ಪರಿಹಾರ ನೀಡದೆ ರಸ್ತೆ ಕಾಮಗಾರಿ ಆರಂಭ, ಅಡ್ಡಪಡಿಸಿದ ರೈತರು

| Published : May 22 2024, 12:46 AM IST

ಸಾರಾಂಶ

ಸಾಲಿಗ್ರಾಮ ,ಪರಿಹಾರ ನೀಡದೆ ರಸ್ತೆ ಕಾಮಗಾರಿ

ಕನ್ನಡಪ್ರಭ ವಾರ್ತೆ ಸಾಲಿಗ್ರಾಮ

ರಾಷ್ಟ್ರೀಯ ಹೆದ್ದಾರಿ ಮಾಡುತ್ತಿರುವ ಅಧಿಕಾರಿಗಳು ಭೂಮಿ ಕಳೆದುಕೊಂಡ ರೈತರಿಗೆ ಪರಿಹಾರ ನೀಡಿಲ್ಲವೆಂದು ರಸ್ತೆ ಮಾಡಲು ಅವಕಾಶ ಮಾಡಿಕೊಡುವುದಿಲ್ಲ ಎಂದು ರೈತರು ಪ್ರತಿಭಟಿಸಿ, ರಸ್ತೆ ಕಾಮಗಾರಿಗೆ ಅಡ್ಡಗಟ್ಟಿದ ಪ್ರಸಂಗ ನಡೆಯಿತು.

ಸಾಲಿಗ್ರಾಮ ಸಮೀಪ ಕಳ್ಳಿ ಮುದ್ದನಹಳ್ಳಿ ಗ್ರಾಮದ ಹತ್ತಿರ ರೈತ ಹರೀಶ ಮತ್ತು ಇತರರು ಭೂಮಿ ಪರಿಹಾರ ನೀಡಿಲ್ಲವೆಂದು ಪರಿಹಾರ ನೀಡುವ ತನಕ ನಮ್ಮ ಭೂಮಿಯನ್ನು ರಸ್ತೆ ಮಾಡಲು ಬಿಡುವುದಿಲ್ಲ ಎಂದು ಪ್ರತಿಭಟಿಸಿ, ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳು ಮತ್ತು ಪೊಲೀಸ್ ಇಲಾಖೆಯ ವಿರುದ್ಧ ತಮ್ಮ ಅಕ್ರೋಶವನ್ನು ಹೊರಹಾಕಿದರು.

ಪ್ರಾಣವನ್ನಾದರೂ ಬಿಟ್ಟೆವು ಭೂಮಿಯನ್ನು ಕೊಡುವುದಿಲ್ಲವೆಂದು ಹಠ ಹಿಡಿದ ರೈತ ಮುಖಂಡರ ಮನವೊಲಿಸುವಲ್ಲಿ ವಿಫಲವಾದ ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳ ವಿರುದ್ಧ ತಮ್ಮ ಎಂದಿನ ಆಕ್ರೋಶವನ್ನು ಹೊರ ಹಾಕಿದ ರೈತ ಮುಖಂಡರು ಕೇವಲ ಕಣ್ಣೊರೆಸಿ ರಸ್ತೆ ಮಾಡಿದ ನಂತರ ಇತ್ತ ತಿರುಗಿ ನೋಡದ ಅಧಿಕಾರಿಗಳು ನೀವು ಈಗ ಏಕೆ ಬಂದಿದ್ದೀರಿ, ಒಂದು ವರ್ಷದಿಂದ ಎಲ್ಲಿ ಹೋಗಿದ್ದೀರಿ ಎಂದು ತಮ್ಮ ಆಕ್ರೋಶ ಹೊರ ಹಾಕಿದ ಪ್ರಸಂಗ ನಡೆಯಿತು. ಸಾಲಿಗ್ರಾಮ ವ್ಯಾಪ್ತಿಯಲ್ಲಿ ಅರ್ಧಂಬರ್ಧ ರಸ್ತೆ ಕಾಮಗಾರಿ ಮಾಡಿದ್ದಾರೆ, ಕೆಲವು ಭಾಗಗಳಲ್ಲಿ ವಿದ್ಯುತ್ ಕಂಬಗಳು ರಸ್ತೆಯಲ್ಲಿ ಇವೆ, ಇವರ ಅವೈಜ್ಞಾನಿಕ ಕಾಮಗಾರಿಯಿಂದ ವರ್ಷದಿಂದ ಇಲ್ಲಿಯವರೆಗೆ ಅನೇಕ ಅಪಘಾತಗಳು ಸಂಭವಿಸಿ ಮೃತಪಟ್ಟಿರುವ ಘಟನೆಗಳು ನಡೆದಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ರಾಷ್ಟ್ರೀಯ ಹೆದ್ದಾರಿ ಇಲಾಖೆ ಅಧಿಕಾರಿಗಳು ( ಕೆ ಶಿಪ್) ರೈತರು ಪ್ರತಿಭಟನೆ ಮಾಡುವ ಜೊತೆಗೆ ಭೂಮಿಯನ್ನು ಬಿಡುವುದಿಲ್ಲ ಎಂಬುದನ್ನು ತಿಳಿದು ಪೊಲೀಸ ಇಲಾಖೆಯ ಮೊರೆ ಹೋಗಿದ್ದು, ಸುಮಾರು ಐವತ್ತಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿ ಸ್ಥಳದಲ್ಲಿ ಮೊಕ್ಕಂ ಹೂಡ್ಡಿದರು.

