ಮುಂಗಾರು ಆರಂಭದಲ್ಲೇ ರೈತಾಪಿ ವರ್ಗಕ್ಕೆ ತೀವ್ರ ನಿರಾಶೆಯಾಗಿದ್ದು, ಮಳೆಯಿಲ್ಲದೆ ಮೊಳಕೆಯೊಡೆದ ಬೆಳೆಗಳು ಹೊಲದಲ್ಲೇ ಕಮರಿಹೋಗುವ ಭೀತಿ ಎದುರಾಗಿದೆ. ಜೂನ್ ತಿಂಗಳ ಜಿಲ್ಲೆಯ ವಾಡಿಕೆ ಮಳೆಯ ಪೈಕಿ ಶೇ.57ರಷ್ಟು ಕೊರತೆಯಾಗಿದ್ದು, ಬರಗಾಲದ ಕಾರ್ಮೋಡ ಕವಿದಿದೆ. ಮೊಳಕೆ, ಸಸಿ ಹಂತದಲ್ಲೇ ಒಣಗುತ್ತಿರುವ ಬೆಳೆ ನೋಡಿ ರೈತರು ಕಂಗಾಲಾಗಿದ್ದಾರೆ.
ನಾರಾಯಣ ಹೆಗಡೆ
ಕನ್ನಡಪ್ರಭ ವಾರ್ತೆ, ಹಾವೇರಿಮುಂಗಾರು ಆರಂಭದಲ್ಲೇ ರೈತಾಪಿ ವರ್ಗಕ್ಕೆ ತೀವ್ರ ನಿರಾಶೆಯಾಗಿದ್ದು, ಮಳೆಯಿಲ್ಲದೆ ಮೊಳಕೆಯೊಡೆದ ಬೆಳೆಗಳು ಹೊಲದಲ್ಲೇ ಕಮರಿಹೋಗುವ ಭೀತಿ ಎದುರಾಗಿದೆ. ಜೂನ್ ತಿಂಗಳ ಜಿಲ್ಲೆಯ ವಾಡಿಕೆ ಮಳೆಯ ಪೈಕಿ ಶೇ.57ರಷ್ಟು ಕೊರತೆಯಾಗಿದ್ದು, ಬರಗಾಲದ ಕಾರ್ಮೋಡ ಕವಿದಿದೆ. ಮೊಳಕೆ, ಸಸಿ ಹಂತದಲ್ಲೇ ಒಣಗುತ್ತಿರುವ ಬೆಳೆ ನೋಡಿ ರೈತರು ಕಂಗಾಲಾಗಿದ್ದಾರೆ.
ಜೂನ್ ಆರಂಭದಿಂದ ಇಲ್ಲಿಯವರೆಗೆ ಜಿಲ್ಲಾದ್ಯಂತ ವಾಡಿಕೆ ಮಳೆಗಿಂತ ಭಾರಿ ಪ್ರಮಾಣದ ಕೊರತೆ ಕಂಡುಬಂದಿದೆ. ಜೂ.1ರಿಂದ ಜೂ.22ರ ವರೆಗಿನ ಅವಧಿಯಲ್ಲಿ ಜಿಲ್ಲೆಯಲ್ಲಿ ಒಟ್ಟು 85.20 ಮಿಲಿಮೀಟರ್ ವಾಡಿಕೆ ಮಳೆಯಾಗಬೇಕಿತ್ತು. ಆದರೆ, ವಾಸ್ತವವಾಗಿ ಬಿದ್ದಿರುವುದು ಕೇವಲ 36 ಮಿಲಿಮೀಟರ್ ಮಾತ್ರ. ಇದರಿಂದಾಗಿ ಈ ತಿಂಗಳಲ್ಲಿ ಒಟ್ಟಾರೆ ಶೇ.57ರಷ್ಟು ಮಳೆ ಕೊರತೆಯಾಗಿದ್ದು, ಕೃಷಿ ಚಟುವಟಿಕೆಗಳಿಗೆ ತೀವ್ರ ಹಿನ್ನಡೆಯಾಗಿದೆ.ಈ ವಾರ ಪರಿಸ್ಥಿತಿ ಇನ್ನಷ್ಟು ಗಂಭೀರ
