ಸಾರಾಂಶ
ಹೊಸಪೇಟೆ: ವಿಜಯನಗರ ಜಿಲ್ಲೆಯಲ್ಲಿ ಮಳೆಯಿಂದ ಉಂಟಾಗಿರುವ ಬೆಳೆ ಹಾನಿ ಸರ್ವೆ ಕಾರ್ಯವನ್ನು ಕಂದಾಯ ಮತ್ತು ಕೃಷಿ ಇಲಾಖೆಯಿಂದ ಜಂಟಿಯಾಗಿ ನಡೆಸಲಾಗುತ್ತಿದೆ. ಹೊಸಪೇಟೆ ತಾಲೂಕಿನಲ್ಲಿ 30.5 ಹೆಕ್ಟೇರ್‌ನಷ್ಟು ಭತ್ತದ ಬೆಳೆ ಹಾನಿಯಾಗಿದ್ದು, ಇನ್ನೂ ಸರ್ವೆ ಕಾರ್ಯ ಮುಂದುವರೆದಿದೆ.
ಜಿಲ್ಲೆಯ ಉಳಿದ ತಾಲೂಕುಗಳಲ್ಲೂ ಕೃಷಿ ಮತ್ತು ಕಂದಾಯ ಇಲಾಖೆಗಳು ಜಂಟಿ ಸರ್ವೆ ನಡೆಸುತ್ತಿವೆ. ಮಳೆ ಹಾನಿ ಪ್ರದೇಶಕ್ಕೆ ಜಂಟಿಯಾಗಿ ತೆರಳಿ ಸರ್ವೆ ನಡೆಸಲಾಗುತ್ತಿದೆ.ಹೊಸಪೇಟೆ ತಾಲೂಕಿನ ಹೊಸೂರು, ಬೆಳಗೋಡು, ನಾಗೇನಹಳ್ಳಿ ಸೇರಿದಂತೆ ವಿವಿಧ ಮಾಗಾಣಿಗಳಲ್ಲಿ 30.5 ಹೆಕ್ಟೇರ್‌ನಷ್ಟು ಭತ್ತದ ಬೆಳೆಗೆ ಹಾನಿಯಾಗಿದೆ. ಇನ್ನೂ ಸರ್ವೆ ಕಾರ್ಯ ನಡೆಯುತ್ತಿದೆ.
ಕಮಲಾಪುರ, ಮರಿಯಮ್ಮನಹಳ್ಳಿ ಹೋಬಳಿಗಳಲ್ಲಿ ಮೆಕ್ಕೆಜೋಳ, ಹತ್ತಿ, ಸಜ್ಜೆ, ರಾಗಿ ಬೆಳೆಗಳಿಗೂ ಹಾನಿಯಾಗಿದೆ. ಈ ಪ್ರಾಥಮಿಕ ಸರ್ವೆಯಲ್ಲಿ ಮೆಕ್ಕೆಜೋಳ 19 ಹೆ., ಹತ್ತಿ 13 ಹೆ., ಸಜ್ಜೆ ಮತ್ತು ರಾಗಿ ಬೆಳೆಗಳು ತಲಾ 2 ಹೆಕ್ಟೇರ್‌ನಷ್ಟು ಹಾಳಾಗಿರುವುದು ಕಂಡು ಬಂದಿದೆ.ಕಮಲಾಪುರ ಹೋಬಳಿಯ ಬೈಲುವದ್ದಿಗೇರಿ, ಕಾಕುಬಾಳು, ಗುಂಡ್ಲವದ್ದಿಗೇರಿ ಭಾಗದಲ್ಲಿ ಇನ್ನೂ ಸರ್ವೆ ಕಾರ್ಯ ನಡೆಯಬೇಕಿದೆ. ಹಳ್ಳ ಬಂದಿರುವ ಹಿನ್ನೆಲೆಯಲ್ಲಿ ಹೊಲ-ಗದ್ದೆಗಳಿಗೆ ತೆರಳಲು ಕೃಷಿ ಮತ್ತು ಕಂದಾಯ ಇಲಾಖೆಗಳ ಅಧಿಕಾರಿಗಳಿಗೆ ತೊಂದರೆಯಾಗುತ್ತಿದೆ. ಹಳ್ಳ, ಕೊಳ್ಳ ತುಂಬಿ ಹರಿಯುತ್ತಿರುವುದು ತಗ್ಗಿದ ಬಳಿಕ ಮತ್ತೆ ಸರ್ವೆ ಕಾರ್ಯ ಆರಂಭಗೊಳ್ಳಲಿದೆ. ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲೂ ಬೆಳೆ ಹಾನಿ ಸರ್ವೆ ನಡೆಯಲಿದೆ ಎಂದು ಕೃಷಿ ಮತ್ತು ಕಂದಾಯ ಇಲಾಖೆಗಳ ಅಧಿಕಾರಿಗಳು ತಿಳಿಸಿದ್ದಾರೆ.
