಣ ಮಾಡಿಕೊಂಡ ಆರೋಪ ಸಂಬಂಧ ದೇಶದ ಖ್ಯಾತ ಮಹಿಳಾ ಪೈಲಟ್ ಆಡ್ರಿ ದೀಪಿಕಾ ಮಾಬೆನ್ ವಿರುದ್ಧ ದಾಖಲಾಗಿರುವ ಪ್ರಕರಣವನ್ನು ರದ್ದುಪಡಿಸಿದೆ.ಆಡ್ರಿ ದೀಪಿಕಾ ಮಾಬೆನ್ ಅವರು ತಮ್ಮ ವಿರುದ್ಧದ ಪ್ರಕರಣ ರದ್ದುಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರ ಪೀಠ ಈ ಆದೇಶ ನೀಡಿದೆ. ಇದೇ ವೇಳೆ ಲೈಸನ್ಸ್ ನವೀಕರಣ ಕುರಿತು ಅರ್ಜಿದಾರರ ವಿರುದ್ಧದ ತಾಂತ್ರಿಕ ಅಂಶಗಳ ಕುರಿತು ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ (ಡಿಜಿಸಿಎ) ನಡೆಸುತ್ತಿರುವ ವಿಚಾರಣೆಗೆ ಈ ಆದೇಶ ಅಡ್ಡಿಯಾಗುವುದಿಲ್ಲ. ಡಿಜಿಸಿಎ ವಿಚಾರಣೆ ನಡೆಸಿ ತೀರ್ಮಾನ ಕೈಗೊಳ್ಳಲು ಸ್ವತಂತ್ರವಾಗಿದೆ ಎಂದು ಪೀಠ ತಿಳಿಸಿದೆ.
ಅರ್ಜಿದಾರರ ಪೈಲಟ್ ಲೈಸೆನ್ಸ್ ನವೀಕರಣವು 2014ರಲ್ಲಿ ನಡೆದಿದೆ. ಆದರೂ 2018ರಲ್ಲಿ ದೂರುದಾರೆ ವಿನೀತಾ ಅವರು ವೈಯಕ್ತಿಕ ಹಾಗೂ ವೃತ್ತಿಪರವಾಗಿ ಸೇಡು ತೀರಿಸಿಕೊಳ್ಳುವ ಉದ್ದೇಶದಿಂದ ಅರ್ಜಿದಾರರ ವಿರುದ್ಧ ದಾಖಲಿಸಿದ್ದಾರೆ. ಇಬ್ಬರೂ ಒಂದೇ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದಾರೆ. ಕ್ರಿಮಿನಲ್ ನ್ಯಾಯಾಂಗ ವ್ಯವಸ್ಥೆಯನ್ನು ವೈಯಕ್ತಿಕ ಸೇಡು ತೀರಿಸಿಕೊಳ್ಳುವ ವೇದಿಕೆಯನ್ನಾಗಿ ಬಳಸಲು ಅವಕಾಶವಿಲ್ಲ ಎಂದು ಪೀಠ ಆದೇಶದಲ್ಲಿ ತಿಳಿಸಿದೆ.ಪ್ರಕರಣದ ವಿವರ:
ಆಡ್ರಿ ದೀಪಿಕಾ ಮಾಬೆನ್ ಅವರು ನಾಗರಿಕ ವಿಮಾನಯಾನ ಮಹಾನಿರ್ದೇಶಕರಿಂದ ಅನುಮೋದನೆ ಪಡೆದ ಮೈಕ್ರೋಲೈಟ್ ವಿಮಾನಗಳ ಪರೀಕ್ಷಕಿಯಾಗಿದ್ದಾರೆ. ಅವರ ಪೈಲೆಟ್ ಲೈಸೆನ್ಸ್ ನವೀಕರಿಸಲು 2014ರ ಸೆಪ್ಚೆಂಬರ್ 11ರಿಂದ ಎರಡು ದಿನಗಳ ಕಾಲ ನವೀಕರಣ ಕೌಶಲ್ಯ ಪರೀಕ್ಷೆಗೆ ಒಳಗಾಗಿದ್ದರು. ಈ ಪರೀಕ್ಷೆಯಲ್ಲಿ ಪ್ರಕರಣದ ದೂರುದಾರರಾಗಿರುವ ಎಂ.ಸಿ.ವಿನಿತಾ ಅವರು ಪರೀಕ್ಷಕಿಯಾಗಿ ಕಾರ್ಯನಿರ್ವಹಿಸಿದ್ದರು.ಆದರೆ, ಈ ಇಬ್ಬರ ನಡುವೆ ವೈಯಕ್ತಿಕ ಭಿನ್ನಾಭಿಪ್ರಾಯವಿತ್ತು. 2017ರಲ್ಲಿ ವಿನೀತಾ ಅವರು ಡಿಜಿಸಿಎಗೆ ದೂರು ನೀಡಿ, ಆಡ್ರಿ ಮಾಬೆನ್ ಅವರು ನನ್ನ ಸಹಿ ಮತ್ತು ಸೀಲು ನಕಲು ಮಾಡಿ ಲೈಸೆನ್ಸ್ ನವೀಕರಿಸಿಕೊಂಡಿದ್ದಾರೆ ಎಂದು ಆರೋಪಿಸಿ 2018ರಲ್ಲಿ ಬೆಂಗಳೂರಿನ ವಿಜಯನಗರ ಪೊಲೀಸ್ ಠಾಣೆಯಲ್ಲಿ ಕ್ರಿಮಿನಲ್ ಪ್ರಕರಣ ದಾಖಲಿಸಿದ್ದರು. ಪೊಲೀಸರು ಅರ್ಜಿದಾರರ ವಿರುದ್ಧ ಆರೋಪ ಪಟ್ಟಿ ಸಲ್ಲಿಸಿದ್ದರು. ಇದರಿಂದ ಪ್ರಕರಣ ರದ್ದು ಕೋರಿ ಆಡ್ರಿ ದೀಪಿಕಾ ಮಾಬೆನ್ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು.
