ಕನ್ನಡಪ್ರಭ ವಾರ್ತೆ ಹಾಸನ

ಎಟಿಎಂಗಳಿಗೆ ಹಾಕಬೇಕಾದ 3 ಕೋಟಿ ರುಪಾಯಿಗಳಿಗೂ ಹೆಚ್ಚು ಹಣವನ್ನು ಸಿಎಂಎಸ್‌ ಸಂಸ್ಥೆಯ ಸಿಬ್ಬಂದಿ ಎಗರಿಸಿದ ಘಟನೆ ನಗರದಲ್ಲಿ ಬೆಳಕಿಗೆ ಬಂದಿದೆ. ಕಂಪನಿಯ ಇಬ್ಬರು ಕಸ್ಟೋಡಿಯನ್ ಸಿಬ್ಬಂದಿ ಕೋಟ್ಯಂತರ ರುಪಾಯಿ ದುರ್ಬಳಕೆ ಮಾಡಿಕೊಂಡಿರುವ ಗಂಭೀರ ಆರೋಪ ಬೆಳಕಿಗೆ ಬಂದಿದೆ. ಒಟ್ಟು 3,40,28,200 ರು. ಹಣ ಎಟಿಎಂಗಳಿಗೆ ಜಮಾ ಮಾಡದೇ ವಂಚನೆ ಮಾಡಲಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಬೂವನಹಳ್ಳಿ ಗ್ರಾಮದ ನಂದೀಶ್ ಬಿ. ಎಲ್. ಹಾಗೂ ದಾಸರಕೊಪ್ಪಲಿನ ಮಧುಕುಮಾರ್ ಎಂ.ಪಿ. ಕಳೆದ ಸುಮಾರು ೧೦ ವರ್ಷಗಳಿಂದ ಕಸ್ಟೋಡಿಯನ್ ಆಗಿ ಕಾರ್ಯನಿರ್ವಹಿಸುತ್ತಿದ್ದರು. ನಗರದ ತಣ್ಣೀರುಹಳ್ಳ, ರಿಂಗ್‌ರೋಡ್ ಸರ್ಕಲ್, ಆರ್‌. ಸಿ.ರೋಡ್, ಇಂದಿರಾನಗರ, ದಾಸರಕೊಪ್ಪಲು, ಅರಳೇಪೇಟೆ, ಸಂತೇಪೇಟೆ, ನೆಹರೂ ರೋಡ್, ಬಿ.ಎಂ.ರೋಡ್, ವಲ್ಲಭಭಾಯಿ ರೋಡ್, ಹಿಮ್ಸ್ ಆಸ್ಪತ್ರೆ ಸೇರಿದಂತೆ ಮಾರ್ಗ-೧ ವ್ಯಾಪ್ತಿಯ ಸುಮಾರು ೧೮ ಎಟಿಎಂಗಳಿಗೆ ಹಣ ತುಂಬಿಸುವ ಸಂಪೂರ್ಣ ಜವಾಬ್ದಾರಿ ಇವರಿಗೇ ನೀಡಲಾಗಿತ್ತು. ಇತ್ತೀಚೆಗೆ ಫೆಬ್ರವರಿ ೧೮ ಮತ್ತು ೧೯ರಂದು ಕಂಪನಿ ಆಡಿಟರ್‌ ಲಿಂಗರಾಜು ಜಿ.ಜಿ. ಅವರು ನಡೆಸಿದ ಸಮಗ್ರ ಆಡಿಟ್ ವೇಳೆ ಹಣಕಾಸು ವ್ಯವಹಾರಗಳಲ್ಲಿ ಭಾರಿ ವ್ಯತ್ಯಾಸ ಪತ್ತೆಯಾಗಿದೆ. ಪ್ರಾಥಮಿಕ ಪರಿಶೀಲನೆಯಲ್ಲಿ 3,40,28,200 ಮೊತ್ತದ ಕೊರತೆ ಕಂಡುಬಂದಿದ್ದು, ತಕ್ಷಣ ಶಾಖಾ ವ್ಯವಸ್ಥಾಪಕ ರಾಜು ಅವರ ಗಮನಕ್ಕೆ ತರಲಾಗಿದೆ.ಸಿಎಂಎಸ್ ಸಂಸ್ಥೆಯ ಕರ್ನಾಟಕ ಉಸ್ತುವಾರಿ ಹಾಗೂ ನಿವೃತ್ತ ಎಎಸ್ಪಿ ನಟರಾಜ್ ಮಾಧ್ಯಮದೊಂದಿಗೆ ಮಾತನಾಡಿ, ಎಟಿಎಂಗಳಿಗೆ ಹಣ ತುಂಬಿಸುವ ವೇಳೆ ೫ ಲಕ್ಷ ರು. ಹಾಕಿ ೧೦ ಲಕ್ಷ ಎಂದು ದಾಖಲು ಮಾಡುವಂತಹ ವಿಧಾನದಲ್ಲಿ ಅಕ್ರಮ ನಡೆದಿರಬಹುದು ಎಂಬ ಅನುಮಾನ ವ್ಯಕ್ತವಾಗಿದೆ. ಜೊತೆಗೆ, ಎಟಿಎಂ ನಿರ್ವಹಣೆ ಸಂದರ್ಭದಲ್ಲಿ ಯಂತ್ರ ತೆರೆಯುವ ಅಧಿಕಾರವೂ ಇವರಿಬ್ಬರಲ್ಲೇ ಇದ್ದುದರಿಂದ ನಗದು ತೆಗೆಯುವ ಅವಕಾಶ ಇದ್ದಿರಬಹುದು ಎಂದು ತಿಳಿಸಿದ್ದಾರೆ. ಫೆಬ್ರವರಿ ೮ರಂದು ನಡೆದ ನಿಯಮಿತ ಆಡಿಟ್‌ನಲ್ಲಿ ಎಲ್ಲವೂ ಸರಿಯಾಗಿತ್ತು. ಆದರೆ ನಂತರ ಶಾಖಾ ವ್ಯವಸ್ಥಾಪಕರು ಪರಿಶೀಲನೆ ನಡೆಸಿದಾಗ ಕೆಲ ಎಟಿಎಂಗಳಲ್ಲಿ ಹಣದ ಕೊರತೆ ಕಂಡುಬಂದಿದ್ದು, ತಕ್ಷಣ ಸಮಗ್ರ ಪರಿಶೀಲನೆ ನಡೆಸಿದಾಗ ದೊಡ್ಡ ಪ್ರಮಾಣದ ದುರ್ಬಳಕೆ ಆಗಿರುವುದು ಬಯಲಾಗಿದೆ.