ಸಾರಾಂಶ
ಅತಿವೃಷ್ಟಿಯಿಂದಾಗಿ ಗಡಿ ಜಿಲ್ಲೆ ಬೆಳಗಾವಿಯಲ್ಲಿ ಮುಂಗಾರು ಹಂಗಾಮಿನಲ್ಲಿ ಬೆಳೆದಿದ್ದ ಸುಮಾರು 56000 ಹೆಕ್ಟೇರ್ ಪ್ರದೇಶದಲ್ಲಿದ್ದ ಕೃಷಿ ಹಾಗೂ ತೋಟಗಾರಿಕೆ ಬೆಳೆಗಳು ಹಾನಿಗೀಡಾಗಿವೆ. ರೈತ ಬೆಳೆದ ಕೋಟ್ಯಂತರ ರುಪಾಯಿ ಮೌಲ್ಯದ ಬೆಳೆಗಳು ನೀರು ಪಾಲಾಗಿದ್ದು, ರೈತರು ಆರ್ಥಿಕ ಸಂಕಷ್ಟಕ್ಕೆ ಸಿಲುಕುವಂತಾಗಿದೆ.
ಶ್ರೀಶೈಲ ಮಠದ
ಕನ್ನಡಪ್ರಭ ವಾರ್ತೆ ಬೆಳಗಾವಿಅತಿವೃಷ್ಟಿಯಿಂದಾಗಿ ಗಡಿ ಜಿಲ್ಲೆ ಬೆಳಗಾವಿಯಲ್ಲಿ ಮುಂಗಾರು ಹಂಗಾಮಿನಲ್ಲಿ ಬೆಳೆದಿದ್ದ ಸುಮಾರು 56000 ಹೆಕ್ಟೇರ್ ಪ್ರದೇಶದಲ್ಲಿದ್ದ ಕೃಷಿ ಹಾಗೂ ತೋಟಗಾರಿಕೆ ಬೆಳೆಗಳು ಹಾನಿಗೀಡಾಗಿವೆ. ರೈತ ಬೆಳೆದ ಕೋಟ್ಯಂತರ ರುಪಾಯಿ ಮೌಲ್ಯದ ಬೆಳೆಗಳು ನೀರು ಪಾಲಾಗಿದ್ದು, ರೈತರು ಆರ್ಥಿಕ ಸಂಕಷ್ಟಕ್ಕೆ ಸಿಲುಕುವಂತಾಗಿದೆ. ಇನ್ನೇನು ಬೆಳೆ ಬರುತ್ತದೆ ಎಂಬ ನಿರೀಕ್ಷೆಯಲ್ಲಿದ್ದ ರೈತರಿಗೆ ಮಳೆ ಸಂಕಷ್ಟ ತಂದೊಡ್ಡಿದೆ. ತಾವು ಬೆಳೆದ ಬೆಳೆಗಳೆಲ್ಲವೂ ತಮ್ಮ ಕಣ್ಣ ಮುಂದೆಯೇ ನದಿ ಪ್ರವಾಹದಲ್ಲಿ ಕೊಚ್ಚಿಹೋಗಿವೆ. ನದಿ ನೀರಿನಲ್ಲಿ ಕೊಳೆತು ಹೋಗಿವೆ. ಕೈಗೆ ಬಂದ ತುತ್ತು ಬಾಯಿಗೆ ಬಾರದ ಸ್ಥಿತಿಯನ್ನು ಜಿಲ್ಲೆಯ ರೈತರು ಎದುರಿಸುವಂತಾಗಿದೆ.