ಕಳೆದ ಒಂದು ವಾರದಿಂದ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಿದೆ. ಜೂ.16ರಿಂದ ಸೋಮವಾರದವರೆಗೆ ಕೇವಲ 6.80 ಮಿಲಿಮೀಟರ್ ಮಳೆಯಷ್ಟೇ ದಾಖಲಾಗಿದೆ. ಈ ಅವಧಿಯ ವಾಡಿಕೆ ಮಳೆಯ ಪ್ರಮಾಣ 28.20 ಮಿಮೀ ಇರಬೇಕಿತ್ತು. ಅಂದರೆ, ಒಂದು ವಾರದಲ್ಲಿ ಶೇ. 75ರಷ್ಟು ಮಳೆ ಕೊರತೆಯಾಗಿದ್ದು, ಒಣಹವೆ ಮುಂದುವರಿದಿದೆ. ಒಮ್ಮೊಮ್ಮೆ ಮೋಡ ಕವಿದು, ಎಲ್ಲೋ ಒಂದೆರಡು ಹನಿ ಚೆಲ್ಲಿ ಮಳೆ ಮಾಯವಾಗುತ್ತಿದೆ.ಸಸಿಯಾಗುವ ಹಂತದಲ್ಲೇ ಒಣಗುತ್ತಿದೆ ಬೆಳೆ: ಮುಂಗಾರು ಹಂಗಾಮಿನ ಆರಂಭದಲ್ಲಿ ಬಿದ್ದ ಅಲ್ಪಸ್ವಲ್ಪ ಮಳೆಗೆ ರೈತರು ಉತ್ಸಾಹದಿಂದ ಬಿತ್ತನೆ ಕಾರ್ಯ ಕೈಗೊಂಡಿದ್ದರು. ಮೇ ಅಂತ್ಯದಲ್ಲಿ ಜಿಲ್ಲಾದ್ಯಂತ ಹದಭರಿತ ಮಳೆಯೂ ಆಗಿತ್ತು. ರೈತರು ತಡ ಮಾಡದೇ ಬಿತ್ತನೆ ಬೀಜಕ್ಕೆ ಮುಗಿಬಿದ್ದರು. ಎಂಟತ್ತು ದಿನಗಳ ಕಾಲ ಬಿತ್ತನೆ ಬೀಜ ಕೊಳ್ಳುವುದಕ್ಕೇ ಪರದಾಡಿದ ರೈತರು, ತರಾತುರಿಯಲ್ಲಿ ಬಿತ್ತನೆಯನ್ನೂ ಮಾಡಿದರು. ಸದ್ಯ ಹೊಲಗಳಲ್ಲಿ ಬೀಜ ಮೊಳಕೆಯೊಡೆದು ಸಸಿಯಾಗಿ ಬೆಳೆಯುವ ಪ್ರಮುಖ ಹಂತ ತಲುಪಿದೆ. ಇಂತಹ ನಿರ್ಣಾಯಕ ಸಮಯದಲ್ಲಿಯೇ ಮಳೆ ಸಂಪೂರ್ಣವಾಗಿ ಕೈಕೊಟ್ಟಿರುವುದರಿಂದ, ಸಸಿಗಳು ನೀರಿಲ್ಲದೆ ಬಾಡುತ್ತಿವೆ. ಬಿಸಿಲಿನ ಬೇಗೆಗೆ ಬೆಳೆಗಳು ಕಮರುತ್ತಿರುವುದನ್ನು ಕಂಡು ಅನ್ನದಾತರು ಕಣ್ಣೀರಲ್ಲಿ ಕೈ ತೊಳೆಯುವಂತಾಗಿದೆ. ಮುಂದಿನ ಕೆಲವು ದಿನಗಳಲ್ಲಿ ಸೂಕ್ತ ಮಳೆಯಾಗದಿದ್ದರೆ ಬಿತ್ತಿದ ಬೆಳೆ ಕೈಸೇರುವುದು ಅನುಮಾನ ಎಂಬ ಚಿಂತೆ ರೈತರನ್ನು ಕಾಡತೊಡಗಿದೆ.
