ಸಾರಾಂಶ
ಚಿಕ್ಕಪ್ಪನಹಳ್ಳಿ ಷಣ್ಮುಖ
ಕನ್ನಡಪ್ರಭ ವಾರ್ತೆ ಚಿತ್ರದುರ್ಗಚಿತ್ರದುರ್ಗ ನಗರದ ಪ್ರಮುಖ ಬಿ.ಡಿ.ರಸ್ತೆ ಅಗಲೀಕರಣಕ್ಕೆ ಮುಂದಾಗಿರುವ ಜಿಲ್ಲಾಡಳಿತದ ಮುಂದೆ ಬಹುದೊಡ್ಡ ಸವಾಲು ಇದೆ. 21ಮೀಟರ್‌ಗಳವರೆಗೆ ರಸ್ತೆ ಅಗಲೀಕರಣದ ನಿರ್ಣಯವಾಗಿದೆ. ವರ್ತಕರು ರಸ್ತೆ ಜಾಗ ಒತ್ತುವರಿ ಮಾಡಿ ಮಳಿಗೆಗಳ ನಿರ್ಮಿಸಿಕೊಂಡಿದ್ದರೆ ಓಕೆ. ಆದರೆ ಜಾಗಗಳು ವರ್ತಕರ ಸ್ವಂತ ಆಸ್ತಿಯಾಗಿದ್ದರೆ ಚಿತ್ರದುರ್ಗ ನಗರ ಮತ್ತೊಂದು ಬೃಹತ್ ಪ್ರಾಜೆಕ್ಟ್‌ಗೆ ರೆಡಿಯಾಗಬೇಕಾಗುತ್ತದೆ.
ರಸ್ತೆ ತೆರವು ಕಾರ್ಯಾಚರಣೆಗೆ ಏನಾದರೂ ಪರಿಹಾರ ನೀಡುವ ಬಾಬತ್ತು ಎದುರಾದರೆ ಕನಿಷ್ಟ ₹500 ಕೋಟಿ ಬೇಕಾಗುತ್ತದೆ. ರಾಜ್ಯ ಸರ್ಕಾರ ತೆರವು ಕಾರ್ಯಾಚರಣೆಗೆ ದುಡ್ಡು ನೀಡುವುದಿಲ್ಲವೆಂದು ಮೊದಲೇ ಸ್ಪಷ್ಟಪಡಿಸಿದೆ. ಹಾಗಾಗಿ ಚಿತ್ರದುರ್ಗ ನಗರಸಭೆ ಬಳಿ 500 ಕೋಟಿ ರು.ಇಡಿಗಂಟು ಇದೆಯಾ ಎಂಬ ಪ್ರಶ್ನೆ ಎದುರಾಗುತ್ತದೆ.ಚಿತ್ರದುರ್ಗದ ಬಿ.ಡಿ.ರಸ್ತೆ ನಿವೇಶನ, ಕಟ್ಟಡಗಳಿಗೆ ಸಬ್ ರಿಜಿಸ್ಟರ್ ವ್ಯಾಲ್ಯೂ (ಎಸ್ಆರ್ ರೇಟ್) ತುಂಬಾ ದುಬಾರಿಯಿದೆ. ಎಸ್‌ಬಿಎಂ ನಿಂದ ಗಾಂಧಿ ವೃತ್ತ ದಾಟಿ ಹೊಳಲ್ಕೆರೆ ರಸ್ತೆ ಮಾರ್ಗದಲ್ಲಿ ವಸತಿ ನಿವೇಶನಕ್ಕೆ ಪ್ರತಿ ಚದರ ಮೀಟರ್‌ಗೆ 86 ಸಾವಿರ ರು ಇದೆ. ಹಾಗೊಂದು ವೇಳೆ ವಾಣಿಜ್ಯವಾದರೆ ಇದಕ್ಕೆ ಹೆಚ್ಚುವರಿಯಾಗಿ ಶೇ.50ರಷ್ಟು ಮೊತ್ತ ಸೇರಿಸಬೇಕು. ಗ್ರೌಂಡ್‌ಫ್ಲೋರ್‌ಗೆ ಪ್ರತಿ ಚದರ ಮೀಟರ್‌ಗೆ 13,524 ರು.
