ಕೋಟೆ ಮಾರಿಕಾಂಬಾ ಜಾತ್ರೆಗೆ ಭಕ್ತರ ಜನಸಾಗರ

| Published : Mar 13 2024, 02:03 AM IST

ಸಾರಾಂಶ

ನಗರದ ಪ್ರಸಿದ್ಧವಾದ ಕೋಟೆ ಮಾರಿಕಾಂಬ ಜಾತ್ರೆ ವೈಭವದಿಂದ ಆರಂಭವಾಯಿತು. ಐದು ದಿನಗಳು ನಡೆಯುವ ಜಾತ್ರೆಯ ಮೊದಲ ದಿನ ಮಂಗಳವಾರ ಮುಂಜಾನೆ ಮಾರಿಕಾಂಬೆಗೆ ಬ್ರಾಹ್ಮಣ, ನಾಡಿಗರ ಮನೆಯಲ್ಲಿ ಪೂಜೆ ನೆರವೇರಿತು. ನಂತರ ಮಂಗಳವಾದ್ಯದೊಂದಿಗೆ ತವರು ಮನೆ ಗಾಂಧಿ ಬಜಾರ್‌ಗೆ ಕರೆತರಲಾಯಿತು.

ಶಿವಮೊಗ್ಗ: ನಗರದ ಪ್ರಸಿದ್ಧವಾದ ಕೋಟೆ ಮಾರಿಕಾಂಬ ಜಾತ್ರೆ ವೈಭವದಿಂದ ಆರಂಭವಾಯಿತು. ಐದು ದಿನಗಳು ನಡೆಯುವ ಜಾತ್ರೆಯ ಮೊದಲ ದಿನ ಮಂಗಳವಾರ ಮುಂಜಾನೆ ಮಾರಿಕಾಂಬೆಗೆ ಬ್ರಾಹ್ಮಣ, ನಾಡಿಗರ ಮನೆಯಲ್ಲಿ ಪೂಜೆ ನೆರವೇರಿತು. ನಂತರ ಮಂಗಳವಾದ್ಯದೊಂದಿಗೆ ತವರು ಮನೆ ಗಾಂಧಿ ಬಜಾರ್‌ಗೆ ಕರೆತರಲಾಯಿತು. ಬಿರು ಬಿಸಲಿನ ಮಧ್ಯೆಯೂ ಸಾವಿರಾರು ಜನರು ಕಿಲೋ ಮೀಟರ್‌ಗೂ ಹೆಚ್ಚು ಉದ್ದದ ಸರದಿ ಸಾಲಿನಲ್ಲಿ ನಿಂತು ಶಕ್ತಿ ದೇವತೆ ಮಾರಿಕಾಂಬೆಯ ದರ್ಶನ ಪಡೆದರು. ದೇವಿಗೆ ಹರಕೆ ತೀರಿಸಿದರು.

ದೇವಿಯ ದರ್ಶನ ಪಡೆಯಲು ಭಕ್ತರು ಮುಂಜಾನೆ ಎರಡು ಗಂಟೆಯಿಂದಲೇ ಸರದಿ ಸಾಲಿನಲ್ಲಿ ನಿಂತಿದ್ದರು. ದೇವಿಗೆ ಸೀರೆ, ಅರಿಸಿಣ, ಕುಂಕುಮ, ಬಳೆ, ಕಣ ಮೊದಲಾದ ಹರಕೆ ತೀರಿಸಿದರು. ದೇವಿಯನ್ನು ವಿಶೇಷವಾಗಿ ಅಲಂಕರಿಸಲಾಗಿತ್ತು. ಮೇರೆ ಮೀರಿದ ಉತ್ಸಾಹ, ಸಂಭ್ರಮ ಗಾಂಧಿ ಬಜಾರ್‌ನಲ್ಲಿ ಮನೆ ಮಾಡಿತ್ತು.

