ಜನಸ್ನೇಹಿ ಪೊಲೀಸ್ ಆಗುವ ಜೊತೆಗೆ ಸಮವಸ್ತ್ರ ಧರಿಸಿದ ಕ್ರಿಮಿನಲ್‌ಗಳಿಗೂ ಕಠಿಣ ಶಿಕ್ಷೆ ಆಗಬೇಕಾಗಿದೆ ಎಂದು ಪೂರ್ವ ವಲಯದ ಪೊಲೀಸ್ ಮಹಾನಿರೀಕ್ಷಕ ಡಾ. ಬಿ.ಆರ್. ರವಿಕಾಂತೇಗೌಡ ಹೇಳಿದ್ದಾರೆ.

- ಐಜಿಪಿ ಡಾ. ಬಿ.ಆರ್.ರವಿಕಾಂತೇಗೌಡ ತಾಕೀತು । ಪೊಲೀಸ್ ಮಹಾ ನಿರೀಕ್ಷಕರ ಸೇವಾ ಕವಾಯತು ಕಾರ್ಯಕ್ರಮ - - -

ಕನ್ನಡಪ್ರಭ ವಾರ್ತೆ ದಾವಣಗೆರೆ

ಜನಸ್ನೇಹಿ ಪೊಲೀಸ್ ಆಗುವ ಜೊತೆಗೆ ಸಮವಸ್ತ್ರ ಧರಿಸಿದ ಕ್ರಿಮಿನಲ್‌ಗಳಿಗೂ ಕಠಿಣ ಶಿಕ್ಷೆ ಆಗಬೇಕಾಗಿದೆ ಎಂದು ಪೂರ್ವ ವಲಯದ ಪೊಲೀಸ್ ಮಹಾನಿರೀಕ್ಷಕ ಡಾ. ಬಿ.ಆರ್. ರವಿಕಾಂತೇಗೌಡ ಹೇಳಿದರು.

ನಗರದ ಜಿಲ್ಲಾ ಪೊಲೀಸ್ ಕವಾಯಿತು ಮೈದಾನದಲ್ಲಿ ಶುಕ್ರವಾರ ಜಿಲ್ಲಾ ಪೊಲೀಸ್ ಆಯೋಜಿಸಿದ್ದ ಪೊಲೀಸ್ ಮಹಾ ನಿರೀಕ್ಷಕರ ಸೇವಾ ಕವಾಯತು ಕಾರ್ಯಕ್ರಮದಲ್ಲಿ ಪರೇಡ್ ವೀಕ್ಷಿಸಿ ಅವರು ಮಾತನಾಡಿದರು. ಸಮವಸ್ತ್ರದಲ್ಲಿದ್ದು ಕ್ರಿಮಿನಲ್ ಮೊಕದ್ದಮೆ, ಪ್ರಕರಣ, ಕೃತ್ಯಗಳಲ್ಲಿ ಭಾಗಿಯಾದ ಅಧಿಕಾರಿ, ಸಿಬ್ಬಂದಿ ವಿರುದ್ಧ ಅತ್ಯಂತ ಕಠಿಣ ಶಿಕ್ಷೆ ಆಗಬೇಕಿದೆ ಎಂದರು.

ರಾಜ್ಯದ ಇತರೆ ಜಿಲ್ಲೆಗಳಿಗೆ ಹೋಲಿಸಿದರೆ ದಾವಣಗೆರೆ ಜಿಲ್ಲಾ ಪೊಲೀಸ್‌ ಉತ್ತಮವಾಗಿ ಕೆಲಸ ಮಾಡುತ್ತಿದ್ದಾರೆ. ಆದರೆ, ನಾವೂ ಜನಸ್ನೇಹಿ ಸಮುದಾಯದತ್ತ ಪೊಲೀಸರಾಗುವ ಜೊತೆಗೆ ನಮ್ಮ ಇಲಾಖೆಯಲ್ಲೇ ಇರುವಂತಹ, ಕ್ರಿಮಿನಲ್ ಮೊಕದ್ದಮೆ, ಕೃತ್ಯ, ಪ್ರಕರಣಗಳಲ್ಲಿ ಭಾಗಿಯಾದ, ಸಹಕರಿಸುವ ಸಮವಸ್ತ್ರಧಾರಿ ಕ್ರಿಮಿನಲ್ ಅಧಿಕಾರಿ, ಸಿಬ್ಬಂದಿ ವಿರುದ್ಧವೂ ಕಠಿಣ ಶಿಕ್ಷೆಗೆ ಗುರಿಪಡಿಸಬೇಕಾಗಿದೆ ಎಂದು ಅವರು ತಿಳಿಸಿದರು.

