ಸಾರಾಂಶ
ಕನ್ನಡಪ್ರಭ ವಾರ್ತೆ ಬೆಂಗಳೂರು
ಬೆಂಗಳೂರಿನ ಸೌಲಭ್ಯ ಬಳಸಿಕೊಂಡು ಉದ್ಯಮ ಆರಂಭಿಸಿ, ದೊಡ್ಡ ಮಟ್ಟಕ್ಕೆ ಬೆಳೆದವರೀಗ ಬೆಂಗಳೂರಿನ ಬಗ್ಗೆ ಟೀಕೆ ಮಾಡಿ ಟ್ವೀಟ್ ಮಾಡುತ್ತಿದ್ದಾರೆ ಎಂದು ಬೆಂಗಳೂರಿನ ಘನತೆಗೆ ಚ್ಯುತಿ ತರುತ್ತಿರುವವರ ವಿರುದ್ಧ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ವಾಗ್ದಾಳಿ ನಡೆಸಿದ್ದಾರೆ.ಬೆಂಗಳೂರು ನಡಿಗೆ ಕಾರ್ಯಕ್ರಮದಲ್ಲಿ ಮಾತನಾಡಿ, ಬೆಂಗಳೂರಿಗೆ ಬಂದು ಬೆಳೆದಿರುವವರು ಹಿಂದೆ ಹೇಗಿದ್ದೆವು, ಈಗ ಹೇಗಿದ್ದೇವೆ ಎಂಬುದನ್ನು ಮರೆತು ಟ್ವೀಟ್ ಮಾಡುತ್ತಿದ್ದಾರೆ. ಮೂಲವನ್ನು ಮರೆತರೆ ಯಶಸ್ಸು ಸಾಧಿಸುವುದಿಲ್ಲ. ಎಲ್ಲೆಲ್ಲಿ ರಸ್ತೆ ಗುಂಡಿಗಳಿವೆ ಎಂಬುದನ್ನು ಸಾರ್ವಜನಿಕರೇ ಫೋಟೊ ತೆಗೆದು ಮೊಬೈಲ್ ಆ್ಯಪ್ ಮೂಲಕ ಸರ್ಕಾರದ ಗಮನಕ್ಕೆ ತರುವ ವ್ಯವಸ್ಥೆಯನ್ನು ಇಡೀ ದೇಶದಲ್ಲಿಯೇ ಮೊದಲ ಬಾರಿಗೆ ನಾವು ರೂಪಿಸಿದ್ದೇವೆ. ಟೀಕೆ ಹಾಗೂ ವಿಮರ್ಶೆಗಳನ್ನು ಸ್ವಾಗತಿಸುತ್ತೇನೆ. ಆದರೆ, ಕೆಲವರು ವಿಕೋಪಕ್ಕೆ ಹೋಗಿ ಟೀಕೆ ಮಾಡುತ್ತಿದ್ದು, ತಲೆ ಕೆಡಿಸಿಕೊಳ್ಳುವುದಿಲ್ಲ ಎಂದು ಹೇಳಿದರು.
ಬೆಂಗಳೂರಿನ ಸಮಗ್ರ ಅಭಿವೃದ್ಧಿಗೆ ಟನಲ್ ರಸ್ತೆ, ಎಲಿವೆಟೆಡ್ ಕಾರಿಡಾರ್, ಡಬಲ್ ಡೆಕ್ಕರ್, ಬಫರ್ ರಸ್ತೆ, ನಗರ ಸೌಂದರ್ಯ ಹೆಚ್ಚಿಸಲು ದೀಪಾಲಂಕಾರ, ಬೀದಿ ದೀಪಗಳಿಗೆ ಎಲ್‌ಇಡಿ ಬಲ್ಬ್ ಅಳವಡಿಕೆ ಸೇರಿದಂತೆ, ಮುಂದಿನ ನಾಲ್ಕೈದು ವರ್ಷಗಳಲ್ಲಿ ₹1.04 ಲಕ್ಷ ಕೋಟಿ ಅಭಿವೃದ್ಧಿ ಯೋಜನೆ ರೂಪಿಸಿದ್ದೇವೆ ಎಂದರು.ಮಜುಂದಾರ್ ಶಾಗೆ ವೈಯಕ್ತಿಕ ಅಜೆಂಡಾ:
ಈ ಬಗ್ಗೆ ಖಾಸಗಿ ವಾಹಿನಿಗೆ ಮಾತನಾಡಿದ ಡಿಕೆಶಿ, ಬಯೋಕಾನ್ ಸಂಸ್ಥೆಯ ಮುಖ್ಯಸ್ಥೆ ಕಿರಣ್ ಮಜುಂದಾರ್ ಶಾ ಅವರು ವೈಯಕ್ತಿಕ ಅಜೆಂಡಾ ಹೊಂದಿದ್ದಾರೆ. ಬಿಜೆಪಿ ಸರ್ಕಾರ ಇದ್ದಾಗ ರಸ್ತೆ ಅಭಿವೃದ್ಧಿ ಬಗ್ಗೆ ಮಾತನಾಡಿರಲಿಲ್ಲ. ಈಗ ಮಾತನಾಡುತ್ತಿದ್ದಾರೆ ಎಂದು ಟಾಂಗ್ ನೀಡಿದ್ದಾರೆ.180 ಜನರಿಂದ ಅಹವಾಲು:
ಸುಮಾರು 180 ಜನರು ತಮ್ಮ ಅಹವಾಲುಗಳನ್ನು ಸಲ್ಲಿಸಿದ್ದಾರೆ. ಶಾಂತಿನಗರ ಹೌಸಿಂಗ್ ಸೊಸೈಟಿ, ಸ್ಯಾನಿಟರಿ ಲೈನ್, ಮಳೆ ನೀರು ಪ್ರವಾಹದಿಂದ ತೊಂದರೆಗೆ ಒಳಗಾದ ಪ್ರದೇಶಗಳ ಸಮಸ್ಯೆಗಳು, ಕೋರಮಂಗಲ ಮೆಟ್ರೋ ಮಾರ್ಗ, ಏರ್ ಪೋರ್ಟ್ ಗೆ ನೇರ ಬಸ್ ವ್ಯವಸ್ಥೆ, ಎಸ್ ಟಿಪಿ ಅಳವಡಿಕೆ, ಬೆಳ್ಳಂದೂರು ಕೆರೆ ಸಮಸ್ಯೆ, ಪಾದಚಾರಿ ಮಾರ್ಗ, ಸಿಎ ನಿವೇಶನ, ಸಸಿ ನೆಡುವಿಕೆ ಹೀಗೆ ಹಲವಾರು ವಿಚಾರಗಳ ಬಗ್ಗೆ ನಾಗರಿಕರು ಗಮನ ಸೆಳೆದಿದ್ದಾರೆ. ಜನರು ಸರ್ಕಾರದೊಂದಿಗೆ ಕೈ ಜೋಡಿಸಿದರೆ ಮಾತ್ರ ಯಾವುದೇ ಕೆಲಸವನ್ನು ಸರ್ಕಾರ ಪರಿಣಾಮವಾಗಿ ಮಾಡಲು ಸಾಧ್ಯ ಎಂದು ಡಿಸಿಎಂ ಮನವಿ ಮಾಡಿದರು.ಖಾತಾಗೆ ಯಾರಿಗೂ ಲಂಚ ಕೊಡಬೇಡಿ:
ಸುದ್ದಿಗಾರರೊಂದಿಗೆ ಮಾತನಾಡಿದ ಡಿಕೆಶಿ, ಆಸ್ತಿ ದಾಖಲೆ ಸರಿ ಮಾಡಿಕೊಳ್ಳಲು ಶೇ.5 ರಷ್ಟು ಪಾವತಿ ಮಾಡುವುದು ದೊಡ್ಡ ಮೊತ್ತವಲ್ಲ. ಖಾತಾ ಪರಿವರ್ತನೆಯಿಂದ ಆಸ್ತಿ ಮೌಲ್ಯ ದುಪ್ಪಟ್ಟಾಗಲಿದೆ. ಅನೇಕರು ಕಂದಾಯ ನಿವೇಶನ ಖರೀದಿ ಮಾಡಿದ್ದು, ಎಲ್ಲರಿಗೂ ಸಮನಾದ ಸೇವೆ ನೀಡಬೇಕು. ಈ ಪ್ರಕ್ರಿಯೆ ಪಾರದರ್ಶಕವಾಗಿ ನಡೆಯಲಿದ್ದು, ಯಾರೂ ಲಂಚ ನೀಡುವ ಅಗತ್ಯವಿಲ್ಲ ಎಂದು ಹೇಳಿದರು.