ಬೆಳಗಿನ ಜಾವ 5 ಗಂಟೆಗೆ ಮಾರಿಕಾಂಬೆ ತವರುಮನೆಗೆ ಆಗಮಿಸಿದಳು. ನಾಡಿಗ ಕುಟುಂಬದ ಮುತ್ತೈದೆಯರು ಮಂಗಳವಾದ್ಯಗಳೊಂದಿಗೆ ಮೆರವಣಿಗೆಯಲ್ಲಿ ಬಾಸಿಂಗದ ಜೊತೆಗೆ ಬಂದು ಉಡಿ ತುಂಬಿದರು. ನಂತರ ವಿಶ್ವಕರ್ಮ ಸಮಾಜದವರು ಸಾರ್ವಜನಿಕವಾಗಿ ಪೂಜೆಯನ್ನು ಆರಂಭಿಸಿದರು.

ತವರುಮನೆಗೆ ಬಂದಿದ್ದ ಮಾರಿಕಾಂಬೆ ದೇವಿಯ ದರ್ಶನಕ್ಕಾಗಿ ಸಾವಿರಾರು ಸಂಖ್ಯೆಯಲ್ಲಿ ಇಂದು ಭಕ್ತರು ಸರತಿಯ ಸಾಲಿನಲ್ಲಿ ನಿಂತುಕೊಂಡಿದ್ದರು. ಗಾಂಧಿಬಜಾರಿನಿಂದ ಬಿ.ಎಚ್. ರಸ್ತೆಯ ಸೈನ್ಸ್ ಮೈದಾನದವರೆಗೂ ಸರತಿ ಸಾಲಿತ್ತು. ಅಮ್ಮನವರ ಪೂಜೆ ಅರ್ಧ ಗಂಟೆ ತಡವಾಗಿ ಆರಂಭವಾಗಿದ್ದರಿಂದ ಸರತಿ ಸಾಲು ಮತ್ತಷ್ಟು ಉದ್ದವಾಯಿತು.

ಗಣ್ಯರು ಭೇಟಿ, ಪೂಜೆ: ಮಾರಿಕಾಂಬ ದೇವಿಯ ದರ್ಶನ ಪಡೆಯಲು ಜಿಲ್ಲೆಯ ಗಣ್ಯರು ಆಗಮಿಸಿದ್ದರು. ಸಂಸದ ಬಿ.ವೈ.ರಾಘವೇಂದ್ರ ಅವರು ದೇವಿಯ ದರ್ಶನ ಪಡೆದರು. ಇದೇ ವೇಳೆ ಸರತಿಯಲ್ಲಿ ನಿಂತಿದ್ದ ಜನರು ಸಂಸದ ರಾಘವೇಂದ್ರ ಅವರಿ ಹಸ್ತಲಾಘವ ಮಾಡಿ, ಸೆಲ್ಫಿ ಕ್ಲಿಕ್ಕಿಸಿಕೊಂಡರು. ಸಂಸದ ಬಿ.ವೈ.ರಾಘವೇಂದ್ರ ಅವರು ಭಕ್ತರಿಗೆ ಮಜ್ಜಿಗೆ ವಿತರಿಸಿದರು.

ಶಾಸಕ ಚನ್ನಬಸಪ್ಪ, ಬಿಜೆಪಿ ಪ್ರಮುಖರಾದ ಎಸ್.ದತ್ತಾತ್ರಿ ಮತ್ತಿತರರು ಕುಟುಂಬ ಸಮೇತ ದರ್ಶನಕ್ಕೆ ಬಂದಿದ್ದರು. ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ, ಪುತ್ರ ಕಾಂತೇಶ್ ಕುಟುಂಬದೊಂದಿಗೆ ಆಗಮಿಸಿ ಮುಂಜಾನೆ ದೇವಿ ಗದ್ದುಗೆಗೆ ಪೂಜೆ ಸಲ್ಲಿಸಿದರು.

