ಸಾರಾಂಶ
ಆರ್ಯವೈಶ್ಯ ಅಧಿಕಾರಿಗಳು ಮತ್ತು ವೃತ್ತಿನಿರತರ ಸಂಘದಿಂದ ಕೃಷ್ಣರಾಜೇಂದ್ರ ಗ್ರಂಥಾಲಯಕ್ಕೆ ತಾಂತ್ರಿಕ ಪದವಿ ಪುಸ್ತಕಗಳ ಕೊಡುಗೆಯಾಗಿ ನೀಡಲಾಯಿತು.
ಕನ್ನಡಪ್ರಭ ವಾರ್ತೆ ಚಿತ್ರದುರ್ಗ
ಚಿತ್ರದುರ್ಗ ನಗರದಲ್ಲಿ 6 ಕೋಟಿ ರು. ಖರ್ಚು ಮಾಡಿ ಬಯಲು ಗ್ರಂಥಾಲಯ ಹಾಗೂ ಹೈಟೆಕ್ ಶೌಚಾಲಯ ನಿರ್ಮಿಸಲಾಗುತ್ತಿದೆ ಎಂದು ಕೃಷ್ಣರಾಜೇಂದ್ರ ಗ್ರಂಥಾಲಯದ ಗ್ರಂಥಾಲಯಾಧಿಕಾರಿ ಬಸವರಾಜ್ ಕೊಳ್ಳಿ ಹೇಳಿದರು.ಆರ್ಯವೈಶ್ಯ ಅಧಿಕಾರಿಗಳು ಮತ್ತು ವೃತ್ತಿನಿರತರ ಸಂಘದಿಂದ ತಾಂತ್ರಿಕ ಪದವಿಯ ಪುಸ್ತಕಗಳನ್ನು ಸ್ವೀಕರಿಸಿ ನಂತರ ಮಾತನಾಡಿದ ಅವರು ಚಿತ್ರದುರ್ಗ, ತುಮಕೂರು, ಬಳ್ಳಾರಿಗೆ ಡಿಎಂಎಫ್ ಅನುದಾನ ಬಂದಿದ್ದು, ಅದರಲ್ಲಿ ಚಿತ್ರದುರ್ಗದ ಗ್ರಂಥಾಲಯಕ್ಕೆ ಹತ್ತು ಕೋಟಿ 29 ಲಕ್ಷ ರು.ಮಂಜೂರಾಗಿದೆ. ಜಿಲ್ಲೆಯ ಪ್ರತಿ ತಾಲೂಕಿನಲ್ಲಿಯೂ ಗ್ರಂಥಾಲಯಕ್ಕೆ ಈ ಅನುದಾನ ಬಳಸಲಾಗುವುದು ಎಂದರು.
ನಿರಂತರವಾಗಿ ಪುಸ್ತಕಗಳನ್ನು ಓದುವುದರಿಂದ ಜ್ಞಾನ ಹೆಚ್ಚಿಸಿಕೊಳ್ಳಬಹುದು. ಸರ್ಕಾರಿ ನೌಕರಿ ಸಿಕ್ಕ ಕೂಡಲೆ ಓದುವುದನ್ನೆ ನಿಲ್ಲಿಸಿಬಿಡುವುದು ಸರಿಯಲ್ಲ. ಪುಸ್ತಕ ಓದುವುದಕ್ಕೆ ವಯಸ್ಸಿನ ಮಿತಿಯಿಲ್ಲ. ಎಲ್ಲಾ ವಯೋಮಾನದವರು ಪುಸ್ತಕಗಳನ್ನು ಓದುವುದರಿಂದ ಸಾಕಷ್ಟು ವಿಚಾರಗಳು ದೊರಕುತ್ತವೆ. ಗ್ರಂಥಾಲಯಗಳಲ್ಲಿ ಅನೇಕ ಮಹತ್ವದ ಪುಸ್ತಕಗಳಿರುವುದು ಬಡ ಮಕ್ಕಳ ಓದಿಗೆ ನೆರವಾಗುತ್ತಿದೆ. 1925 ರಲ್ಲಿ ಆರಂಭಗೊಂಡ ಕೃಷ್ಣರಾಜೇಂದ್ರ ಗ್ರಂಥಾಲಯಕ್ಕೆ ಶತಮಾನದ ಇತಿಹಾಸವಿರುವುದರಿಂದ ವಿಜೃಂಭಣೆಯಿಂದ ಶತಮಾನೋತ್ಸವ ಆಚರಿಸಲಾಗುವುದು ಎಂದರು.ಆರ್ಯವೈಶ್ಯ ಅಧಿಕಾರಿಗಳು ಮತ್ತು ವೃತ್ತಿನಿರತರ ಸಂಘದ ಅಧ್ಯಕ್ಷ ಪಿ.ಎಲ್.ಸುರೇಶ್‍ರಾಜು ಮಾತನಾಡಿ ಎಂ.ಎಸ್.ಗಿರೀಶ್‍ರವರ ಪುತ್ರ ಓದಿ ತಾಂತ್ರಿಕ ಪದವಿ ಪಡೆದ ಪುಸ್ತಕಗಳನ್ನು ಗ್ರಂಥಾಲಯಕ್ಕೆ ನೀಡಲಾಗಿದೆ. ಮುಂದಿನ ಮೂವತ್ತು ದಿನಗಳಲ್ಲಿ ನಮ್ಮ ಸಂಘದಿಂದ ಒಂದು ಸಾವಿರ ಪುಸ್ತಕಗಳನ್ನು ಕೊಡುವ ಉದ್ದೇಶವಿದೆ . ಇದರಿಂದ ಬಡ ಮಕ್ಕಳ ಓದಿಗೆ ಅನುಕೂಲವಾಗಲಿ ಎಂದರು.
ಈ ವೇಳೆ ಆರ್ಯವೈಶ್ಯ ಅಧಿಕಾರಿಗಳು ಮತ್ತು ವೃತ್ತಿನಿರತರ ಸಂಘದ ಕಾರ್ಯದರ್ಶಿ ಡಿ.ಆರ್.ತಿಪ್ಪೇಸ್ವಾಮಿ, ಮಾಜಿ ಅಧ್ಯಕ್ಷ ಪಿ.ಎನ್.ಮೋಹನ್‍ಕುಮಾರ್ ಗುಪ್ತ, ಪುಸ್ತಕ ದಾನಿ ಎಂ.ಎಸ್.ಗಿರೀಶ್, ನಿವೃತ್ತ ಆರೋಗ್ಯ ಶಿಕ್ಷಣಾಧಿಕಾರಿ ಅಬುಸಾಲೇಹ ಈ ಸಂದರ್ಭದಲ್ಲಿ ಹಾಜರಿದ್ದರು.