ಸಾರಾಂಶ
- ಲಕ್ಷಾಂತರ ರು. ಡೊನೇಷನ್ ಪಡೆಯುತ್ತಿರುವ ಶಾಲೆ- ಕಾಲೇಜುಗಳು । ಬಾಕಿದಾರರ ಪಟ್ಟಿಯಲ್ಲಿ ಪ್ರತಿಷ್ಟಿತ ಶಿಕ್ಷಣ ಸಂಸ್ಥೆಗಳು
ಆರ್. ತಾರಾನಾಥ್ ಅಟೋಕರ್ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು
ಪ್ರತಿ ವರ್ಷ ವಿದ್ಯಾರ್ಥಿಗಳಿಂದ ಲಕ್ಷಾಂತರ ರು. ಡೊನೇಷನ್ ಪಡೆಯುತ್ತಿರುವ ಅನುದಾನ ರಹಿತ ಹಾಗೂ ಅನುದಾನಿತ ಖಾಸಗಿ ಶಾಲೆಗಳು ಹಾಗೂ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳು ನಗರಸಭೆಯ ತೆರಿಗೆ( ಟ್ಯಾಕ್ಸ್) ಬಾಕಿ ಉಳಿಸಿಕೊಂಡಿರುವ ಪಟ್ಟಿಯಲ್ಲಿ ಕಳೆದ 20 ವರ್ಷಗಳಿಂದ ತಮ್ಮ ಸ್ಥಾನದಿಂದ ಕದಲಿಲ್ಲ.ಆರ್ಥಿಕ ಸಂಕಷ್ಟದಿಂದ ಬಾಕಿದಾರರ ಪಟ್ಟಿಯಲ್ಲಿ ಇವುಗಳು ಉಳಿದುಕೊಂಡಿವೆಯೇ ? ಖಂಡಿತವಾಗಿಯೂ ಇಲ್ಲ. ಆದರೆ ಈ ಸಂಸ್ಥೆಗಳು ವರ್ಷದಿಂದ ವರ್ಷಕ್ಕೆ ತಮ್ಮ ಕ್ಯಾಂಪಸ್ನಲ್ಲಿ ಹೊಸ ಹೊಸ ಕಟ್ಟಡಗಳನ್ನು ನಿರ್ಮಿಸಿಕೊಳ್ಳುತ್ತಿವೆ. ತೆರಿಗೆಯನ್ನು ಮಾತ್ರ ಪಾವತಿಸದೆ ಬಾಕಿ ಉಳಿಸುಕೊಂಡಿವೆ.
ಈ ಶಾಲೆಗಳೇನು ವಿದ್ಯಾರ್ಥಿಗಳಿಗೆ ಉಚಿತವೇ , ರಿಯಾಯ್ತಿ ದರದಲ್ಲೋ ವ್ಯವಸ್ಥೆ ಕಲ್ಪಿಸುತ್ತಿಲ್ಲ. ಬದಲಿಗೆ ವಿದ್ಯಾರ್ಥಿಗಳು ಶಾಲೆ ಬಸ್ನಲ್ಲಿ ಸಂಚರಿಸಲು ಹಣ ಕಟ್ಟಬೇಕಾಗಿರುವುದು ಕಡ್ಡಾಯ. ಶಾಲೆಯ ಸಮೀಪದಲ್ಲಿ ಮನೆ ಇದ್ದರೂ ಆ ವಿದ್ಯಾರ್ಥಿಯ ಪೋಷಕರು ಹಣ ಕಟ್ಟಬೇಕು. ಅವರು ಸೂಚಿಸಿರುವ ಅಂಗಡಿಗಳಲ್ಲೇ ಸಮವಸ್ತ್ರ ಖರೀದಿ ಮಾಡಬೇಕು. ನೋಟ್ ಬುಕ್ ಹಾಗೂ ಇತರೆ ಕಲಿಕಾ ಸಾಮಾಗ್ರಿಗಳು ಸಹ ಶಾಲೆಗಳಲ್ಲೇ ಹಣ ಕಟ್ಟಿ ತೆಗೆದುಕೊಳ್ಳಬೇಕು ಎಂಬ ಕಟ್ಟುಪಾಡು ಮಾಡಿ ಪೋಷಕರಿಂದ ಲಕ್ಷಾಂತರ ರುಪಾಯಿ ಪಡೆದು ತಮ್ಮ ಅಸ್ತಿತ್ವ ಭದ್ರಪಡಿಸಿಕೊಂಡಿರುವ 19 ಶಾಲೆ ಮತ್ತು ಕಾಲೇಜುಗಳು ಪ್ರಸಕ್ತ ಸಾಲಿನವರೆಗೆ ₹ 3.10 ಕೋಟಿ ತೆರಿಗೆ ಬಾಕಿ ಉಳಿಸಿಕೊಂಡಿವೆ. ನಗರದ ಪ್ರತಿಷ್ಟಿತ ಕಾಲೇಜೊಂದು ₹1.35 ಕೋಟಿ ತೆರಿಗೆ ಕಟ್ಟಬೇಕಾಗಿದೆ. 