ನೆರೆಯ ಮಹಾರಾಷ್ಟ್ರದ ಪಶ್ಚಿಮ ಘಟ್ಟ ಪ್ರದೇಶದಲ್ಲಿ ಹಾಗೂ ಜಿಲ್ಲೆಯಲ್ಲಿ ಧಾರಾಕಾರ ಮಳೆ ಸುರಿದಿದೆ. ಮಹಾರಾಷ್ಟ್ರದ ಕೊಯ್ನಾ ಸೇರಿದಂತೆ ಇತರೆ ಜಲಾಶಯಗಳು ಭರ್ತಿಯಾಗಿವೆ. ಇದರಿಂದಾಗಿ ಕೃಷ್ಣಾ ಮತ್ತು ಅದರ ಉಪನದಿಗಳಾದ ವೇದಗಂಗಾ, ದೂಧಗಂಗಾ ಹಾಗೂ ಘಟಪ್ರಭಾ, ಮಲಪ್ರಭಾ ನದಿಗಳು ಸೇರಿದಂತೆ ಜಿಲ್ಲೆಯ ಇತರೆ ನದಿಗಳು, ಹಳ್ಳ, ಕೊಳ್ಳಗಳು ಉಕ್ಕಿ ಹರಿದಿವೆ. ನದಿತೀರದ ಪ್ರದೇಶಗಳ ಸುತ್ತಮುತ್ತಲಿನ ಹೊಲಗದ್ದೆಗಳಿಗೆ ನದಿ ನೀರು ನುಗ್ಗಿ, ಬೆಳೆಗಳು ನೀರಿನಲ್ಲಿ ನಿಂತಿದ್ದವು. ಜಿಲ್ಲೆಯ ಎಲ್ಲ ನದಿಗಳು ಅಪಾಯ ಮಟ್ಟ ಮೀರಿ ಹರಿದಿದ್ದವು. ಅಲ್ಲದೇ, ಘಟಪ್ರಭಾ ಮತ್ತು ಮಲಪ್ರಭಾ ಜಲಾಶಯಗಳು ಸಂಪೂರ್ಣವಾಗಿ ಭರ್ತಿಯಾಗಿವೆ. ಜೊತೆಗೆ ಬೆಳಗಾವಿ ನಗರಕ್ಕೆ ಕುಡಿಯುವ ನೀರುಪೂರೈಸುವ ರಕ್ಕಸಕೊಪ್ಪ ಜಲಾಶಯ ಕೂಡ ಭರ್ತಿಯಾಗಿದೆ. ಮುಂದಿನ ಬೇಸಿಗೆಕಾಲದವರೆಗೆ ಕುಡಿಯುವ ನೀರಿಗೇನೂ ತೊಂದರೆಯಾಗದು. ಆದರೆ, ನದಿತೀರದಲ್ಲಿನ ಹೊಲಗದ್ದೆಗಳಲ್ಲಿ ಬೆಳೆಗಳು ನೀರು ಪಾಲಾಗಿವೆ. ಕೋಟ್ಯಾಂತರ ರುಪಾಯಿ ಮೌಲ್ಯದ ಬೆಳೆಗಳು ಹಾನಿಗೀಡಾಗಿವೆ.ಜಿಲ್ಲೆಯಲ್ಲಿ ಈ ಬಾರಿ ವಾಡಿಕೆ ಪ್ರಮಾಣಕ್ಕಿಂತ ಹೆಚ್ಚು ಮಳೆ ಆಗಿದೆ. ಕಳೆದ ಜೂನ್ 1ರಿಂದ ಆಗಸ್ಟ್ 31ರವರೆಗೆ ವಾಡಿಕೆ ಮಳೆಯ ಪ್ರಮಾಣ 476 ಮಿ.ಮೀ. ಆಗಬೇಕಿತ್ತು. ಆದರೆ, ಪ್ರಸ್ತುತ 595 ಮಿ.ಮೀ . ಮಳೆಯಾಗಿದೆ. ಹೆಚ್ಚುವರಿಯಾಗಿ 119 ಮಿ.ಮೀ. ಮಳೆಯಾಗಿದೆ. ಮಹಾರಾಷ್ಟ್ರದ ಪಶ್ಚಿಮ ಘಟ್ಟ ಪ್ರದೇಶದಲ್ಲಿ ಭಾರೀ ಮಳೆ ಸುರಿದಿದ್ದು, ಮಹಾರಾಷ್ಟ್ರದ ಕೊಯ್ನಾ, ರಾಜಾಪುರ ಸೇರಿದಂತೆ ಇತರೆ ಜಲಾಶಯಗಳು ಭರ್ತಿಯಾಗಿವೆ. ಮಹಾರಾಷ್ಟ್ರ ಜಲಾಶಯಗಳಿಂದ ಭಾರೀ ಪ್ರಮಾಣದಲ್ಲಿ ಕೃಷ್ಣಾ ನದಿಗೆ ನೀರು ಹರಿಬಿಡಲಾಯಿತು. ಜಿಲ್ಲೆಯ ಕೃಷ್ಣಾ, ಮಲಪ್ರಭಾ, ಘಟಪ್ರಭಾ ಸೇರಿದಂತೆ ಇತರೆ ನದಿಗಳು ಅಪಾಯ ಮಟ್ಟ ಮೀರಿ ಹರಿದವು. ನದಿತೀರದ ಹೊಲಗದ್ದೆಗಳಿಗೂ ನೀರು ನುಗ್ಗಿದೆ. ಇದರಿಂದಾಗಿ ಜಿಲ್ಲೆಯಲ್ಲಿ ಸುಮಾರು 55000 ಹೆಕ್ಟೇರ್ ಪ್ರದೇಶದಲ್ಲಿದ್ದ ಕೃಷಿ ಬೆಳೆ ಹಾಗೂ 1500 ಹೆಕ್ಟೇರ್ ಪ್ರದೇಶದಲ್ಲಿದ್ದ ತೋಟಗಾರಿಕೆ ಬೆಳೆಗಳು ನೀರು ಪಾಲಾಗಿವೆ. ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ಮೇ ಮತ್ತು ಜೂನ್ ತಿಂಗಳಲ್ಲಿ ಉತ್ತಮ ಮಳೆಯಾಗಿತ್ತು. ಜಿಲ್ಲೆಯಲ್ಲಿ ಒಟ್ಟು 7.32 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಗುರಿಹೊಂದಲಾಗಿತ್ತು. 7.25 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಅಂದರೆ ಶೇ. 99 ರಷ್ಟು ಬಿತ್ತನೆಯಾಗಿದೆ. ಈ ಪೈಕಿ ಸುಮಾರು 55 ಸಾವಿರ ಹೆಕ್ಟೇರ್ ಪ್ರದೇಶದಲ್ಲಿನ ಬೆಳೆ ಹಾನಿಗೀಡಾಗಿದೆ. ನದಿತೀರದಲ್ಲಿದ್ದ 10 ಸಾವಿರ ಹೆಕ್ಟೇರ್ ಪ್ರದೇಶದಲ್ಲಿನ ಕಬ್ಬು, 31970 ಹೆಕ್ಟೇರ್ ಹೆಸರು, 12 ಸಾವಿರ ಹೆಕ್ಟೇರ್ ಗೋವಿನ ಜೋಳ, 3500 ಹೆಕ್ಟೇರ್ ಪ್ರದೇಶದಲ್ಲಿನ ಸೋಯಾಬಿನ್ ಬೆಳೆಹಾನಿಗೀಡಾಗಿದೆ. 11 ಸಾವಿರ ಹೆಕ್ಟೇರ್ ಭತ್ತ ಸೇರಿದಂತೆ ಇತರೆ ಬೆಳೆ ನೀರುಪಾಲಾಗಿವೆ. ಸೋಯಾಬಿನ್ ಬೆಳೆಗೆ ಕೀಟ ಬಾಧೆ ತಗುಲಿದ್ದರಿಂದ ಕಾಯಿಗಳೇ ಬಿಟ್ಟಿರಲಿಲ್ಲ. ಸೋಯಾಬಿನ್ ಬೆಳೆ ಕೈಕೊಟ್ಟಿದ್ದರಿಂದ ಬೈಲಹೊಂಗಲ, ಸವದತ್ತಿ ತಾಲೂಕಿನ ರೈತರು ಸೋಯಾಬಿನ್ ಬೆಳೆಯನ್ನು ಟ್ರ್ಯಾಕ್ಟರ್ ಮೂಲಕ ನೆಲಸಮಗೊಳಿಸಿದ್ದರು. ಬೆಳೆಹಾನಿಯಿಂದಾಗಿ ಸಂಕಷ್ಟಕ್ಕೆ ಸಿಲುಕಿರುವ ರೈತರ ನೆರವಿಗೆ ಕೂಡಲೇ ಸರ್ಕಾರ ಧಾವಿಸಬೇಕು ಎಂದು ರೈತರು ಆಗ್ರಹಿಸಿದ್ದಾರೆ.ಬೆಳಗಾವಿ ಜಿಲ್ಲೆಯಲ್ಲಿ ಭಾರೀ ಪ್ರಮಾಣದ ಮಳೆ ಆಗಿದ್ದರಿಂದ ಜಿಲ್ಲೆಯಲ್ಲಿ ನದಿತೀರದಲ್ಲಿನ ಅಪಾರ ಪ್ರಮಾಣದ ಬೆಳೆಗಳು ನೀರಿನಲ್ಲಿ ನಿಂತು ಹಾನಿಗೀಡಾಗಿವೆ. ಇದರಿಂದಾಗಿ ಆರ್ಥಿಕ ಸಂಕಷ್ಟದಲ್ಲಿರುವ ರೈತರ ನೆರವಿಗೆ ಸರ್ಕಾರ ಕೂಡಲೇ ಪರಿಹಾರ ನೀಡಲು ಕ್ರಮ ಕೈಗೊಳ್ಳಬೇಕು.- ಸಿದಗೌಡ ಮೋದಗಿ,
ರೈತ ಮುಖಂಡರು.ಧಾರಾಕಾರ ಮಳೆ ಹಾಗೂ ನದಿಗಳ ಪ್ರವಾಹದಿಂದ ಜಿಲ್ಲೆಯಲ್ಲಿ ಪ್ರಾಥಮಿಕ ವರದಿ ಪ್ರಕಾರ ಸುಮಾರು 55 ಸಾವಿರ ಹೆಕ್ಟೇರ್ ಪ್ರದೇಶದಲ್ಲಿನ ಕೃಷಿ ಹಾಗೂ ತೋಟಗಾರಿಕೆ ಬೆಳೆಗಳು ಹಾನಿಗೀಡಾಗಿವೆ. ಮಳೆ ನಿಂತ ಬಳಿಕ ಅಧಿಕಾರಿಗಳಿಂದ ಬೆಳೆ ಹಾನಿ ಸಮೀಕ್ಷೆ ನಡೆಸಲಾಗುವುದು. - ಮೊಹಮ್ಮದ್ ರೋಷನ್, ಜಿಲ್ಲಾಧಿಕಾರಿ.