ಬೆಳೆ ನಷ್ಟ: 7 ದಿವಸದೊಳಗೆ ಸಮೀಕ್ಷೆ ಮಾಡಿ

| Published : Aug 27 2024, 01:33 AM IST

ಸಾರಾಂಶ

ಜಿಲ್ಲೆಯಲ್ಲಿ ಕಳೆದ ವಾರ ಸುರಿದ ಭಾರಿ ಮಳೆಯಿಂದ ಹೊಂದಿರುವ ಬೆಳೆ ನಷ್ಟದ ಸಮೀಕ್ಷೆಯನ್ನು7 ದಿನಗಳೊಳಗಾಗಿ ಪೂರ್ಣಗೊಳಿಸಿ ವರದಿ ಸಲ್ಲಿಸಬೇಕು ಎಂದು ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಸೂಚನೆ ನೀಡಿದರು.

ತುಮಕೂರು: ಜಿಲ್ಲೆಯಲ್ಲಿ ಕಳೆದ ವಾರ ಸುರಿದ ಭಾರಿ ಮಳೆಯಿಂದ ಹೊಂದಿರುವ ಬೆಳೆ ನಷ್ಟದ ಸಮೀಕ್ಷೆಯನ್ನು7 ದಿನಗಳೊಳಗಾಗಿ ಪೂರ್ಣಗೊಳಿಸಿ ವರದಿ ಸಲ್ಲಿಸಬೇಕು ಎಂದು ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಸೂಚನೆ ನೀಡಿದರು.

ನಗರದ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಸೋಮವಾರ ನಡೆದ ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ವಿಮಾ ಯೋಜನೆಗೆ ಸಂಬಂಧಿಸಿದಂತೆ ಜಿಲ್ಲಾ ಮಟ್ಟದ ಜಂಟಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಬೆಳೆ ವಿಮೆಗೆ ನೋಂದಣಿಯಾಗಿ ಮಳೆಯಿಂದ ಬೆಳೆ ನಷ್ಟ ಸಂಭವಿಸಿದ ರೈತರಿಗೆ ಕೂಡಲೇ ವಿಮಾ ಪರಿಹಾರ ನೀಡಲು ಕ್ರಮ ಕೈಗೊಳ್ಳಬೇಕು. ವಿಮೆಗೆ ನೋಂದಾಯಿಸಿದ ಬೆಳೆ ಹಾನಿಯ ವ್ಯಾಪ್ತಿ ಹಾಗೂ ಹಾನಿಗೆ ಕಾರಣಗಳ ವಿವರವನ್ನು ವಿಮಾ ಕಂಪನಿ ಅಥವಾ ಕೃಷಿ ಇಲಾಖೆಗೆ 3 ದಿನದೊಳಗಾಗಿ ನೀಡುವಂತೆ ರೈತರಿಗೆ ತಿಳುವಳಿಕೆ ನೀಡಬೇಕು ಎಂದು ಹೇಳಿದರು.

ನಷ್ಟದ ಮಾಹಿತಿಯನ್ನು ಸ್ವೀಕರಿಸಿದ ಮೇಲೆ ಬೆಳೆ ನಷ್ಟ ನಿರ್ಧರಿಸಲು ವಿಮಾ ಸಂಸ್ಥೆಯವರು ನಷ್ಟ ನಿರ್ಧಾರಕರನ್ನು ನೇಮಿಸಬೇಕು. ನೇಮಿಸಲ್ಪಟ್ಟ ನಷ್ಟ ನಿರ್ಧಾರಕರು ಹಾಗೂ ತಾಲೂಕು, ಹೋಬಳಿ ಮಟ್ಟದ ಕೃಷಿ ಇಲಾಖಾಧಿಕಾರಿಗಳು ಜಂಟಿ ಸಮೀಕ್ಷೆ ನಡೆಸಿ ಹಾನಿಗೊಳಗಾದ ರೈತರ ಸಮ್ಮುಖದಲ್ಲಿ ಬೆಳೆ ನಷ್ಟ ನಿರ್ಧರಿಸಬೇಕೆಂದು ನಿರ್ದೇಶನ ನೀಡಿದರು.

