ಸಾರಾಂಶ
ಕನ್ನಡಪ್ರಭ ವಾರ್ತೆ ಕಲಬುರಗಿ
ಮಹಾರಾಷ್ಟ್ರದ ಉಜನಿ ಮತ್ತು ವೀರ್ ಜಲಾಶಯದಿಂದ ಭೀಮಾ ನದಿಗೆ 1 ಲಕ್ಷಕ್ಕೂ ಹೆಚ್ಚಿನ ಕ್ಯುಸೆಕ್ ನೀರು ಹರಿದು ಬರುತ್ತಿರುವುದರಿಂದ ಬುಧವಾರ ಉಕ್ಕೇರಿರುವ ಭೀಮಾನದಿಯ ನೀರು ಮಣ್ಣೂರ, ಕುಡಿಗನೂರ್, ಶಿವೂರ್, ಉಡಚಾಣ ಸೇರಿದಂತೆ ಹತ್ತಾರು ಗ್ರಾಮಗಳ ನದಿ ತೀರದಲ್ಲಿರುವ 200 ಎಕರೆಗೂ ಹೆಚ್ಚಿನ ಕಬ್ಬು, ಬಾಳೆ, ತೊಗರಿ ಗದ್ದೆಗಳಿಗೆ ನುಗ್ಗಿದೆ.ಕಳೆದ 2 ದಿನದಿಂದ ಉಜನಿ, ವೀರ ಭಟ್ಕರ್ ಜಲಾಶಯದಿಂದ 1. 25 ಲಕ್ಷ ಕ್ಯುಸೆಕ್ ನೀರು ಹರಿದು ಬರುತ್ತಿದೆ. ಬುಧವಾರ ಈ ಪ್ರಮಾಣ ತುಸು ತಗ್ಗಿದೆಯಾದರೂ ಮುಂಚೆ ಹರಿಬಿಟ್ಟಂತಹ ನೀರೇ ಹೆಚ್ಚಿನ ಪ್ರಮಾಣದಲ್ಲಿ ಬೆಳೆಗಳಿಗೆ ನುಗ್ಗಿ ಅಪಾರ ಹಾನಿ ಉಂಟು ಮಾಡಿದೆ. ರೈತರು ಬೆಳೆ ನಾಶವಾಗಿ ಗೋಳಾಡುತ್ತಿದ್ದಾರೆ.
ಬಾಬಾನಗರ, ರಾಮನಗರ, ಮಣ್ಣೂರ, ಉಡಚಾಣ ಸೇರಿದಂತೆ ಅನೇಕ ಗ್ರಾಮಗಳಲ್ಲಿ ಬೆಳೆದೆ ನಿಂತಿರುವ ತೊಗರಿ, ಕಬ್ಬಿನ, ಫಸಲು ನದಿ ತೀರದಲ್ಲಿ ಜಲಾವೃತವಾಗಿದೆ.ಉಜನಿ ಜಲಾಶಯದಿಂದ ಬುಧವಾರವೂ 1.11 ಲಕ್ಷ ಕ್ಯುಸೆಕ್ ನೀರು ಹರಿಬಿಟ್ಟಿರುವ ಮಾಹಿತಿ ಇದೆ. ಇತ್ತ ಸೊನ್ನ ಬಾಂದಾರಿನಿಂದ ನದಿಗೆ 50 ಸಾವಿರ ಕ್ಯುಸೆಕ್ ನೀರನ್ನು ಹೊರಗೆ ಹರಿಬಿಡಲಾಗುತ್ತಿದೆ.ಭೀಮಾ ನದಿ ತೀರದಲ್ಲಿ ಸುತ್ತಾಡಿದ ಜಿಲ್ಲಾಕಾರಿ ಫೌಜಿಯಾ:
ಮಹಾಮಳೆಯಿಂದಾಗಿ ಅಪಾರ ನೀರು ಹರಿದು ಬರುತ್ತಿರುವ ಹಾಗೂ ಪ್ರವಾಹದ ಸ್ಥಿತಿ ತಲುಪಿರುವ ಭೀಮಾ ನದಿ ತೀರದ ಊರುಗಳಿಗೆ ಜಿಲ್ಲಾಧಿಕಾರಿ ಫೌಜಿಯಾ ತರನ್ನುಮ್ ಭೇಟಿ ನೀಡಿ, ಪರಿಶೀಲನೆ ನಡೆಸಿದರು.ಹಾಗರಗುಂಡಗಿ-ಕೂಡಿ ಗ್ರಾಮಗಳ ನಡುವೆ ಗ್ರಾಮಸ್ಥರು ಬೋಟ್ (ಜಲ ಮಾರ್ಗ) ಬಳಸುವ ಕಾರಣ ಡಿಸಿ ಅಧಿಕಾರಿಗಳ ಜೊತೆ ಲೈಫ್ ಜಾಕೆಟ್ ಹಾಕಿಕೊಂಡು ಬೋಟಿನಲ್ಲಿ ಕುಳಿತು ನದಿಗೆ ಒಂದು ಸುತ್ತು ಹಾಕಿ ಬೋಟ್ ಕಾರ್ಯಕ್ಷಮತೆ ಅರಿತರು. ಪ್ರವಾಹ ಭೀತಿ ಹಿನ್ನೆಲೆಯಲ್ಲಿ ನದಿ ದಂಡೆಯಲ್ಲಿ ಹಾಕಲಾಗಿರುವ ಪಂಪಸೆಟ್ ತೆಗೆದುಕೊಳ್ಳುವಂತೆ ರೈತರಿಗೆ ತಿಳಿಸಬೇಕೆಂದು ಪಿಡಿಒಗೆ ಸೂಚನೆ ನೀಡಿದರು.
