ಇಂದು ಫಲಪುಷ್ಪ ಪ್ರದರ್ಶನಕ್ಕೆ ಸಿಎಂ ಸಿದ್ದರಾಮಯ್ಯ ಚಾಲನೆ : ಇಲ್ಲೆಲ್ಲಾ ವಾಹನಗಳಿಗೆ ನಿಷೇಧ

| N/A | Published : Aug 07 2025, 07:46 AM IST

Lalbagh Flower Show
ಇಂದು ಫಲಪುಷ್ಪ ಪ್ರದರ್ಶನಕ್ಕೆ ಸಿಎಂ ಸಿದ್ದರಾಮಯ್ಯ ಚಾಲನೆ : ಇಲ್ಲೆಲ್ಲಾ ವಾಹನಗಳಿಗೆ ನಿಷೇಧ
Share this Article
  • FB
  • TW
  • Linkdin
  • Email

ಸಾರಾಂಶ

ವೀರ ರಾಣಿ ಕಿತ್ತೂರು ಚನ್ನಮ್ಮ ಮತ್ತು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ವಿಷಯಾಧಾರಿತ ಸ್ವಾತಂತ್ರೋತ್ಸವ 218ನೇ ಫಲಪುಷ್ಪ ಪ್ರದರ್ಶನ ಇಂದಿನಿಂದ (ಆ.7) ಆರಂಭಗೊಳ್ಳಲಿದ್ದು ಆ.18ರವರೆಗೆ ನಡೆಯಲಿದೆ.

  ಬೆಂಗಳೂರು :   ವೀರ ರಾಣಿ ಕಿತ್ತೂರು ಚನ್ನಮ್ಮ ಮತ್ತು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ವಿಷಯಾಧಾರಿತ ಸ್ವಾತಂತ್ರೋತ್ಸವ 218ನೇ ಫಲಪುಷ್ಪ ಪ್ರದರ್ಶನ ಇಂದಿನಿಂದ (ಆ.7) ಆರಂಭಗೊಳ್ಳಲಿದ್ದು ಆ.18ರವರೆಗೆ ನಡೆಯಲಿದೆ.

ಗುರುವಾರ ಬೆಳಗ್ಗೆ 9.15ಕ್ಕೆ ಲಾಲ್‌ಬಾಗ್‌ನಲ್ಲಿರುವ ಗಾಜಿನ ಮನೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರದರ್ಶನ ಉದ್ಘಾಟಿಸಲಿದ್ದಾರೆ. ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಸಚಿವರಾದ ಎಸ್‌.ಎಸ್‌.ಮಲ್ಲಿಕಾರ್ಜುನ, ರಾಮಲಿಂಗಾರೆಡ್ಡಿ ಉಪಸ್ಥಿತರಿರುವರು. ಚನ್ನಮ್ಮನ ಕಿತ್ತೂರು ಕಲ್ಮಠದ ರಾಜಗುರು ಮಡಿವಾಳ ರಾಜಯೋಗೀಂದ್ರ ಸ್ವಾಮೀಜಿ, ಹರಿಹರದ ಪಂಚಮಸಾಲಿ ಪೀಠದ ವಚನಾನಂದ ಸ್ವಾಮೀಜಿ ಪಾಲ್ಗೊಳ್ಳುವರು.

ವಾಹನಗಳಿಗೆ ನಿಷೇಧ:

ಲಾಲ್‌ಬಾಗ್‌ನ 4 ಪ್ರವೇಶದ್ವಾರಗಳಲ್ಲಿ ಬೇರೆ ಯಾವುದೇ ವಾಹನಗಳಿಗೆ ಪ್ರವೇಶ ಇರುವುದಿಲ್ಲ. ಲಾಲ್‌ಬಾಗ್‌ ಜೋಡಿ ರಸ್ತೆ ದ್ವಾರದಿಂದ ಆಗಮಿಸುವ ಶಾಲಾ ಕಾಲೇಜು ವಾಹನಗಳು, ವಿಕಲಚೇತನರ ವಾಹನಗಳು, ಆಂಬುಲೆನ್ಸ್‌, ಅಗ್ನಿ ಶಾಮಕ ವಾಹನ, ಪೊಲೀಸ್‌ ಹಾಗೂ ಇಲಾಖಾ ವಾಹನಗಳನ್ನು ಮಾತ್ರ ಲಾಲ್‌ಬಾಗ್‌ ಜೋಡಿ ರಸ್ತೆಯ ಹತ್ತಿರದ ನಿಲ್ದಾಣದಲ್ಲಿ ನಿಲುಗಡೆಗೆ ಅವಕಾಶ ಕಲ್ಪಿಸಲಾಗಿದೆ. ಪ್ರದರ್ಶನದ ಅವಧಿಯಲ್ಲಿ ಲಾಲ್‌ಬಾಗ್‌ಗೆ ಬರುವ ವಾಯುವಿಹಾರಿಗಳ ವಾಹನಗಳ ಪ್ರವೇಶವನ್ನು ಸಂಪೂರ್ಣವಾಗಿ ನಿರ್ಬಂಧಿಸಲಾಗಿದೆ.

