ಸಾರಾಂಶ
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಕುರಿತು ಏಕ ವಚನ ಪದಬಳಸಿ ಅವಾಚ್ಯವಾಗಿ ನಿಂದಿಸಿದ ಉತ್ತರ ಕನ್ನಡ ಸಂಸದ ಅನಂತಕುಮಾರ ಹೆಗಡೆ ಅವರು ಬಹಿರಂಗವಾಗಿ ಕ್ಷಮೆ ಯಾಚಿಸಬೇಕು ಎಂದು ಅಫಜಲ್ಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮೇಶ ಪೂಜಾರಿ ಆಗ್ರಹಿಸಿದರು.
ಕನ್ನಡಪ್ರಭ ವಾರ್ತೆ ಚವಡಾಪುರ
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಕುರಿತು ಏಕ ವಚನ ಪದಬಳಸಿ ಅವಾಚ್ಯವಾಗಿ ನಿಂದಿಸಿದ ಉತ್ತರ ಕನ್ನಡ ಸಂಸದ ಅನಂತಕುಮಾರ ಹೆಗಡೆ ಅವರು ಬಹಿರಂಗವಾಗಿ ಕ್ಷಮೆ ಯಾಚಿಸಬೇಕು ಎಂದು ಅಫಜಲ್ಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮೇಶ ಪೂಜಾರಿ ಆಗ್ರಹಿಸಿದರು.ಅಫಜಲ್ಪುರ ಪಟ್ಟಣದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ನಾಲ್ಕು ಬಾರಿ ಸಂಸದರಾಗಿ ಸಾಮಾಜಿಕ ಜೀವನದಲ್ಲಿದ್ದು ಯಾರಿಗೆ ಹೇಗೆ ಮಾತನಾಡಬೇಕೆಂಬ ಸಾಮಾನ್ಯ ಪರಿಜ್ಞಾನ ಹೆಗಡೆ ಅವರಿಗಿಲ್ಲ. ಸಿದ್ದರಾಮಯ್ಯನವರಿಗೆ ನಿಂದಿಸಿದ್ದು ಅಕ್ಷಮ್ಯವಾಗಿದ್ದು ಇದು ನಾಡಿನ ಜನರಿಗೆ ಮಾಡಿದ ಅವಮಾನವಾಗಿದೆ. ಕೂಡಲೇ ಅವರು ಕ್ಷಮೆ ಯಾಚಿಸಲಿ ಎಂದ ಅವರು ಲೋಕಸಭೆ ಚುನಾವಣೆ ನಿಮಿತ್ತ ಇಂಡಿಯಾ ಮೈತ್ರಿಕೂಟದ ಮುಖ್ಯಸ್ಥರನ್ನಾಗಿ ಡಾ. ಮಲ್ಲಿಕಾರ್ಜುನ ಖರ್ಗೆ ಅವರನ್ನು ನೇಮಿಸಿದ್ದು ನಮಗೆಲ್ಲ ಹರ್ಷ ತಂದಿದೆ ಎಂದರು.
ಮಾಜಿ ಜಿ.ಪಂ ಸದಸ್ಯ ಪ್ರಕಾಶ ಜಮಾದಾರ, ಮುಖಂಡರಾದ ಶರಣು ಕುಂಬಾರ ಮಾತನಾಡಿ ಅನಂತಕುಮಾರ ಹೆಗಡೆ ಹೇಳಿಕೆ ಖಂಡನೀಯವಾಗಿದೆ. ಅವರ ಹೇಳಿಕೆಯನ್ನು ಸ್ವತಃ ಬಿಜೆಪಿಯವರೇ ಖಂಡಿಸುತ್ತಿದ್ದಾರೆ. ಹೆಗಡೆ ಬಹಿರಂಗವಾಗಿ ಕ್ಷಮೆ ಕೇಳದಿದ್ದರೆ ಅವರು ಎಲ್ಲೇ ಸಾರ್ವಜನಿಕವಾಗಿ ಕಂಡರೂ ಅವರಿಗೆ ಮುತ್ತಿಗೆ ಹಾಕಿ ದಿಕ್ಕಾರ ಕೂಗುತ್ತೇವೆ ಎಂದ ಅವರು ಬಿಜೆಪಿಯವರು ಯಾವಾಗಲೂ ನಮ್ಮದು ಸುಸಂಸ್ಕೃತ ಪಕ್ಷವಾಗಿದೆ ಎನ್ನುತ್ತಾರೆ. ಆದರೆ ಅವರ ಪಕ್ಷದ ಸಂಸದ ಒಬ್ಬ ಮುಖ್ಯಮಂತ್ರಿಗಳಿಗೆ ಏಕ ಪದ ಬಳಸಿ ನಿಂದಿಸುತ್ತಾನೆ. ಬಿಜೆಪಿಗರಿಗೆ ನೈತಿಕತೆ ಇದ್ದರೆ ಹೆಗಡೆ ರಾಜಿನಾಮೆ ಪಡೆಯಲಿ ಎಂದು ಸವಾಲು ಹಾಕಿದರು.ಇನ್ನೂ ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಇಂಡಿಯಾ ಮೈತ್ರಿಕೂಟ ಹೆಚ್ಚು ಸ್ಥಾನಗಳಲ್ಲಿ ಗೆಲ್ಲಲಿದೆ. ರಾಜ್ಯದಲ್ಲಿ ಹೆಚ್ಚಿನ ಕಾಂಗ್ರೆಸ್ ಸಂಸದರನ್ನು ಗೆಲ್ಲಿಸಲು ಶ್ರಮಿಸುತ್ತೇವೆ. ಕಲಬುರಗಿ ಲೋಕಸಭಾ ಕ್ಷೇತ್ರದಲ್ಲಿ ಅಫಜಲ್ಪುರದಿಂದ ಹೆಚ್ಚಿನ ಮತಗಳು ಕಾಂಗ್ರೆಸ್ ಪಕ್ಷಕ್ಕೆ ಬರುವಂತೆ ಕೆಲಸ ಮಾಡುತ್ತೇವೆ ಎಂದರು.
ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಎಸ್.ಸಿ ಮೋರ್ಚಾ ಅಧ್ಯಕ್ಷ ಮಹಾಲಿಂಗ ಅಂಗಡಿ, ಚಂದ್ರಶೇಖರ ಕರ್ಜಗಿ, ಶಿವಾನಂದ ಗಾಡಿ, ಶ್ರೀಶೈಲ್ ಪಾಟೀಲ್ ಇದ್ದರು.