ಈ ಮಧ್ಯೆ ಜಿಲ್ಲೆಯ ರೈತರು ಬೆಳೆಹಾನಿಯಾದರೂ ರೈತರ ಹೊಲ, ಗದ್ದೆಗಳಿಗೆ ಕೃಷಿ ಮತ್ತು ಕಂದಾಯ ಇಲಾಖೆಗಳ ಅಧಿಕಾರಿಗಳು ಭೇಟಿ ನೀಡುತ್ತಿಲ್ಲ. ಸರ್ವೆ ಕಾರ್ಯ ಕೂಡ ನಡೆಸಲಾಗುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.ಈಗ ಅಧಿಕಾರಿಗಳು ಕಂದಾಯ ಮತ್ತು ಕೃಷಿ ಇಲಾಖೆಯ ಜಂಟಿ ತಂಡದೊಂದಿಗೆ ಸರ್ವೆ ನಡೆಸುತ್ತಿದ್ದು, ಈ ವರದಿ ಆಯಾ ತಹಸೀಲ್ದಾರ್ ಮೂಲಕ ಜಿಲ್ಲಾಧಿಕಾರಿಗೆ ಸಲ್ಲಿಕೆಯಾಗಲಿದೆ ಎಂದು ಮೂಲಗಳು ತಿಳಿಸಿವೆ.
ಜಿಲ್ಲೆಯಲ್ಲಿ ಕಳೆದ ನಾಲ್ಕೈದು ದಿನಗಳಿಂದ ಸುರಿದ ಮಳೆಯಿಂದ ಮೆಕ್ಕೆಜೋಳ, ಭತ್ತ, ಈರುಳ್ಳಿ, ಹತ್ತಿ, ಸಜ್ಜೆ, ರಾಗಿ, ಬಾಳೆ ಬೆಳೆಗಳಿಗೂ ಹಾನಿಯಾಗಿದೆ. ರೈತರು ಸಂಕಷ್ಟಕ್ಕೆ ಸಿಲುಕಿದ್ದು, ಸೂಕ್ತ ಪರಿಹಾರ ಒದಗಿಸಲು ಜಂಟಿ ಸರ್ವೆ ನಡೆಯಬೇಕು ಎಂದು ಈಗಾಗಲೇ ರೈತ ಸಂಘ ಕೂಡ ಒತ್ತಾಯಿಸಿದೆ. ಹಾಗಾಗಿ ಈಗ ಜಂಟಿ ಸರ್ವೆ ಕಾರ್ಯ ನಡೆಯುತ್ತಿದ್ದು, ಜಿಲ್ಲಾಡಳಿತಕ್ಕೆ ವರದಿ ಸಲ್ಲಿಕೆಯಾಗಲಿದೆ ಎಂಬ ಆಶಾಭಾವ ರೈತರಲ್ಲಿ ಒಡಮೂಡಿದೆ.ಜಿಲ್ಲೆಯಲ್ಲಿ ಮಳೆಗೆ 65ಕ್ಕೂ ಅಧಿಕ ಮನೆಗಳು ಕೂಡ ಉರುಳಿ ಬಿದ್ದಿವೆ. ಸರ್ವೆ ಕಾರ್ಯ ನಡೆಸಿ ಸೂಕ್ತ ಪರಿಹಾರ ಒದಗಿಸಬೇಕು. ಬಡವರು ಸಂಕಷ್ಟದಲ್ಲಿದ್ದು, ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಈ ಕುರಿತು ಕ್ರಮವಹಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಜಿಲ್ಲೆಯ ಕೂಡ್ಲಿಗಿ, ಕೊಟ್ಟೂರು, ಹರಪನಹಳ್ಳಿ, ಹೂವಿನಹಡಗಲಿ ತಾಲೂಕುಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮನೆಗಳು ಬಿದ್ದಿವೆ. ಇನ್ನೂ ಮಳೆಯಿಂದಾಗಿ ಕೆರೆ ಕಟ್ಟೆಗಳು, ಹಳ್ಳಗಳು ಒಡೆದು ಹೋಗಿವೆ. ರಸ್ತೆಗಳು ಹಾಳಾಗಿವೆ. ಮಳೆ ಹಾನಿ ಕುರಿತು ಸರ್ವೆ ನಡೆಸಿ, ರೈತರಿಗೆ ಸೂಕ್ತ ಪರಿಹಾರ ಒದಗಿಸಲು ರೈತ ಸಂಘ ಆಗ್ರಹಿಸಿದೆ.