ಜಿಲ್ಲಾಡಳಿತಕ್ಕೆ 2 ದಿನಗಳಲ್ಲಿ ಬೆಳೆ ಪರಿಹಾರ ಅಕ್ರಮ ವರದಿ: ಸುಜಾತಾ

| Published : Jan 24 2024, 02:05 AM IST

ಜಿಲ್ಲಾಡಳಿತಕ್ಕೆ 2 ದಿನಗಳಲ್ಲಿ ಬೆಳೆ ಪರಿಹಾರ ಅಕ್ರಮ ವರದಿ: ಸುಜಾತಾ
Share this Article
  • FB
  • TW
  • Linkdin
  • Email

ಸಾರಾಂಶ

ತಾಲೂಕಿನ ಕಲ್ಕೆರೆ, ಅಂತರಘಟ್ಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನಡೆದಿರುವ ಬೆಳೆ ಪರಿಹಾರ ಅಕ್ರಮದ ಬಗ್ಗೆ ತನಿಖಾಧಿಕಾರಿಯಾಗಿರುವ ಜಿಲ್ಲಾ ಕೃಷಿ ಉಪ ನಿರ್ದೇಶಕರಾದ ಸುಜಾತಾರವರು ರೈತರ ಅರ್ಜಿಗಳನ್ನು ಸ್ವೀಕರಿಸಿ 2 ದಿನ ಗಳಲ್ಲಿ ಜಿಲ್ಲಾಡಳಿತಕ್ಕೆ ವರದಿ ಸಲ್ಲಿಸುವುದಾಗಿ ಹೇಳಿದರು.

- ತಾಲೂಕಿನ ಕಲ್ಕೆರೆ ಗ್ರಾಪಂ ಆವರಣದಲ್ಲಿ ನಡೆದ ಸಭೆಯಲ್ಲಿ ಕ್ರಮಕ್ಕೆರೈತರ ಆಗ್ರಹ

ಕನ್ನಡಪ್ರಭ ವಾರ್ತೆ, ಕಡೂರು

ತಾಲೂಕಿನ ಕಲ್ಕೆರೆ, ಅಂತರಘಟ್ಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನಡೆದಿರುವ ಬೆಳೆ ಪರಿಹಾರ ಅಕ್ರಮದ ಬಗ್ಗೆ ತನಿಖಾಧಿಕಾರಿಯಾಗಿರುವ ಜಿಲ್ಲಾ ಕೃಷಿ ಉಪ ನಿರ್ದೇಶಕರಾದ ಸುಜಾತಾರವರು ರೈತರ ಅರ್ಜಿಗಳನ್ನು ಸ್ವೀಕರಿಸಿ 2 ದಿನ ಗಳಲ್ಲಿ ಜಿಲ್ಲಾಡಳಿತಕ್ಕೆ ವರದಿ ಸಲ್ಲಿಸುವುದಾಗಿ ಹೇಳಿದರು.

ಮಂಗಳವಾರ ತಾಲೂಕಿನ ಕಲ್ಕೆರೆ ಗ್ರಾಪಂ ಆವರಣದಲ್ಲಿ ನಡೆದ ಸಭೆಯಲ್ಲಿ ರೈತರಿಂದ ಅರ್ಜಿ ಸ್ವೀಕರಿಸಿ ಮಾತನಾಡಿದರು. 2022-23 ನೇ ಸಾಲಿನ ಅತಿವೃಷ್ಟಿಯಿಂದ ನಷ್ಟವುಂಟಾದ ರೈತರ ಬೆಳೆಗೆ ಸರ್ಕಾರ ಪರಿಹಾರ ನೀಡಿತ್ತು. ಕಲ್ಕೆರೆ ಗ್ರಾಪಂ ವ್ಯಾಪ್ತಿಯ ಕಲ್ಕೆರೆ, ರಂಗಾಪುರ, ಭೋವಿ ಕಾಲೋನಿ, ತಿಮ್ಲಾಪುರ, ಗುಮ್ಮನಹಳ್ಳಿ, ಗೊಲ್ಲರಹಟ್ಟಿ ಮುಂತಾದ ಗ್ರಾಮಗಳ ಸುಮಾರು 975 ಕ್ಕೂ ಹೆಚ್ಚಿನ ರೈತರಿಗೆ ಪರಿಹಾರ ಬರಬೇಕಿತ್ತು. ಇದರಲ್ಲಿ 316 ಫಲಾನುಭವಿಗಳಿಗೆ ಹಣ ನೀಡಿರುವುದಾಗಿ ಸದ್ಯ ಮಾಹಿತಿ ದೊರಕಿದೆ. ಕೆಲ ರೈತರಿಗೂ ಬಂದಿದೆ. ಒಂದೇ ಹೆಸರಿನಲ್ಲಿ ಬೇರೆಯವರಿಗೂ ಹಣ ಬಂದಿದೆ ಎಂದರು.

