ಬೆಳೆವಿಮೆ ಹಗರಣ: ಅಧಿಕಾರಿಗಳ ಮೇಲೆ ಕ್ರಮಕ್ಕೆ ಒತ್ತಾಯ

| Published : Jun 12 2024, 12:34 AM IST

ಸಾರಾಂಶ

ದೇವದುರ್ಗ ಪಟ್ಟಣದ ಮಿನಿವಿಧಾನಸೌಧದ ಆವರಣದಲ್ಲಿ ಕರ್ನಾಟಕ ಪ್ರಾಂತ ರೈತ ಸಂಘ ಮುಖಂಡರು ಪ್ರತಿಭಟನೆ ನಡೆಸಿದರು.

ದೇವದುರ್ಗ: ಫಸಲ್‌ ಬಿಮಾ ಯೋಜನೆಯಲ್ಲಿ ಜಾಲಹಳ್ಳಿ ಮತ್ತು ಗಾಣದಾಳ ಗ್ರಾಪಂ ವ್ಯಾಪ್ತಿಯಲ್ಲಿ ಅಮಾಯಕ ರೈತರಿಗೆ ಮೋಸವಾಗಿದ್ದು, ವಿಮೆ ಕಂಪನಿ ಅಧಿಕಾರಿಗಳು ಶಾಮೀಲಾಗಿದ್ದು, ಈಗಾಗಲೇ ಜಾಲಹಳ್ಳಿ ಪೊಲೀಸ್ ಠಾಣೆಯಲ್ಲಿ ದಾಖಲಾದ ಪ್ರಕರಣದಲ್ಲಿ ಸೇರ್ಪಡೆಗೊಳಿಸಬೇಕೆಂದು ಕರ್ನಾಟಕ ಪ್ರಾಂತ ರೈತ ಸಂಘ ಒತ್ತಾಯಿಸಿದೆ.

ಪಟ್ಟಣದ ಮಿನಿವಿಧಾನಸೌಧದಲ್ಲಿ ಗ್ರೇಡ್-2 ತಹಸೀಲ್ದಾರ್‌ ವೆಂಕಟೇಶ ಕುಲಕರ್ಣಿ ಹಾಗೂ ಕೃಷಿ ಸಹಾಯಕ ನಿರ್ದೇಶಕ ಶ್ರೀನಿವಾಸನಾಯಕರಿಗೆ ಸಂಘಟನೆ ಪದಾಧಿಕಾರಿಗಳು ಮನವಿ ಸಲ್ಲಿಸಿ, ಪ್ರತಿಭಟನಾ ಧರಣಿ ಸಭೆ ಉದ್ದೇಶಿಸಿ ಸಂಘಟನೆ ಕಾರ್ಯದರ್ಶಿ ಮೌನೇಶ ದಾಸರ್ ಮಾತನಾಡಿ, ವಿಮೆ ಭ್ರಷ್ಟಾಚಾರ ಕುರಿತು ಈಗಾಗಲೇ ಜಾಲಹಳ್ಳಿ ಪೊಲೀಸ್ ಠಾಣೆಯಲ್ಲಿ 36 ಜನರ ಮೇಲೆ ಪ್ರಕರಣ ದಾಖಲಾಗಿದೆ. ಆದರೆ ಈ ಹಗರಣದಲ್ಲಿ ಕೃಷಿ ಇಲಾಖೆ ಅಧಿಕಾರಿಗಳು, ಬೆಳೆ ವಿಮೆ ಕಂಪನಿ ಅಧಿಕಾರಿಗಳು ಹಾಗೂ ಮಧ್ಯವರ್ತಿಗಳ ಕೈವಾಡ ಇರುವ ಶಂಕೆ ಇದೆ. ಕಾರಣ ಇಡೀ ಹಗರಣ ಉನ್ನತ ಮಟ್ಟದ ತನಿಖೆಗ ಒಳಪಡಿಸಿ ಸೂಕ್ತ ಕ್ರಮಕೈಗೊಳ್ಳಬೇಕೆಂದು ಒತ್ತಾಯಿಸಿದರು. ಕಾರ್ಯಕ್ರಮ ಉದ್ದೇಶಿಸಿ ಸಿಐಟಿಯು ಮುಖಂಡರಾದ ಗಿರಿಯಪ್ಪ ಪೂಜಾರಿ, ಶಬ್ಬೀರ ಜಾಲಹಳ್ಳಿ ಮಾತನಾಡಿದರು.

ಈ ವೇಳೆ ಸಂಘಟನೆ ಪದಾಧಿಕಾರಿಗಳಾದ ಹನುಮಂತ ಗುರಿಕಾರ, ದುರಗಪ್ಪ, ಬಸವರಾಜ ವಂದಲಿ, ಹನುಮಂತ ಮಂಡಲಗುಡ್ಡ, ಮುಕ್ಕಣ್ಣ, ಹನುಮಂತ ಕುರುಬರು ಹಾಗೂ ಇತರರು ಪಾಲ್ಗೊಂಡಿದ್ದರು.