ಡಿಕೆಶಿ ಹೇಳಿಕೆ ಸತ್ಯವಲ್ಲ: ಕಿರಣ್ ಮಜುಂದಾರ್ ಶಾಬೆಂಗಳೂರು: ನಾನು ವೈಯಕ್ತಿಕ ಅಜೆಂಡಾ ಇಟ್ಟುಕೊಂಡು ಮಾತನಾಡುತ್ತಿದ್ದು, ಬಿಜೆಪಿ ಸರ್ಕಾರ ಇದ್ದಾಗ ಏಕೆ ಪ್ರಶ್ನಿಸಲಿಲ್ಲ ಎಂದಿರುವ ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿಕೆ ಸತ್ಯವಲ್ಲ. ಬಿಜೆಪಿ ಮತ್ತು ಜೆಡಿಎಸ್ ಆಡಳಿತದ ಸಮಯದಲ್ಲಿಯೂ ನಗರದ ಮೂಲಸೌಕರ್ಯ ಪರಿಸ್ಥಿತಿಗಳ ಬಗ್ಗೆ ಟೀಕಿಸಿದ್ದೇವೆ ಎಂದು ಬಯೋಕಾನ್ ಸಂಸ್ಥೆಯ ಮುಖ್ಯಸ್ಥೆ ಕಿರಣ್ ಮಜುಂದಾರ್ ಶಾ ತಿರುಗೇಟು ನೀಡಿದ್ದಾರೆ.
ಕಿರಣ್ ಮಜುಂದಾರ್ ಶಾ ತಮ್ಮ ಎಕ್ಸ್ ಖಾತೆಯಲ್ಲಿ ಡಿ.ಕೆ.ಶಿವಕುಮಾರ್ ಹೇಳಿಕೆಯ ವಿಡಿಯೋ ಹಂಚಿಕೊಂಡಿದ್ದು, ಮೋಹನ್ ದಾಸ್ ಪೈ ಮತ್ತು ನಾನು ಇಬ್ಬರೂ ನಮ್ಮ ನಗರದ ಮೂಲಸೌಕರ್ಯ ಹದಗೆಡುತ್ತಿರುವ ಬಗ್ಗೆ ಈ ಹಿಂದಿನ ಬಿಜೆಪಿ ಮತ್ತು ಜೆಡಿಎಸ್ ಸರ್ಕಾರಗಳಿದ್ದಾಗಲೂ ಟೀಕಿಸಿದ್ದೇವೆ. ರಸ್ತೆಗಳನ್ನು ಸುಸ್ಥಿತಿಯಲ್ಲಿಡುವುದು ನಮ್ಮ ಕಾರ್ಯ ಸೂಚಿ ಎಂದು ಬರೆದುಕೊಂಡಿದ್ದಾರೆ.ಜತೆಗೆ, ಡಿ.ಕೆ.ಶಿವಕುಮಾರ್ ಹಾಗೂ ಸಚಿವ ರಾಮಲಿಂಗಾರೆಡ್ಡಿ ಅವರು ಭಾನುವಾರ ಈಜಿಪುರ ಫ್ಲೈಓವರ್ ಕಾಮಗಾರಿ ಪರಿಶೀಲನೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿರುವ ಕಿರಣ್ ಮಜುಂದಾರ್ ಶಾ ಅವರು, ಇದು ಒಂದು ಸಕಾರಾತ್ಮಕ ಬೆಳವಣಿಗೆಯಾಗಿದ್ದು, ಈ ಹಿಂದಿನ ಬಿಜೆಪಿ ಮತ್ತು ಜೆಡಿಎಸ್ ಸರ್ಕಾರಗಳು ಇದಕ್ಕೆ ಆದ್ಯತೆ ನೀಡಿರಲಿಲ್ಲ. ಕಳೆದ 10 ವರ್ಷಗಳಿಂದ ಉಂಟಾಗಿರುವ ಸಂಚಾರ ದಟ್ಟಣೆಯನ್ನು ನಿವಾರಿಸಲಾಗಲಿದೆ. ಸಂಚಾರ ದಟ್ಟಣೆಯನ್ನು ಗಣನೀಯವಾಗಿ ಕಡಿಮೆ ಆಗಲಿದೆ ಎಂದು ಬರೆದುಕೊಂಡಿದ್ದಾರೆ.