ಪೌತಿ ಖಾತೆಗಳಿಗೆ, ಮೃತರಾದವರ ಹೆಸರಿಗೆ, ಪಹಣಿ ಇಲ್ಲದವರಿಗೆ, 8 ವರ್ಷದ ಮಗುವಿನ ಖಾತೆಗೆ, ವಿದ್ಯಾರ್ಥಿ ಗಳಿಗೆ ಹಣ ನೀಡಿ ನೈಜ ಫಲಾನುಭವಿಗಳಿಗೆ ಮೋಸ ಆಗಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ. ನಾವು ನಿಮ್ಮ ಅರ್ಜಿಗಳ ಜೊತೆ ನೀಡಿರುವ ಆಧಾರ್, ಪಹಣಿ, ಬ್ಯಾಂಕ್ ಖಾತೆಗಳನ್ನು ಪರಿಶೀಲಿಸಿ ಜಿಲ್ಲಾಧಿಕಾರಿಗಳಿಗೆ 2 ದಿನಗಳಲ್ಲಿ ವರದಿ ನೀಡ ಲಾಗುವುದು ಎಂದರು.

ಅಧಿಕಾರಿಗಳ ಮಾಹಿತಿಗೆ ಸಮಾಧಾನಗೊಳ್ಳದ ಫಲಾನುಭವಿಗಳು, ರೈತರು ಅಪರಾಧಿಗಳಲ್ಲ ಪ್ರಕರಣ ಬೆಳಕಿಗೆ ಬಂದು ತಿಂಗಳಾದರೂ ಗ್ರಾಮ ಲೆಕ್ಕಾಧಿಕಾರಿ ಪಾಲಾಕ್ಷ ಮೂರ್ತಿ ಅವರನ್ನು ಅಮಾನತ್ತು ಮಾಡಿಲ್ಲ. ಸಂಭಂಧಿಸಿದ ಕಂದಾಯ ಅಧಿಕಾರಿಯನ್ನು ತನಿಖೆಗೆ ಒಳಪಡಿಸಿಲ್ಲ. ತಾಲೂಕು ಆಡಳಿತ ಏನು ಮಾಡುತ್ತಿದೆ ಸ್ಥಳಕ್ಕೆ ತಹಸೀಲ್ದಾರ್ ಮತ್ತು ಉಪ ವಿಭಾಗಾಧಿಕಾರಿಗಳು ಬರಬೇಕು ಎಂದು ಪಟ್ಟುಹಿಡಿದರು.

ಕಲ್ಕೆರೆ ಗ್ರಾಪಂ ಕಂಪ್ಯೂಟರ್ ಆಪರೇಟರ್ ಸೇರಿದಂತೆ ಸುಮಾರು ಐದಾರು ಜನ ಮಧ್ಯವರ್ತಿಗಳು ಸೇರಿ ಮೂಲ ಪಹಣಿ ದಾರರ ಪಹಣಿಗೆ ಹಾಗು ಅದೇ ಹೆಸರಿನ ಬೇರೆಯವರ ಆಧಾರ್ ಕಾರ್ಡ್ ಮತ್ತು ಬ್ಯಾಂಕ್ ಖಾತೆ ನಂಬರ್ ನೀಡಿ ಹಣ ವರ್ಗಾ ಯಿಸಿದ್ದಾರೆ. ಸುಮಾರು 8 ವರ್ಷದ ಹಿಂದೆ ಮೃತರಾದವರ ಹೆಸರಲ್ಲೂ ಹಣ ಡ್ರಾ ಮಾಡಿಕೊಂಡಿದ್ದಾರೆ. ಖಾತೆದಾರ ರಲ್ಲದವರ ಹೆಸರಿಗೂ ಹಣ ಹಾಕಿ ಅದನ್ನೂ ಪಡೆದು ಕೊಂಡಿದ್ದಾರೆ. ಕೆಲ ಅರ್ಹ ರೈತರಿಗೆ ಪರಿಹಾರ ದೊರಕಿಲ್ಲ. ಇವೆಲ್ಲವನ್ನೂ ಪರಿಶೀಲಿಸಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕೆಂದು ಆಗ್ರಹಿಸಿದರು.