ತಾಲೂಕಾವಾರು ಮಳೆ ವಿವರ (ಜೂ.1ರಿಂದ 22ರವರೆಗೆ)ತಾಲೂಕು ವಾಡಿಕೆಮಳೆ ವಾಸ್ತವ ಮಳೆ ಕೊರತೆ (ಶೇ)
ಬ್ಯಾಡಗಿ 63.90 37.23 -41.74ಹಾನಗಲ್ಲ 126.10 36.00 -71.45
ಹಾವೇರಿ 80.30 44.52 -44.56ಹಿರೇಕೆರೂರು 82.40 21.40 -74.03
ರಾಣಿಬೆನ್ನೂರು 59.00 48.54 -17.73ಸವಣೂರು 72.40 26.03 -64.05
ಶಿಗ್ಗಾಂವಿ 86.70 33.53 -61.33ರಟ್ಟಿಹಳ್ಳಿ 83.20 21.40 -74.28
------------------------------------------------------------ಒಟ್ಟು 85.20 36 -57.75
ಬೆಳೆ ಹರಗುತ್ತಿರುವ ರೈತರು: ಆರಂಭದಲ್ಲೇ ಬಿತ್ತನೆ ಮಾಡಿದ ಬೆಳೆ ಸಸಿ ಹಂತದಲ್ಲಿದೆ. ಆದರೆ, ಕಳೆದ ಕೆಲವು ದಿನಗಳಿಂದ ಮಳೆಯಾಗದ್ದರಿಂದ ಬಿಸಿಲ ತಾಪಕ್ಕೆ ಬಾಡಿ ಕೆಂಪಗಾಗುತ್ತಿವೆ. ನಂತರ ಬಿತ್ತನೆ ಮಾಡಿದ ಬೆಳೆಗಳು ಮೊಳಕೆ ಹಂತದಲ್ಲೇ ಕಮರುತ್ತಿವೆ. ಎಕರೆಗೆ ಹತ್ತಾರು ಸಾವಿರ ರು.ಗಳಂತೆ ಅನೇಕ ರೈತರು ಹತ್ತಾರು ಎಕರೆಗಳಲ್ಲಿ ಹಾಕಿದ್ದ ಬೆಳೆಯನ್ನು ನಾಶಪಡಿಸುತ್ತಿದ್ದಾರೆ. ಮಳೆಯಿಲ್ಲದೇ ಬೆಳವಣಿಗೆಯಾಗುವುದಿಲ್ಲ ಎಂಬುದು ಮನಗಂಡು ಹರಗಿ ಪರ್ಯಾಯ ಬೆಳೆಯತ್ತ ಮುಖ ಮಾಡುತ್ತಿದ್ದಾರೆ.ಸಾಲ ಮಾಡಿ ಮುಂಗಾರು ಬಿತ್ತನೆ ಮಾಡಿದ್ದ ರೈತ ಮಳೆಯಿಲ್ಲದೇ ಸಂಕಷ್ಟದಲ್ಲಿ ಸಿಲುಕಿದ್ದಾನೆ. ಸೋಯಾ, ಮೆಕ್ಕೆಜೋಳ, ಉದ್ದು, ಹೆಸರು, ಹತ್ತಿ ಮುಂತಾದ ಬೀಜ ಬಿತ್ತನೆಗೆ ರೈತ ಸಾಕಷ್ಟು ಖರ್ಚು ಮಾಡಿಕೊಂಡಿದ್ದಾನೆ. ಆದರೆ, 15 ದಿನಗಳಿಂದ ಮಳೆಯಿಲ್ಲದೇ ಸಸಿ ಬಾಡುತ್ತಿವೆ. ರೈತರು ಮತ್ತೆ ಬೀಜ, ಗೊಬ್ಬರ ಖರೀದಿಸುವ ಪರಿಸ್ಥಿತಿ ಎದುರಾಗಿದೆ. ಆದ್ದರಿಂದ ಸರ್ಕಾರ ತಕ್ಷಣವೇ ಮೋಡ ಬಿತ್ತನೆ ಮಾಡಿ ರೈತರ ನೆರವಿಗೆ ಬರಬೇಕು ಎಂದು ಕಬ್ಬು ಬೆಳೆಗಾರ ಸಂಘದ ಅಧ್ಯಕ್ಷ ಭುವನೇಶ್ವರ ಶಿಡ್ಲಾಪುರ ಹೇಳಿದರು.