ಲಾಲ್‌ಬಾಗ್‌ ಫ್ಲವರ್‌ಶೋಗೆ ಜನಸಾಗರ!

| N/A | Published : Aug 16 2025, 02:01 AM IST

ಸಾರಾಂಶ

79ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ಲಾಲ್‌ಬಾಗ್‌ನ ಗಾಜಿನಮನೆಯಲ್ಲಿ ‘ವೀರ ರಾಣಿ ಕಿತ್ತೂರು ಚನ್ನಮ್ಮ ಮತ್ತು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ವಿಷಯಾಧಾರಿತ ಫಲಪುಷ್ಪ ಪ್ರದರ್ಶನ ವೀಕ್ಷಿಸಲು ಜನ ಸಾಗರವೇ ಹರಿದು ಬಂತು.

 ಬೆಂಗಳೂರು :  79ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ಲಾಲ್‌ಬಾಗ್‌ನ ಗಾಜಿನಮನೆಯಲ್ಲಿ ‘ವೀರ ರಾಣಿ ಕಿತ್ತೂರು ಚನ್ನಮ್ಮ ಮತ್ತು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ವಿಷಯಾಧಾರಿತ ಫಲಪುಷ್ಪ ಪ್ರದರ್ಶನ ವೀಕ್ಷಿಸಲು ಜನ ಸಾಗರವೇ ಹರಿದು ಬಂತು.

ಶುಕ್ರವಾರ ಒಂದೇ ದಿನ ಬರೋಬ್ಬರಿ 1.79 ಲಕ್ಷಕ್ಕೂ ಹೆಚ್ಚು ಜನರು ಭೇಟಿ ನೀಡಿದ್ದು 85 ಲಕ್ಷ ರು. ಟಿಕೆಟ್‌ನಿಂದ ಸಂಗ್ರಹವಾಗಿದೆ. ಪ್ರದರ್ಶನಕ್ಕೆ ಬಂದವರಲ್ಲಿ 1.45 ಲಕ್ಷ ವಯಸ್ಕರು, 13,720 ಮಕ್ಕಳು, 19,650 ವಿದ್ಯಾರ್ಥಿಗಳು ಸೇರಿದ್ದಾರೆ ಎಂದು ಡಾ.ಎಂ.ಜಗದೀಶ್‌ ಮಾಹಿತಿ ನೀಡಿದರು

ರಾಷ್ಟ್ರೀಯ ಹಬ್ಬದ ಹಿನ್ನೆಲೆಯಲ್ಲಿ ಶುಕ್ರವಾರ ರಜಾ ದಿನವಾದ್ದರಿಂದ ಮತ್ತು ಮಳೆ ಬಿಡುವು ನೀಡಿದ್ದರಿಂದ ಬೆಳಗ್ಗಿನಿಂದಲೇ ಸಾರ್ವಜನಿಕರು ಲಾಲ್‌ಬಾಗ್‌ಗೆ ಆಗಮಿಸಿದ್ದರು. ಉದ್ಯಾನದ ನಾಲ್ಕು ದ್ವಾರಗಳಲ್ಲಿ ಟಿಕೆಟ್‌ ಕೌಂಟರ್‌ಗಳನ್ನು ಹೆಚ್ಚಿಸಲಾಗಿತ್ತು. ನರ್ಸರಿ ಮತ್ತು ಉದ್ಯಾನದಲ್ಲಿ ನಿರ್ಮಿಸಲಾಗಿರುವ ಮಾರಾಟ ಮಳಿಗೆಗಳಲ್ಲಿ ಸಸಿಗಳನ್ನು ಖರೀದಿಸುವಲ್ಲಿ, ಜನಸಂದಣಿ ಹೆಚ್ಚಾಗಿತ್ತು. ಪ್ರದರ್ಶನದ ವೇಳೆ ಅವ್ಯವಸ್ಥೆಗಳಿಗೆ ಆಸ್ಪದವಾಗದಂತೆ ಸಾಕಷ್ಟು ಮುನ್ನೆಚ್ಚರಿಕೆ ವಹಿಸಲಾಗಿತ್ತು.

