ಕೊಪ್ಪಳ: ಇತ್ತೀಚಿಗೆ ಬೀಸಿದ ಭಾರಿ ಗಾಳಿ ಮತ್ತು ಮಳೆಯಿಂದ ಹಾನಿಗೊಳಗಾದ ರೈತರ ಪ್ರತಿ ಎಕರೆಗೆ ₹5 ಲಕ್ಷ ಪರಿಹಾರ ನೀಡಬೇಕು ಎಂದು ಜೆಡಿಎಸ್ ಜಿಲ್ಲಾಧ್ಯಕ್ಷ ಸುರೇಶ್ ಭೂಮರಡ್ಡಿ ಜಿಲ್ಲಾಡಳಿತವನ್ನು ಒತ್ತಾಯಿಸಿದ್ದಾರೆ.

ಸೋಮವಾರ ಜೆಡಿಎಸ್ ಮುಖಂಡರ ನಿಯೋಗದೊಂದಿಗೆ ಕೊಪ್ಪಳ ತಾಲೂಕಿನ ಹ್ಯಾಟಿ, ಮೆಳ್ಳಿಕೇರಿ, ಮುದ್ದಾಬಳ್ಳಿ ಭಾಗಗಳ ಹೊಲಗಳಿಗೆ ಭೇಟಿ ನೀಡಿ ಮಳೆಯಿಂದ ಉಂಟಾದ ಹಾನಿ ಪರಿಶೀಲಿಸಿ ಮಾತನಾಡಿದರು.

"ಸುಮಾರು 150 ಎಕರೆ ಪ್ರದೇಶದಲ್ಲಿ ಬಿತ್ತನೆ ಮಾಡಲಾಗಿದ್ದ ಬಾಳೆ, ಕಬ್ಬು, ಎಲೆಬಳ್ಳಿ ಹಾಗೂ ಇತರೆ ಬೆಳೆಗಳು ಸಂಪೂರ್ಣವಾಗಿ ನೆಲ ಕಚ್ಚಿವೆ. ಕೃಷಿ ಚಟುವಟಿಕೆಗಳಿಗಾಗಿ ರೈತರು ಇಡೀ ವರ್ಷ ಲಕ್ಷಾಂತರ ವ್ಯಯಿಸಿದ್ದಾರೆ. ಕಟಾವಿಗೆ ಬಂದಿದ್ದ ಬೆಳೆಗಳು ಹಾಳಾಗಿದ್ದರಿಂದ ರೈತರು ಭಾರಿ ಪ್ರಮಾಣದ ನಷ್ಟ ಅನುಭವಿಸಿದ್ದಾರೆ, " ಎಂದು ಹೇಳಿದರು.

ಕನಿಷ್ಠ ಪಕ್ಷ ಪ್ರತಿ ಎಕರೆಗೆ ₹5 ಲಕ್ಷ ಪರಿಹಾರ ಘೋಷಣೆ ಆಗಬೇಕು. ನಿಯಮಾವಳಿಗಳ ನೆಪದಲ್ಲಿ ಹಣ ಬಿಡುಗಡೆಗೆ ವಿಳಂಬ ಮಾಡಬಾರದು. ಶಾಸಕರು ಹಾಗೂ ಅಧಿಕಾರಿಗಳು ಸಮೀಕ್ಷೆ ನಡೆಸಿ ವರದಿ ಸಿದ್ಧ ಪಡಿಸಿದ್ದಾರೆ. ಆದಷ್ಟು ಶೀಘ್ರದಲ್ಲಿ ಪರಿಹಾರ ನಿಧಿ ನೇರವಾಗಿ ರೈತರ ಬ್ಯಾಂಕ್ ಖಾತೆಗಳಿಗೆ ತಲುಪಬೇಕು. ಅತಿರೇಕದ ಘಟನೆಗಳು ಸಂಭವಿಸುವ ಮೊದಲೇ ಜಿಲ್ಲಾಡಳಿತ ಎಚ್ಚೆತ್ತುಕೊಳ್ಳಬೇಕು ಎಂದು ಮುಖಂಡರು ಒತ್ತಾಯಿಸಿದರು.

ನಿಯೋಗ ಹ್ಯಾಟಿ ಗ್ರಾಮದ ರೈತರಾದ ಈಶಪ್ಪ ಎಡ್ರಮನಹಳ್ಳಿ, ವೆಂಕಣ್ಣ ಡಂಬಳ್ಳಿ, ಕೊಟ್ರೇಶ ಸಣ್ಣ ಮುದಿಯಪ್ಪನವರ್, ವೆಂಕಣ್ಣ ಸಣ್ಣ ಮದಿಯಪ್ಪನವರ್, ಮಲ್ಲಯ್ಯ ಗಣಚಾರಿ, ಬಸಣ್ಣ ಸಿಗ್ನಳ್ಳಿ, ಸಂತೋಷ ಸಿಗ್ನಳ್ಳಿ ಅವರ ಜಮೀನುಗಳಿಗೆ ಭೇಟಿ ಕೊಟ್ಟು ರೈತರೊಂದಿಗೆ ಮಾತುಕತೆ ನಡೆಸಿತು.


ನಿಯೋಗದಲ್ಲಿ ತಾಲೂಕು ಜೆಡಿಎಸ್ ಪ್ರಧಾನ ಕಾರ್ಯದರ್ಶಿ ಶಿವಕುಮಾರ ಏಣಿಗಿ, ಕೊಪ್ಪಳ ತಾಲೂಕು ಜೆಡಿಎಸ್ ಎಸ್‌ಸಿ ಘಟಕದ ತಾಲೂಕು ಅಧ್ಯಕ್ಷ ಸುರೇಶ ಪುಜಾರಿ, ಕೊಪ್ಪಳ ಜಿಲ್ಲಾ ಕೈಗಾರಿಕಾ ಅಧ್ಯಕ್ಷ ಮಾರುತಿಗೌಡ ಪೊಲೀಸ್ ಪಾಟೀಲ್, ನಗರ ಘಟಕ ಅಧ್ಯಕ್ಷ ಸೋಮನಗೌಡ ಹೊಗಾರನಾಳ, ಜೆಡಿಎಸ್ ಜಿಲ್ಲಾ ಯುವ ಘಟಕದ ಅಧ್ಯಕ್ಷ ರವಿ ಮೇದಾರ, ಜಿಲ್ಲಾ ಮುಖಂಡರಾದ ಪ್ರಕಾಶರೆಡ್ಡಿ ಬಸರಗಿಡದ, ಮಂಜುನಾಥ ರೋಡ್ಡರ ಹಾಗೂ ಇತರರು ಉಪಸ್ಥಿತರಿದ್ದರು.