ಸಹಕಾರ ಸಂಘದಲ್ಲಿ ಕೋಟ್ಯಂತರ ರು. ಅವ್ಯವಹಾರ

| Published : May 16 2024, 12:51 AM IST

ಸಹಕಾರ ಸಂಘದಲ್ಲಿ ಕೋಟ್ಯಂತರ ರು. ಅವ್ಯವಹಾರ
Share this Article
  • FB
  • TW
  • Linkdin
  • Email

ಸಾರಾಂಶ

ಇಂದು ಸಭೆ ಇರುವ ವಿಚಾರ ನಾವು ಬ್ಯಾಂಕಿಗೆ ಭೇಟಿ ಕೊಟ್ಟಾಗ ತಿಳಿದು ಬಂದಿದೆ. ಹಣ ವರ್ಗಾವಣೆಯಾಗಿರುವ ವಿಚಾರದಲ್ಲಿ ಅವರವರಲ್ಲೇ ಗೊಂದಲ ಸೃಷ್ಟಿಯಾಗಿದ್ದು, ಈ ವಿಚಾರವಾಗಿ ಮಾಜಿ ಅಧ್ಯಕ್ಷರು, ಕಾರ್ಯದರ್ಶಿಗಳು ಬ್ಯಾಂಕಿನಲ್ಲಿ ಗಲಾಟೆ ಮಾಡಿಕೊಂಡು ಕೈ ಕೈ ಮೀಲಾಯಿಸುವ ಹಂತಕ್ಕೆ ಹೋಗಿ ಹಣ ಕಳೆದು ಕೊಂಡಿರುವವರಿಗೆ ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದು, ಎಲ್ಲದಕ್ಕೂ ಆಡಳಿತ ಮಂಡಳಿಯೇ ನೇರ ಹೊಣೆಯಾಗಿದೆ.

ಕನ್ನಡಪ್ರಭ ವಾರ್ತೆ ಕನಕಪುರ

ಕೋಟ್ಯಾಂತರ ರುಪಾಯಿ ಅವ್ಯವಹಾರ ನಡೆದಿರುವ ರೈತ ಸೇವಾ ಸಹಕಾರ ಬ್ಯಾಂಕಿನಲ್ಲಿ ಹಣ ಕಳೆದುಕೊಂಡಿರುವ ಸದಸ್ಯರ ದಿಕ್ಕು ತಪ್ಪಿಸುವ ಯತ್ನ ನಡೆಯುತ್ತಿದೆ ಎಂದು ಸಂಘದ ಸದಸ್ಯರು ಅಕ್ರೋಶ ವ್ಯಕ್ತಪಡಿಸಿದರು.