ತೋಟಗಾರಿಕೆ ಇಲಾಖೆ ಸಿಬ್ಬಂದಿ ಮತ್ತು ಪೊಲೀಸರು ಜನರನ್ನು ನಿಯಂತ್ರಿಸಲು ಹರಸಾಹಸ ಪಟ್ಟರು. ಉದ್ಯಾನದ ಆವರಣದಲ್ಲಿರುವ ಅಧಿಕೃತ ಮಾರಾಟ ಮಳಿಗೆಗಳಲ್ಲಿ ಆಟಿಕೆಗಳು, ಗೃಹೋಪಯೋಗಿ, ಅಲಂಕಾರಿಕ ಮತ್ತು ಕರಕುಶಲ ವಸ್ತುಗಳು, ಅಡುಗೆ ಪದಾರ್ಥಗಳು, ಮಹಿಳೆಯರನ್ನು ಆಕರ್ಷಿಸಿದ ಬ್ಯಾಗ್‌, ಪರ್ಸ್‌ ಇತ್ಯಾದಿಗಳ ಖರೀದಿಗೆ ಜನ ಮುಗಿಬಿದ್ದಿದ್ದರು. ಇನ್ನು ಹೂವಿನ ಗಿಡಗಳು, ಅಲಂಕಾರಿಕ ಗಿಡಗಳ ಬಗ್ಗೆ ಆಸಕ್ತಿ ಹೊಂದಿದವರ ಖರೀದಿಯೂ ಜೋರಾಗಿತ್ತು.

ಸೆಲ್ಫಿ ಕ್ರೇಜ್‌:

ಗಾಜಿನ ಮನೆಯೊಳಗೆ ನಿರ್ಮಿಸಿರುವ ರಾಣಿ ಚನ್ನಮ್ಮ ಹಾಗೂ ಸಂಗೊಳ್ಳಿ ರಾಯಣ್ಣ ಅವರ ಕಿತ್ತೂರು ಕೋಟೆ ಪ್ರತಿನಿಧಿಸುವ ಕೋಟೆಯ ಪುಷ್ಪ ಮಾದರಿ, ವರ್ಟಿಕಲ್‌ ಗಾರ್ಡನ್‌ ಕೋಟೆ ಮತ್ತು ಅಶೋಕ ಸ್ಥಂಭ, ಕನ್ನಡ ನಾಡಿನ ವೀರ ರಾಣಿಯರಾದ ಬೆಳವಡಿ ಮಲ್ಲಮ್ಮ, ಒನಕೆ ಓಬವ್ವ, ರಾಣಿ ಅಬ್ಬಕ್ಕ, ವೀರಮ್ಮಾಜಿ, ಕೆಳದಿ ಚೆನ್ನಮ್ಮ, ರಾಣಿ ಚೆನ್ನಬೈರಾದೇವಿ ಅವರ ಪ್ರತಿಮೆಗಳು, ಪೀಚ್‌ ಬಣ್ಣದ ಗುಲಾಬಿ ಹೂವುಗಳು ಮತ್ತು ಬಿಳಿ, ಪಿಂಕ್‌, ಚಾಕೋಲೇಟ್‌ ಬಣ್ಣದ ಸೇವಂತಿಗೆ ಹೂವುಗಳು, ಹಸಿರು ಪೋಲಿಯೇಜ್‌ಗಲಿಂದ ನಿರ್ಮಿಸಲಾಗಿರುವ ರಾಣಿ ಚನ್ನಮ್ಮ ಐಕ್ಯಮಂಟಪ, ರಾಯಣ್ಣನನ್ನು ನೇಣಿಗೆ ಹಾಕಿದ ಆಲದ ಮರದ ಮಾದರಿ, ಅಶ್ವಾರೂಢ ಸಂಗೊಳ್ಳಿ ರಾಯಣ್ಣ, ಇಂಡೋ ಅಮೆರಿಕನ್‌ ಸೀಡ್ಸ್‌ ಹೂಜೋಡಣೆಗಳ ಮುಂದೆ ನಾಮುಂದು ತಾಮುಂದು ಎನ್ನುವಂತೆ ಸೆಲ್ಫಿ ತೆಗೆದುಕೊಳ್ಳಲು ನಿರತರಾದ ಯುವಕ, ಯುವತಿಯರು, ಮಕ್ಕಳು, ಮಹಿಳೆಯರನ್ನು ನಿಯಂತ್ರಿಸುವುದು ಭದ್ರತಾ ಸಿಬ್ಬಂದಿಗೆ ತಲೆನೋವು ತರಿಸಿತ್ತು.

