ರಾಣಿಬೆನ್ನೂರು: ಕಳೆದ ತಿಂಗಳು ಸುರಿದ ಆಲಿಕಲ್ಲು ಮಳೆಯಿಂದ ತಾಲೂಕಿನ ಮೆಡ್ಲೇರಿ ಹೋಬಳಿಯ ಬತ್ತ, ತೆಂಗು ಹಾಗೂ ಅಡಕೆ ಬೆಳೆಗಳು ಭಾರೀ ಹಾನಿಗೊಳಗಾದ ಹಿನ್ನೆಲೆಯಲ್ಲಿ ರೈತರಿಗೆ ತಕ್ಷಣ ಪರಿಹಾರ ನೀಡುವಂತೆ ಮನವಿ ಮಾಡಿದರೂ ಜಿಲ್ಲಾಡಳಿತ ಹಾಗೂ ಸರ್ಕಾರದಿಂದ ಇದುವರೆಗೆ ಸಮರ್ಪಕ ಸ್ಪಂದನೆ ಸಿಕ್ಕಿಲ್ಲವೆಂದು ಜಿಪಂ ಮಾಜಿ ಸದಸ್ಯ ಹಾಗೂ ಬಿಜೆಪಿ ಮುಖಂಡ ಸಂತೋಷ ಪಾಟೀಲ ಆರೋಪ ಮಾಡಿದರು. ನಗರದ ಬಿಜೆಪಿ ಕಚೇರಿಯಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಟಾವಿಗೆ ಸಿದ್ಧವಾಗಿದ್ದ ಸಾವಿರಾರು ಎಕರೆ ಬತ್ತ ಬೆಳೆ ಸಂಪೂರ್ಣ ನಾಶವಾಗಿದೆ. ನೂರಾರು ಎಕರೆಯಷ್ಟು ಅಡಕೆ ಹಾಗೂ ತೆಂಗು ಬೆಳೆ ಕೈಗೆ ಸಿಗದಂತಾಗಿದೆ. ರೈತರು ಎಕರೆಗೆ ಸುಮಾರು ₹40 ಸಾವಿರ ವೆಚ್ಚ ಮಾಡಿದ್ದಾರೆ. ಈ ಮೊತ್ತವನ್ನು ಮುಂಗಡ ಪರಿಹಾರವಾಗಿ ನೀಡುವಂತೆ ಸರ್ಕಾರಕ್ಕೆ ಮನವಿ ಮಾಡಿದ್ದೇವೆ. ಆದರೆ ಈ ಬಗ್ಗೆ ಯಾವುದೇ ಸ್ಪಷ್ಟ ಮಾಹಿತಿ ದೊರಕುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.ಮುಂಗಾರು ಹಂಗಾಮು ಆರಂಭವಾಗಿರುವುದರಿಂದ ರೈತರಿಗೆ ತಕ್ಷಣ ಹಣದ ಅಗತ್ಯವಿದೆ. ಇಂತಹ ಸಂದರ್ಭದಲ್ಲಿ ಸರ್ಕಾರ ರೈತರನ್ನು ನಿರ್ಲಕ್ಷಿಸುವುದು ಸರಿಯಲ್ಲ. ಈ ತಿಂಗಳ ಅಂತ್ಯದೊಳಗೆ ಪರಿಹಾರ ಹಣವನ್ನು ರೈತರ ಖಾತೆಗೆ ಜಮಾ ಮಾಡದಿದ್ದರೆ ಜೂ. 30ರಂದು ಬಿಜೆಪಿ ಕಚೇರಿಯಲ್ಲಿ ಸಾವಿರಾರು ರೈತರೊಂದಿಗೆ ಸರ್ಕಾರದ ಪುಣ್ಯತಿಥಿ ನೆರವೇರಿಸಲಾಗುವುದು ಎಂದು ಎಚ್ಚರಿಸಿದರು.