ಸಿಎಂ, ಡಿಸಿಎಂ, ಖರ್ಗೆ ಮನೆಗೆ ಶಾಸಕರ ದಂಡು

| Published : Nov 23 2025, 02:00 AM IST

ಸಾರಾಂಶ

ರಾಜ್ಯ ಕಾಂಗ್ರೆಸ್‌ನ ಗೊಂದಲ ಶನಿವಾರವೂ ಮುಂದುವರೆದಿದ್ದು, ತ್ರಿಮೂರ್ತಿ ನಾಯಕರಾದ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ್‌ ಹಾಗೂ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನಿವಾಸಕ್ಕೆ ಶಾಸಕರು ತಂಡೋಪತಂಡವಾಗಿ ಭೇಟಿ ನೀಡಿ ಚರ್ಚಿಸಿದರು.

ಕನ್ನಡಪ್ರಭ ವಾರ್ತೆ ಬೆಂಗಳೂರು

ರಾಜ್ಯ ಕಾಂಗ್ರೆಸ್‌ನ ಗೊಂದಲ ಶನಿವಾರವೂ ಮುಂದುವರೆದಿದ್ದು, ತ್ರಿಮೂರ್ತಿ ನಾಯಕರಾದ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ್‌ ಹಾಗೂ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನಿವಾಸಕ್ಕೆ ಶಾಸಕರು ತಂಡೋಪತಂಡವಾಗಿ ಭೇಟಿ ನೀಡಿ ಚರ್ಚಿಸಿದರು.

ಸಿಎಂ ನಿವಾಸಕ್ಕೆ ಭೇಟಿ ನೀಡಿದವರು ಸಚಿವ ಸಂಪುಟ ವಿಸ್ತರಣೆ ವೇಳೆ ಅವಕಾಶ ಕೋರಿದರೆ, ನಾಯಕತ್ವ ಬದಲಾವಣೆಗೆ ಬೆಂಬಲ ನೀಡುವ ಶಾಸಕರು ಡಿಸಿಎಂ ನಿವಾಸದಲ್ಲಿ ಕಾಣಿಸಿಕೊಂಡರು. ಈ ನಡುವೆ ರಾಜಕೀಯ ಮೇಲಾಟ ಬಿಗಡಾಯಿಸಿ, ಪಕ್ಷಕ್ಕೆ ಹಾನಿಯಾಗುವ ಹಂತಕ್ಕೆ ಹೋಗುವ ಮೊದಲು ಸೂಕ್ತವಾದ ತೀರ್ಮಾನ ಮಾಡುವಂತೆ ಕೆಲ ಹಿರಿಯ ಹಾಗೂ ತಟಸ್ಥ ಶಾಸಕರು ನೇರವಾಗಿ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿ ಮಾಡಿ ಮನವಿ ಮಾಡಿದರು.

ಪಕ್ಷದ ಹಿರಿಯ ನಾಯಕ ಹಾಗೂ ಶಾಸಕ ಆರ್‌.ವಿ.ದೇಶಪಾಂಡೆ, ಸಚಿವರಾದ ಈಶ್ವರ್‌ ಖಂಡ್ರೆ, ಶಿವರಾಜ್‌ ತಂಗಡಗಿ, ಶಾಸಕರಾದ ಮಾಗಡಿ ಬಾಲಕೃಷ್ಣ, ಅಜಯ್‌ ಸಿಂಗ್‌ ಸೇರಿದಂತೆ ಹಲವು ಶಾಸಕರು ಬೆಂಗಳೂರಿಗೆ ಆಗಮಿಸಿರುವ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿ ಮಾಡಿದ ಬಳಿಕ ಈ ಬಗ್ಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು. ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್‌ ಇಬ್ಬರೂ ಪಕ್ಷದ ಶಿಸ್ತಿನ ಸಿಪಾಯಿಗಳು. ಇಬ್ಬರು ಕೂಡ ಪಕ್ಷದ ಹೈಕಮಾಂಡ್‌ ಯಾವುದೇ ನಿರ್ಧಾರ ಮಾಡಿದರೂ ಅದಕ್ಕೆ ತಲೆಬಾಗಬೇಕು ಎಂದು ಕೆಲ ಹಿರಿಯ ಶಾಸಕರು ಸಲಹೆಯನ್ನೂ ಮಾಡಿದರು.