4 ಶಿಕ್ಷಣ ಸಂಸ್ಥೆಗಳು ₹10 ರಿಂದ 51 ಲಕ್ಷದವರೆಗೆ ಟ್ಯಾಕ್ಸ್ ಪಾವತಿ ಮಾಡಬೇಕಿದೆ.ಕಮರ್ಷಿಯಲ್ ಕಾಂಪ್ಲೆಕ್ಸ್ಚಿಕ್ಕಮಗಳೂರು ನಗರದ ಕೆಲವು ಪ್ರಮುಖ ರಸ್ತೆಗಳಲ್ಲಿರುವ ಶಿಕ್ಷಣ ಸಂಸ್ಥೆಗಳು ತಮ್ಮ ಸ್ವತ್ತಿನಲ್ಲಿ ವಾಣಿಜ್ಯ ಕಟ್ಟಡಗಳನ್ನು ನಿರ್ಮಾಣ ಮಾಡಿ ಬಾಡಿಗೆಗೆ ಕೊಟ್ಟಿವೆ. ಇದರಿಂದ ಪ್ರತಿ ತಿಂಗಳು ಶಿಕ್ಷಣ ಸಂಸ್ಥೆಗಳಿಗೆ ಲಕ್ಷಾಂತರ ಆದಾಯ ಬರುತ್ತಿದೆ. ಹಾಗಿದ್ದರೂ ಕೂಡ ನಗರಸಭೆ ತೆರಿಗೆಯನ್ನು ಮಾತ್ರ ಪಾವತಿಸಿಲ್ಲ.
ಕೆಲವು ಶಿಕ್ಷಣ ಸಂಸ್ಥೆಯವರು, ತಮಗೆ ತೆರಿಗೆ ವಿನಾಯ್ತಿ ನೀಡಬೇಕೆಂದು ನಗರಸಭೆಗೆ ಈ ಹಿಂದೆ ಕೋರಿಕೊಂಡಿದ್ದರು. ಆದರೆ, ವಾಣಿಜ್ಯ ಮಳಿಗೆಗಳನ್ನು ಕಟ್ಟಿ ಆದಾಯ ಮಾಡಿಕೊಳ್ಳುತ್ತಿರುವ ಶಾಲೆಗಳಿಗೆ ವಿನಾಯ್ತಿ ನೀಡುವುದು ಬೇಡ ಎಂಬ ಆಗ್ರಹ ಸಾರ್ವಜನಿಕವಾಗಿ ಕೇಳಿ ಬಂದಿತ್ತು. ಆದ್ದರಿಂದ ವಿನಾಯ್ತಿ ನೀಡುವ ವಿಷಯ ಅಲ್ಲಿಯೇ ಕೈಬಿಡಲಾಗಿತ್ತು. ಆದರೆ, ಬಾಕಿ ಉಳಿಸಿಕೊಳ್ಳುವ ಹಳೇ ಚಾಳಿಯನ್ನು ಚಾಚು ತಪ್ಪದೆ ಮುಂದುವರಿಸಿಕೊಂಡು ಬರುತ್ತಿವೆ.ರಾಜಕೀಯ ಪಕ್ಷಗಳ ಮುಖಂಡರು ಹಾಗೂ ಕೆಲವು ಪ್ರತಿಷ್ಟಿತ ಸಮುದಾಯಕ್ಕೆ ಸೇರಿರುವ ಶಿಕ್ಷಣ ಸಂಸ್ಥೆಗಳು ಬಾಕಿದಾರರ ಪಟ್ಟಿಯಲ್ಲಿವೆ. ಅವುಗಳ ಮೇಲೆ ಕಠಿಣ ಕ್ರಮಗಳು ಅಂದರೆ, ಶಾಲೆಗೆ ಕೊಟ್ಟಿರುವ ಮೂಲಭೂತ ಸವಲತ್ತುಗಳನ್ನು ಕಡಿತ ಗೊಳಿಸಬಹುದು. ಆದರೆ, ನಗರಸಭೆಯಿಂದ ಈ ರೀತಿ ಕ್ರಮ ತೆಗೆದುಕೊಳ್ಳಲು ಅವಕಾಶ ಇಲ್ಲ. ಹಾಗಾಗಿ ಸಂಸ್ಥೆಗಳು ಟ್ಯಾಕ್ಸ್ ಕಟ್ಟದೆ ನಿರಾತಂಕವಾಗಿವೆ.
