ಸಾರಾಂಶ
ಗ್ರಾಮೀಣ ಪ್ರದೇಶದಲ್ಲಿ ರೈತರು ಕಷ್ಟ ಪಟ್ಟು ಬೆಳೆದ ಬೆಳೆ ಮಂಗ, ಕ್ಯಾಚಾಳ ಮತ್ತು ಕಾಡು ಹಂದಿಗಳ ಪಾಲಾಗುತ್ತಿರುವುದು ರೈತರ ಅಸಮಾಧಾನಕ್ಕೆ ಕಾರಣವಾಗಿದೆ.
ಒಂದೆಡೆ ಎಲೆ ಚುಕ್ಕಿ ರೋಗದ ಭೀತಿ, ಮತ್ತೊಂದೆಡೆ ಬೆಳೆ ಕಾಡು ಪ್ರಾಣಿಗಳ ಪಾಲು
ರಾಘವೇಂದ್ರ ಹೆಬ್ಬಾರ್ಕನ್ನಡಪ್ರಭ ವಾರ್ತೆ ಭಟ್ಕಳ
ಗ್ರಾಮೀಣ ಪ್ರದೇಶದಲ್ಲಿ ರೈತರು ಕಷ್ಟ ಪಟ್ಟು ಬೆಳೆದ ಬೆಳೆ ಮಂಗ, ಕ್ಯಾಚಾಳ ಮತ್ತು ಕಾಡು ಹಂದಿಗಳ ಪಾಲಾಗುತ್ತಿರುವುದು ರೈತರ ಅಸಮಾಧಾನಕ್ಕೆ ಕಾರಣವಾಗಿದೆ.ಈ ಸಲ ಮಳೆ ಹೆಚ್ಚು ಬಿದ್ದಿರುವುದರಿಂದ ಬತ್ತ, ಅಡಿಕೆ ಮುಂತಾದ ಬೆಳೆಗಳಿಗೆ ತೊಂದರೆ ಆಗಿದೆ. ಬತ್ತದ ಬೆಳೆ ಕೊಯ್ಯುವ ಸಂದರ್ಭದಲ್ಲೇ ಭಾರೀ ಪ್ರಮಾಣದಲ್ಲಿ ಮಳೆ ಸುರಿಯುತ್ತಿದೆ. ವ್ಯಾಪಕ ಮಳೆಗೆ ಅಡಿಕೆಗೆ ಕೊಳೆ ರೋಗ ಹೆಚ್ಚು ತಗುಲಿದ್ದು, ರೈತರು ಚಿಂತಾಕ್ರಾಂತರು ಆಗಿರುವಾಗಲೇ ಎಲೆ ಚುಕ್ಕಿ ರೋಗ ಎಲ್ಲೆಡೆ ಬಂದಿದ್ದು, ಅಡಿಕೆ ಗಿಡ ಮತ್ತು ಮರ ಹಾಳಾಗುವ ಹಂತಕ್ಕೆ ಬಂದಿದೆ. ಶೇ. 40ಕ್ಕೂ ಅಧಿಕ ತೋಟಗಳಲ್ಲಿ ಅಡಿಕೆ ಗಿಡ, ಮರಗಳಿಗೆ ಎಲೆ ಚುಕ್ಕಿ ರೋಗ ತಗುಲಿದ್ದು, ಇದರ ಕಡಿವಾಣಕ್ಕೆ ಹಲವು ವಿಧಾನ, ಔಷಧ ಬಳಸಿದರೂ ಪ್ರಯೋಜವಾಗುತ್ತಿಲ್ಲ ಎನ್ನುವ ಅಭಿಪ್ರಾಯ ಕೇಳಿ ಬಂದಿದೆ. ಬೆಳೆಗಳಿಗೆ ರೋಗದ ಕಾಟದ ಜೊತೆಗೆ ಕಷ್ಟಪಟ್ಟು ಬೆಳೆದ ಬೆಳೆ ಮಂಗಗಳು, ಕ್ಯಾಚಾಳ, ಕಾಡು ಹಂದಿ ಮುಂತಾದವುಗಳ ಪಾಲಾಗುತ್ತಿದೆ. ಕೃಷಿಯನ್ನೇ ನಂಬಿರುವ ನಾವು ಜೀವನ ನಿರ್ವಹಣೆಗೆ ಏನು ಮಾಡುವುದು ಎಂದು ರೈತರು ಪ್ರಶ್ನಿಸುತ್ತಿದ್ದಾರೆ.
