ಬೆಳೆಗೆ ಹಳದಿ ರೋಗ, ಗೊಬ್ಬರ ಖರೀದಿಗೆ ಮುಗಿಬಿದ್ದ ರೈತರು

| Published : Jul 29 2025, 01:06 AM IST

ಬೆಳೆಗೆ ಹಳದಿ ರೋಗ, ಗೊಬ್ಬರ ಖರೀದಿಗೆ ಮುಗಿಬಿದ್ದ ರೈತರು
Share this Article
  • FB
  • TW
  • Linkdin
  • Email

ಸಾರಾಂಶ

ಕುಷ್ಟಗಿ ತಾಲೂಕಿನ ವ್ಯಾಪ್ತಿಯಲ್ಲಿ ಉತ್ತಮ ರೀತಿಯಲ್ಲಿ ಮಳೆ ಆಗುತ್ತಿರುವುದರಿಂದ ಯೂರಿಯಾ ರಸಗೊಬ್ಬರಕ್ಕೆ ಬೇಡಿಕೆ ಮತ್ತಷ್ಟು ಹೆಚ್ಚಿದೆ. ಮುಂಗಾರು ಹಂಗಾಮಿನ ಪ್ರಮುಖ ಬೆಳೆಗಳಾದ ಸಜ್ಜೆ, ಮೆಕ್ಕೆಜೋಳ ಸೇರಿದಂತೆ ಇತರೆ ಬೆಳೆಗಳು ಹಳದಿ ಬಣ್ಣಕ್ಕೆ ತಿರುಗಿವೆ.

ಕುಷ್ಟಗಿ:

ತಾಲೂಕಿನಲ್ಲಿ ಯೂರಿಯಾ ಗೊಬ್ಬರದ ಅಭಾವ ತೀವ್ರವಾಗಿದ್ದು ಖರೀದಿಗೆ ಬೆಳಗ್ಗೆಯೇ ರೈತರು ಅಂಗಡಿ ಎದುರು ಸರದಿಯಲ್ಲಿ ನಿಂತುಕೊಂಡು ಖರೀದಿಸಲು ಹರಸಾಹಸ ಪಟ್ಟರು.

ಪಟ್ಟಣ ಸೇರಿದಂತೆ ತಾಲೂಕಿನ ವ್ಯಾಪ್ತಿಯಲ್ಲಿ ಉತ್ತಮ ರೀತಿಯಲ್ಲಿ ಮಳೆ ಆಗುತ್ತಿರುವುದರಿಂದ ಯೂರಿಯಾ ರಸಗೊಬ್ಬರಕ್ಕೆ ಬೇಡಿಕೆ ಮತ್ತಷ್ಟು ಹೆಚ್ಚಿದೆ. ಮುಂಗಾರು ಹಂಗಾಮಿನ ಪ್ರಮುಖ ಬೆಳೆಗಳಾದ ಸಜ್ಜೆ, ಮೆಕ್ಕೆಜೋಳ ಸೇರಿದಂತೆ ಇತರೆ ಬೆಳೆಗಳು ಹಳದಿ ಬಣ್ಣಕ್ಕೆ ತಿರುಗಿವೆ. ಹೀಗಾಗಿ ಯೂರಿಯಾ ಗೊಬ್ಬರಕ್ಕೆ ಬೇಡಿಕೆ ಸಹಜವಾಗಿ ಹೆಚ್ಚಾಗಿದೆ. ನೂರಾರು ರೈತರು ಗೊಬ್ಬರ ಖರೀದಿಸಲು ಒಟ್ಟಿಗೆ ಬಂದಿದ್ದರಿಂದ ಅಂಗಡಿಕಾರರಿಗೆ ರೈತರನ್ನು ನಿಭಾಯಿಸುವುದು ಕಷ್ಟವಾದ ಪರಿಣಾಮ ಪೊಲೀಸರನ್ನು ನಿಯೋಜಿಸಲಾಗಿದೆ.

ಬಿತ್ತಿದ ಬೆಳೆ ಹಳದಿ ಬಣ್ಣಕ್ಕೆ ತಿರುಗಿದ ಪರಿಣಾಮ ಕೊಪ್ಪಳ, ಕನಕಗಿರಿ ಸೇರಿದಂತೆ ವಿವಿಧೆಡೆ ಸುತ್ತಾಡಿಸಿದರೂ ಒಂದು ಚೀಲ ಯೂರಿಯಾ ಗೊಬ್ಬರ ಸಿಕ್ಕಿಲ್ಲ. ಸಾಲ ಸೂಲ ಮಾಡಿದ ಬಿತ್ತನೆ ಮಾಡಿದ ಬೆಳೆಗೆ ಸಕಾಲಕ್ಕೆ ಗೊಬ್ಬರ ಪೂರೈಸಲು ಆಗದೆ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದೇವೆ ಎಂದು ಕಲಕಬಂಡಿ ಗ್ರಾಮದ ರೈತ ಸಂಗಪ್ಪ ಅಳಲು ತೋಡಿಕೊಂಡದರು.

ಕುಷ್ಟಗಿ ತಾಲೂಕಿನ ಯೂರಿಯಾ ಗೊಬ್ಬರದ ಬೇಡಿಕೆ 5,530 ಮೆಟ್ರಿಕ್ ಟನ್ ಇದ್ದು 4179 ಮೆಟ್ರಿಕ್ ಟನ್ ಬಂದಿದ್ದು ವಿತರಿಸಲಾಗಿದೆ. ಉಳಿದ ಗೊಬ್ಬರವು ಎರಡ್ಮೂರು ದಿನದಲ್ಲಿ ಬರುವ ಸಾಧ್ಯತೆ ಇದೆ ಎಂದು ಕುಷ್ಟಗಿ ಕೃಷಿ ಇಲಾಖೆಯ ತಾಂತ್ರಿಕ ಅಧಿಕಾರಿ ರಾಜಶೇಖರ ಹೇಳಿದರು.