ಮಳೆಗೆ ಬೆಳೆ ಹಾನಿ: ಮಾಯಕೊಂಡ ಶಾಸಕ ಪರಿಶೀಲನೆ

| Published : Apr 22 2025, 01:52 AM IST

ಮಳೆಗೆ ಬೆಳೆ ಹಾನಿ: ಮಾಯಕೊಂಡ ಶಾಸಕ ಪರಿಶೀಲನೆ
Share this Article
  • FB
  • TW
  • Linkdin
  • Email

ಸಾರಾಂಶ

ಭಾನುವಾರ ರಾತ್ರಿ ಗುಡುಗು, ಮಿಂಚು, ಬಿರುಗಾಳಿ ಸಹಿತ ಸುರಿದ ಮಳೆಯಿಂದಾಗಿ ಅಡಕೆ, ಬಾಳೆ, ತರಕಾರಿ ಸೇರಿದಂತೆ ಅನೇಕ ಬೆಳೆಗಳು ನೆಲಕ್ಕುರುಳಿವೆ. ಇದರಿಂದ ರೈತರಿಗೆ ಲಕ್ಷಾಂತರ ನಷ್ಟ ಸಂಭವಿಸಿದೆ. ಮಳೆ ಹಾನಿ ಪ್ರದೇಶಗಳಿಗೆ ಶಾಸಕ ಕೆ.ಎಸ್.ಬಸವಂತಪ್ಪ ಸೋಮವಾರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

- ಪಪ್ಪಾಯಿ, ಅಡಕೆ, ಬಾಳೆ, ತರಕಾರಿ ಮತ್ತಿತರ ಬೆಳೆಗಳು ಹಾನಿ, ಲಕ್ಷಾಂತರ ರು. ನಷ್ಟ

- - -

ಕನ್ನಡಪ್ರಭ ವಾರ್ತೆ ದಾವಣಗೆರೆ

ಭಾನುವಾರ ರಾತ್ರಿ ಗುಡುಗು, ಮಿಂಚು, ಬಿರುಗಾಳಿ ಸಹಿತ ಸುರಿದ ಮಳೆಯಿಂದಾಗಿ ಅಡಕೆ, ಬಾಳೆ, ತರಕಾರಿ ಸೇರಿದಂತೆ ಅನೇಕ ಬೆಳೆಗಳು ನೆಲಕ್ಕುರುಳಿವೆ. ಇದರಿಂದ ರೈತರಿಗೆ ಲಕ್ಷಾಂತರ ನಷ್ಟ ಸಂಭವಿಸಿದೆ. ಮಳೆ ಹಾನಿ ಪ್ರದೇಶಗಳಿಗೆ ಶಾಸಕ ಕೆ.ಎಸ್.ಬಸವಂತಪ್ಪ ಸೋಮವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಮಾಯಕೊಂಡ ಕ್ಷೇತ್ರದ ವ್ಯಾಪ್ತಿಯ ತಾಲೂಕಿನ ಅಣಜಿ, ಕಿತ್ತೂರು, ಹೆಮ್ಮನಬೇತೂರು, ಚಿಕ್ಕವ್ವನಾಗತಿಹಳ್ಳಿ, ಕುರುಡಿ ಸೇರಿದಂತೆ ಅನೇಕ ಗ್ರಾಮಗಳಲ್ಲಿ ಭಾನುವಾರ ರಾತ್ರಿ ಭಾರೀ ಮಳೆಯಾಗಿದೆ. ಪರಿಣಾಮ ಪಪ್ಪಾಯಿ, ಬಾಳೆ, ಅಡಕೆ ಹಾಗೂ ತರಕಾರಿ ಸೇರಿದಂತೆ ಅನೇಕ ಬೆಳೆಗಳು ನೆಲಕ್ಕಪ್ಪಳಿಸಿವೆ.

ಹೆಮ್ಮನಬೇತೂರು ಗ್ರಾಪಂ ವ್ಯಾಪ್ತಿಯ ಕುರುಡಿ ಗ್ರಾಮದ ರುದ್ರಪ್ಪ ಎಂಬವರ 3 ಎಕರೆ ತೋಟದಲ್ಲಿ ಬೆಳೆದಿದ್ದ ಫಲಕ್ಕೆ ಬಂದ ಪಪ್ಪಾಯಿ, ಬಾಳೆ ಗಿಡಗಳು ಧರೆಗುರುಳಿದ್ದು, ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ.

ಸುದ್ದಿ ತಿಳಿದು ಶಾಸಕ ಕೆ.ಎಸ್.ಬಸವಂತಪ್ಪ ಅವರು ಅಣಜಿ, ಕಿತ್ತೂರು, ಹೆಮ್ಮನಬೇತೂರು, ಚಿಕ್ಕವ್ವನಾಗತಿಹಳ್ಳಿ ಗ್ರಾಮಗಳಿಗೆ ಭೇಟಿ ನೀಡಿದರು. ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕಿ ರೇಷ್ಮಾ ಫರ್ವೀನ್, ಕಂದಾಯ ಇಲಾಖೆ ಅಧಿಕಾರಿಗಳ ನಿಯೋಗದೊಂದಿಗೆ ಶಾಸಕರು ಭೇಟಿ ನೀಡಿ, ಮಳೆ ಹಾನಿಗಳನ್ನು ಪರಿಶೀಲನೆ ನಡೆಸಿದರು.

ಮಳೆಗೆ ಹಾನಿಗೀಡಾದ ಮನೆಗಳ ಬಳಿ ತೆರಳಿ ಪರಿಶೀಲಿಸಿದರು. ಬೆಳೆ ಹಾನಿಗೊಳಗಾದ ರೈತರಿಗೆ ಪರಿಹಾರ ನೀಡಬೇಕು, ಹಾನಿಗೊಳಗಾದ ಮನೆಗಳಿಗೆ ತುರ್ತು ಪರಿಹಾರ ನೀಡುವಂತೆ ಸ್ಥಳದಲ್ಲಿದ್ದ ಅಧಿಕಾರಿಗಳಿಗೆ ಶಾಸಕರು ಸೂಚನೆ ನೀಡಿದರು.

ಈ ಸಂದರ್ಭ ಕಂದಾಯ ಅಧಿಕಾರಿ ಚಂದ್ರಪ್ಪ, ಅಮಿತ್, ಎಪಿಎಂಸಿ ಮಾಜಿ ಅಧ್ಯಕ್ಷ ಎಸ್.ಕೆ.ಚಂದ್ರಣ್ಣ, ತಾಪಂ ಮಾಜಿ ಸದಸ್ಯ ಶಂಬಣ್ಣ, ಪ್ರಕಾಶ್, ರೇವಣಸಿದ್ದಯ್ಯ ಹಾಗೂ ಗ್ರಾಮಸ್ಥರು ಹಾಜರಿದ್ದರು.

- - -

-21ಕೆಡಿವಿಜಿ40:

ದಾವಣಗೆರೆಯಲ್ಲಿ ಭಾನುವಾರ ರಾತ್ರಿ ಸುರಿದ ಭಾರಿ ಮಳೆಯಿಂದಾಗಿ ಹಾನಿಗೊಳಗಾದ ಪ್ರದೇಶಗಳಿಗೆ ಶಾಸಕ ಕೆ.ಎಸ್.ಬಸವಂತಪ್ಪ ಅವರು ಅಧಿಕಾರಿಗಳೊಂದಿಗೆ ಭೇಟಿ ನೀಡಿ, ಪರಿಶೀಲನೆ ನಡೆಸಿದರು.