ಸಾರಾಂಶ
ಕನ್ನಡಪ್ರಭ ವಾರ್ತೆ ಲೋಕಾಪುರ
ಪಶ್ಚಿಮ ಘಟ್ಟ ಅರಣ್ಯ ಪ್ರದೇಶದಲ್ಲಿ ಕಳೆದ ಎರಡು ದಿನಗಳಿಂದ ಮಳೆ ಕಡಿಮೆ ಆಗಿದೆ. ಆದರೂ ಘಟಪ್ರಭಾ ನದಿಗೆ ೪೩,೭೫೪ ಕ್ಯುಸೆಕ್ ನೀರು ಹರಿದು ಬರುತ್ತಿದ್ದು, ನದಿ ಪಾತ್ರದ ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲು ಕಂದಾಯ, ಪೊಲೀಸ್ ಇಲಾಖೆ ಸೇರಿ ಅಧಿಕಾರಿಗಳು ಕಾರ್ಯಪ್ರವೃತ್ತರಾಗಿದ್ದಾರೆ. ಆದರೆ, ಈಗಾಗಲೇ ನದಿ ನೀರು ಹೊಲಗಳಿಗೆ ನುಗ್ಗಿ ಬೆಳೆ ಹಾನಿಯಾಗಿ ಅನ್ನದಾತರನ್ನು ಕಂಗಾಲಾಗಿಸಿದೆ.ಕಳೆದ ಒಂದು ವಾರದಿಂದ ಸತತವಾಗಿ ಸುರಿಯುತ್ತಿರುವ ಮಳೆಯಿಂದ ಮಾರ್ಕಂಡೇಯ ಘಟಪ್ರಭಾ ಮತ್ತು ಹಿರಣ್ಯಕೇಶಿ ನದಿಗಳು ಅಪಾಯಮಟ್ಟ ಮೀರಿ ಹರಿಯುತ್ತಿವೆ. ಹಿಡಕಲ್ ಜಲಾಶಯ, ಹಿರಣ್ಯಕೇಶಿ ನದಿ ಸೇರಿ ೩೩೫೬೦ ಕ್ಯುಸೆಕ್, ಮಾರ್ಕಂಡೇಯ ನದಿಯಿಂದ ೭೩೮೦ ಕ್ಯುಸೆಕ್ ಬಳ್ಳಾರಿ ನಾಲಾದಿಂದ ೩ ಸಾವಿರ ಕ್ಯುಸೆಕ್ ನೀರನ್ನು ನದಿಗಳಿಗೆ ಹರಿ ಬಿಟ್ಟಿರುವ ಪರಿಣಾಮ ಜಂಬಗಿ, ಕೆ.ಡಿ. ಮುದ್ದಾಪುರ, ತಿಮ್ಮಾಪುರ, ಚಿಕ್ಕೂರ, ಮಾಚಕನೂರ, ಹೆಬ್ಬಾಳ, ಭಂಟನೂರ, ಅಂತಾಪುರ, ಬಿದರಿ, ಮಳಲಿ, ನದಿ ಪಾತ್ರದ ಗ್ರಾಮಗಳ, ಬೆಳೆ ಜಲಾವೃತವಾಗಿವೆ.
ರೈತರ ವಾಣಿಜ್ಯ ಬೆಳೆಗಳಿಗೂ ಸೇರಿದಂತೆ ಸೂರ್ಯಕಾಂತಿ, ಗೋವಿನಜೋಳ ಸೇರಿದಂತೆ ಎಲ್ಲ ಬೆಳಗಳು ನಾಶವಾಗಿವೆ. ಹೀಗಾಗಿ ರೈತರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ರೈತರ ಜಮೀನುಗಳು ಸಂಪೂರ್ಣ ಜಲಾವೃತಗೊಂಡಿದ್ದು ನದಿ ಹರಿವಿನ ಪ್ರಮಾಣ ಹೆಚ್ಚಾದಲ್ಲಿ ಗ್ರಾಮಗಳಿಗೂ ನೀರು ನುಗ್ಗುವ ಆತಂಕದಲ್ಲಿ ನದಿ ಪಾತ್ರದ ಜನತೆ ಕಾಲ ಕಳೆಯುವಂತಾಗಿದೆ.ಮುದ್ದಾಪುರ ಗ್ರಾಮಕ್ಕೆ ನೀರು ಬಂದಿದ್ದು ಶಾಲೆ ಆವರಣವನ್ನೇ ಆವರಿಸಿದೆ. ನದಿ ಹರಿವಿನ ಪ್ರಮಾಣ ಹೆಚ್ಚಾದಲ್ಲಿ ವಿವಿಧ ಗ್ರಾಮಗಳ ಜನತೆಯನ್ನು ಆಯಾ ಗ್ರಾಮದ ಎತ್ತರದ ಪ್ರದೇಶಗಳಲ್ಲಿ ವಿವಿಧೆಡೆ ಕಾಳಜಿ ಕೇಂದ್ರಗಳಿಗೆ ಜನ, ಜಾನುವಾರು ಸ್ಥಳಾಂತರಕ್ಕೆ ತಾಲೂಕಾಡಳಿತ ಸಿದ್ಧತೆ ಮಾಡಿಕೊಂಡಿದೆ. ಪದೇಪದೇ ಪ್ರವಾಹಕ್ಕೆ ಸಿಲುಕುವ ಗ್ರಾಮಗಳ ಸಂಪೂರ್ಣ ಸ್ಥಳಾಂತರಕ್ಕೆ ಸರಕಾರ ಮುಂದಾಗಬೇಕು. ಬೆಳೆ ಸಮೀಕ್ಷೆ ನಡೆಸಿ ಕಾಟಾಚಾರಕ್ಕೆ ಪರಿಹಾರ ನೀಡದೆ, ರೈತರ ಜಮೀನಿಗೆ ಮಾಡಿದ ಖರ್ಚು ಅರಿತು, ಬೆಳೆಯ ನಂತರ ಬರುವ ಫಸಲು ಆಧರಿಸಿ ಪರಿಹಾರ ನೀಡಬೇಕೆಂಬುದು ಸಂತ್ರಸ್ತ ರೈತ ಒತ್ತಾಯವಾಗಿದೆ.