ನಗರದ ಸಂಗಮ ರಸ್ತೆಯಲ್ಲಿರುವ ರೈತ ಸೇವಾ ಸಹಕಾರ ಸಂಘದ ಬಳಿ ಜಮಾಯಿಸಿದ್ದ ಸಂಘದ ಸದಸ್ಯರು ಹಾಗೂ ಬ್ಯಾಂಕ್ ನಲ್ಲಿ ಹೂಡಿಕೆ ಮಾಡಿ ಹಣ ಕಳೆದುಕೊಂಡಿರುವ ದೇವಮ್ಮ, ಜಯಮ್ಮ, ನಾಗೇಶ್, ಶ್ರೀನಿವಾಸ್ ಮೂರ್ತಿ ತಿಮ್ಮೇಗೌಡ ಅನೇಕರು ಮಾಧ್ಯಮಗಳೊಂದಿಗೆ ಮಾತನಾಡಿ, ರೈತ ಸೇವಾ ಸಹಕಾರ ಸಂಘದಲ್ಲಿ ಕಳೆದ ಒಂದು ವರ್ಷದ ಹಿಂದೆಯೇ ಕೋಟ್ಯಾಂತರ ರುಪಾಯಿ ಅವ್ಯವಹಾರ ನಡೆದಿರುವ ಪ್ರಕರಣ ಬೆಳಕಿಗೆ ಬಂದಿದೆ, ಆಡಳಿತ ಮಂಡಳಿಯವರು ಸೊಸೈಟಿಯ ವ್ಯವಹಾರದ ಆಡಿಟ್ ನಡೆಯುವ ಕಾರ್ಯ ಪ್ರಗತಿಯಲ್ಲಿದೆ ಎಂದು ಹೇಳುತ್ತಿದ್ದು, ಸಂಘದ ಅಧಿಕಾರಿಗಳು, ಆಡಳಿತ ಮಂಡಳಿ ಸದಸ್ಯರು ಇಟ್ಟಿರುವ ಠೇವಣಿ ಹಣವನ್ನು ಡ್ರಾ ಮಾಡಲು ಅಥವಾ ವರ್ಗಾವಣೆ ಮಾಡಲು ಅವಕಾಶವಿಲ್ಲ ಎನ್ನುತ್ತಿದ್ದಾರೆ. ಆದರೆ ಮಾಜಿ ಅಧ್ಯಕ್ಷರು ಇಟ್ಟಿದ್ದ ಠೇವಣಿ ಹಣವನ್ನು ಅವರ ಪತ್ನಿ ಮಾಡಿದ ಸಾಲದ ಹಣಕ್ಕೆ ವರ್ಗಾವಣೆ ಮಾಡಿದ್ದಾರೆ, ಇದು ಯಾವ ನ್ಯಾಯ ಎಂದರು.

ಇಂದು ಸಭೆ ಇರುವ ವಿಚಾರ ನಾವು ಬ್ಯಾಂಕಿಗೆ ಭೇಟಿ ಕೊಟ್ಟಾಗ ತಿಳಿದು ಬಂದಿದೆ. ಹಣ ವರ್ಗಾವಣೆಯಾಗಿರುವ ವಿಚಾರದಲ್ಲಿ ಅವರವರಲ್ಲೇ ಗೊಂದಲ ಸೃಷ್ಟಿಯಾಗಿದ್ದು, ಈ ವಿಚಾರವಾಗಿ ಮಾಜಿ ಅಧ್ಯಕ್ಷರು, ಕಾರ್ಯದರ್ಶಿಗಳು ಬ್ಯಾಂಕಿನಲ್ಲಿ ಗಲಾಟೆ ಮಾಡಿಕೊಂಡು ಕೈ ಕೈ ಮೀಲಾಯಿಸುವ ಹಂತಕ್ಕೆ ಹೋಗಿ ಹಣ ಕಳೆದು ಕೊಂಡಿರುವವರಿಗೆ ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದು, ಎಲ್ಲದಕ್ಕೂ ಆಡಳಿತ ಮಂಡಳಿಯೇ ನೇರ ಹೊಣೆಯಾಗಿದೆ ಎಂದು ಆರೋಪಿಸಿದರು.

ನಾವು ನಮ್ಮ ಮಕ್ಕಳ ಭವಿಷ್ಯಕ್ಕೆ ಅನುಕೂಲವಾಗಲಿ ಎಂದು ಲಕ್ಷಾಂತರ ರು. ಹಣವನ್ನು ಇಲ್ಲಿ ಠೇವಣಿ ಇಟ್ಟಿದ್ದೇವೆ. ಆದರೆ ಸಂಘದಲ್ಲಿ ಅವ್ಯವಹಾರ ನಡೆದು ಒಂದು ವರ್ಷ ಕಳೆಯುತ್ತ ಬಂದಿದೆ, ಇದುವರೆಗೂ ಠೇವಣಿ ಇಟ್ಟಿದ್ದ ಗ್ರಾಹಕರಿಗೆ ಹಣ ಮರುಪಾವತಿ ಮಾಡದೇ ಇಂದು, ನಾಳೆ ಎಂದು ಕಾಲಹರಣ ಮಾಡುತ್ತಿದ್ದಾರೆ. ಸಾಕಷ್ಟು ರೈತರು, ಸಾಮಾನ್ಯ ಜನರು ಚಿನ್ನ ಅಡವಿಟ್ಟು ಸಾಲ ಪಡೆದಿದ್ದರು, ಪಡೆದಿರುವ ಸಾಲ ಕಟ್ಟುತ್ತೇವೆ, ನಮ್ಮ ಚಿನ್ನಾಭರಣಗಳನ್ನು ಮರಳಿಸಿ ಎಂದರೂ ಕಳೆದ ಒಂದು ವರ್ಷದಿಂದ ಅಡಿಟ್ ನಡೆಯುತ್ತಿದೆ ಎನ್ನುತ್ತಾ ಕಾಲಹರಣ ಮಾಡುತ್ತಿದ್ದಾರೆ ಎಂದು ಆಡಳಿತ ಮಂಡಳಿ ಸದಸ್ಯರನ್ನು ತರಾಟೆಗೆ ತೆಗೆದುಕೊಂಡರು.

