ಕೃಷಿ ಸಂಕಷ್ಟ, ಸಾಲ ಬಾಧೆ, ಬರಗಾಲ ಹಾಗೂ ಬೆಳೆ ನಷ್ಟ ಸೇರಿ ವಿವಿಧ ರೀತಿಯ ಸಮಸ್ಯೆಗಳ ಸುಳಿಯಲ್ಲಿ ಸಿಲುಕಿದ ಪರಿಣಾಮ ಜಿಲ್ಲೆಯಲ್ಲಿ ರೈತರ ಆತ್ಮಹತ್ಯೆ ಪ್ರಕರಣಗಳು ಆತಂಕಕಾರಿ ಸನ್ನಿವೇಶ ತಿಳಿಸುತ್ತದೆ.

ಕನ್ನಡಪ್ರಭ ವಾರ್ತೆ ರಾಯಚೂರು

ಕೃಷಿ ಸಂಕಷ್ಟ, ಸಾಲ ಬಾಧೆ, ಬರಗಾಲ ಹಾಗೂ ಬೆಳೆ ನಷ್ಟ ಸೇರಿ ವಿವಿಧ ರೀತಿಯ ಸಮಸ್ಯೆಗಳ ಸುಳಿಯಲ್ಲಿ ಸಿಲುಕಿದ ಪರಿಣಾಮ ಜಿಲ್ಲೆಯಲ್ಲಿ ರೈತರ ಆತ್ಮಹತ್ಯೆ ಪ್ರಕರಣಗಳು ಆತಂಕಕಾರಿ ಸನ್ನಿವೇಶ ತಿಳಿಸುತ್ತದೆ.

ಜಿಲ್ಲಾಡಳಿತ, ಕೃಷಿ ಇಲಾಖೆ ಹಾಗೂ ಜಿಲ್ಲಾ ಪೊಲೀಸ್‌ ಇಲಾಖೆಗಳಲ್ಲಿ ದಾಖಲಾದ ರೈತರ ಆತ್ಮಹತ್ಯೆ ಪ್ರಕರಣಗಳು, ಪರಿಹಾರಕ್ಕೆ ಅರ್ಹತೆ ಪಡೆದವು ಹಾಗೂ ಅನರ್ಹತೆಯಿಂದ ತಿರಸ್ಕೃತಗೊಂಡವುಗಳ ಸಂಖ್ಯೆಗಳ ಮೇಲೆ ಕಣ್ಣಾಡಿಸಿದರೇ ಎಂಥವರಿಗಾದರೂ ಕಣ್ಣುಗಳನ್ನು ಒದ್ದೆಯಾಗಿಸುತ್ತದೆ.

2021 ರಿಂದ 2026ರವರೆಗಿನ ಅಂಕಿ-ಅಂಶಗಳ ಪ್ರಕಾರ ಜಿಲ್ಲೆಯಲ್ಲಿ ಒಟ್ಟು 113 ರೈತರ ಆತ್ಮಹತ್ಯೆ ಪ್ರಕರಣಗಳು ವರದಿಯಾಗಿದ್ದು, ಈ ಪೈಕಿ 88 ಪ್ರಕರಣಗಳನ್ನು ಪರಿಹಾರಕ್ಕೆ ಅರ್ಹವೆಂದು ಗುರುತಿಸಲಾಗಿದೆ. ಉಳಿದ 25 ಪ್ರಕರಣಗಳನ್ನು ತಿರಸ್ಕರಿಸಲಾಗಿದೆ. ಅರ್ಹ ಪ್ರಕರಣಗಳ ಪೈಕಿ 84 ಪ್ರಕರಣಗಳಿಗೆ ಪರಿಹಾರ ವಿತರಿಸಲಾಗಿದೆ. ಸಿಂಧನೂರು ತಾಲೂಕಿನಲ್ಲಿ ಅತಿ ಹೆಚ್ಚು ಅಂದರೆ 56 ರೈತರ ಆತ್ಮಹತ್ಯೆ ಪ್ರಕರಣ ವರದಿಯಾಗಿದ್ದು, 39 ಪ್ರಕರಣಗಳು ಪರಿಹಾರಕ್ಕೆ ಅರ್ಹವೆಂದು ಗುರುತಿಸಲ್ಪಟ್ಟಿದ್ದು, 17 ಪ್ರಕರಣಗಳು ತಿರಸ್ಕೃತಗೊಂಡಿವೆ. 38 ಪ್ರಕರಣಗಳಿಗೆ ಪರಿಹಾರ ವಿತರಿಸಲಾಗಿದೆ. ಮಾನ್ವಿಯಲ್ಲಿ 23 ಪ್ರಕರಣಗಳು ವರದಿಯಾಗಿದ್ದು, 21 ಅರ್ಹ ಹಾಗೂ ಎರಡು ತಿರಸ್ಕೃತ ಪ್ರಕರಣಗಳಿವೆ. 18 ಪ್ರಕರಣಗಳಿಗೆ ಪರಿಹಾರ ನೀಡಲಾಗಿದೆ. ಮಸ್ಕಿಯಲ್ಲಿ 10 ಪ್ರಕರಣಗಳು ವರದಿಯಾಗಿದ್ದು, 9 ಅರ್ಹ ಹಾಗೂ ಒಂದು ತಿರಸ್ಕೃತ ಪ್ರಕರಣವಿದೆ. ದೇವದುರ್ಗದಲ್ಲಿ ಎಂಟು ಪ್ರಕರಣಗಳಲ್ಲಿ ಆರು ಅರ್ಹ, ಎರಡು ತಿರಸ್ಕೃತಗೊಂಡಿವೆ. ಲಿಂಗಸುಗೂರು ತಾಲೂಕಿನಲ್ಲಿ ಒಂಬತ್ತು ಪ್ರಕರಣಗಳಲ್ಲಿ ಏಳು ಅರ್ಹ, ಎರಡು ತಿರಸ್ಕೃತವಾಗಿವೆ. ರಾಯಚೂರು ತಾಲೂಕಿನಲ್ಲಿ ಐದು ಪ್ರಕರಣಗಳಲ್ಲಿ ನಾಲ್ಕು ಅರ್ಹ ಹಾಗೂ ಒಂದು ತಿರಸ್ಕೃತವಾಗಿದೆ. ಸಿರವಾರ ತಾಲೂಕಿನಲ್ಲಿ ವರದಿಯಾದ ಎರಡು ಪ್ರಕರಣಗಳೂ ಪರಿಹಾರಕ್ಕೆ ಅರ್ಹವೆಂದು ಗುರುತಿಸಲಾಗಿದೆ.

