ಸಾರಾಂಶ
ಈ ಸಂದರ್ಭದಲ್ಲಿ ಸಂಘದ ಜಿಲ್ಲಾಧ್ಯಕ್ಷ ಬಿ.ಎಂ. ಮಹೇಶ್ವರ ಸ್ವಾಮಿ, ತಾಲೂಕು ಅಧ್ಯಕ್ಷ ವಿ.ಬಿ. ಕೊಟ್ರೇಶ ಮಾತನಾಡಿ, ಈಗಾಗಲೇ ಸರ್ಕಾರ ತಾಲೂಕನ್ನು ಬರಪೀಡಿತ ಪ್ರದೇಶವೆಂದು ಘೋಷಣೆ ಮಾಡಿದ್ದಾರೆ. ಆದರೆ ಈವರೆಗೂ ಪರಿಹಾರ ಬಿಡುಗಡೆ ಮಾಡಿಲ್ಲ. ಎಲ್ಲ ರೈತರು ಬೆಳೆವಿಮೆ ಮಾಡಿಸಿದ್ದಾರೆ. ಅಲ್ಲಿಯೂ ಪೂರ್ಣಪ್ರಮಾಣದ ಹಣ ನೀಡಿಲ್ಲ. ಕೂಡಲೇ ಸರ್ಕಾರ ಈ ಕುರಿತು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
ಕನ್ನಡಪ್ರಭ ವಾರ್ತೆ ಹೂವಿನಹಡಗಲಿ
ಇಲ್ಲಿನ ಭಾರತೀಯ ಕಿಸಾನ್ ಸಂಘವು ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಲಾಲ್ ಬಹದ್ದೂರ ಶಾಸ್ತ್ರಿ ವೃತ್ತದಲ್ಲಿ ಪ್ರತಿಭಟನೆ ಮಾಡಿ ತಹಸೀಲ್ದಾರ್‌ಗೆ ಮನವಿ ಪತ್ರ ಸಲ್ಲಿಸಿದರು.ಈ ಸಂದರ್ಭದಲ್ಲಿ ಸಂಘದ ಜಿಲ್ಲಾಧ್ಯಕ್ಷ ಬಿ.ಎಂ. ಮಹೇಶ್ವರ ಸ್ವಾಮಿ, ತಾಲೂಕು ಅಧ್ಯಕ್ಷ ವಿ.ಬಿ. ಕೊಟ್ರೇಶ ಮಾತನಾಡಿ, ಈಗಾಗಲೇ ಸರ್ಕಾರ ತಾಲೂಕನ್ನು ಬರಪೀಡಿತ ಪ್ರದೇಶವೆಂದು ಘೋಷಣೆ ಮಾಡಿದ್ದಾರೆ. ಆದರೆ ಈವರೆಗೂ ಪರಿಹಾರ ಬಿಡುಗಡೆ ಮಾಡಿಲ್ಲ. ಎಲ್ಲ ರೈತರು ಬೆಳೆವಿಮೆ ಮಾಡಿಸಿದ್ದಾರೆ. ಅಲ್ಲಿಯೂ ಪೂರ್ಣಪ್ರಮಾಣದ ಹಣ ನೀಡಿಲ್ಲ. ಕೂಡಲೇ ಸರ್ಕಾರ ಈ ಕುರಿತು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
ತಾಲೂಕಿನ ಎಲ್ಲ ರೈತರಿಗೆ ರಾಜ್ಯ ಮತ್ತು ಕೇಂದ್ರ ಸರ್ಕಾರದಿಂದ ಪ್ರತಿ ರೈತರ ಹೆಕ್ಟೇರ್‌ವೊಂದಕ್ಕೆ ₹25 ಸಾವಿರ ಪರಿಹಾರ ನೀಡಬೇಕು. ರಾಷ್ಟ್ರೀಕೃತ ಬ್ಯಾಂಕುಗಳ ಮತ್ತು ಸಹಕಾರ ಸಂಘಗಳ ರೈತರ ಸಾಲವನ್ನು ಸಂಪೂರ್ಣ ಮನ್ನಾ ಮಾಡಬೇಕು ಎಂದು ಒತ್ತಾಯಿಸಿದರು.ಈ ಸಂದರ್ಭದಲ್ಲಿ ಭಾರತೀಯ ಕಿಸಾನ್ ಸಂಘದ ಉತ್ತರ ಪ್ರಾಂತ ಸಂಚಾಲಕ ಪುಟ್ಟಸ್ವಾಮಿ, ಸಂಘಟನೆ ಕಾರ್ಯದರ್ಶಿ ಗಂಗಾಧರ ಕಾಸರಗಟ್ಟಿ, ಮಾಧವ ಹೆಗಡೆ ಮಾತನಾಡಿದರು. ಪ್ರತಿಭಟನೆಯಲ್ಲಿ ಕಾತರಕಿ ಲಕ್ಷ್ಣಣ, ಕೆ. ರಾಮಚಂದ್ರಪ್ಪ, ಎಂ. ವಿಜಯಕುಮಾರ, ಎಚ್. ಕೊಟ್ರಪ್ಪ, ಸಿ. ನಾಗಭೂಷಣ, ಎಸ್.ಎಂ. ವೀರಭದ್ರಯ್ಯ, ಮಹೇಶ, ಹುಲುಗಪ್ಪ ಸೇರಿದಂತೆ ಇತರರು ತಹಸೀಲ್ದಾರ್ ಕೆ. ಶರಣಮ್ಮ ಅವರಿಗೆ ಮನವಿ ಪತ್ರ ಸಲ್ಲಿಸಿದರು.