ಸುಮಾರು 5 ಗಂಟೆಗಳ ಕಾಲ ಕಾದು ಭಕ್ತರು ಅಮ್ಮನವರ ದರ್ಶನವನ್ನು ಪಡೆದರು. ತವರು ಮನೆಯಿಂದ ಬಂದಿದ್ದ ಅನೇಕ ಹೆಣ್ಣು ಮಕ್ಕಳು ದೇವಿಯ ದರ್ಶನ ಪಡೆದು ಕೃತಾರ್ಥರಾದರು. ಸೀರೆ, ಮಡ್ಲಕ್ಕಿ ನೀಡಿ ಉಡಿ ತುಂಬುವ ಮೂಲಕ ದೇವಿಯ ದರ್ಶನ ಪಡೆದರು. ಅಲ್ಲಲ್ಲಿ ಪಾನಕ, ಕುಡಿಯುವ ನೀರಿನ ವ್ಯವಸ್ಥೆ ಕೂಡ ಮಾಡಲಾಗಿತ್ತು.

ಜಾತ್ರೆಗೆ ವಿಶೇಷ ದರ್ಶನದ ವ್ಯವಸ್ಥೆಯನ್ನು ಮಾಡಲಾಗಿತ್ತು. 200 ರು. ಶುಲ್ಕದ ಪಾವತಿ ಮಾಡಿ ವಿಶೇಷ ದರ್ಶನ ಪಡೆಯಲು ಕೂಡ ಸರತಿ ಸಾಲಿತ್ತು. ಅಂಗವಿಕಲರಿಗೆ ಮತ್ತು ತುಂಬುಗರ್ಭಿಣಿಯರಿಗೆ ನೇರ ಅವಕಾಶ ಉಚಿತವಾಗಿಯೇ ಕಲ್ಪಿಸಲಾಗಿತ್ತು.

ಮಂಗಳವಾರ ರಾತ್ರಿ 10ರವರೆಗೂ ದೇವಿಯು ತವರು ಮನೆಯಲ್ಲಿಯೇ ಇದ್ದು, ಲಕ್ಷಾಂತರ ಮುತೈದೈಯರಿಂದ ಮಡ್ಲಕ್ಕಿ ಸ್ವೀಕರಿಸುವಳು.

ಬುಧವಾರ ಬೆಳಿಗ್ಗೆ 4ಕ್ಕೆ ಸುಮಾರಿಗೆ ವಿದ್ಯಾನಗರದ ಕರ್ಲಹಟ್ಟಿಯ ಹರಿಜನ ಸಮಾಜದವರು ಬೇವಿನ ಉಡುಗೆಯೊಂದಿಗೆ ಆಗಮಿಸಿ ಅಮ್ಮನವರನ್ನು ಕೋಟೆ ಮಾರಿ ಗದ್ದುಗೆಯಲ್ಲಿ ಪ್ರತಿಷ್ಠಾಪಿಸುತ್ತಾರೆ.

ನಂತರ ವಿವಿಧ ಸಮಾಜದವರು ಪೂಜೆ ಸಲ್ಲಿಸುತ್ತಾರೆ. ಮಾ.16ರ ತನಕ ಲಕ್ಷಾಂತರ ಭಕ್ತರು ಮಾರಿಕಾಂಬೆಯ ದರ್ಶನ ಪಡೆಯಲಿದ್ದಾರೆ. ಮಾ.೧೬ರ ರಾತ್ರಿ ಮಹಾಮಂಗಳರಾತಿ ನಂತರ ಅಮ್ಮನವರನ್ನು ವನಪ್ರವೇಶಕ್ಕೆ ಕಳುಹಿಸಿಕೊಡುವ ಮೂಲಕ ಹಬ್ಬಕ್ಕೆ ತೆರೆ ಬೀಳಲಿದೆ.