ಪ್ರವಾಹ ಪೀಡಿತ ಗ್ರಾಮಗಳ ನೋಡಲ್ ಅಧಿಕಾರಿಯಾಗಿರುವ ಎಸ್‌ಎಲ್‌ಒ ಭೂಸ್ವಾಧೀನಾಧಿಕಾರಿ ರಾಮಚಂದ್ರ ಗಡಾದೆ, ಕಲಬುರಗಿ ಗ್ರೇಡ್-1 ತಹಸೀಲ್ದಾರ್ ಕೆ.ಆನಂದಶೀಲ, ಸಹಾಯಕ ಕೃಷಿ ನಿರ್ದೇಶಕ ಚಂದ್ರಕಾಂತ ಜೀವಣಗಿ ಸೇರಿದಂತೆ ಕೆಎನ್‌ಎನ್‌ಎಲ್, ಸಣ್ಣ ನೀರಾವರಿ, ಜೆಸ್ಕಾಂ ಅಧಿಕಾರಿಗಳು ಉಪಸ್ಥಿತರಿದ್ದರು.ಕಲಬುರಗಿ-ವಿಜಯಪುರ ಡಿಸಿಗಳಿಂದ ಸೊನ್ನ ಬ್ಯಾರೇಜ್ ವೀಕ್ಷಣೆ:
ಭೀಮಾ ನದಿಗೆ ಅಪಾರ ಪ್ರಮಾಣದಲ್ಲಿ ನೀರು ಬರುತ್ತಿರುವ ಕಾರಣ ಅಫಜಲಪೂರ ತಾಲೂಕಿನ ಸೊನ್ನ ಬ್ಯಾರೇಜಿಗೆ ಕಲಬುರಗಿ ಡಿ.ಸಿ. ಬಿ.ಫೌಜಿಯಾ ತರನ್ನುಮ್ ಮತ್ತು ಪಕ್ಕದ ವಿಜಯಪುರ ಡಿ.ಸಿ. ಟಿ. ಭೂಬಾಲನ್ ಅವರು ಭೇಟಿ ನೀಡಿ ಪ್ರವಾಹ ಪರಿಸ್ಥಿತಿ ನಿರ್ವಹಣೆ ಕುರಿತು ಚರ್ಚಿಸಿದರು.ಮಹಾರಾಷ್ಟ್ರದಿಂದ ಇಂಡಿಯ ಚಡಚಣ್ ಮಾರ್ಗವಾಗಿ ಜಿಲ್ಲೆಯ ಮಣ್ಣೂರ ಗ್ರಾಮದ ಮೂಲಕ ಭೀಮಾ ನದಿಗೆ ನೀರು ಸೇರುವುದರಿಂದ ಉಭಯ ಜಿಲ್ಲೆಗಳ ಅಧಿಕಾರಿಗಳು ಪರಸ್ಪರ ಸಮನ್ವಯತೆಯಿಂದ ಕಾರ್ಯನಿರ್ವಹಿಸುವಂತೆ ತಮ್ಮ ಕೆಳ ಹಂತದ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ಜಿಪಂ ಸಿಇಒ ಭಂವರ್ ಸಿಂಗ್ ಮೀನಾ, ಇಂಡಿ ಸಹಾಯಕ ಆಯುಕ್ತ ಅಬೀದ್ ಗದ್ಯಾಳ, ಅಫಜಲಪೂರ ತಹಸೀಲ್ದಾರ್ ಸಂಜೀವಕುಮಾರ ದಾಸರ್, ಇಂಡಿ ತಹಸೀಲ್ದಾರ್ ಸುರೇಶ ಚೌಲಾರ ಜಂಟಿ ಕೃಷಿ ನಿರ್ದೇಶಕ ಸಮದ್ ಪಟೇಲ್ ಸೇರಿದಂತೆ ಮೊದಲಾದ ಅಧಿಕಾರಿಗಳು ಇದ್ದರು.
ಇದಕ್ಕೂ ಮುನ್ನ ಜಿಲ್ಲಾಧಿಕಾರಿ ಗಾಣಗಾಪೂರ ಸೇತುವೆಗೆ ಭೇಟಿ ನೀಡಿ, ಸ್ಥಳೀಯರೊಂದಿಗೆ ಸಂವಾದ ನಡೆಸಿದರು. ಪ್ರವಾಹ ಭೀತಿ ಹಿನ್ನೆಲೆಯಲ್ಲಿ ಗ್ರಾಮಸ್ಥರು ಯಾವುದೇ ಕಾರಣಕ್ಕೂ ನದಿ ದಂಡೆಗೆ ಹೋಗಬಾರದು ಎಂದು ತಿಳಿಸಿದರು.