ಮೂರು ಆರ್ಥಿಕ ವರ್ಷಗಳಲ್ಲಿ ಜಿಲ್ಲೆಯಲ್ಲಿ ಒಟ್ಟು 55 ರೈತರ ಆತ್ಮಹತ್ಯೆ ಪ್ರಕರಣಗಳು ವರದಿಯಾಗಿದ್ದು, 42 ಪ್ರಕರಣಗಳು ಅರ್ಹ ಹಾಗೂ 13 ಪ್ರಕರಣಗಳು ತಿರಸ್ಕೃತಗೊಂಡಿವೆ. ವಿಶೇಷವಾಗಿ 2025-26ನೇ ಸಾಲಿನಲ್ಲಿ ವರದಿಯಾದ 17 ಪ್ರಕರಣಗಳ ಪೈಕಿ 7 ಪ್ರಕರಣಗಳು ತಿರಸ್ಕೃತಗೊಂಡಿದ್ದು, ಸುಮಾರು 2.2 ಕೋಟಿ ರು. ಪರಿಹಾರ ಮೊತ್ತವನ್ನು ಆತ್ಮಹತ್ಯೆ ಮಾಡಿಕೊಂಡ ಕುಟುಂಬಗಳಿಗೆ ವಿತರಿಸಲಾಗಿದೆ. 2023-24 ನೇ ಸಾಲಿನಲ್ಲಿ ಜಿಲ್ಲೆಯಲ್ಲಿ 15 ರೈತರ ಆತ್ಮಹತ್ಯೆ ಪ್ರಕರಣಗಳು ವರದಿಯಾಗಿದ್ದು, 13 ಪ್ರಕರಣಗಳು ಪರಿಹಾರಕ್ಕೆ ಅರ್ಹವೆಂದು ಗುರುತಿಸಲ್ಪಟ್ಟರೆ, 2 ಪ್ರಕರಣಗಳು ತಿರಸ್ಕೃತಗೊಂಡಿವೆ.

2024-25ನೇ ಸಾಲಿನಲ್ಲಿ ಪ್ರಕರಣಗಳ ಸಂಖ್ಯೆ 23ಕ್ಕೆ ಏರಿಕೆಯಾಗಿದ್ದು, 19 ಅರ್ಹ ಹಾಗೂ 4 ತಿರಸ್ಕೃತ ಪ್ರಕರಣಗಳಾಗಿವೆ. 2025-26ನೇ ಸಾಲಿನಲ್ಲಿ 17 ಪ್ರಕರಣಗಳು ವರದಿಯಾಗಿದ್ದು, 10 ಅರ್ಹವೆಂದು ಪರಿಗಣಿಸಲಾಗಿದೆ. ಉಳಿದ 7 ಪ್ರಕರಣಗಳು ತಿರಸ್ಕೃತಗೊಂಡಿವೆ.

ತುಂಗಭದ್ರಾ ಎಡದಂಡೆ ಕಾಲುವೆ ಹಾಗೂ ನಾರಾಯಣಪುರ ಬಲದಂಡೆ ಕಾಲುವೆಗಳು ಹರಿಯುವಂತಹ ಪ್ರದೇಶದಲ್ಲಿಯೇ ರೈತರ ಆತ್ಮಹತ್ಯೆ ಸಂಖ್ಯೆಗಳು ಹೆಚ್ಚಾಗಿ ನಡೆಯುತ್ತಿರುವುದು ಜಿಲ್ಲೆಯ ವ್ಯಾಪ್ತಿಯಲ್ಲಿ ಕೃಷಿ ಕ್ಷೇತ್ರದ ಸುರಕ್ಷತೆ ಬಿಂಬಿಸುವಂತೆ ಮಾಡಿದೆ. ಅದರಲ್ಲಿಯೂ ನೀರಾವರಿ ಪ್ರದೇಶದ ವ್ಯಾಪ್ತಿಯ ಸಿಂಧನೂರು, ಮಾನ್ವಿ ತಾಲೂಕುಗಳಲ್ಲಿ ರೈತರು ಹೆಚ್ಚಾಗಿ ಪ್ರಾಣತ್ಯಾಗಕ್ಕೆ ಮುಂದಾಗುತ್ತಿದ್ದಾರೆ.