ಮಂದಿರ ಇತಿಹಾಸ: 1978ರಲ್ಲಿ ಮಾರಿಕಾಂಬಾ ಸೇವಾ ಸಮಿತಿ ರಚನೆಯಾದ ಮೇಲೆ ಕೋಟೆ ರಸ್ತೆಯಲ್ಲಿ ಭವ್ಯವಾದ ದೇವಾಲಯ ನಿರ್ಮಿಸಲಾಗಿದೆ. ವಿಶ್ವಕರ್ಮ ಸಮುದಾಯದವರು ದೇವಿಯ ವಿಗ್ರಹವನ್ನು ನಿರ್ದಿಷ್ಟ ಪಡಿಸಿದ ಮರದಲ್ಲಿ ನಿರ್ಮಿಸಿ, ಅದನ್ನು ಪೂಜಿಸಿದ ನಂತರವೇ ಸಾರ್ವಜನಿಕರ ಪೂಜೆಗೆ ಅವಕಾಶ ಕಲ್ಪಿಸಿಕೊಡುತ್ತಿದ್ದರು ಎಂಬ ವಾಡಿಕೆಯಿದ್ದರೂ, ನಾಡಿಗರ (ಬ್ರಾಹ್ಮಣ) ಮನೆತನದವರು ವಿಗ್ರಹಕ್ಕೆ ಪ್ರಾಣ ಪ್ರತಿಷ್ಠಾಪನೆ ಮಾಡಿ, ಮಂಗಳ ದ್ರವ್ಯ ತಂದು, ಉಡಿತುಂಬಿ ಪ್ರಥಮ ಪೂಜೆಯನ್ನು ಮಾಡುತ್ತಿದ್ದರು. ನಂತರ ಮಾರಿಕಾಂಬೆಯ ವಿಗ್ರಹವನ್ನು ನಿರ್ಮಿಸಿದ ವಿಶ್ವಕರ್ಮ ಜನಾಂಗದವರು ದೇವಿಯನ್ನು ಪೂಜಿಸುವ ಪದ್ಧತಿ ಬೆಳೆದು ಬಂದಿದೆ. ಈಗಿನ ಗಾಂಧಿಬಜಾರ್ ಆಗ ದೊಡ್ಡಪೇಟೆ ಎಂಬ ಹೆಸರಿನಿಂದ ಕರೆಯಲ್ಪಡುತ್ತಿತ್ತು. ಅದು ಮಾರಿಕಾಂಬೆಯ ತವರುಮನೆಯೆಂದೆ ಪ್ರತೀತಿ ಇದೆ. ಆದ್ದರಿಂದ ಗಾಂಧಿ ಬಜಾರ್‌ನಲ್ಲಿ ಜಾತ್ರೆ ಆರಂಭವಾಗಲಿದೆ. ಪ್ರತಿ ಜಾತ್ರೆಯು ಮಂಗಳವಾರದಂದೇ ಶುರುವಾಗಲಿದೆ. ನಾಡಿಗರ ಕುಟುಂಬದವರು ವಿಗ್ರಹಕ್ಕೆ ಪ್ರಾಣ ಪ್ರತಿಷ್ಠೆ ಮಾಡಿ, ಮಂಗಳ ದ್ರವ್ಯ ತಂದು, ಉಡಿತುಂಬಿ ಪ್ರಥಮ ಪೂಜೆ ಸಲ್ಲಿಸುತ್ತಾರೆ. ಆ ಬಳಿಕ ಜಾತ್ರೆ ಆರಂಭವಾಗಲಿದೆ. ನಂತರ ಮಾರಿಕಾಂಬೆಯ ವಿಗ್ರಹ ಕೆತ್ತನೆ ಮಾಡಿದ ವಿಶ್ವಕರ್ಮ ಸುಮುದಾಯದವರು ದೇವಿಯನ್ನು ಪೂಜಿಸುತ್ತಾರೆ.