ಗಂಗಾವತಿಯಲ್ಲಿನ ಬಿಕ್ಕಟ್ಟು ಕಾಂಗ್ರೆಸ್ಸಿಗೆ ಲಾಭ: ಶಿವರಾಜ ತಂಗಡಗಿ

| Published : Apr 09 2024, 12:48 AM IST

ಗಂಗಾವತಿಯಲ್ಲಿನ ಬಿಕ್ಕಟ್ಟು ಕಾಂಗ್ರೆಸ್ಸಿಗೆ ಲಾಭ: ಶಿವರಾಜ ತಂಗಡಗಿ
Share this Article
  • FB
  • TW
  • Linkdin
  • Email

ಸಾರಾಂಶ

ಗಂಗಾವತಿ ಕಾಂಗ್ರೆಸ್ಸಿನಲ್ಲಿನ ಬಿಕ್ಕಟ್ಟು ಇಂದು, ನಿನ್ನೆಯದಲ್ಲ. ಈಗ ಬಿಕ್ಕಟ್ಟಿನ ಪರಿಣಾಮವಾಗಿಯೂ ಇಬ್ಬರು ಸಹ ಕಾಂಗ್ರೆಸ್ ಅಭ್ಯರ್ಥಿಯ ಗೆಲುವಿಗಾಗಿಯೇ ಶ್ರಮಿಸುವುದರಿಂದ ಕಾಂಗ್ರೆಸ್ ಪಕ್ಷಕ್ಕೆ ಲಾಭವಾಗುತ್ತದೆ.

- ಬಿಕ್ಕಟ್ಟು ಬಹಳ ದೊಡ್ಡಮಟ್ಟದಲ್ಲಿದೆ । ಶ್ರೀನಾಥ್ ಅವರಿಗೆ ಒಳ್ಳೆಯದಾಗಲಿ ಕನ್ನಡಪ್ರಭ ವಾರ್ತೆ ಕೊಪ್ಪಳ

ಗಂಗಾವತಿ ಕಾಂಗ್ರೆಸ್ಸಿನಲ್ಲಿನ ಬಿಕ್ಕಟ್ಟು ಇಂದು, ನಿನ್ನೆಯದಲ್ಲ. ಈಗ ಬಿಕ್ಕಟ್ಟಿನ ಪರಿಣಾಮವಾಗಿಯೂ ಇಬ್ಬರು ಸಹ ಕಾಂಗ್ರೆಸ್ ಅಭ್ಯರ್ಥಿಯ ಗೆಲುವಿಗಾಗಿಯೇ ಶ್ರಮಿಸುವುದರಿಂದ ಕಾಂಗ್ರೆಸ್ ಪಕ್ಷಕ್ಕೆ ಲಾಭವಾಗುತ್ತದೆ ಎಂದು ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಹೇಳಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ಹಾಗೂ ಮಾಜಿ ವಿಧಾನಪರಿಷತ್ ಸದಸ್ಯ ಎಚ್.ಆರ್. ಶ್ರೀನಾಥ ನಡುವೆ ಸಮಸ್ಯೆ ಇರುವುದು ನಿಜ. ಆದರೆ, ಅವರ್‍ಯಾರು ಸಹ ಕಾಂಗ್ರೆಸ್ ವಿರುದ್ಧವಾಗಿ ಮಾತನಾಡಿಲ್ಲ, ಕಾಂಗ್ರೆಸ್ ಅಭ್ಯರ್ಥಿಯ ಗೆಲುವಿಗಾಗಿಯೇ ಶ್ರಮಿಸುವುದಾಗಿ ಹೇಳಿದ್ದಾರೆ. ಹೀಗಾಗಿ, ಗಂಗಾವತಿಯ ಸಮಸ್ಯೆ ಪಕ್ಷದ ಅಭ್ಯರ್ಥಿಯ ಗೆಲುವಿಗೆ ಸಮಸ್ಯೆಯಾಗುವುದಿಲ್ಲ ಎಂದರು.

ನಾನು ಇಕ್ಬಾಲ್ ಅನ್ಸಾರಿ ಮತ್ತು ಎಚ್.ಆರ್. ಶ್ರೀನಾಥ ಜೊತೆ ಮಾತನಾಡಿದ್ದೇನೆ. ಎರಡು ಪ್ರತ್ಯೇಕ ಸಭೆ ಮಾಡಿದ್ದರೂ ಅವರೆಡು ಅಧಿಕೃತ ಸಭೆಗಳೇ ಆಗಿವೆ ಎಂದರು.

ಇವರಿಬ್ಬರ ನಡುವೆ ಇರುವ ಸಮಸ್ಯೆ ಇಂದು ನಿನ್ನೆಯದಲ್ಲ ಎನ್ನುವುದು ಎಲ್ಲರಿಗೂ ಗೊತ್ತಿದೆ. ಹೀಗಾಗಿ, ಇದನ್ನು ಈಗ ಚುನಾವಣೆಯ ಸಂದರ್ಭದಲ್ಲಿ ಇತ್ಯರ್ಥ ಮಾಡುವುದು ಅಸಾಧ್ಯವಾಗಿರುವುದರಿಂದ ಚುನಾವಣೆಯ ನಂತರ ಇತ್ಯರ್ಥ ಮಾಡಲು ಪ್ರಯತ್ನ ಮಾಡಲಾಗುವುದು. ಇಬ್ಬರನ್ನು ಒಂದೇ ವೇದಿಕೆಯಲ್ಲಿಯೂ ತರುವ ಪ್ರಯತ್ನ ಮಾಡಲಾಗುವುದು ಎಂದರು.

