ಲಾಲ್‌ಬಾಗ್‌ ಫ್ಲವರ್‌ ಶೋಗೆ ಜನರ ದಾಂಗುಡಿ : 40,645 ಮಂದಿ ಭೇಟಿ

| N/A | Published : Aug 11 2025, 12:30 AM IST / Updated: Aug 11 2025, 09:26 AM IST

ಲಾಲ್‌ಬಾಗ್‌ ಫ್ಲವರ್‌ ಶೋಗೆ ಜನರ ದಾಂಗುಡಿ : 40,645 ಮಂದಿ ಭೇಟಿ
Share this Article
  • FB
  • TW
  • Linkdin
  • Email

ಸಾರಾಂಶ

ಸ್ವಾತಂತ್ರ್ಯೋತ್ಸವದ ಅಂಗವಾಗಿ ಲಾಲ್‌ಬಾಗ್‌ನಲ್ಲಿ ಆಯೋಜಿಸಿರುವ ಫಲಪುಷ್ಪ ಪ್ರದರ್ಶನಕ್ಕೆ ರಜಾ ದಿನವಾದ ಭಾನುವಾರ ಮಳೆಯ ನಡುವೆಯೂ 40,645 ಮಂದಿ ಆಗಮಿಸಿ ಸಸ್ಯಕಾಶಿಯ ಸೊಬಗು ಕಣ್ತುಂಬಿಕೊಂಡಿದ್ದಾರೆ.

  ಬೆಂಗಳೂರು :  ಸ್ವಾತಂತ್ರ್ಯೋತ್ಸವದ ಅಂಗವಾಗಿ ಲಾಲ್‌ಬಾಗ್‌ನಲ್ಲಿ ಆಯೋಜಿಸಿರುವ ಫಲಪುಷ್ಪ ಪ್ರದರ್ಶನಕ್ಕೆ ರಜಾ ದಿನವಾದ ಭಾನುವಾರ ಮಳೆಯ ನಡುವೆಯೂ 40,645 ಮಂದಿ ಆಗಮಿಸಿ ಸಸ್ಯಕಾಶಿಯ ಸೊಬಗು ಕಣ್ತುಂಬಿಕೊಂಡಿದ್ದಾರೆ.

ವಾರಾಂತ್ಯವಾದ ಶನಿವಾರ 54,489 ಮಂದಿ ಭೇಟಿ ನೀಡಿದ್ದು 32,16,720 ರು. ಸಂಗ್ರಹವಾಗಿತ್ತು. ಭಾನುವಾರ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಜನತೆ ಲಾಲ್‌ಬಾಗ್‌ಗೆ ಭೇಟಿ ನೀಡಬೇಕಿತ್ತಾದರೂ ಮಳೆಯಿಂದಾಗಿ ಲಾಲ್‌ಬಾಗ್‌ನತ್ತ ತೆರಳುವವರ ಸಂಖ್ಯೆ ಕಡಿಮೆಯಾಗಿದೆ. 26,770 ವಯಸ್ಕರು, 5225 ಮಕ್ಕಳು ಹಾಗೂ 8650 ಶಾಲಾ ವಿದ್ಯಾರ್ಥಿಗಳು ಸೇರಿದಂತೆ ಒಟ್ಟಾರೆ 40,645 ಮಂದಿ ಭೇಟಿ ನೀಡಿದ್ದು 18,52,960 ಲಕ್ಷ ರು. ಸಂಗ್ರಹವಾಗಿದೆ.

ಪ್ರಧಾನಿ ಮೋದಿ ಅವರ ಆಗಮನದ ಹಿನ್ನೆಲೆಯಲ್ಲಿ ಮಧ್ಯಾಹದವರೆಗೂ ಹಲವೆಡೆ ಸಂಚಾರ ನಿರ್ಬಂಧ ಮಾಡಲಾಗಿತ್ತು. ಇದೂ ಜನರು ಹೆಚ್ಚಿನ ಸಂಖ್ಯೆಯಲ್ಲಿ ಲಾಲ್‌ಬಾಗ್‌ನತ್ತ ಆಗಮಿಸದಿರಲು ಕಾರಣವಾಯಿತು.

ಮಳೆ ನಡುವೆಯೂ ಬತ್ತದ ಉತ್ಸಾಹ

ಮಧ್ಯಾಹ್ನದಿಂದಲೇ ನಗರದಲ್ಲಿ ಮಳೆಯ ಆರ್ಭಟ ಪ್ರಾರಂಭವಾಯಿತಾದರೂ ಬೆಳಿಗ್ಗೆಯೇ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಲಾಲ್‌ಬಾಗ್‌ಗೆ ಆಗಮಿಸಿ ಹೂವುಗಳಿಂದ ನಿರ್ಮಿಸಿರುವ ಕಿತ್ತೂರು ಕೋಟೆ, ಆಕರ್ಷಕ ಹೂವುಗಳ ನಡುವೆ ಇರುವ ಕಿತ್ತೂರು ರಾಣಿ ಚನ್ನಮ್ಮ, ಒನಕೆ ಓಬವ್ವ, ಸಂಗೊಳ್ಳಿ ರಾಯಣ್ಣ ಅವರ ಕಲಾಕೃತಿಗಳನ್ನು ನೋಡಿ ಸಂತಸಪಟ್ಟರು.

ಶಾಲಾ-ಕಾಲೇಜುಗಳು, ಸರ್ಕಾರಿ, ಖಾಸಗಿ ಕಚೇರಿಗಳಿಗೆ ರಜೆ ಇದ್ದಿದ್ದರಿಂದ ಜನರು ತಂಡೋಪತಂಡವಾಗಿ ಲಾಲ್‌ಬಾಗ್‌ಗೆ ಭೇಟಿ ನೀಡಿದರು. ಹೂವುಗಳಿಂದ ರಚಿಸಿರುವ ನವಿಲುಗಳನ್ನು ವೀಕ್ಷಿಸಿದ ಚಿಣ್ಣರು ಸಂತಸ ವ್ಯಕ್ತಪಡಿಸಿದರು. ವಿಭಿನ್ನ ಪುಷ್ಪಗಳ ಸೊಬಗನ್ನು ಮೆಚ್ಚಿ ಜನರು ಸೆಲ್ಫಿ ತೆಗೆದುಕೊಳ್ಳುತ್ತಿದ್ದುದು ಅಲ್ಲಲ್ಲಿ ಕಂಡುಬಂತು.

Read more Articles on