ನಿಲ್ಲದ ಬಣ ರಾಜಕೀಯ:

ಈ ಮಧ್ಯೆ ಸಿಎಂ, ಡಿಸಿಎಂ ಬೆಂಬಲಿಗರಿಂದ ಬಣ ರಾಜಕೀಯ ಮುಂದುವರೆದಿದೆ. ಉಭಯ ಬಣಗಳು ಹೈಕಮಾಂಡ್‌ ಮೇಲೆ ಪರೋಕ್ಷವಾಗಿ ತಮ್ಮ ಒತ್ತಡ ತಂತ್ರ ಮುಂದುವರೆಸಿವೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬೆಂಬಲಿಗ ಶಾಸಕರು ಯಾವುದೇ ಕಾರಣಕ್ಕೂ ನಾಯಕತ್ವ ಬದಲಾವಣೆ ಮಾಡಬಾರದು ಎಂದು ಪಟ್ಟು ಹಿಡಿಯಲು ನಿರ್ಧರಿಸಿದ್ದಾರೆ. ಡಿ.ಕೆ.ಶಿವಕುಮಾರ್‌ ಬಣದ ಶಾಸಕರು ಅಧಿಕಾರ ಹಸ್ತಾಂತರಕ್ಕೆ ಒತ್ತಡ ತಂತ್ರ ಮುಂದುವರೆಸಿದ್ದಾರೆ. ಸಂಖ್ಯಾಬಲದ ಲೆಕ್ಕಾಚಾರವೇನಾದರೂ ನಡೆದರೆ ಎನ್ನುವ ಕಾರಣಕ್ಕೆ ಈಗಿರುವ ಶಾಸಕರ ಜೊತೆಗೆ ಇನ್ನಷ್ಟು ಶಾಸಕರನ್ನು ಬಣಕ್ಕೆ ಸೆಳೆಯುವ ಪ್ರಯತ್ನವೂ ಮುಂದುವರೆದಿದೆ.

ಈ ಮಧ್ಯೆ, ಕೆಲ ಹಿರಿಯ ನಾಯಕರು, ಯಾವ ಬಣದಲ್ಲೂ ಗುರುತಿಸಿಕೊಳ್ಳದ ಶಾಸಕರು ಬೆಂಗಳೂರಿಗೆ ಆಗಮಿಸಿರುವ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಮನೆಗೆ ಭೇಟಿ ನೀಡಿ, ಆದಷ್ಟು ಬೇಗ ಪಕ್ಷದ ಬೀದಿ ಜಗಳ ನಿಲ್ಲಿಸಲು ಸೂಕ್ತ ನಿರ್ಧಾರ ಕೈಗೊಳ್ಳಲು ಮನವಿ ಮಾಡಿದ್ದಾರೆ.

ಗೊಂದಲ ಮುಂದುವರೆದರೆ ಹಾನಿ:

ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕ ಮಾಗಡಿ ಬಾಲಕೃಷ್ಣ, ಕಾಂಗ್ರೆಸ್ ಪಕ್ಷಕ್ಕೆ ಮುಜುಗರ ಆಗದ ನಿಟ್ಟಿನಲ್ಲಿ ಪಕ್ಷದ ಹೈಕಮಾಂಡ್ ಗೊಂದಲವನ್ನು ಇತ್ಯರ್ಥ ಮಾಡಬೇಕು. ನಾಯಕತ್ವ ಬದಲಾವಣೆ ಕುರಿತಾಗಿ ಹೈಕಮಾಂಡ್ ಅಂತಿಮ ತೀರ್ಮಾನ ಕೈಗೊಳ್ಳಬೇಕು. ಇದು ಹೀಗೆಯೇ ಮುಂದುವರಿದರೆ ಪಕ್ಷಕ್ಕೆ ತುಂಬಾ ಹಾನಿ ಉಂಟು ಮಾಡಲಿದೆ. ಹೀಗಾಗಿ ಕೂಡಲೇ ಹೈಕಮಾಂಡ್ ಮಧ್ಯಪ್ರವೇಶ ಮಾಡಬೇಕು ಎಂದು ಒತ್ತಾಯಿಸಿದರು.