ಫಸ್ಟ್ ಪ್ಲೋರ್‌ಗೆ 12,584 ರು. ಗ್ರಾನೈಟ್ ಹಾಕಿದ್ದರೆ ಚದರ ಮೀಟರ್‌ಗೆ 16,936 ರು. ನಿಗಧಿ ಪಡಿಸಲಾಗಿದೆ. ನಿವೇಶನದ ಮೌಲ್ಯದ ಜೊತೆಗೆ ಕಟ್ಟಡದ್ದು ಕಿಮ್ಮತ್ತು ಪರಿಗಣಿಸಬೇಕಾಗುತ್ತದೆ.ಕೇಂದ್ರ ಸರ್ಕಾರದ ಹೊಸ ಭೂ ಸ್ವಾಧೀನ ನಿಯಮಗಳ ಪ್ರಕಾರ ನಗರ ಪ್ರದೇಶದಲ್ಲಿ ಎರಡು ಪಟ್ಟು ಹಾಗೂ ಗ್ರಾಮೀಣ ಪ್ರದೇಶದಲ್ಲಿ ಎಸ್.ಆರ್.ದರದ ನಾಲ್ಕು ಪಟ್ಟು ಪರಿಹಾರ ಕೊಡಬೇಕೆಂದಿದೆ. ಚಿತ್ರದುರ್ಗದ ರಸ್ತೆ ಅಗಲೀಕರಣಕ್ಕೆ ಪರಿಹಾರ ಕೊಡುವ ಸಾಧ್ಯತೆ ಏನಾದರೂ ಎದುರಾದಲ್ಲಿ ಒಟ್ಟಾರೆ ಮೊತ್ತ 500 ಕೋಟಿ ದಾಟಲಿದೆ. ಇದಲ್ಲದೇ ಅಗಲೀಕರಣದ ನಂತರ ರಸ್ತೆ, ಚರಂಡಿ, ಫುಟ್‌ಪಾಥ್ ನಿರ್ಮಾಣಕ್ಕೆ ಪ್ರತ್ಯೇಕ ಅನುದಾನ ಕಾಯ್ದಿರಿಸಬೇಕಾಗುತ್ತದೆ.
ಭೂಸ್ವಾಧೀನಕ್ಕಾಗಿ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಸೂಕ್ತ ಅನುದಾನದ ಲಭ್ಯತೆಯಿಲ್ಲದೆ ರಸ್ತೆ ಅಗಲೀಕರಣ ಕಾಮಗಾರಿ ಕೈಗೊಳ್ಳಬಾರದು ಹಾಗೂ ಅಪೂರ್ಣ ಪ್ರಸ್ತಾವನೆಯನ್ನು ಪೌರಾಡಳಿತ ನಿರ್ದೇಶನಾಲಯಕ್ಕೆ ಸಲ್ಲಿಸಬಾರದು. ಕಾನೂನು ರೀತಿ ಭೂಸ್ವಾಧೀನ/ನೇರ ಖರೀದಿ ಮಾಡದೆ, ಖಾಸಗಿ ಭೂಮಿಯನ್ನು ಬಳಕೆ ಮಾಡಿಕೊಂಡು ರಸ್ತೆ ಅಗಲೀಕರಣ ಕಾರ್ಯ ಕೈಗೊಂಡಲ್ಲಿ ಅಂತಹ ಅಧಿಕಾರಿಗಳ ವಿರುದ್ಧ ನಿಯಮಾನುಸಾರ ಶಿಸ್ತುಕ್ರಮ ಕೈಗೊಳ್ಳಲಾಗುವುದು ಎಂದು ರಾಜ್ಯ ಸರ್ಕಾರ 3-10-2024 ರಂದು ಎಲ್ಲ ಜಿಲ್ಲಾಧಿಕಾರಿಗಳು ಹಾಗೂ ನಗರ ಸ್ಥಳೀಯ ಸಂಸ್ಥೆಗಳ ಪ್ರಮುಖ ಅಧಿಕಾರಿಗಳಿಗೆ ಕಳಿಸಿದ ಸುತ್ತೋಲೆಯಲ್ಲಿ ಎಚ್ಚರಿಸಿದೆ.