--- ಕೋಟ್ಸ್----ನಗರಸಭೆ ವ್ಯಾಪ್ತಿಯ ಪ್ರತಿಯೊಂದು ಕಟ್ಟಡ ಹಾಗೂ ನಿವೇಶನಗಳ ಮಾಲೀಕರು ಪ್ರತಿ ವರ್ಷ ಟ್ಯಾಕ್ಸ್ ಕಟ್ಟಬೇಕು. ಬರೀ ಖಾಸಗಿಯವರು ಮಾತ್ರವಲ್ಲ, ಸರ್ಕಾರಿ ಇಲಾಖೆಗಳಿಗೂ ಅನ್ವಯವಾಗಲಿದೆ. ಆದರೆ, ಕಳೆದ ಹಲವು ವರ್ಷಗಳಿಂದ ಖಾಸಗಿ ಶಿಕ್ಷಣ ಸಂಸ್ಥೆಗಳ ತೆರಿಗೆ ಬಾಕಿ ಉಳಿರುವುದರಿಂದ ಟ್ಯಾಕ್ಸ್ ಪಾವತಿಗೆ ಈಗಾಗಲೇ ಹಲವು ಬಾರಿ ನಗರಸಭೆಯಿಂದ ನೋಟಿಸ್ ಜಾರಿ ನೀಡಿದ್ದರೂ ತಮ್ಮ ಧೋರಣೆಯನ್ನು ಮುಂದುವರಿಸಿಕೊಂಡು ಬರುತ್ತಿವೆ.
ಶಿಕ್ಷಣ ಸಂಸ್ಥೆಗಳು ಸುಮಾರು ₹3.10 ಕೋಟಿ ಟ್ಯಾಕ್ಸ್ ಕಟ್ಟಬೇಕಾಗಿವೆ. ಜಿಲ್ಲಾಸ್ಪತ್ರೆ ₹48.42 ಲಕ್ಷ, ಡಯಟ್ ₹9.25 ಲಕ್ಷ, ಲೋಕೋಪಯೋಗಿ ಇಲಾಖೆ ₹44.58 ಲಕ್ಷ ತೆರಿಗೆ ಪಾವತಿಸಬೇಕಾಗಿದೆ.- ಬಿ.ಸಿ. ಬಸವರಾಜ್ಪೌರಾಯುಕ್ತರು
ನಗರಸಭೆ ಚಿಕ್ಕಮಗಳೂರು 15 ಕೆಸಿಕೆಎಂ 1--- ಕೋಟ್ಸ್----ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಕಟ್ಟಡ ನಿರ್ಮಾಣ, ಉದ್ದಿಮೆ ಪರವಾನಗಿ ಹಾಗೂ ಇತರೆ ಸವಲತ್ತು ಪಡೆಯ ಬೇಕಾದರೆ ಸ್ಥಳೀಯ ಸಂಸ್ಥೆಗಳಿಂದ ಲೈಸನ್ಸ್ ಪಡೆಯುವುದು ಕಡ್ಡಾಯ. ಅದೇ ರೀತಿ ಶಿಕ್ಷಣ ಸಂಸ್ಥೆಗಳು ಶಿಕ್ಷಣ ಇಲಾಖೆಯಲ್ಲಿ ತಮ್ಮ ಸಂಸ್ಥೆ ನವೀಕರಣ ಮಾಡಿಕೊಳ್ಳುವ ಸಂದರ್ಭದಲ್ಲಿ ನಗರಸಭೆಗೆ ಟ್ಯಾಕ್ಸ್ ಕಟ್ಟಿರುವ ರಶೀದಿ ಇತರೆ ದಾಖಲೆಗಳಂತೆ ನೀಡುವುದು ಕಡ್ಡಾಯಗೊಳಿಸಬೇಕು.- ಜಿ. ರಘು
ಜಿಲ್ಲಾಧ್ಯಕ್ಷರು, ಬಿಸಿಯೂಟ ಕಾರ್ಯಕರ್ತೆಯರ ಫೆಡರೇಷನ್ 15 ಕೆಸಿಕೆಎಂ 2--ಚಿಕ್ಕಮಗಳೂರು ನಗರಸಭೆ 15 ಕೆಸಿಕೆಎಂ 3