ಈ ಬ್ಯಾಂಕಿನಲ್ಲಿ ಲಕ್ಷಾಂತರ ರು. ಠೇವಣಿ ಇಟ್ಟಿದ್ದ ವಯೋ ವೃದ್ಧರು ಬ್ಯಾಂಕಿನಲ್ಲಿ ನಡೆದಿರುವ ಅವ್ಯವಹಾರದಿಂದ ಕಂಗಲಾಗಿದ್ದಾರೆ, ಬಹಳಷ್ಟು ಜನರಿಗೆ ಅನ್ಯಾಯವಾಗಿದೆ, ಹಣ ಕಳೆದು ಕೊಂಡಿರುವವರಿಗೆ ಈ ಕೂಡಲೇ ಸಹಕಾರ ಇಲಾಖೆ ಅಧಿಕಾರಿಗಳು ಇತ್ತ ಗಮನಹರಿಸಿ ನ್ಯಾಯ ಕೊಡಿಸಬೇಕು ಎಂದು ಮನವಿ ಮಾಡಿದರು.

‘ಸಂಘದಲ್ಲಿ ನಡೆದಿರುವ ಅವ್ಯವಹಾರಕ್ಕೆ ಸಂಬಂಧಪಟ್ಟಂತೆ ಅಡಿಟ್ ನಡೆಯುತ್ತಿದೆ, ಅಡಮಾನವಿಟ್ಟವರಿಗೆ ಚಿನ್ನಾಭರಣ ವಾಪಸ್ ಕೊಡುವ ಬಗ್ಗೆ ಸಹಕಾರ ಇಲಾಖೆ ಎಆರ್ ಮತ್ತು ಡಿಆರ್ ಅವರ ಕಚೇರಿಗೆ ಪತ್ರವನ್ನು ಬರೆದಿದ್ದೇವೆ. ಅವರು ಅನುಮತಿ ನೀಡಿದ ನಂತರ ಸಂಘದಲ್ಲಿರುವ ಚಿನ್ನಾಭರಣವನ್ನು ಸಂಬಂಧಪಟ್ಟವರಿಗೆ ಹಸ್ತಾಂತರಿಸುತ್ತೇವೆ. ನಮ್ಮ ಗಮನಕ್ಕೆ ತರದೇ ಹಣ ವರ್ಗಾವಣೆ ಮಾಡಿದ್ದಾರೆ, ಅಡಿಟ್ ಮುಗಿದು ತಪ್ಪಿತಸ್ಥರ ಮೇಲೆ ಕ್ರಮ ಕೈಗೊಂಡು ಹಣ ಕಳೆದುಕೊಂಡಿರುವವರಿಗೆ ನ್ಯಾಯ ಕೊಡಿಸುತ್ತೇವೆ.’

ಲಕ್ಷ್ಮೀಕಾಂತ್, ಅಧ್ಯಕ್ಷರು, ರೈತ ಸೇವಾ ಸಹಕಾರ ಸಂಘ