ರಸ್ತೆ ಅಗಲೀಕರಣಕ್ಕಾಗಿ ಬಿ.ಡಿ ರಸ್ತೆ ಕಟ್ಟಡಗಳ ಪಟ್ಟಿಮಾಡಿ ಅವುಗಳ ಮೇಲೆ ನಗರಸಭೆ ಸಿಬ್ಬಂದಿ 21ಮೀ. ಮಾರ್ಕ ಮಾಡುವ ಕೆಲಸ ಆರಂಭಿಸಿದ್ದಾರೆ. 21ಮೀ. ಒಳಗಡೆ ಖಾಸಗಿ ಕಟ್ಟಡಗಳು ಬಂದಲ್ಲಿ ಪರಿಹಾರದ ಲೆಕ್ಕಾಚಾರ ಮಾಡಬೇಕು. ಇತ್ತೀಚೆಗಷ್ಟೇ ಸುಪ್ರೀಂಕೋರ್ಟ್ ಪ್ರಮುಖ ಆದೇಶ ಮಾಡಿ ಕಟ್ಟಡಗಳ ಏಕಾಏಕಿ ತೆರವುಗೊಳಿಸುವಂತಿಲ್ಲ. ಖಾಸಗಿಯೇ, ಸರ್ಕಾರದ್ದೆ ಎಂಬುದ ಖಚಿತಪಡಿಸಿಕೊಳ್ಳಬೇಕು. ಹಾಗೊಂದು ವೇಳೆ ಖಾಸಗಿಯದ್ದಾದರೆ ಪರಿಹಾರ ನೀಡಿದ ನಂತರವೇ ನೆಲಸಮ ಮಾಡಬೇಕು ಎಂದಿದೆ. ರಾಜ್ಯ ಸರ್ಕಾರ ಕೂಡಾ ಇದೇ ದಾಟಿಯಲ್ಲಿ ಸೂಚನೆಗಳ ರವಾನಿಸಿದೆ. ಅನುದಾನದ ಲಭ್ಯತೆ ಇಲ್ಲದೇ ರಸ್ತೆ ಅಗಲೀಕರಣ ಮಾಡಬಾರದೆಂದಿದೆ. ಹಾಗಾಗಿ ಅಗಲೀಕರಣದ ವಿಚಾರದಲ್ಲಿ ಎಚ್ಚರಿಕೆ ಹೆಜ್ಜೆ ಇಡುವುದರತ್ತ ನಗರಸಭೆ ಕಣ್ಣಾಯಿಸಬೇಕಾಗಿದೆ.
ಏತನ್ಮಧ್ಯೆ ಪ್ರಮುಖ ಬೀದಿಯ ವರ್ತಕರು ಜಿಲ್ಲಾಧಿಕಾರಿ ಭೇಟಿ ಮಾಡಿ ರಸ್ತೆ ಅಗಲೀಕರಣವ 21ಮೀ ನಿಂದ 15ಮೀ ವರೆಗೆ ಇಳಿಸುವಂತೆ ಮನವಿ ಮಾಡಿಕೊಳ್ಳಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಈ ಸಾಧ್ಯತೆಯನ್ನು ಕೂಡಾ ತಳ್ಳಿ ಹಾಕುವಂತಿಲ್ಲ. ಎರಡೂ ಬದಿಯಲ್ಲಿ ಕನಿಷ್ಟ 18 ಮೀ.ಗಾದರೂ ಜಿಲ್ಲಾಡಳಿತ ರಸ್ತೆ ಅಗಲೀಕರಣಕ್ಕೆ ವರ್ತಕರ ಮನವೊಲಿಸಬೇಕು. ಯಾವುದೇ ಪರಿಹಾರ ನೀಡುವುದಿಲ್ಲವೆಂಬ ನಿಬಂಧನೆ ವಿಧಿಸುವ ಅಗತ್ಯ ಕೂಡಾ ಇದೆ.