ಸಭೆಯಲ್ಲಿ ಗ್ರಾಪಂ ಅಧ್ಯಕ್ಷೆ ಆಶಾರಾಣಿ ಮಾತನಾಡಿ, ಸಾರ್ವಜನಿಕ ದೂರುಗಳ ಹಿನ್ನಲೆಯಲ್ಲಿ ಕಂಪ್ಯೂಟರ್ ಆಪರೇಟರ್ ಮಲ್ಲಿ ಕಾರ್ಜುನರವರನ್ನು ಜ.20 ರಿಂದ ಅಮಾನತ್ತಿನಲ್ಲಿಡಲಾಗಿದೆ ಎಂದರು.

ಅಧಿಕಾರಿಗಳಾದ ಎಂ.ಎಸ್.ಅಶೋಕ್, ತಿಮ್ಮೇಗೌಡ, ವೆಂಕಟೇಶ್ ಚೌವಾಣ್, ಕಲ್ಮರುಡಪ್ಪ, ಮಂಜುನಾಥ್ ಹಾಗೂ ಪಿಡಿಓ ಅಮೃತೇಶ್, ರೈತರಾದ ತಮ್ಮಣ್ಣ, ತಿಪ್ಪೇಶ್, ಯತೀಶ್, ಗಿರೀಶನಾಯ್ಕ, ಚಂದ್ರಿಬಾಯಿ ಮತ್ತಿತರರು ಇದ್ದರು.---ಬಾಕ್ಸ್ ಸುದ್ದಿಗೆ---

ಕಲ್ಕೆರೆ ಮತ್ತು ಅಂತರಘಟ್ಟೆ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಅಕ್ರಮ ನಡೆದಿರುವುದಾಗಿ ಗ್ರೇಡ್ -2 ತಹಸೀಲ್ದಾರ್ ಮಂಜುನಾಥ್ ಮಾಹಿತಿ ನೀಡಿದ್ದು,ಸುಮಾರು 2.54 ಕೋಟಿ ರು. ಹಣ ಪರಿಹಾರ ಬಂದಿದೆ. ಯಾರ ಯಾರ ಖಾತೆಗೆ ಹಣ ವರ್ಗಾವಣೆಯಾಗಿದೆ ಎಂಬುದನ್ನು ತನಿಖೆಯಿಂದ ಸಾಬೀತು ಪಡಿಸಿ ತಪ್ಪಿತಸ್ಥರಿಗೆ ಕಾನೂನು ರೀತಿ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.23ಕೆಕೆಡಿಯು1.

ಕಡೂರು ತಾಲೂಕಿನ ಕಲ್ಕೆರೆ ಗ್ರಾಮದ ಬೆಳೆ ಪರಿಹಾರ ದುರುಪಯೋಗ ಪ್ರಕರಣದ ಗ್ರಾಮ ಲೆಕ್ಕಿಗರು ಹಾಗು ರೆವಿನ್ಯೂ ಇನ್ಸ್ ಫೆಕ್ಟರ್ ರವರನ್ನು ಅಮಾನತ್ತು ಮಾಡಿ ನಂತರ ತನಿಖೆ ನಡೆಸಿ ಎಂದು ಗ್ರಾಮಸ್ಥರು ಅಧಿಕಾರಿಗಳಿಗೆ ಆಗ್ರಹಿಸಿದರು.