ಇನ್ನು ಲಾಲ್‌ಬಾಗ್‌ ಜಲಪಾತ, ಹೂವು ಬಳ್ಳಿಗಳಿಂದ ನಿರ್ಮಿಸಲಾದ ನರ್ತಿಸುವ ನವಿಲು, ಹೂವಿನ ಕಮಾನುಗಳು, ಮೆಗಾ ಫ್ಲೋರಲ್‌ ಫ್ಲೋ, ತೂಗುವ ಹೂವುಗಳ ಸ್ಟ್ಯಾಂಡ್‌ಗಳು, ನಾಲ್ಕು ಪ್ರವೇಶ ದ್ವಾರದಲ್ಲಿ ನಿರ್ಮಿಸಿರುವ ವರ್ಟಿಕಲ್‌ ಗಾರ್ಡನ್‌ ರೂಪದ ಕಮಾನುಗಳು ಕೂಡ ಸೆಲ್ಫಿ ಸ್ಪಾಟ್‌ಗಳಾಗಿದ್ದವು. ನಿರಂತರವಾಗಿ ಎಲ್ಲೆಂದರಲ್ಲಿ ಉದ್ಯಾನದ ಎಲ್ಲಾ ಕಡೆಗಳಲ್ಲಿ ಜನರು ಸೆಲ್ಫಿ ತೆಗೆದುಕೊಂಡು ಸಂತಸದಲ್ಲಿ ಮಿಂದೆಳುವ ದೃಶ್ಯ ಕಂಡುಬಂತು.

ಎಲ್ಲೆಲ್ಲೂ ಸಂಚಾರ ದಟ್ಟಣೆ :ಶುಕ್ರವಾರ ಹೆಚ್ಚಿನ ಸಂಖ್ಯೆಯಲ್ಲಿ ವೀಕ್ಷಕರು ಆಗಮಿಸಿದ ಪರಿಣಾಮ ಲಾಲ್‌ಬಾಗ್‌ನ ಸುತ್ತಮುತ್ತಲಿನ ರಸ್ತೆಗಳಲ್ಲಿ ಬೆಳಗ್ಗೆಯಿಂದಲೇ ಸಂಚಾರ ದಟ್ಟಣೆ ಉಂಟಾಗಿತ್ತು. ಮೆಟ್ರೋದಲ್ಲೂ ಸಾವಿರಾರು ಸಂಖ್ಯೆಯಲ್ಲಿ ಜನರು ಫಲಪುಷ್ಪ ಪ್ರದರ್ಶನಕ್ಕೆ ಆಗಮಿಸಿದ್ದರಿಂದ ಲಾಲ್‌ಬಾಗ್‌ ಪಶ್ಚಿಮ ಗೇಟ್‌ ಸಮೀಪ ನೂಕುನುಗ್ಗಲು ಉಂಟಾಗಿತ್ತು. ಹೊಸೂರು ರಸ್ತೆ, ಜೆ.ಸಿ. ರಸ್ತೆ, ಆರ್‌.ವಿ. ರಸ್ತೆ, ಅಶೋಕ ಪಿಲ್ಲರ್‌ ಹೀಗೆ ಹಲವು ರಸ್ತೆಗಳಲ್ಲಿ ಸಂಚಾರ ದಟ್ಟಣೆಯಿದ್ದುದರಿಂದ ಸಾರ್ವಜನಿಕರಿಗೆ ತೀವ್ರ ತೊಂದರೆ ಉಂಟಾಗಿತ್ತು.

Read more Articles on