ಬೆಳೆ ನೀರುಪಾಲು, ರೈತರ ಕನಸು ನುಚ್ಚುನೂರು

| Published : Aug 03 2024, 12:32 AM IST

ಸಾರಾಂಶ

ಮಹಾರಾಷ್ಟ್ರದ ಪಶ್ಚಿಮಘಟ್ಟ ಪ್ರದೇಶ ಮತ್ತು ಜಿಲ್ಲೆಯಲ್ಲಿ ಸುರಿದ ಧಾರಾಕಾರ ಮಳೆಗೆ ಅಪಾರ ಪ್ರಮಾಣದ ಕೃಷಿ ಮತ್ತು ತೋಟಗಾರಿಕೆ ಬೆಳೆ ನೀರು ಪಾಲಾಗಿ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ.

ಶ್ರೀಶೈಲ ಮಠದ

ಕನ್ನಡಪ್ರಭ ವಾರ್ತೆ ಬೆಳಗಾವಿ

ಮಹಾರಾಷ್ಟ್ರದ ಪಶ್ಚಿಮ ಘಟ್ಟ ಪ್ರದೇಶ ಮತ್ತು ಜಿಲ್ಲೆಯಲ್ಲಿ ಸುರಿದ ಧಾರಾಕಾರ ಮಳೆಗೆ ಅಪಾರ ಪ್ರಮಾಣದ ಕೃಷಿ ಮತ್ತು ತೋಟಗಾರಿಕೆ ಬೆಳೆ ನೀರು ಪಾಲಾಗಿದೆ. ಹೀಗಾಗಿ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಜಿಲ್ಲೆಯಲ್ಲಿ ಸುಮಾರು 26,674 ಹೆಕ್ಟೇರ್‌ ಪ್ರದೇಶದಲ್ಲಿನ ಬೆಳೆ ನೀರು ಪಾಲಾಗಿದೆ. ಮಹಾರಾಷ್ಟ್ರ ಮತ್ತು ರಾಜ್ಯದ ಪಶ್ಚಿಮ ಘಟ್ಟ ಪ್ರದೇಶದಲ್ಲಿ ಮಳೆ ಆರ್ಭಟಕ್ಕೆ ಕೃಷ್ಣಾ, ವೇದಗಂಗಾ, ದೂಧಗಂಗಾ, ಮಲಪ್ರಭಾ, ಘಟಪ್ರಭಾ, ಮಾರ್ಕಂಡೇಯ, ಹಿರಣ್ಯಕೇಶಿ ನದಿಗಳು ಸೇರಿದಂತೆ ಹಳ್ಳ-ಕೊಳ್ಳಗಳು ಉಕ್ಕಿ ಹರಿಯುತ್ತಿವೆ. ನದಿಗಳು ಅಪಾಯಮಟ್ಟ ಮೀರಿ ಹರಿಯುತ್ತಿವೆ. ನದಿ ತೀರದ ಹೊಲಗದ್ದೆಗಳಿಗೂ ನೀರು ನುಗ್ಗಿದೆ. ಕೃಷಿ ಮತ್ತು ತೋಟಗಾರಿಕೆ ಬೆಳೆಗಳು ಜಲಾವೃತಗೊಂಡಿವೆ. ಸಾಲ ಮಾಡಿ ಬೆಳೆದಿದ್ದ ಬೆಳೆ ನೀರುಪಾಲಾಗಿರುವುದರಿಂದ ರೈತರು ಮತ್ತೆ ಸಂಕಷ್ಟ ಎದುರಿಸುವಂತಾಗಿದೆ. ಸಂಕಷ್ಟದಲ್ಲಿ ಸಿಲುಕಿರುವ ರೈತರ ನೆರವಿಗೆ ಸರ್ಕಾರ ಮುಂದಾಗಬೇಕಿದೆ.

ಸಪ್ತ ನದಿಗಳ ಆರ್ಭಟಕ್ಕೆ ನದಿತೀರದಲ್ಲಿನ ಹೊಲಗದ್ದೆಗಳಲ್ಲಿನ ಬೆಳೆಗಳು ಕೊಚ್ಚಿಕೊಂಡು ಹೋಗಿವೆ. ಇದರಿಂದಾಗಿ ರೈತರ ಸ್ಥಿತಿ ಚಿಂತಾಜನಕವಾಗಿದೆ. ಅದರಲ್ಲಿಯೂ ಕಬ್ಬಿನ ಬೆಳೆಗೆ ಭಾರೀ ಹೊಡೆತ ಬಿದ್ದಿದೆ. ಮುಂಗಾರು ಕಬ್ಬಿನ ಬೆಳೆ ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದು, ರೈತರು ಕಂಗಾಲಾಗಿದ್ದಾರೆ. ಅತಿವೃಷ್ಟಿಯಿಂದಾಗಿ 23772 ಹೆಕ್ಟೇರ್‌ ಪ್ರದೇಶದಲ್ಲಿ ಬೆಳೆದಿದ್ದ ಕಬ್ಬಿನ ಬೆಳೆ ನೀರಿಗೆ ಆಹುತಿಯಾಗಿದೆ. ಅದಲ್ಲದೆ, ತೊಗರಿ, ಹೈ ಬ್ರೀಡ್‌ ಜೋಳ, ಉದ್ದಿನ ಬೆಳೆಗೂ ಭಾರೀ ಹೊಡೆತ ಬಿದ್ದಿದೆ.