ಮಳೆ ನಷ್ಟ ವರದಿಯು ಜಿಲ್ಲಾ ಮಟ್ಟದ ಸಮಿತಿ ಸಭೆಯಲ್ಲಿ ಅನುಮೋದನೆಯಾದ ನಂತರ 15 ದಿನಗಳೊಳಗಾಗಿ ರೈತರಿಗೆ ಡಿಬಿಟಿ ಮೂಲಕ ಪರಿಹಾರ ಹಣ ಪಾವತಿಸಬೇಕು. ಮಳೆ ಹಾನಿಯಿಂದ ಬೆಳೆ ನಷ್ಟ ಹೊಂದಿರುವ ರೈತರಿಗೆ ಇದು ಸುವರ್ಣಾವಕಾಶವಾಗಿದ್ದು, ಸದುಪಯೋಗ ಪಡಿಸಿಕೊಳ್ಳುವಂತೆ ಪ್ರಚಾರ ಕೈಗೊಳ್ಳಬೇಕು ಎಂದು ಸೂಚಿಸಿದರು.

ಜಂಟಿ ಕೃಷಿ ನಿರ್ದೇಶಕ ರಮೇಶ್ ಮಾತನಾಡಿ, ಪೂರ್ಣ ವಿಮಾ ಕಂತು ಪಾವತಿಸಿದ ರೈತರಿಗೆ ಶೇ.100ರಷ್ಟು ಬೆಳೆ ನಷ್ಟ ಹೊಂದಿರುವ ಅಧಿಸೂಚಿತ ಮಳೆಯಾಶ್ರಿತ ಬೆಳೆಗಳಿಗೆ ವಿಮಾ ಪರಿಹಾರ ನೀಡಲಾಗುವುದು. ಜಿಲ್ಲೆಯ ಪ್ರಮುಖ ಬೆಳೆಗಳಾದ ಮುಸುಕಿನ ಜೋಳ ಬೆಳೆಗೆ ಪ್ರತಿ ಎಕರೆಗೆ 22865.55 ರು, ರಾಗಿ ಬೆಳೆಗೆ 17199.75 ರು. ವಿಮಾ ಪರಿಹಾರ ನೀಡಲು ಅವಕಾಶವಿದೆ ಎಂದು ಮಾಹಿತಿ ನೀಡಿದರು.

ಜಿಲ್ಲೆಯಲ್ಲಿ ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ವಿಮಾ ಯೋಜನೆಯಡಿ ವಿಮಾ ಕಂಪನಿಯಾಗಿ ಓರಿಯಂಟಲ್ ಇನ್ಸೂರೆನ್ಸ್ ಕಂಪನಿಯನ್ನು ಆಯ್ಕೆ ಮಾಡಲಾಗಿದ್ದು, ಬೆಳೆ ಹಾನಿಗೊಳಗಾದ ರೈತರು ಕೃಷಿ ಇಲಾಖೆಯಿಂದ ಸ್ಥಾಪಿಸಲಾಗಿರುವ ರೈತರ ಸಹಾಯವಾಣಿ ಸಂಖ್ಯೆ ೦೮೧೬-೨೨೭೮೪೭೪/ ಮೊ.ಸಂ. 8884006306 ಸಂಪರ್ಕಿಸಿ ಬೆಳೆಹಾನಿ ಕುರಿತು ಮಾಹಿತಿ ನೀಡಬಹುದಾಗಿದೆ ಎಂದು ತಿಳಿಸಿದರು.