ನಂತರ ನಗರದ ಹೊರವಲಯದ ಕೂನಬೇವು ಪ್ಲಾಟ್ ಬಳಿಯ ಗದಗ-ಹೊನ್ನಾಳ್ಳಿ ರಾಜ್ಯ ಹೆದ್ದಾರಿ ಅಂಡರ ಬ್ರಿಡ್ಜ್ ಮಳೆ ನೀರು ತುಂಬಿಕೊಂಡು ಸುತ್ತಮುತ್ತಲಿನ ಹೊಲಗಳಿಗೆ ನೀರು ತುಂಬಿ ರೈತರು ಬಿತ್ತನೆ ಮಾಡಿದ ಬೆಳೆ ಹಾಳಾಗಿರುವ ಪ್ರದೇಶಕ್ಕೆ ಭೇಟಿ ನೀಡಿ ಸಮಸ್ಯೆ ಪರಿಹಾರಕ್ಕೆ ಸಂಬಂಧಪಟ್ಟ ಅಧಿಕಾರಿಗಳಿಗೆ ಆಗ್ರಹಿಸಿದರು.ಪ್ರಭುಗೌಡ ಚನ್ನಗೌಡ, ಹನುಮಂತರಾಜ ಚನ್ನಗೌಡ್ರ, ಯುವರಾಜ ಬಾರಟಕ್ಕಿ, ಚಂದ್ರಪ್ಪ ಭತ್ತದ, ವಿಜಯಕುಮಾರ ಜ್ಯೋತಿ, ಬಸವರಾಜ ಬಣಕಾರ, ಗುಡ್ಡೇಶ ನಿಟ್ಟೂರು, ಮಲ್ಲನಗೌಡ ನರಸಗೊಂಡರ, ಬಸವನಗೌಡ ಪಾಟೀಲ, ರಾಜೇಂದ್ರ ಜಂಬಗಿ, ದೇವೇಂದಣ್ಣ ಉಜ್ಜನಗೌಡ್ರ, ವಿಜಯಕುಮಾರ ಹೆಡಿಯಾಲ, ಚಂದ್ರಶೇಖರ ಗೋಣಿಬಸಮ್ಮನವರ, ಸಿದ್ದು ಉಜ್ಜನಗೌಡ್ರ, ಅಭಿಷೇಕ ಪಟ್ಟಣಶೆಟ್ಟಿ, ಕಿರಣ ಬುಳ್ಳನಗೌಡ್ರ, ಸಿದ್ದು ರೊಡ್ಡನವರ, ಕರಸಬಪ್ಪ ನರಸಗೊಂಡರ, ಬಸಪ್ಪ ನೆಲೋಗಲ್ಲ, ಮಲ್ಲಪ್ಪ ನರಸಗೊಂಡರ, ಕುರುವತ್ತೆಪ್ಪ ಗೂಣೆಮ್ಮನವರ, ಕುಮಾರ ನರಸಗೊಂಡರ, ಮಹಾಂತೇಶ ಕೂನಬೇವು, ಬಸವರಾಜ ಕಾಳಮ್ಮನವರ, ಶಿವು ನರಸಗೊಂಡರ, ವಿಜಯಕುಮಾರ ಹೆಡಿಯಾಲ, ಯಲ್ಲಪ್ಪ ಮುದೋಳಕರ, ಶೇಖಪ್ಪ ನರಸಗೊಂಡರ, ಅಣ್ಣಪ್ಪ ತಿಮ್ಮೆನಹಳ್ಳಿ, ಮಲ್ಲಕಪ್ಪ ಹೊನ್ನಾಳಿ ಮತ್ತಿತರರಿದ್ದರು. ರಾಜಕೀಯಕ್ಕಿಂತ ರೈತಪರ ಚಿಂತನೆ ಮುಖ್ಯ: ಪಕ್ಷದ ಒಳಗಿನ ಭಿನ್ನಾಭಿಪ್ರಾಯಗಳ ಕುರಿತು ಪ್ರತಿಕ್ರಿಯಿಸಿದ ಅವರು, ನಮ್ಮ ಪಕ್ಷದ ಮುಖಂಡರು ಹಲವು ಹೋರಾಟಗಳನ್ನು ಮೈಗೂಡಿಸಿಕೊಂಡಿದ್ದಾರೆ. ಅವರದೆ ಆದ ಹೋರಾಟಗಳಲ್ಲಿ ಅವರು ತೊಡಗಿರಬಹುದು. ನಾನು ಪ್ರಗತಿಪರ ರೈತ. ರಾಜಕೀಯಕ್ಕಿಂತ ರೈತರ ಹಿತಾಸಕ್ತಿ ನನಗೆ ಮುಖ್ಯ. ರೈತರ ಪರ ಹೋರಾಟವನ್ನು ಮುಂದುವರಿಸುತ್ತೇನೆ. ಯಾವುದೇ ರೀತಿಯಲ್ಲಿ ತಡೆಯಲು ಯತ್ನಿಸಿದರೂ ಹೋರಾಟ ನಿಲ್ಲುವುದಿಲ್ಲ ಎಂದು ಪಾಟೀಲ ಸ್ಪಷ್ಟಪಡಿಸಿದರು.