ವ್ಯವಸ್ಥೆಯಲ್ಲಿ ನಿರ್ಲಕ್ಷ್ಯಕ್ಕೊಳಗಾದ, ಬಲಿಪಶುಗಳಾದವರಿಗೆ, ಅಸಹಾಯಕರಿಗೆ ಸಹಾಯ ನೀಡುವಂತಹ, ಸಂತ್ರಸ್ಥರಿಗೆ ಪರಿಹಾರ ಕೇಂದ್ರಗಳಾಗಿ ಪೊಲೀಸ್ ಠಾಣೆಗಳು ಬದಲಾಗಬೇಕಿದೆ. ಇನ್ನೂ ಹೆಚ್ಚು ಹೆಚ್ಚು ಜನಸ್ನೇಹಿ ಪೊಲೀಸ್ ಇಲಾಖೆ ನಮ್ಮದಾಗಬೇಕಾಗಿದೆ. ಸಂತ್ರಸ್ಥರಿಗೆ ನೆರವು ನೀಡುವ ಕೆಲಸವಾಗಬೇಕು. ಸಮುದಾಯದತ್ತ ಪೊಲೀಸ್ ಇಲಾಖೆ ಆಗಿಸುವತ್ತ ನಮ್ಮೆಲ್ಲಾ ಅಧಿಕಾರಿ, ಸಿಬ್ಬಂದಿ ಕಾರ್ಯೋನ್ಮುಖರಾಗಬೇಕು ಎಂದು ತಾಕೀತು ಮಾಡಿದರು.

ಜನಸ್ನೇಹಿ ವ್ಯವಸ್ಥೆ ಜೊತೆಗೆ ನಾವೆಲ್ಲಾ ಅಧಿಕಾರಿ, ಸಿಬ್ಬಂದಿ ಸಹ ಜನಸ್ನೇಹಿ ವ್ಯಕ್ತಿ ಮೈಗೂಡಿಸಿಕೊಳ್ಳಬೇಕು. ಆಗ ಮಾತ್ರ ನಮ್ಮ ಮೇಲೆ, ಇಲಾಖೆ ಮೇಲೆ ಜನರ ವಿಶ್ವಾಸವೂ ಹೆಚ್ಚುತ್ತದೆ. ಜನಸ್ನೇಹಿ ಸಮುದಾಯದತ್ತ ಪೊಲೀಸ್ ಆಗುವತ್ತ ನಾವು ಸಾಗಬೇಕಿದೆ. ಆಗ ಜನರೂ ಸ್ಪಪ್ರೇರಣೆಯಿಂದ ಸ್ಪಂದಿಸುತ್ತಾರೆ. ಈಚೆಗೆ ನಾವು ಜಾರಿಗೊಳಿಸಿದ ಮನೆ ಮನೆಗೆ ಪೊಲೀಸ್ ಕಾರ್ಯಕ್ರಮವೇ ಇಂತಹ ಸ್ಪಂದನೆಗೆ ಸಾಕ್ಷಿಯಾಗಿದೆ ಎಂದು ತಿಳಿಸಿದರು.