ಜಿಲ್ಲೆಯಲ್ಲಿ ಅತಿ ಹೆಚ್ಚು ದಾಖಲೆ ಮಳೆಯಾಗಿರುವ ಕೊರಟಗೆರೆ ತಾಲ್ಲೂಕಿನ ಹುಲಿಕುಂಟೆ, ತುಂಬಾಡಿ, ವಡ್ಡಗೆರೆ, ಬಿ.ಡಿ.ಪುರ, ಕ್ಯಾಮೇನಹಳ್ಳಿ, ದೊಡ್ಡಸಾಗ್ಗೆರೆ, ಅಕ್ಕಿರಾಂಪುರ ಗ್ರಾಮಗಳಲ್ಲಿ ಬೆಳೆ ನಷ್ಟ ಹೊಂದಿರುವ ಬಗ್ಗೆ ವರದಿಯಾಗಿದೆ. ಬೆಳೆ ನಷ್ಟ ಹೊಂದಿರುವ ರೈತರು ನಷ್ಟ ಹೊಂದಿರುವ ತಮ್ಮ ಬೆಳೆ ವಿವರಗಳನ್ನು ನಿಗದಿಪಡಿಸಿದ ದಿನಾಂಕ ಹಾಗೂ ಸಮಯದಂದು ಸಂಬಂಧಿಸಿದ ಗ್ರಾಮ ಪಂಚಾಯತಿ ಕಚೇರಿಗೆ ಸಲ್ಲಿಸಬೇಕು ಎಂದು ತಿಳಿಸಿದರು.

ರೈತರು ತಮ್ಮ ಬೆಳೆ ನಷ್ಟ ವಿವರಗಳನ್ನು ಆಗಸ್ಟ್ 27ರಂದು ಹುಲಿಕುಂಟೆ ಗ್ರಾಮ ಪಂಚಾಯತಿಯಲ್ಲಿ ಬೆಳಿಗ್ಗೆ 10 ರಿಂದ 12 ಗಂಟೆ, ತುಂಬಾಡಿ ಪಂಚಾಯತಿಯಲ್ಲಿ ಮಧ್ಯಾಹ್ನ 12 ರಿಂದ 3 ಗಂಟೆ ಹಾಗೂ ವಡ್ಡಗೆರೆ ಪಂಚಾಯತಿಯಲ್ಲಿ ಮಧ್ಯಾಹ್ನ 3 ರಿಂದ ಸಂಜೆ 5 ಗಂಟೆಯವರೆಗೆ ಆಗಸ್ಟ್ 28ರಂದು ಬಿ.ಡಿ.ಪುರ ಪಂಚಾಯತಿಯಲ್ಲಿ ಬೆಳಿಗ್ಗೆ 10 ರಿಂದ 12 ಗಂಟೆ, ಕ್ಯಾಮೇನಹಳ್ಳಿಯಲ್ಲಿ ಮಧ್ಯಾಹ್ನ 12 ರಿಂದ 2 ಗಂಟೆ, ದೊಡ್ಡಸಾಗ್ಗೆರೆ ಪಂಚಾಯತಿಯಲ್ಲಿ ಮಧ್ಯಾಹ್ನ 2 ರಿಂದ 4 ಗಂಟೆಯೊಳಗಾಗಿ ಅಕ್ಕಿರಾಂಪುರ ಪಂಚಾಯತಿಯಲ್ಲಿ ಸಂಜೆ 4 ರಿಂದ 6 ಗಂಟೆಯವರೆಗೆ ಸಲ್ಲಿಸಬಹುದಾಗಿದೆ ಎಂದರು.

ಸಭೆಯಲ್ಲಿ ಉಪ ಕೃಷಿ ನಿರ್ದೇಶಕ ಡಾ.ಚಂದ್ರಕುಮಾರ್, ತೋಟಗಾರಿಕೆ ಉಪನಿರ್ದೇಶಕ ಶಾರದಮ್ಮ, ಕೊರಟಗೆರೆ ತಾಲ್ಲೂಕು ಸಹಾಯಕ ಕೃಷಿ ನಿರ್ದೇಶಕ ರುದ್ರಪ್ಪ, ಓರಿಯಂಟಲ್ ಇನ್ಸೂರೆನ್ಸ್ ವಿಮಾ ಕಂಪನಿಯ ಪ್ರತಿನಿಧಿಗಳು, ಹಿರೇಹಳ್ಳಿ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.