ಆತ್ಮಹತ್ಯೆಗಳಿಗೆ ಇಲ್ಲವೇ ಬ್ರೇಕ್‌ ?: ರಾಯಚೂರು ಜಿಲ್ಲೆಯನ್ನು ಸಂಪೂರ್ಣವಾಗಿ ನೀರಾವರಿ ಪ್ರದೇಶವನ್ನಾಗಿಸಬೇಕು. ಟಿಎಲ್‌ಬಿಸಿ, ಎನ್‌ಆರ್‌ಬಿಸಿ ಅಚ್ಚುಕಟ್ಟು ಪ್ರದೇಶದ ಮೇಲ್ಭಾಗದಲ್ಲಿ ಅಕ್ರಮ ನೀರಾವರಿ ತಡೆದು ಕೆಳಭಾಗದ ರೈತರಿಗೆ ನಿಗದಿತ ಪ್ರಮಾಣದಲ್ಲಿ ಸಮರ್ಪಕವಾಗಿ ನೀರನ್ನು ಹರಿಸಬೇಕು. ಉಭಯ ಕಾಲುವೆಗಳ ಆಧುನೀಕರಣ ಕಾರ್ಯ ಪರಿಣಾಮಕಾರಿಯಾಗಿ ನಡೆಯಬೇಕು. ಮಳೆಯಾಶ್ರಿತ ಪ್ರದೇಶಗಳಲ್ಲಿ ಇನ್ನು ಹೆಚ್ಚಾಗಿ ಏತನೀರಾವರಿ ಯೋಜನೆಗಳನ್ನು ರೂಪಿಸಿ ಅನುಷ್ಠಾನಕ್ಕೆ ತರಬೇಕು. ಕಳಪೆ ಗುಣಮಟ್ಟದ ಬಿತ್ತನೆ ಬೀಜಗಳ ಮಾರಾಟ ನಿಯಂತ್ರಿಸುವುದು, ಕಡಿಮೆ ದರದಲ್ಲಿ ರಸಗೊಬ್ಬರಗಳು, ಬಿತ್ತನೆ ಬೀಜ, ಕೃಷಿ ಪರಿಕರಗಳನ್ನು ಒದಗಿಸುವುದು, ಬೆಳೆಗಳು ಕೈ ಸೇರಿದ ನಂತರ ಅವುಗಳಿಗೆ ವೈಜ್ಞಾನಿಕ ದರ ನಿಗದಿ ಪಡಿಸುವುದು, ಸಾಲ ಮಾಡಿದ ರೈತರಿಗೆ ವಿಶೇಷ ಸಬ್ಸಿಡಿಗಳನ್ನು ಘೋಷಣೆ ಮಾಡುವುದು, ವರ್ಷಗಳ ಕಾಲ ಒಂದೇ ಒಂದು ಬೆಳೆಯನ್ನು ಬೆಳೆಯದೆ ಸಮಗ್ರ ಕೃಷಿ ಪದ್ಧತಿ, ಲಾಭದಾಯಕ ಕೃಷಿಗೆ ಏನು ಮಾಡಬೇಕು ಎನ್ನುವುದರ ಕುರಿತು ಮತ್ತಷ್ಟು ಜಾಗೃತಿ ಮೂಡಿಸುವುದರ ಜೊತೆಗೆ ಈ ಭಾಗದ ರೈತರ ಬದುಕು-ಬವಣೆ, ಸುಧಾರಣೆಗೆ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಸಮಗ್ರ ಅಧ್ಯಯನ ಹಾಗೂ ಪರಿಹಾರದ ಕ್ರಮಗಳನ್ನು ರೂಪಿಸುವುದರ ಬಗ್ಗೆ ತಜ್ಞರ ತಂಡ ರಚಿಸುವುದು ಸೇರಿ ಅನೇಕ ರೀತಿಯ ಮಾರ್ಗಗಳಿವೆ., ಸ್ಥಳೀಯ ಜನಪ್ರತಿನಿಧಿಗಳು, ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ, ಜಿಲ್ಲಾಡಳಿತ, ಕೃಷಿ ಇಲಾಖೆ ಹಾಗೂ ಕೃಷಿ ಸಂಬಂಧಿತ ಸಂಘಟನೆಗಳು ಒಗ್ಗಟ್ಟಾಗಿ ದುಡಿಯಬೇಕು ಎನ್ನುವುದು ಈ ಭಾಗದ ರೈತರ ಒತ್ತಾಸೆ