ಪೊಲೀಸ್ ಇಲಾಖೆಯಿಂದ ಹಲವಾರು ಉತ್ತಮ ಕಾರ್ಯಕ್ರಮ ಮಾಡಲಾಗುತ್ತಿದೆ. ಅವುಗಳನ್ನು ಜನರತ್ತ ಕೊಂಡೊಯ್ಯಲು ಮುಂದಾಗಬೇಕು. ಮನೆ ಮನೆಗೆ ಪೊಲೀಸ್ ಬೀಟ್‌ನ್ನು ಇನ್ನೂ ಹೆಚ್ಚು ಪರಿಣಾಮಕಾರಿ ಆಗಿಸಬೇಕಾಗಿದೆ. ವೃದ್ಧರು, ಒಂಟಿ ಮಹಿಳೆಯರು ಸೇರಿದಂತೆ ನೊಂದವರಿಗೆ ಸ್ಪಂದನೆ ಮಾಡಿದರೆ ಉತ್ತಮ ಪರಿಣಾಮ ಸಿಗಲಿದೆ. ಸರ್ಕಾರದ ಪ್ರತಿನಿಧಿಗಳಾಗಿ ನಮಗೆ ಪೊಲೀಸ್ ಅಧಿಕಾರಿ, ಸಿಬ್ಬಂದಿ ಸ್ಪಂದನೆ ಮಾಡುತ್ತಾರೆಂಬ ವಿಶ್ವಾಸವೂ ಜನರಿಗೆ ನಮ್ಮ ಮೇಲೆ ಬರುತ್ತದೆ ಎಂದು ಐಜಿಪಿ ಡಾ.ರವಿಕಾಂತೇಗೌಡ ತಿಳಿಸಿದರು.

ಜಿಲ್ಲಾ ಪೊಲೀಸ್ ಅಧೀಕ್ಷಕಿ ಉಮಾ ಪ್ರಶಾಂತ, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಪರಮೇಶ್ವರ ಹೆಗಡೆ ವೇದಿಕೆಯಲ್ಲಿದ್ದರು. ಜಿಲ್ಲಾ ಪೊಲೀಸ್, ಜಿಲ್ಲಾ ಸಶಸ್ತ್ರ ಪೊಲೀಸ್ ಪಡೆ ಅಧಿಕಾರಿ, ಸಿಬ್ಬಂದಿಯಿಂದ ಪರೇಡ್ ನಡೆಯಿತು. ಇದಕ್ಕೂ ಮುನ್ನ ಪೂರ್ವ ವಲಯದ ಐಜಿಪಿ ಡಾ. ಬಿ.ಆರ್. ರವಿಕಾಂತೇಗೌಡ ಸೇವಾ ಕವಾಯತು ಗೌರವ ವಂದನೆ ಸ್ವೀಕರಿಸಿ, ಕವಾಯತು ಪರಿವೀಕ್ಷಣೆ ನಡೆಸಿದರು.

- - -

-19ಕೆಡಿವಿಜಿ4, 5ಜೆಪಿಜಿ: ದಾವಣಗೆರೆ ಪೂರ್ವ ವಲಯದ ಪೊಲೀಸ್ ಮಹಾನಿರೀಕ್ಷಕ ಡಾ. ಬಿ.ಆರ್. ರವಿಕಾಂತೇಗೌಡ ಸೇವಾ ಕವಾಯತು ಗೌರವ ವಂದನೆ ಸ್ವೀಕರಿಸಿದರು. ಎಸ್‌ಪಿ ಉಮಾ ಪ್ರಶಾಂತ, ಎಎಸ್‌ಪಿ ಪರಮೇಶ್ವರ ಹೆಗಡೆ ಇದ್ದರು. -19ಕೆಡಿವಿಜಿ7, 8.ಜೆಪಿಜಿ : ದಾವಣಗೆರೆ ಪೂರ್ವ ವಲಯದ ಪೊಲೀಸ್ ಮಹಾ ನಿರೀಕ್ಷಕ ಡಾ. ಬಿ.ಆರ್. ರವಿಕಾಂತೇಗೌಡ ಸೇವಾ ಕವಾಯತು ಕಾರ್ಯಕ್ರಮದಲ್ಲಿ ಪರೇಡ್ ವೀಕ್ಷಿಸಿದರು.