ಸಮೀಪದ ಚಿಂಚಖಂಡಿ, ಅಂತಾಪುರ ಬಿದರಿ ಸೇತುವೆಗಳು ಮುಳುಗಡೆಯಾಗಿದ್ದು ನದಿಗೆ ನಿರ್ಮಿಸಿದ ವಿವಿಧ ಬ್ರಿಡ್ಜ್ ಕಂ ಬ್ಯಾರೇಜ್‌ಗಳ ಮೇಲೆ ನೀರು ಹರಿದು ನದಿ ಪಾತ್ರದಿಂದ ವಿವಿದೆಡೆ ಸಂಪರ್ಕ ಕಲ್ಪಿಸುವ ರಸ್ತೆ ಸಂಚಾರ ಬಂದ್ ಆಗಿದೆ. ಸಾರ್ವಜನಿಕರು ಸಂಚಾರಕ್ಕೆ ಪರದಾಡುವ ಸ್ಥಿತಿ ಎದುರಾಗಿದೆ.ಮೋಟರ್ ರಕ್ಷಿಸಿಕೊಂಡ ರೈತರು:
ನದಿ ಪಾತ್ರದಲ್ಲಿರುವ ರೈತರು ನೀರಿನಲ್ಲಿ ಮುಳುಗಡೆಯ ಭೀತಿಯಲ್ಲಿರುವ ಮೋಟರ್‌ಗಳನ್ನು ರಕ್ಷಿಸಿಕೊಂಡಿದ್ದಾರೆ. ಕೆಲವೊಂದು ಮೋಟರ್‌ಗಳು ನೀರಿನಲ್ಲಿ ಮುಳುಗಿವೆ. ಇಲ್ಲಿನ ನೆರೆ ಹಾವಳಿ ಮುಂದುವರಿದ್ದು, ಸೇತುವೆ ಮೇಲೆ ನಾಲ್ಕು ಅಡಿಯಷ್ಟು ನೀರು ಹರಿಯುತ್ತಿದ್ದು ಸಂಪರ್ಕ ಕಡಿತಗೊಂಡು, ಅಸ್ತವ್ಯವಸ್ತವಾಗಿದೆ.ಸೂಕ್ತ ಕ್ರಮ:
ಜಿಲ್ಲಾಧಿಕಾರಿಗಳ ನಿರ್ದೇಶನದಂತೆ ಪ್ರವಾಹ ಪರಿಸ್ಥಿತಿಯಲ್ಲಿ ಉಂಟಾಗುವ ಸಮಸ್ಯೆಗಳ ಪರಿಹಾರಕ್ಕೆ ಸೂಕ್ತ ಕ್ರಮ ಕೈಗೊಳ್ಳಲಾಗಿದೆ. ನೆರೆ ಪೀಡಿತ ಪ್ರದೇಶಗಳ ಜನತೆ ಭಯಪಡುವ ಅಗತ್ಯವಿಲ್ಲ. ಸಂತ್ರಸ್ತರ ಸಮಸ್ಯೆಗಳ ಪರಿಹಾರಕ್ಕೆ ತಾಲೂಕಾಡಳಿತ ಬದ್ಧವಿದೆ ಎಂದು ಮುಧೋಳ ತಹಸೀಲ್ದಾರ್ ವಿನೋದ ಹತ್ತಳ್ಳಿ ತಿಳಿಸಿದ್ದಾರೆ.