ಸಾರಾಂಶ
ಬ್ಯಾಡಗಿ: ಗೋವಿನಜೋಳದ ತೆನೆ ಸೇರಿದಂತೆ ವಿವಿಧ ಬೆಳೆಗಳು ಹಸಿಯಿದ್ದಾಗ ಹಾಗೂ ಮಳೆ ಸುರಿದ ವೇಳೆ ಬೆಳೆ ಅಣೆವಾರಿ ಮಾಡಲಾಗುತ್ತಿದೆ. ವಿಮೆ ಕಂಪನಿಯಿದ ರೈತ ಸಮುದಾಯಕ್ಕೆ ಅನ್ಯಾಯವಾಗುತ್ತಿದೆ ಎಂದು ರೈತ ಸಂಘದ ರಾಜ್ಯ ಸಮಿತಿ ಸದಸ್ಯ ಶಶಿಧರಸ್ವಾಮಿ ಛತ್ರದಮಠ ಆರೋಪಿಸಿದರು.
ತಾಲೂಕಿನ ಕದರಮಂಡಲಗಿ ಸೇರಿದಂತೆ ವಿವಿಧ ಗ್ರಾಮದಲ್ಲಿ ಅಗ್ರಿಕಲ್ಚರ್ ಇನ್ಸೂರನ್ಸ್ ಕಂಪನಿಯ ಪ್ರತಿನಿಧಿಗಳು ಆಗಮಿಸಿ ಗೋವಿನಜೋಳದ ಹಸಿ ತೆನೆಗಳನ್ನು ಸಂಗ್ರಹಿಸಿ ತೂಕ (ಅಣೆವಾರಿ) ಮಾಡುತ್ತ ರೈತರ ಕಣ್ಣೆದುರಿಗೆ ಮೋಸವೆಸಗುತ್ತಿದ್ದಾರೆ. ಮಳೆ ಬಂದು ತೆನೆಗಳು ನೀರು ಹಿಡಿದಾಗ ತೂಕ ಹೆಚ್ಚು ಬರುತ್ತಿದ್ದು, ಆ ವೇಳೆ ವಿಮೆ ಕಂಪನಿ ಪ್ರತಿನಿಧಿಗಳು ದಾಖಲೆ ಸೃಷ್ಟಿಸಿ ಕಂಪನಿಗೆ ಲಾಭವಾಗುವಂತೆ ಕೆಲಸ ನಿರ್ವಹಿಸುತ್ತಿದ್ದಾರೆ. ಆದರೆ ಗ್ರಾಮ ಪಂಚಾಯಿತಿ ಪಿಡಿಓ, ಗ್ರಾಮ ಸಹಾಯಕ, ಗ್ರಾಮ ಆಡಳಿತಾಧಿಕಾರಿಗಳ ಮಾತಿಗೆ ಬೆಲೆಯಿಲ್ಲದಂತಾಗಿದೆ. ನೈಜವಾಗಿ ಬೆಳೆ ಹಾನಿಯಾಗಿದ್ದರೂ ವಿಮೆ ಕಂಪನಿ ಕುತಂತ್ರಗಳಿಂದ ಅನ್ಯಾಯ ಅನುಭವಿಸಬೇಕಿದ್ದು, ರೈತ ಸಂಘದ ವತಿಯಿಂದ ರಾಜ್ಯಾದ್ಯಂತ ವಿಮೆ ನೀತಿಯನ್ನು ಖಂಡಿಸುತ್ತೇವೆ ಎಂದರು.ರೈತರಿಂದ ವಿರೋಧ: ಕದರಮಂಡಲಗಿ ಗ್ರಾಮಕ್ಕೆ ಆಗಮಿಸಿದ್ದ ವಿಮೆ ಕಂಪನಿ ಪ್ರತಿನಿಧಿಗಳಿಗೆ ಸ್ಥಳೀಯ ರೈತ ಸಮುದಾಯ ಯಾವುದೇ ಕಾರಣಕ್ಕೂ ವಿಮೆ ಕಂಪನಿ ಅವೈಜ್ಞಾನಿಕ ಅಣೆವಾರಿ ದಾಖಲಾತಿ ಬೇಡ, ನೀರಾವರಿ ಬೆಳೆದ ರೈತನ ಹೊಲವನ್ನು ಮಳೆಯಾಶ್ರಿತವೆಂದು ತಂತ್ರಾಂಶದಲ್ಲಿ ದಾಖಲಿಸಿಕೊಂಡಿದ್ದು ಹೊಲದಲ್ಲಿರುವ ಬೆಳೆಗಿಂತ ಬೇರೆ ಬೆಳೆಗಳನ್ನು ತಂತ್ರಾಂಶ ತೋ ರಿಸುತ್ತಿದೆ ಎಂದು ಆರೋಪಿಸಿದ ಅವರು, ವಿಮೆಕಂಪನಿ ಪ್ರತಿನಿಧಿಗಳಿಗೆ ನಿಮ್ಮ ವ್ಯವಸ್ಥಾಪಕರನ್ನು ಜಿಲ್ಲಾ ಮಟ್ಟದಲ್ಲಿ ಸಭೆ ನಡೆಸಿ, ರೈತ ಸಂಘದ ಪದಾಧಿಕಾರಿಗಳಿಗೆ ಹಾಗೂ ಸಂಬಂಧಿಸಿದ ಅಧಿಕಾರಿಗಳಿಗೆ ಮಾಹಿತಿ ಕೊಟ್ಟ ಬಳಿಕ ಕೆಲಸ ನಿರ್ವಹಿಸಿ ಎಂದು ಸೂಚಿಸಿದರು.