ಸಾಲಿಗ್ರಾಮದ ಪೊಲೀಸ್ ಇನ್ ಸ್ಪೆಕ್ಟರ್ ಕೃಷ್ಣರಾಜ, ಕೆ.ಆರ್. ನಗರದ ಇನ್ಸ್ಪೆಕ್ಟರ್ ಪಿ.ಪಿ. ಸಂತೋಷ್, ಇಬ್ಬರ ನೇತೃತ್ವದಲ್ಲಿ ಸೂಕ್ತ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಿದ್ದು, ಯಾವುದೇ ಅಹಿತಕರ ಘಟನೆ ನಡೆಯದಂತೆ ನೋಡಿಕೊಂಡರು.

ಯಾವುದೇ ಒತ್ತಡಕ್ಕೂ ಮಣಿಯದ ರೈತರು, ನಮಗೆ ಪರಿಹಾರ ನೀಡುವ ತನಕ ಭೂಮಿ ನೀಡುವುದಿಲ್ಲ, ಕಂದಾಯ ಇಲಾಖೆ ಮತ್ತು ಸರ್ವೆ ಇಲಾಖೆಯ ಅಧಿಕಾರಿಗಳನ್ನು ಸ್ಥಳಕ್ಕೆ ಕರೆಯಿಸಿ ಭೂಮಿಯನ್ನು ಸರ್ವೆ ಮಾಡಿಸಿ ನಮ್ಮ ಭೂಮಿ ಮತ್ತು ತೆಂಗಿನ ಮರಗಳ ಪರಿಹಾರವನ್ನು ಕೊಡಿಸುವಂತೆ ಒತ್ತಾಯಿಸಿದರು.

ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳು ಮತ್ತು ರೈತರ ನಡುವೆ ಮಾತಿನ ಚಕಮಕಿ ನಡೆದು ಕೈ ಕೈ ಮಿಲಾಯಿಸುವ ಹಂತಕ್ಕೆ ಹೋಗಿದ್ದು, ಆದರೆ ಪೊಲೀಸ್ ಸಿಬ್ಬಂದಿ ಮಧ್ಯಪ್ರವೇಶಿಸಿ ಮುಂದಾಗಬಹುದಾದ ಅನಾಹುತ ತಪ್ಪಿಸಿದರು.

ನಂತರ ಸಾಲಿಗ್ರಾಮದ ಇನ್ ಸ್ಪೆಕ್ಟರ್ಕೃಷ್ಣರಾಜ ಮಧ್ಯಪ್ರವೇಶಿಸಿ ಯಾವ ಭೂಮಿಗೆ ಪರಿಹಾರ ನೀಡಲಾಗಿದೆಯೋ ಅಲ್ಲಿ ರಸ್ತೆ ಕಾಮಗಾರಿ ಮಾಡಿ, ಪರಿಹಾರ ನೀಡಿಲ್ಲ ಎನ್ನುವ ಭೂಮಿಯ ಪರಿಹಾರ ನೀಡಿ ನಂತರ ಕಾಮಗಾರಿ ಮಾಡುವಂತೆ ರಾಷ್ಟ್ರೀಯ ಹೆದ್ದಾರಿಯ ಅಧಿಕಾರಿಗಳಿಗೆ ತಿಳಿಸಿದರು.

ಕೆಲವು ವ್ಯತ್ಯಾಸಗಳಾಗಿದ್ದರು ಇದನ್ನು ಸರಿಪಡಿಸದ ಅಧಿಕಾರಿಗಳ ವಿರುದ್ಧ ಬೇಸರ ವ್ಯಕ್ತಪಡಿಸಿದ ಇನ್ ಸ್ಪೆಕ್ಟರ್ಕೃಷ್ಣರಾಜ ಪರಿಸ್ಥಿತಿಯನ್ನು ನಿಭಾಯಿಸುವ ಜವಾಬ್ದಾರಿಯನ್ನು ಹೊತ್ತು, ರೈತರನ್ನು ಸಮಾಧಾನಪಡಿಸುವ ಜೊತೆಗೆ ಪರಿಹಾರ ಜೊತೆಗೆ ವ್ಯವಸ್ಥಿತವಾದ ಕಾಮಗಾರಿ ಮಾಡುವ ಭರವಸೆಯನ್ನು ನೀಡಿದರು.