ಎಟಿಎಂ ತೆರೆಯುವ ಪಾಸ್‌ವರ್ಡ್ ಹಾಗೂ ನಗದು ಜಮಾ/ಹಿಂಪಡೆಯುವ ಸಂಪೂರ್ಣ ಜವಾಬ್ದಾರಿ ಇವರದ್ದೇ ಆಗಿದ್ದರಿಂದ ಪ್ರಾಥಮಿಕವಾಗಿ ಇವರ ಮೇಲೆಯೇ ಅನುಮಾನ ಕೇಂದ್ರೀಕರಿಸಲಾಗಿದೆ. ಹಣ ತುಂಬಿಸಿದ ಮೊತ್ತ ಹಾಗೂ ಗ್ರಾಹಕರು ಡ್ರಾ ಮಾಡಿದ ಮೊತ್ತವನ್ನು ಹೋಲಿಕೆ ಮಾಡಿದಾಗ ಮಾತ್ರ ಇಂತಹ ಅಕ್ರಮಗಳು ಬಯಲಾಗುತ್ತವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸಿಎಂಎಸ್ ಬ್ರಾಂಚ್ ಮ್ಯಾನೇಜರ್‌ ನೀಡಿದ ದೂರಿನ ಮೇರೆಗೆ ಬಡಾವಣೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ. ಆರೋಪಿಗಳ ಬಂಧನಕ್ಕಾಗಿ ಬಲೆ ಬೀಸಲಾಗಿದೆ.ಈ ಬಗ್ಗೆ ಎಸ್ಪಿ ಶುಭನ್ವಿತಾ ಮಾಧ್ಯಮದೊಂದಿಗೆ ಮಾತನಾಡಿ, ನಗರದ ೧೫ ಎಟಿಎಂನಲ್ಲಿ ಹಣದ ಲೆಕ್ಕಚಾರ ವ್ಯತ್ಯಾಸವಿದೆ. ಒಟ್ಟು ಆಡಿಟ್ ವರದಿ ಪ್ರಕಾರ ೩ ಕೋಟಿ ೪ಒ ಲಕ್ಷ ರು.ಗಳು ಕಾಣಿಸುತ್ತಿಲ್ಲ. ಈ ಮೇಲೆ ಒಂದು ಕೇಸು ದಾಖಲಿಸಿ ತನಿಖೆ ಮುಂದುವರಿದಿದೆ. ಬೂವನಹಳ್ಳಿ ಗ್ರಾಮದ ಬಿ. ಎಲ್. ನಂದೀಶ್ ಹಾಗೂ ದಾಸರಕೊಪ್ಪಲು ನಿವಾಸಿ ಎಂ.ಪಿ. ಮಧುಕುಮಾರ್ ಕೆಲಸ ಮಾಡುತ್ತಿದ್ದರು. ಇಬ್ಬರ ಮೇಲೆ ತನಿಖೆ ಆರಂಭಿಸಲಾಗಿದೆ ಎಂದರು. ಇದರಲ್ಲಿ ಎಷ್ಟು ಜನರು ಸೇರಿದ್ದಾರೆ ಎಲ್ಲಾ ಬಗ್ಗೆ ಸಿಸಿಟಿವಿ ನೋಡಿ ದಾಖಲೆ ಸಂಗ್ರಹಿಸಬೇಕಾಗಿದೆ ಎಂದು ಮಾಹಿತಿ ನೀಡಿದರು. ಈ ಪ್ರಕರಣ ನಗರದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದ್ದು, ೧೮ ಎಟಿಎಂಗಳಲ್ಲಿ ನಡೆದಿರುವ ದುರ್ಬಳಕೆಯ ಹಿಂದೆ ಇನ್ನೂ ಯಾರಾದರೂ ಮೇಲ್ಮಟ್ಟದ ಅಧಿಕಾರಿಗಳ ಕೈವಾಡವಿದೆಯೇ ಎಂಬ ಅನುಮಾನಗಳೂ ಕೇಳಿಬರುತ್ತಿವೆ. ಇಷ್ಟು ದೊಡ್ಡ ಮೊತ್ತ ಇಬ್ಬರು ಮಾತ್ರ ದುರ್ಬಳಕೆ ಮಾಡಲು ಸಾಧ್ಯವೇ ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಉದ್ಭವಿಸಿದೆ. ಆದರೆ ಈ ಎಲ್ಲ ಅನುಮಾನಗಳಿಗೆ ಸಮಗ್ರ ತನಿಖೆಯೇ ಉತ್ತರ ನೀಡಬೇಕಿದೆ. ಪೊಲೀಸರು ಹಣದ ಹಾದಿ ಪತ್ತೆಹಚ್ಚಲು ಹಾಗೂ ಇನ್ನಷ್ಟು ವಿವರ ಸಂಗ್ರಹಿಸಲು ಮುಂದುವರಿದಿದ್ದಾರೆ.