ಕಳೆದ 68 ದಿನಗಳಲ್ಲಿ(ಜೂ. 1ರಿಂದ ಆ. 7) ಜಿಲ್ಲೆಯಲ್ಲಿ ವಾಡಿಕೆಗಿಂತ ಶೇ. 31ರಷ್ಟು ಮಳೆ ಕೊರತೆಯಾಗಿದೆ. ಎನ್‌ಡಿಆರ್‌ಎಫ್ ನಿಯಮಾವಳಿಗಳ ಪ್ರಕಾರ ಇಡೀ ಜಿಲ್ಲೆಯನ್ನು ಬರಪೀಡಿತ ಪ್ರದೇಶವೆಂದು ಘೋಷಿಸಲು ಅರ್ಹತೆಯಿದ್ದು, ತಾಲೂಕುವಾರು ವೈಜ್ಞಾನಿಕ ಪರಿಶೀಲನೆ ನಡೆಸಿ ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದು.
ಗದಗ: ಜಿಲ್ಲೆಯಲ್ಲಿ ತೀವ್ರವಾದ ಬರಗಾಲವಿದೆ. ಪ್ರಾಥಮಿಕ ಅಂದಾಜಿನಂತೆ ಕೃಷಿ ಮತ್ತು ತೋಟಗಾರಿಕೆ ಬೆಳೆಗಳು ಸೇರಿ ಒಟ್ಟು 164 ಕೋಟಿ ಮೌಲ್ಯದ ಹಾನಿಯಾಗಿದೆ. ಎನ್ ಡಿಆರ್ ಎಫ್ ನಿಯಮಾವಳಿಯಂತೆ ಮತ್ತು ರೈತರ ಹೊಲಗಳಿಗೆ ಖುದ್ದು ಭೇಟಿ ನೀಡಿ ಪರಿಶೀಲಿಸಿ ಸರ್ಕಾರಕ್ಕೆ ವರದಿ ಸಲ್ಲಿಕೆ ಮಾಡಲಾಗುವುದು ಎಂದು ಸಚಿವ ಬಸವರಾಜ ರಾಯರಡ್ಡಿ ಹೇಳಿದರು.
ಶುಕ್ರವಾರ ಜಿಲ್ಲೆಯಲ್ಲಿ ಮಳೆ ಅಭಾವದಿಂದ ಎದುರಾಗಿರುವ ತೀವ್ರ ಬರ ಪರಿಸ್ಥಿತಿಯ ವಸ್ತುಸ್ಥಿತಿ ಪರಿಶೀಲನೆಗೆ ಮುಖ್ಯಮಂತ್ರಿಗಳ ನಿರ್ದೇಶನದಂತೆ ಆಗಮಿಸಿದ್ದ ಅವರು ಶುಕ್ರವಾರ ಜಿಪಂ ಸಭಾಂಗಣದಲ್ಲಿ ಶಾಸಕರು, ಜನಪ್ರತಿನಿಧಿಗಳು ಹಾಗೂ ಹಿರಿಯ ಅಧಿಕಾರಿಗಳೊಂದಿಗೆ ಪ್ರಗತಿ ಪರಿಶೀಲನಾ ಸಭೆ ನಡೆಸಿ, ನಂತರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.ಕಳೆದ 68 ದಿನಗಳಲ್ಲಿ(ಜೂ. 1ರಿಂದ ಆ. 7) ಜಿಲ್ಲೆಯಲ್ಲಿ ವಾಡಿಕೆಗಿಂತ ಶೇ. 31ರಷ್ಟು ಮಳೆ ಕೊರತೆಯಾಗಿದೆ. ಎನ್‌ಡಿಆರ್‌ಎಫ್ ನಿಯಮಾವಳಿಗಳ ಪ್ರಕಾರ ಇಡೀ ಜಿಲ್ಲೆಯನ್ನು ಬರಪೀಡಿತ ಪ್ರದೇಶವೆಂದು ಘೋಷಿಸಲು ಅರ್ಹತೆಯಿದ್ದು, ತಾಲೂಕುವಾರು ವೈಜ್ಞಾನಿಕ ಪರಿಶೀಲನೆ ನಡೆಸಿ ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದು ಎಂದರು.
ಗಜೇಂದ್ರಗಡ ಜಿಲ್ಲೆಯಲ್ಲಿ ಅತಿ ಹೆಚ್ಚು ಮಳೆ ಕೊರತೆ ಎದುರಿಸುತ್ತಿದ್ದು, ಶೇ. 47, ಗದಗ ಶೇ. 43, ಮುಂಡರಗಿ ಶೇ. 33, ಶಿರಹಟ್ಟಿ ಶೇ. 27, ಲಕ್ಷ್ಮೇಶ್ವರ ಶೇ. 18ರಷ್ಟು ಮಳೆ ಕೊರತೆಯನ್ನು ಎದುರಿಸುತ್ತಿದ್ದು, ತಾಂತ್ರಿಕ ನಿಯಮಾವಳಿಗಳಂತೆ ಪರಿಶೀಲನೆ ನಡೆಸಿ ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು ಎಂದರು.ಜಿಲ್ಲೆಯಲ್ಲಿ ಪ್ರಾಥಮಿಕ ಅಂದಾಜಿನಂತೆ ಕೃಷಿ ಮತ್ತು ತೋಟಗಾರಿಕೆ ಬೆಳೆಗಳು ಸೇರಿ ಒಟ್ಟು 164 ಕೋಟಿ ಮೌಲ್ಯದ ಹಾನಿಯಾಗಿದೆ. ಜಿಲ್ಲೆಯ ಶೇ. 75ರಷ್ಟು ರೈತರು ಫಸಲ್ ಬಿಮಾ ಯೋಜನೆಯಡಿ ನೋಂದಾಯಿಸಿದ್ದು, ಶೇ. 80ರಷ್ಟು ಬೆಳೆ ವಿಫಲವಾಗಿರುವ ಸಾಧ್ಯತೆಯಿದೆ. ವಿಮಾ ಕಂಪನಿಗಳಿಂದ ಶೀಘ್ರ ಪರಿಹಾರ ಕೊಡಿಸಲು ಕ್ರಮ ವಹಿಸಲಾಗುವುದು ಎಂದರು.
ಜಿಲ್ಲೆಯಲ್ಲಿ ಬಹುಗ್ರಾಮ ಕುಡಿವ ನೀರಿನ ಯೋಜನೆಯಡಿ ದಿನಪ್ರತಿ ವ್ಯಕ್ತಿಗೆ 80 ಲೀಟರ್ ನೀರು ಪೂರೈಸುವ ವ್ಯವಸ್ಥೆಯಲ್ಲಿ ಸ್ವಚ್ಛತೆ ಹಾಗೂ ವಿತರಣೆಯ ಲೋಪಗಳು ಕಂಡುಬಂದಿದ್ದು, ತಕ್ಷಣವೇ ಪರಿಶೀಲಿಸಿ ಸರಿಪಡಿಸಲು ಜಿಪಂ ಉಪಕಾರ್ಯದರ್ಶಿಗಳಿಗೆ ಸೂಚಿಸಿದ್ದೇನೆ ಎಂದರು.ಈ ಸಂದರ್ಭದಲ್ಲಿ ಮಾಜಿ ಸಚಿವ, ಗದಗ ಶಾಸಕ ಎಚ್.ಕೆ. ಪಾಟೀಲ, ಶಿರಹಟ್ಟಿ ಶಾಸಕ ಡಾ.ಚಂದ್ರು ಲಮಾಣಿ ಹಾಗೂ ಅಧಿಕಾರಿಗಳು ಇದ್ದರು.