ನಿಲುಗಡೆಗೆ ಅವಕಾಶ:

ವಾಹನದಲ್ಲಿ ಆಗಮಿಸುವ ವೀಕ್ಷಕರು ಜೋಡಿ ರಸ್ತೆಯ ಶಾಂತಿನಗರ ಬಸ್‌ ನಿಲ್ದಾಣದ ಬಳಿ ಇರುವ ಬಹುಮಹಡಿ ವಾಹನ ನಿಲುಗಡೆ (ಮಲ್ಟಿಸ್ಟೋರಿ ಪಾರ್ಕಿಂಗ್‌), ಜೋಡಿ ರಸ್ತೆ ಬಳಿಯ ಹಾಪ್‌ಕಾಮ್ಸ್‌ ಆವರಣ ಹಾಗೂ ಜೆ.ಸಿ.ರಸ್ತೆಯಲ್ಲಿನ ಬಿಬಿಎಂಪಿ ಬಹುಮಹಡಿ ವಾಹನ ನಿಲುಗಡೆ ಪ್ರದೇಶದಲ್ಲಿ ವಾಹನಗಳನ್ನು ನಿಲುಗಡೆ ಮಾಡಬಹುದಾಗಿದೆ. ದ್ವಿಚಕ್ರ ವಾಹನದಲ್ಲಿ ಬರುವವರು ಲಾಲ್‌ಬಾಗ್‌ ಮುಖ್ಯದ್ವಾರದ ಬಳಿ ಇರುವ ಆಲ್‌ಆಮೀನ್‌ ಕಾಲೇಜ್‌ ಆವರಣದ ನಿಲ್ದಾಣ ಪ್ರದೇಶದಲ್ಲಿ ತಮ್ಮ ವಾಹನಗಳನ್ನು ನಿಲ್ಲಿಸಬಹುದಾಗಿದೆ.

4 ಗೇಟ್‌ಗಳಲ್ಲಿ ಪ್ರವೇಶ ಟಿಕೆಟ್‌:

ಪ್ರವೇಶ ಟಿಕೆಟ್‌ಗಳನ್ನು ಗಾಜಿನ ಮನೆಯ ಬಳಿ ಮುಂಜಾನೆ 6 ಗಂಟೆಯಿಂದ 9 ಗಂಟೆಯವರೆಗೆ ಹಾಗೂ ಲಾಲ್‌ಬಾಗ್‌ನ ಎಲ್ಲ ಪ್ರವೇಶ ದ್ವಾರಗಳಲ್ಲಿ ಬೆಳಗ್ಗೆ 9ರಿಂದ ಸಂಜೆ 6,30ರವರೆಗೆ ನೀಡಲಾಗುವುದು. ಗಾಜಿನ ಮನೆಯ ಪ್ರವೇಶವು ರಾತ್ರಿ 7 ಗಂಟೆವರೆಗೆ ಮಾತ್ರ ಇರಲಿದೆ. ಟ್ರಾಫಿಕ್‌ ಸಮಸ್ಯೆ ತಪ್ಪಿಸಲು ಮೆಟ್ರೋ ರೈಲು ಸೇವೆ ಮತ್ತು ಬಿಎಂಟಿಸಿ ಬಸ್‌ ಸೇವೆ ಬಳಸುವಂತೆ ತೋಟಗಾರಿಕೆ ಇಲಾಖೆ ಜಂಟಿ ನಿರ್ದೇಶಕ ಡಾ.ಎಂ.ಜಗದೀಶ್‌, ಲಾಲ್‌ಬಾಗ್‌ ಉಪ ನಿರ್ದೇಶಕ ಬಾಲಕೃಷ್ಣ ಮನವಿ ಮಾಡಿದ್ದಾರೆ.

Read more Articles on