ಹಾನಿಗೀಡಾದ ಬೆಳೆ:

ಬತ್ತ-562 ಹೆಕ್ಟೇರ್‌ , ಜೋಳ-40 ಹೆಕ್ಟೇರ್‌ , ಹೆಸರು-70 ಹೆಕ್ಟೇರ್‌, ಉದ್ದು- 306 ಹೆಕ್ಟೇರ್‌, ಗೋವಿನಜೋಳ-1176 ಹೆಕ್ಟೇರ್‌, ಸೋಯಾಬೀನ್‌-673 ಹೆಕ್ಟೇರ್‌, ಹತ್ತಿ-75 ಹೆಕ್ಟೇರ್‌ ಸೇರಿದಂತೆ ಜಿಲ್ಲೆಯಲ್ಲಿ ಒಟ್ಟು 26674 ಹೆಕ್ಟೇರ್ ಪ್ರದೇಶದಲ್ಲಿನ ಕೃಷಿ ಬೆಳೆ ಹಾನಿಗೀಡಾಗಿದೆ.

ಅತಿವೃಷ್ಟಿಗೆ ಜಿಲ್ಲೆಯಲ್ಲಿ 80 ಹೆಕ್ಟೇರ್‌ ಪ್ರದೇಶದಲ್ಲಿನ ತೋಟಗಾರಿಕೆ ಬೆಳೆಗಳು ಕೂಡ ನೀರುಪಾಲಾಗಿವೆ.

ಸವದತ್ತಿ ತಾಲೂಕಿನಲ್ಲಿ 5 ಹೆಕ್ಟೇರ್‌ ಪ್ರದೇಶದಲ್ಲಿನ ಪಪ್ಪಾಯಿ, ಸವದತ್ತಿಯಲ್ಲಿ 2.79 ಹೆಕ್ಟೇರ್‌, ಯರಗಟ್ಟಿಯಲ್ಲಿ 2.05 ಹೆಕ್ಟೇರ್‌, ಚಿಕ್ಕೋಡಿಯಲ್ಲಿ 0.80 ಹೆಕ್ಟೇರ್‌ ಮತ್ತು ಬೆಳಗಾವಿಯಲ್ಲಿ 0.30 ಹೀಗೆ ಒಟ್ಟು 5.94 ಹೆಕ್ಟೇರ್‌ ಪ್ರದೇಶದಲ್ಲಿನ ಬಾಳೆ ಬೆಳೆ ಅತಿವೃಷ್ಟಿಗೆ ಬಲಿಯಾಗಿದೆ. ಬೆಳಗಾವಿ ತಾಲೂಕಿನಲ್ಲಿ 8 ಹೆಕ್ಟೇರ್‌ ಪ್ರದೇಶದಲ್ಲಿನ ಮೆಣಸಿನಕಾಯಿ ಬೆಳೆ ನೀರುಪಾಲಾಗಿದೆ. 9.90 ಹೆಕ್ಟೇರ್‌ ಪ್ರದೇಶದಲ್ಲಿನ ಟೊಮೆಟೋ, 6 ಹೆಕ್ಟೇರ್‌ ಪ್ರದೇಶದಲ್ಲಿನ ಆಲೂಗಡ್ಡೆ, 2.15 ಹೆಕ್ಟೇರ್‌ ಪ್ರದೇಶದಲ್ಲಿನ ಬದನೆಕಾಯಿ ಬೆಳೆ, 26.20 ಹೆಕ್ಟೇರ್‌ ಪ್ರದೇಶದಲ್ಲಿನ ಇತರೆ ತರಕಾರಿ ಬೆಳೆ ಹಾನಿಗೀಡಾಗಿದೆ. 3.88 ಹೆಕ್ಟೇರ್‌ ಪ್ರದೇಶದಲ್ಲಿನ ಹೂವಿನ ಬೆಳೆಯೂ ಕೂಡ ನೀರಿನಲ್ಲಿ ಕೊಚ್ಚಿ ಹೋಗಿದೆ.ಅತಿವೃಷ್ಟಿಯಿಂದಾಗಿ ಬೆಳಗಾವಿ ಜಿಲ್ಲೆಯಲ್ಲಿ ಸುಮಾರು 26674 ಹೆಕ್ಟೇರ್‌ ಪ್ರದೇಶದಲ್ಲಿನ ಕೃಷಿ ಬೆಳೆ ಮತ್ತು 80 ಹೆಕ್ಟೇರ್‌ ಪ್ರದೇಶದಲ್ಲಿನ ತೋಟಗಾರಿಕೆ ಬೆಳೆ ಹಾನಿಯಾಗಿದೆ. ಬೆಳೆಹಾನಿ ಕುರಿತು ಸಮೀಕ್ಷೆ ನಡೆಸಲಾಗುತ್ತಿದೆ.

-ಮೊಹಮ್ಮದ ರೋಷನ್‌, ಜಿಲ್ಲಾಧಿಕಾರಿಅತಿವೃಷ್ಟಿಯಿಂದಾಗಿ ಬೆಳಗಾವಿ ಜಿಲ್ಲೆಯಲ್ಲಿ ಅಪಾರ ಪ್ರಮಾಣದ ಬೆಳೆ ಹಾನಿಗೀಡಾಗಿದ್ದು, ಇದರಿಂದಾಗಿ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಕೂಡಲೇ ಸರ್ಕಾರ ರೈತರ ನೆರವಿಗೆ ಮುಂದಾಗಬೇಕು. ರೈತರ ಕೃಷಿ ಸಾಲವನ್ನು ಮನ್ನಾ ಮಾಡಲು ಕ್ರಮ ಕೈಗೊಳ್ಳಬೇಕು.

- ಅಪ್ಪಾಸಾಹೇಬ ದೇಸಾಯಿ ರೈತ ಮುಖಂಡ