ಸಾರಾಂಶ
ಕನ್ನಡಪ್ರಭ ವಾರ್ತೆ ಮೈಸೂರು
ರೈತರ ಸಮಸ್ಯೆಗೆ ಮೊಸಳೆ ಕಣ್ಣೀರು ಪರಿಹಾರ ಅಲ್ಲ ಎಂದು ರಾಜ್ಯ ರೈತ ಸಂಘಟನೆಗಳ ಒಕ್ಕೂಟದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ಕಿಡಿಕಾರಿದರು.ನಗರದ ಎಂಜಿನಿಯರುಗಳ ಸಂಸ್ಥೆಯ ಸಭಾಂಗಣದಲ್ಲಿ ರಾಜ್ಯ ರೈತ ಸಂಘಟನೆಗಳ ಒಕ್ಕೂಟ, ರಾಜ್ಯ ಕಬ್ಬು ಬೆಳೆಗಾರರ ಸಂಘವು ಬುಧವಾರ ಆಯೋಜಿಸಿದ್ದ ರೈತ ಹೋರಾಟ ಜಾಗೃತಿ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದ ಅವರು, ರೈತರಿಗೆ ಸಮರ್ಪಕ ಯೂರಿಯಾ ರಸಗೊಬ್ಬರ ಪೂರೈಸಲು ಸಾಧ್ಯವಾಗದ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಇಬ್ಬಗ್ಗೆ ನೀತಿ ಸರಿಯಲ್ಲ ಎಂದು ಖಂಡಿಸಿದರು.
ದೇಶದ ಜನರಿಗೆ ಆಹಾರ ಬೆಳೆದು ಕೊಡುವ ರೈತರಿಗೆ ಸಕಾಲಕ್ಕೆ ಬಿತ್ತನೆ ಬೀಜ, ರಸಗೊಬ್ಬರ ಪೂರೈಕೆ ಮಾಡುವುದು ಸರ್ಕಾರಗಳ ಕರ್ತವ್ಯ. ಅದನ್ನು ಮರೆತು ಕೇಂದ್ರ ಮತ್ತು ರಾಜ್ಯ ಸರ್ಕಾರದ ಪ್ರತಿನಿಧಿಗಳು ದೋಷಾರೋಪನ ಮಾಡುತ್ತಿದ್ದಾರೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ ಖಾತ್ರಿ ಕಾನೂನು ಜಾರಿಯಾಗಬೇಕು. ಭಾರತ ಅಮೆರಿಕಾ ನಡುವೆ ವ್ಯಾಪಾರ ಒಪ್ಪಂದದಲ್ಲಿ ಕೃಷಿ ಹಾಗೂ ಹೈನುಗಾರಿಕೆಯನ್ನು ಮತ್ತು ಕೋಳಿ ಸಾಕಾಣಿಕೆಯನ್ನು ಹೊರಗಡೆ ಇಡಬೇಕು. ದೇಶದ ರೈತರ ಕೃಷಿ ಸಾಲ ಸಂಪೂರ್ಣ ಮನ್ನಾ ಆಗಬೇಕು. ದೆಹಲಿ ರೈತ ಹೋರಾಟದಲ್ಲಿ ದಾಖಲಾಗಿರುವ ಎಲ್ಲಾ ಪೊಲೀಸ್ ಮೊಕ್ಕದಮ್ಮೆಗಳನ್ನು ಕೈಬಿಡಬೇಕು. ಫಲವತ್ತಾದ ಕೃಷಿ ಭೂಮಿಗಳನ್ನ ಕೈಗಾರಿಕೆಗಳಿಗೆ ವಶಪಡಿಸಿಕೊಳ್ಳುವುದನ್ನು ನಿಲ್ಲಿಸಲು ಆಗ್ರಹಿಸಿ ಆ.25 ರಂದು ದೆಹಲಿಯಲ್ಲಿ ರೈತರ ಬೃಹತ್ ರ್ಯಾಲಿ ಆಯೋಜಿಸಲಾಗಿದೆ ಎಂದರು.
ರಾಜ್ಯ ಕಬ್ಬು ಬೆಳೆಗಾರರ ಸಂಘದ ಖಜಾಂಜಿ ಎಂ.ಬಿ. ಚೇತನ್, ಪತ್ರಕರ್ತ ಜಯಂತ್, ಶರಣ ಸಾಹಿತ್ಯ ಪರಿಷತ್ತು ಜಿಲ್ಲಾಧ್ಯಕ್ಷ ಹೆಳವರಹುಂಡಿ ಸಿದ್ದಪ್ಪ, ನಿವೃತ ಪ್ರಾಂಶುಪಾಲ ಮಹದೇವಯ್ಯ, ವಸಂತ್ ಕುಮಾರ್ ಮಠ, ಚಂದ್ರಶೇಖರ್, ಪಿ. ಸೋಮಶೇಕರ, ನೀಲಕಂಠಪ್ಪ, ಮುಕ್ಕಳ್ಳಿ ಮಹದೇವಸ್ವಾಮಿ, ಪಟೇಲ್ ಶಿವಮೂರ್ತಿ, ಉಡಿಗಾಲ ರೇವಣ್ಣ, ಕುರುಬೂರು ಸಿದ್ದೇಶ್, ವೆಂಕಟೇಶ್, ವಿಜಯೇಂದ್ರ, ಕೋಟೆ ರಾಜೇಶ್ ಮೊದಲಾದವರು ಮಾತನಾಡಿದರು.ರೈತ ಮುಖಂಡರಾದ ಅತ್ತಹಳ್ಳಿ ದೇವರಾಜ್, ಬರಡನಪುರ ನಾಗರಾಜ್, ಕಿರಗೊಸೂರು ಶಂಕರ್, ಕೆಂಡಗಣ್ಣಸ್ವಾಮಿ ಮೊದಲಾದವರು ಇದ್ದರು.