ನನಗೆ ಇಬ್ಬರೂ ಮುಖ್ಯ ಮತ್ತು ಇದಕ್ಕಿಂತ ಹೆಚ್ಚಾಗಿ ಪಕ್ಷ ಮುಖ್ಯ. ಪಕ್ಷದ ಹಿತದೃಷ್ಟಿಯಿಂದ ನಾನಾ ಕಾರ್ಯ ನಿರ್ವಹಿಸುತ್ತೇನೆ. ಸಿಎಂ ಸಿದ್ದರಾಮಯ್ಯ ಅವರು ಸಹ ಈ ಸಮಸ್ಯೆ ಇತ್ಯರ್ಥ ಮಾಡುವ ಪ್ರಯತ್ನ ಮಾಡಿ, ಇವರಿಬ್ಬರಿಗೂ ಸೂಚಿಸಿದ್ದಾರೆ. ಹೀಗಾಗಿ, ಹೈಕಮಾಂಡ್ ಇದೆಲ್ಲವನ್ನು ನೋಡಿಕೊಳ್ಳುತ್ತದೆ ಎಂದರು.

ಶ್ರೀನಾಥಗೆ ಒಳ್ಳೆಯದಾಗಲಿ:

ವಿಪ ಸದಸ್ಯ ಎಚ್.ಆರ್. ಶ್ರೀನಾಥ ಏನೇ ಹೇಳಿದರೂ ಅವರಿಗೆ ಒಳ್ಳೆಯದಾಗಲಿ ಎಂದೇ ಹೇಳುತ್ತೇನೆ. ನಾನು ಯಾರ ಪರವಾಗಿಯೂ ಇಲ್ಲ ಎಂದು ಸಚಿವ ಶಿವರಾಜ ತಂಗಡಗಿ ಪ್ರಶ್ನೆಯೊಂದಕ್ಕ ಉತ್ತರಿಸಿದರು.

ತಂಗಡಗಿ ಇಕ್ಬಾಲ್ ಅನ್ಸಾರಿ ಪರವಾಗಿ ಮಾತನಾಡುತ್ತಾರೆ, ಅವರು ಸಮಸ್ಯೆಯನ್ನು ಇತ್ಯರ್ಥ ಮಾಡುತ್ತಿಲ್ಲ, ಹೀಗಾಗಿ, ಅವರನ್ನು ಸಚಿವ ಸ್ಥಾನದಿಂದ ತೆಗೆದು, ಹಿರಿಯರಾದ ಬಸವರಾಜ ರಾಯರಡ್ಡಿಗೆ ಅಥವಾ ಹಿಂದುಳಿದ ವರ್ಗದವರಿಗೆ ಕೊಡಬೇಕು ಎನ್ನುವುದಾದರೇ ಶಾಸಕ ರಾಘವೇಂದ್ರ ಹಿಟ್ನಾಳಗೆ ಸ್ಥಾನ ನೀಡಬೇಕು ಎಂದು ಶ್ರೀನಾಥ ಹೇಳಿರುವುದಕ್ಕೆ ನೇರವಾಗಿ ಪ್ರತಿಕ್ರಿಯೆ ನೀಡದ ಸಚಿವ ತಂಗಡಗಿ, ಅವರಿಗೆ ಒಳ್ಳೆಯದಾಗಲಿ ಎಂದಷ್ಟೇ ಹೇಳಿದರು.

ಆತ ಸತ್ಯ ತಿಳಿದುಕೊಳ್ಳಲ್ಲ:

ಮಾಜಿ ಶಾಸಕ ಬಸವರಾಜ ದಢೇಸ್ಗೂರು ಅವರಿಗೆ ಸತ್ಯ ಗೊತ್ತಿರುವುದಿಲ್ಲ ಮತ್ತು ತಿಳಿದುಕೊಳ್ಳುವುದು ಇಲ್ಲ, ಹೀಗಾಗಿ, ಅವರು ಸತ್ಯ ಮಾತನಾಡಿದಾಗ ಮಾತ್ರ ನಾನು ಪ್ರತಿಕ್ರಿಯೆ ನೀಡುತ್ತೇನೆ ಎಂದು ಸಚಿವ ಶಿವರಾಜ ತಂಗಡಗಿ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಸಚಿವ ಶಿವರಾಜ ತಂಗಡಗಿ ಮೋದಿ ಅವರನ್ನು ಬೈಯ್ಯುವ ಮೂಲಕ ಕಾಂಗ್ರೆಸ್ ಅಭ್ಯರ್ಥಿ ರಾಜಶೇಖರ ಹಿಟ್ನಾಳ ಅವರನ್ನು ಸೋಲಿಸುವ ಷಡ್ಯಂತ್ರ ಮಾಡಿದ್ದಾರೆ ಎನ್ನುವ ದಢೇಸ್ಗೂರು ಆರೋಪಕ್ಕೆ ಉತ್ತರಿಸಿ, ಅವರು ಸತ್ಯ ಅರಿಯದೇ ಮಾತನಾಡುತ್ತಾರೆ ಎಂದರು.

ನಾನು ₹80 ಲಕ್ಷ ಸಬ್ಬಿಡಿ ಪಡೆದುಕೊಂಡಿದ್ದೇನೆ ಎಂದು ಆರೋಪಿಸುತ್ತಾರೆ. ಎಲ್ಲಿ ಎಂದು ಹೇಳಿಲ್ಲ. ಆದರೆ, ನಾನು ಇದುವರೆಗೂ ಯಾವುದೇ ಸಬ್ಸಿಡಿ ತೆಗೆದುಕೊಂಡಿಲ್ಲ. ಹೀಗಾಗಿ, ಅವರು ಸತ್ಯ ಗೊತ್ತಿಲ್ಲದೇ ಮಾತನಾಡುತ್ತಾರೆ ಎಂದರು.