ರೈತ ಮುಖಂಡ ಮೌನೇಶ ಕಮ್ಮಾರ ಮಾತನಾಡಿ, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ರೈತಪರ ನೀತಿಯನ್ನು ಅನುಸರಿ ಸುತ್ತಿಲ್ಲ, 2022-23 ರಲ್ಲಿ ಹಾವೇರಿ ಜಿಲ್ಲೆ ರೈತರಿಂದ ಒಟ್ಟು 27.60 ಕೋ.ರು. ವಿಮೆ ಕಂತು ತುಂಬಿಸಿಕೊಂಡಿದೆ, ರಾಜ್ಯದ 114 ಕೋ.ರು. ಕೇಂದ್ರದ 114 ಕೋ.ರು. ಸೇರಿದಂತೆ ರೈತರ ಹಣ ಸೇರಿ ವಿಮೆ ಕಂಪನಿಗೆ 255 ಕೋ.ರು. ಜಮೆಯಾಗಿದೆ, ಇದರಲ್ಲಿ 131 ಕೋ.ರು. ಮಾತ್ರ ಶೇ. 25ರಷ್ಟು ಮಧ್ಯಂತರ ಪರಿಹಾರ ವಿತರಿಸಲಾಗಿದೆ. ತುಂಬಿದ ಹಣದಲ್ಲಿ ವಿಮಾ ಕಂಪನಿ 124 ಕೋ.ರು. ಉಳಿಸಿಕೊಂಡಿದ್ದು, ಇದನ್ನು ಪ್ರಶ್ನಿಸಲು ರೈತರು ನ್ಯಾಯಾಲಯಕ್ಕೆ ತೆರಳಬೇಕೆ? ಎಂದು ಪ್ರಶ್ನಿಸಿದರು. ಈ ವೇಳೆ ಮಂಜುನಾಥ ನಂದಿಹಳ್ಳಿ, ರಾಜುಗೌಡ್ರ ಪಾಟೀಲ, ಕರಬಸಪ್ಪ ನಂದಿಹಳ್ಳಿ, ಬಿ.ರಾಮಜಿ, ಶ್ರೀ ಶೈಲ ಸಣ್ಣಪ್ಪನವರ ಇತರರಿದ್ದರು.ಸರ್ಕಾರ ರೈತಪರ ನಿಲುವು ತಾಳಲಿ: ಪ್ರಸಕ್ತ ಸಾಲಿನಲ್ಲಿ ಗ್ರಾಮ ಪಂಚಾಯಿತಿಯಲ್ಲಿ ಅಳವಡಿಸಿದ್ದ ಮಳೆಮಾಪನ ಕೇಂದ್ರಗಳನ್ನು ಸ್ಥಗಿತಗೊಳಿಸಿ ನೂರಾರು ಕೀ.ಮೀ. ವ್ಯಾಪ್ತಿಯಲ್ಲಿರುವ ಸೆಟ್‌ಲೈಟ್ ಮೂಲಕ ಮಳೆ ಪ್ರಮಾಣ ಗುರ್ತಿಸುತ್ತಿದ್ದು, ಇದರಿಂದ ನೈತಿಕ ನ್ಯಾಯ ಸಿಗಲು ಸಾದ್ಯವಿಲ್ಲ, ರೈತರಿಗೆ ಟೆಕ್ನಾಲಜಿ ಮೋಸ ಮಾಡುವ ಹೊಸನಾಟಕ ವಿಮೆ ಕಂಪನಿಗಳು ಶುರು ಮಾಡಿದ್ದು, ಇದನ್ನು ರೈತಸಂಘ ಪುನರ್ ಪರಿಶೀಲಿಸಿ ಹೋರಾಟ ನಡೆಸಲಿದ್ದು ಆಡಳಿತಾರೂಢ ಸರ್ಕಾರಗಳು ರೈತಪರ ನಿಲುವು ತಾಳಬೇಕು.