ಸಾರಾಂಶ
ಡಂಬಳ ಹೋಬಳಿಯ ಬರದೂರ ಗ್ರಾಮ ಪಂಚಾಯತ್ ವ್ಯಾಪ್ತಿಗೆ ಬರುವ ತಾಮ್ರಗುಂಡಿ ಕೆರೆಯಲ್ಲಿ ಬೃಹತ್ ಮೊಸಳೆ ಪ್ರತ್ಯಕ್ಷವಾಗಿದ್ದು, ಜನರ ಆತಂಕಕ್ಕೆ ಕಾರಣವಾಗಿದೆ. ಯುವಕರು ಮೊಬೈಲ್‍ನಲ್ಲಿ ವಿಡಿಯೋ ಸೆರೆ ಹಿಡಿದು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ.
ಡಂಬಳ: ಹೋಬಳಿಯ ಬರದೂರ ಗ್ರಾಮ ಪಂಚಾಯತ್ ವ್ಯಾಪ್ತಿಗೆ ಬರುವ ತಾಮ್ರಗುಂಡಿ ಗ್ರಾಮದ ತಾಮ್ರಗುಂಡಿ ಕೆರೆಯಲ್ಲಿ ಬೃಹತ್ ಮೊಸಳೆ ಪ್ರತ್ಯಕ್ಷವಾಗಿದ್ದು, ಜನರ ಆತಂಕಕ್ಕೆ ಕಾರಣವಾಗಿದೆ. ಯುವಕರು ಮೊಬೈಲ್‍ನಲ್ಲಿ ವಿಡಿಯೋ ಸೆರೆ ಹಿಡಿದು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ.
ತುಂಗಭದ್ರಾ ನದಿಯಿಂದ ಸಿಂಗಟಾಲೂರ ಏತನೀರಾವರಿ ಮೂಲಕ ಕೆರೆ ತುಂಬಿಸುವ ಯೋಜನೆಯಡಿ ನೀರು ತುಂಬಿಸಲಾಗಿತ್ತು. ಈ ಕೆರೆ ರೈತರ ಜಮೀನುಗಳಿಗೆ ಬಳಸಲಾಗುತ್ತದೆ ಅಲ್ಲದೆ ಮೀನುಗಾರರು ಮೀನು ಹಿಡಿಯುತ್ತಾರೆ. ದನಗಾಹಿ, ಕುರಿಗಾಹಿಗಳಿಗೂ ಬಳಕೆಯಾಗುತ್ತಿದೆ, ಯುವಕರು, ಮಕ್ಕಳು ಕೆರೆಯಲ್ಲಿ ಈಜಾಡುತ್ತಾರೆ. ಆದರೆ ಈ ಕೆರೆಯಲ್ಲಿ ಮೊಸಳೆ ಕಾಣಿಸಿಕೊಂಡಿರುವುದು ಭಯ ಮನೆ ಮಾಡಿದೆ. ಹೀಗಾಗಿ ಗ್ರಾಮ ಪಂಚಾಯತನಿಂದ ಡಂಗುರ ಸಾರಬೇಕು, ಕೆರೆಯಲ್ಲಿ ಮೊಸಳೆಯಿರುವ ಕಾರಣ ನೀರಿಗೆ ಇಳಿಯದಂತೆ ಭಿತ್ತಪತ್ರಗಳನ್ನು ಹಚ್ಚಿ ಜಾಗೃತಿ ಮೂಡಿಸಬೇಕು ಮತ್ತು ಅನಾಹುತಕ್ಕೂ ಮುನ್ನ ಅರಣ್ಯ ಇಲಾಖೆ ಮೊಸಳೆ ಹಿಡಿದು ಸ್ಥಳಾಂತರಿಸಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.ಸಣ್ಣ ನೀರಾವರಿ ಇಲಾಖೆಯ ವ್ಯಾಪ್ತಿಗೆ ಬರುವ ತಾಮ್ರಗುಂಡಿ ಕೆರೆಯಲ್ಲಿ ಮೊಸಳೆ ಕಾಣಿಸಿಕೊಂಡಿದ್ದು ಜನರು ಆತಂಕಕ್ಕೆ ಒಳಗಾಗಿದ್ದಾರೆ. ಅರಣ್ಯ ಇಲಾಖೆಯವರು ಮೊಸಳೆಯನ್ನು ಹಿಡಿದು ಸ್ಥಳಾಂತರಿಸುವುದರ ಮೂಲಕ ಗ್ರಾಮಸ್ಥರಲ್ಲಿರುವ ಆತಂಕವನ್ನು ದೂರಮಾಡಬೇಕು ಎಂದು ಗ್ರಾಪಂ ಮಾಜಿ ಉಪಾಧ್ಯಕ್ಷ ಯಲ್ಲಪ್ಪ ಹುಲಗೇರಿ ಹೇಳಿದರು.
ತಾಮ್ರಗುಂಡಿ ಕೆರೆಯಲ್ಲಿ ಮೊಸಳೆ ಕಾಣಿಸಿಕೊಂಡಿರುವುದು ತಿಳಿದು ಬಂದಿದ್ದು ಗ್ರಾಮದ ಕುರಿಗಾಹಿಗಳು, ದನಗಾಹಿಗಳು ಹೋಗದಂತೆ ಗ್ರಾಮ ಪಂಚಾಯತ್ ಮತ್ತು ನಮ್ಮ ಇಲಾಖೆಯ ಮೂಲಕ ಡಂಗುರ ಸಾರಲು ಈಗಾಗಲೆ ತಿಳಿಸಲಾಗಿದೆ. ಶೀಘ್ರದಲ್ಲಿಯೆ ಮೊಸಳೆ ಹಿಡಿದು ಕೆರೆಯಿಂದ ಸ್ಥಳಾಂತರಿಸಲಾಗುವುದು ಎಂದು ಮುಂಡರಗಿ ವಲಯ ಅರಣ್ಯಾಧಿಕಾರಿ ವೀರೇಂದ್ರ ಮರಿಬಸನ್ನವರ ಹೇಳಿದರು.