ಗ್ರಾಮಾಂತರ ಭಾಗದಲ್ಲಿ ಮಂಗಗಳ ಮತ್ತು ಕ್ಯಾಚಾಳ, ಕಾಡು ಹಂದಿಗಳ ಲೂಟಿಗೆ ರೈತರು ರೋಸಿ ಹೋಗಿದ್ದಾರೆ. ರೈತರ ಪರಿಸ್ಥಿತಿ ಹೇಗಾಗಿದೆ ಎಂದರೆ ಮಂಗಗಳನ್ನು ಓಡಿಸಲು ಮಾಡಿದ ಎಲ್ಲಾ ತಂತ್ರಗಾರಿಕೆ ವಿಫಲಗೊಂಡ ಹಿನ್ನೆಲೆ ಮಂಗಗಳು ತೋಟಕ್ಕೆ ಬಂದು ಬಾಳೆಗೊನೆ, ಸಿಂಹಾಳ, ಬೇರಲಸು ಸೇರಿದಂತೆ ವಿವಿಧ ಬೆಳೆಗಳನ್ನು ಯಥೇಚ್ಛವಾಗಿ ತಿಂದು ಹೋಗುವಂತೆ ಆಗಿದೆ. ಏನೇ ಮಾಡಿದರೂ ಮಂಗಗಳನ್ನು ಮಾತ್ರ ಓಡಿಸಲು ಸಾಧ್ಯವಾಗುತ್ತಿಲ್ಲ. ಮಂಗಗಳ ಲೂಟಿ ಸ್ವಲ್ಪ ಕಡಿಮೆ ಆಯಿತು ಎನ್ನುವಾಗಲೇ, ಕ್ಯಾಚಾಳದ ಲೂಟಿ, ರಾತ್ರಿ ಹೊತ್ತು ಕಾಡು ಹಂದಿಗಳ ಹಾವಳಿಗೆ ರೈತರು ಸೋತು ಹೋಗಿದ್ದಾರೆ. ದಿನದಿಂದ ದಿನಕ್ಕೆ ಕಾಡು ಪ್ರಾಣಿಗಳ ಬೆಳೆ ಲೂಟಿ ಹೆಚ್ಚುತ್ತಿದೆ. ಕಾಡು ಪ್ರಾಣಿಗಳ ಲೂಟಿಗೆ ಸರಕಾರದಿಂದಲೂ ಯಾವುದೇ ರೀತಿಯ ಪರಿಹಾರ ಸಿಗುತ್ತಿಲ್ಲ. ಕಾಡಲ್ಲಿರಬೇಕಾದ ಕಾಡು ಪ್ರಾಣಿಗಳು ಆಹಾರ ಅರಸಿ ನಾಡಿಗೆ ಬರುತ್ತಿದೆ. ಸದ್ಯ ಸಿಂಹಾಳ, ತೆಂಗಿನ ಕಾಯಿ, ಬಾಳೆಕಾಯಿಗೆ ಉತ್ತಮ ದರ ಇದೆ. ಆದರೆ ಬೆಳೆದ ಬೆಳೆ ಕಾಡು ಪ್ರಾಣಿಗಳ ಪಾಲಾದರೆ ರೈತರಿಗೆ ಈ ದರ ಸಿಗುವುದು ಹೇಗೆ ಎನ್ನುವಂತಾಗಿದೆ. ಕಾಡು ಪ್ರಾಣಿಗಳ ಬೆಳೆ ಲೂಟಿಗೆ ರೋಸಿ ಹೋಗಿರುವ ರೈತರು ಪರಿಹಾರಕ್ಕೆ ಆಗ್ರಹಿಸಿದ್ದಾರೆ. ಅರಣ್ಯ ಇಲಾಖೆಯವರು ಕಾಡು ಪ್ರಾಣಿಗಳಿಂದಾಗುತ್ತಿರುವ ಬೆಳೆ ಹಾನಿಯನ್ನು ಗಂಭೀರವಾಗಿ ಪರಿಗಣಿಸಿ ಕಾಡು ಪ್ರಾಣಿಗಳ ಹಾವಳಿಗೆ ಕಡಿವಾಣ ಹಾಕಬೇಕೆಂಬ ಆಗ್ರಹ ಕೇಳಿ ಬಂದಿದೆ.ಭಟ್ಕಳದ ಹಾಡವಳ್ಳಿ ಸೇರಿದಂತೆ ಗ್ರಾಮೀಣ ಭಾಗದಲ್ಲಿ ಕಾಡು ಪ್ರಾಣಿಗಳ ಹಾವಳಿಯಿಂದ ಬೆಳೆ ನಾಶ ಆಗುತ್ತಿದ್ದು, ರೈತರು ಕಷ್ಟಪಟ್ಟ ಬೆಳೆದ ಬೆಳೆ ಹಾನಿಯಾಗುತ್ತಿದೆ. ಕಾಡು ಪ್ರಾಣಿಗಳ ನಿಯಂತ್ರಣಕ್ಕೆ ಅರಣ್ಯ ಇಲಾಖೆ ಸೂಕ್ತ ಕ್ರಮ ಕೈಗೊಳ್ಳಬೇಕು ಮತ್ತು ಕಾಡು ಪ್ರಾಣಿಯಿಂದಾದ ಬೆಳೆ ಹಾನಿಗೆ ಸರ್ಕಾರದಿಂದ ರೈತರಿಗೆ ಸೂಕ್ತ ಪರಿಹಾರ ಸಿಗುವಂತಾಗಬೇಕು ಎನ್ನುತ್ತಾರೆ ಹಾಡವಳ್ಳಿಯ ಪ್ರಗತಿಪರ ರೈತ ಪದ್ಮರಾಜ ಜೈನ್.;Resize=(128,128))
;Resize=(128,128))
;Resize=(128,128))
;Resize=(128,128))
;Resize=(128,128))