ಹೊಲಗಳಲ್ಲಿಯೇ ರೈತರೊಂದಿಗೆ ಸಮಾಲೋಚನೆ ನಡೆಸಿದ ಜಿಲ್ಲಾಧಿಕಾರಿಗಳು, ಬೆಳೆಗಳ ಸ್ಥಿತಿ, ನೀರಿನ ಲಭ್ಯತೆ ಹಾಗೂ ಎದುರಾಗಿರುವ ಸಮಸ್ಯೆಗಳ ಬಗ್ಗೆ ಮಾಹಿತಿ ಪಡೆದುಕೊಂಡರು.
ಗದಗ: ಪ್ರಸಕ್ತ 2026- 27ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಜಿಲ್ಲಾದ್ಯಂತ ವಾಡಿಕೆಗಿಂತ ಕಡಿಮೆ ಮಳೆಯಾಗಿರುವ ಹಿನ್ನೆಲೆ ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್ ಅವರು ಗುರುವಾರ ಗದಗ ಹಾಗೂ ರೋಣ ತಾಲೂಕಿನ ವಿವಿಧ ಗ್ರಾಮಗಳ ರೈತರ ಹೊಲಕ್ಕೆ ಭೇಟಿ ನೀಡಿ ಬೆಳೆಗಳ ಸ್ಥಿತಿಗತಿ ಅವಲೋಕಿಸಿದರು.
ಗದಗ ತಾಲೂಕಿನ ದುಂದೂರ ಕ್ರಾಸ್, ಗಂಗಿಮಡಿ- ಹಿರೇಹಂದಿಗೋಳ ರಸ್ತೆ, ಹರ್ಲಾಪುರ ಹಾಗೂ ಕೋಟುಮುಚಗಿ ಗ್ರಾಮಗಳಿಗೆ ಭೇಟಿ ನೀಡಿ ಹೆಸರು, ಉದ್ದು, ಶೇಂಗಾ, ಮೆಕ್ಕೆಜೋಳ ಹಾಗೂ ಹತ್ತಿ ಬೆಳೆಗಳ ಬೆಳವಣಿಗೆ ಮತ್ತು ಪ್ರಸ್ತುತ ಪರಿಸ್ಥಿತಿ ಪರಿಶೀಲಿಸಿದರು.ನಂತರ ರೋಣ ತಾಲೂಕಿನ ನರೇಗಲ್ ಗ್ರಾಮಕ್ಕೆ ಭೇಟಿ ನೀಡಿ ಹೆಸರು, ಮೆಕ್ಕೆಜೋಳ ಹಾಗೂ ಶೇಂಗಾ ಬೆಳೆದ ರೈತರ ಜಮೀನುಗಳಲ್ಲಿ ಮಳೆ ಕೊರತೆಯಿಂದ ಒಣಗುತ್ತಿರುವ ಹಾಗೂ ಬಾಡುತ್ತಿರುವ ಬೆಳೆಗಳನ್ನು ವೀಕ್ಷಿಸಿದರು.
ಹೊಲಗಳಲ್ಲಿಯೇ ರೈತರೊಂದಿಗೆ ಸಮಾಲೋಚನೆ ನಡೆಸಿದ ಜಿಲ್ಲಾಧಿಕಾರಿಗಳು, ಬೆಳೆಗಳ ಸ್ಥಿತಿ, ನೀರಿನ ಲಭ್ಯತೆ ಹಾಗೂ ಎದುರಾಗಿರುವ ಸಮಸ್ಯೆಗಳ ಬಗ್ಗೆ ಮಾಹಿತಿ ಪಡೆದುಕೊಂಡರು.ಜಿಲ್ಲಾಧಿಕಾರಿಗಳು ರೈತರಿಗೆ ಧೈರ್ಯ ತುಂಬುತ್ತಾ, ಕೃಷಿ ಇಲಾಖೆಯ ಅಧಿಕಾರಿಗಳು ಗ್ರಾಮ ಮಟ್ಟದಲ್ಲಿ ನಿರಂತರವಾಗಿ ಬೆಳೆಗಳ ಮೇಲ್ವಿಚಾರಣೆ ನಡೆಸಬೇಕು. ಮಳೆ ಕೊರತೆಯಿಂದ ಬೆಳೆಗಳಲ್ಲಿ ಉಂಟಾಗುತ್ತಿರುವ ಹಾನಿಯನ್ನು ದಾಖಲಿಸಿ ರೈತರಿಗೆ ಅಗತ್ಯ ತಾಂತ್ರಿಕ ಸಲಹೆ ಹಾಗೂ ಮಾರ್ಗದರ್ಶನ ನೀಡಬೇಕು ಎಂದು ಸೂಚಿಸಿದರು.
ಜಿಲ್ಲೆಯ ರೈತರು ಯಾವುದೇ ರೀತಿಯ ತೊಂದರೆಗೆ ಒಳಗಾಗದಂತೆ ಕೃಷಿ ಇಲಾಖೆಯ ಅಧಿಕಾರಿಗಳು ನಿರಂತರವಾಗಿ ಹೊಲಗಳಿಗೆ ಭೇಟಿ ನೀಡಿ ಬೆಳೆಗಳ ಸ್ಥಿತಿಗತಿಯನ್ನು ಪರಿಶೀಲಿಸಬೇಕು. ರೈತರಿಗೆ ಅಗತ್ಯ ತಾಂತ್ರಿಕ ಸಲಹೆ, ಮಾರ್ಗದರ್ಶನ ಹಾಗೂ ಇಲಾಖೆಯ ಸೌಲಭ್ಯಗಳು ಸಮಯಕ್ಕೆ ತಲುಪುವಂತೆ ನೋಡಿಕೊಳ್ಳಬೇಕು ಎಂದರು.ಕೃಷಿ ಜಂಟಿ ನಿರ್ದೇಶಕಿ ಚೇತನಾ ಪಾಟಿಲ ಮಾಹಿತಿ ನೀಡಿದರು. ಉಪವಿಭಾಗಾಧಿಕಾರಿ ಗಂಗಪ್ಪ ಎಂ., ತಹಸೀಲ್ದಾರ್ ಶ್ರೀನಿವಾಸಮೂರ್ತಿ ಕುಲಕರ್ಣಿ, ಕೃಷಿ, ಕಂದಾಯ ಹಾಗೂ ತೋಟಗಾರಿಕೆಯ ಇಲಾಖೆಯ ಅಧಿಕಾರಿಗಳು ಹಾಗೂ ರೈತ ಮುಖಂಡರು ಇದ್ದರು.