ಇಬ್ಬರೂ ಶಿಸ್ತಿನ ಸಿಪಾಯಿಗಳು:

ಇನ್ನು ಹಿರಿಯ ಶಾಸಕ ಆರ್‌.ವಿ. ದೇಶಪಾಂಡೆ ಮಾತನಾಡಿ, ಡಿ‌.ಕೆ. ಶಿವಕುಮಾರ್ ಸಿಎಂ ಆಗಬೇಕು ಎಂಬ ಆಸೆ ತಪ್ಪಲ್ಲ. ಸಿಎಂ ಹಾಗೂ ಡಿಸಿಎಂ ಇಬ್ಬರೂ ಕಾಂಗ್ರೆಸ್ ಪಕ್ಷದ ಶಿಸ್ತಿನ ಸಿಪಾಯಿಗಳು. ಅವರ ಬಗ್ಗೆ ಏನೇ ನಿರ್ಧಾರ ಮಾಡಬೇಕು ಅಂದರೂ ಹೈಕಮಾಂಡ್ ಮಾಡುತ್ತೆ. ಇಬ್ಬರೂ ಸೀನಿಯರ್ ಲೀಡರ್ ಇದ್ದಾರೆ. ಹೈಕಮಾಂಡ್ ಏನು ಹೇಳುತ್ತೋ ಹಾಗೆ ನಡೆದೆಕೊಳ್ಳಬೇಕು ಎಂದು ಸಲಹೆ ನೀಡಿದರು.

ಹೈಕಮಾಂಡ್‌ ತೀರ್ಮಾನಕ್ಕೆ ಬದ್ಧ:

ಶುಕ್ರವಾರ ತಡರಾತ್ರಿ ಖರ್ಗೆ ನಿವಾಸಕ್ಕೆ ಭೇಟಿ ನೀಡಿದ್ದ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಶಿವರಾಜ ತಂಗಡಗಿ, ಸದ್ಯ ಸಿದ್ದರಾಮಯ್ಯ ನಮ್ಮ ಸಿಎಂ ಆಗಿದ್ದಾರೆ. ಡಿ.ಕೆ.ಶಿವಕುಮಾರ್ ಡಿಸಿಎಂ ಆಗಿದ್ದಾರೆ. ಹೈಕಮಾಂಡ್ ಏನೇ ತೀರ್ಮಾನ ತೆಗೆದುಕೊಳ್ಳಲಿ. ಅದಕ್ಕೆ ನಾವೆಲ್ಲರೂ ಬದ್ಧರಾಗಿರುತ್ತೇವೆ ಎಂದು ಹೇಳಿದ್ದರು.

ಸಿಎಂ ನಿವಾಸಕ್ಕೆ ಸೈನಿಕ:

ಶುಕ್ರವಾರ ಡಿಸಿಎಂ ಡಿ.ಕೆ.ಶಿವಕುಮಾರ್‌ ಅವರ ಮನೆಗೆ ಭೇಟಿ ನೀಡಿ ಸುದೀರ್ಘ ಚರ್ಚೆ ನಡೆಸಿದ್ದ ಶಾಸಕ ಸಿ.ಪಿ.ಯೋಗೇಶ್ವರ್‌ ಶನಿವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ನಗರದಲ್ಲಿ ಭೇಟಿ ಮಾಡಿ ಒಂದು ಗಂಟೆಗೂ ಹೆಚ್ಚು ಕಾಲ ಮಾತುಕತೆ ನಡೆಸಿದ್ದು ಕುತೂಹಲ ಮೂಡಿಸಿದೆ.

----

ಖರ್ಗೆ ನಿವಾಸಕ್ಕೆ ಬಣ

ರಾಜಕೀಯ ಸ್ಥಳಾಂತರ

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಬೆಂಗಳೂರಿಗೆ ಆಗಮಿಸಿದ್ದು ಸದಾಶಿವನಗರದ ಅವರ ನಿವಾಸಲ್ಲಿದ್ದಾರೆ. ಈ ಹಿನ್ನೆಲೆಯಲ್ಲಿ ಇದೀಗ ನಾಯಕತ್ವ ಬದಲಾವಣೆ ಚರ್ಚೆ ಮತ್ತು ಬೆಳವಣಿಗೆಗಳು ಅವರ ನಿವಾಸಕ್ಕೆ ವರ್ಗವಾಗಿವೆ. ವಿವಿಧ ಸಚಿವರು, ಶಾಸಕರು ಖರ್ಗೆ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸುತ್ತಿದ್ದಾರೆ. ಸಿದ್ದರಾಮಯ್ಯ ಬೆಂಬಲಿಗರು ನಾಯಕತ್ವ ಬದಲಾವಣೆಯಂತಹ ನಿರ್ಧಾರಕ್ಕೆ ಹೈಕಮಾಂಡ್‌ ಬರಬಾರದೆಂದು ಒತ್ತಡ ಹಾಕಿದ್ದರೆ, ಡಿ.ಕೆ.ಶಿವಕುಮಾರ್‌ ಅವರ ಬಣ ಅಧಿಕಾರ ಹಸ್ತಾಂತರಕ್ಕೆ ಒತ್ತಡ ತಂತ್ರ ಮುಂದುವರೆಸಿದೆ ಎಂದು ತಿಳಿದು ಬಂದಿದೆ.

ಇನ್ನು ಎಐಸಿಸಿ ಅಧ್ಯಕ್ಷರ ಮನೆಗೆ ಬಿಗಿ ಭದ್ರತೆ ಒದಗಿಸಲಾಗಿದೆ. ಖರ್ಗೆ ಅವರನ್ನು ಭೇಟಿ ಮಾಡಲು ಸಾಕಷ್ಟು ಸಂಖ್ಯೆಯಲ್ಲಿ ಶಾಸಕರು, ಅಭಿಮಾನಿಗಳು, ಕಾರ್ಯಕರ್ತರು ಆಗಮಿಸಿಸುತ್ತಿರುವ ಹಿನ್ನೆಲೆಯಲ್ಲಿ ಭದ್ರತೆಯನ್ನು ಹೆಚ್ಚಳ ಮಾಡಲಾಗಿದೆ.----

ಬಾಕ್ಸ್‌

ಸಚಿವ ಸ್ಥಾನಕ್ಕೆ ಆಕಾಂಕ್ಷಿಗಳ

ಒತ್ತಡ: ಬೆಂಬಲಿಗರ ಘೋಷಣೆ

ಮಲ್ಲಿಕಾರ್ಜುನ ಖರ್ಗೆ ಅವರ ನಿವಾಸಕ್ಕೆ ಒಂದೆಡೆ ನಾಯಕತ್ವ ಬದಲಾವಣೆಗೆ ಸಂಬಂಧಿಸಿದ ಪರ-ವಿರೋಧ ಬಣ ರಾಜಕೀಯ ಚಟುವಟಿಕೆಗಳು ವರ್ಗವಾಗಿರುವ ನಡುವೆ, ಸಂಪುಟ ಪುನಾರಚನೆ ಮಾಹಿತಿ ಹಿನ್ನೆಲೆಯಲ್ಲಿ ಸಚಿವ ಸ್ಥಾನಕ್ಕಾಗಿ ಆಕಾಂಕ್ಷಿಗಳ ಲಾಬಿ, ಶಾಸಕರ ಬೆಂಬಲಿಗರ ಘೋಷಣೆಗಳ ಕೂಗು ಕೇಳಿಬಂತು.

ಕೆಲ ಹಿರಿಯ ಶಾಸಕರು, ಹಲವು ಬಾರಿ ಗೆಲುವು ಸಾಧಿಸಿರುವ ವಿವಿಧ ಶಾಸಕರು ಖರ್ಗೆ ಅವರನ್ನು ಭೇಟಿ ಮಾಡಿ ತಮಗೆ ಸಚಿವ ಸ್ಥಾನ ನೀಡುವಂತೆ ಶನಿವಾರ ಮನವಿ ಮಾಡಿದರು. ಈ ವೇಳೆ ಶಾಸಕ ತನ್ವೀರ್ ಸೇಠ್‌ಗೆ ಮಂತ್ರಿ ಸ್ಥಾನ ನೀಡುವಂತೆ ಅವರ ಅಭಿಮಾನಿಗಳು ಘೋ‍ಷಣೆ ಕೂಗಿದ ಘಟನೆ ನಡೆಯಿತು.